ಹುಮನಾಬಾದ್ ತಾಲೂಕಿನ ಸಿಂಧನಕೇರಾ ಗ್ರಾಮದಲ್ಲಿ ಅವೈಜ್ಞಾನಿಕವಾಗಿರುವ ಕಸ ವಿಲೇವಾರಿ ಘಟಕದಿಂದ ಗ್ರಾಮಸ್ಥರಲ್ಲಿ ಅನಾರೋಗ್ಯದ ಭೀತಿ ಉಂಟಾಗಿದೆ. ಕೂಡಲೇ ಘಟಕ ಸ್ಥಳಾಂತರಿಸಿ ಆರೋಗ್ಯ ರಕ್ಷಣೆಗೆ ಮುಂದಾಗಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.
ಈ ಕುರಿತು ಶನಿವಾರ ಹುಮನಾಬಾದ್ ತಾಲೂಕು ಪಂಚಾಯತ್‌ನಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಗ್ರಾಮಸ್ಥರು ಹುಮನಾಬಾದ್ ಶಾಸಕ ಡಾ.ಸಿದ್ದಲಿಂಗಪ್ಪಾ ಪಾಟೀಲ್ ಹಾಗೂ ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು.
ಗ್ರಾಮ ಪಂಚಾಯಿತಿ ಕೇಂದ್ರವಾಗಿರುವ ಸಿಂಧನಕೇರಾ ಗ್ರಾಮದ ಸಮೀಪದಲ್ಲೇ ಇರುವ ಖಾಲಿ ಜಾಗದಲ್ಲಿ ಹುಮನಾಬಾದ್ ಪುರಸಭೆ ವ್ಯಾಪ್ತಿಯಲ್ಲಿ ಸಂಗ್ರಹವಾದ ತ್ಯಾಜ್ಯವನ್ನು ಇಲ್ಲಿನ ಘಟಕಕ್ಕೆ ತಂದು ಹಾಕುತ್ತಾರೆ. ಇದರಿಂದ ದ್ರವ ರೂಪದ ತ್ಯಾಜ್ಯ, ಸತ್ತ ಪ್ರಾಣಿಗಳ ಗಬ್ಬು ವಾಸನೆ ನಾರುತ್ತಿದ್ದು, ಜನರಿಗೆ ಓಡಾಡಲು ತೊಂದರೆ ಆಗುತ್ತಿದೆ. ಸೊಳ್ಳೆ ಕಾಟದಿಂದ ಜನರಿಗೆ ಡೆಂಗ್ಯೂ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ ಎಂದು ದೂರಿದರು.
ತ್ಯಾಜ್ಯ ವಿಲೇವಾರಿ ಘಟಕ ಕೇವಲ ಗ್ರಾಮದಿಂದ 200 ಮೀಟರ್ ದೂರದಲ್ಲಿ ಇರುವುದ್ದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆದ್ದರಿಂದ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಡಿ.9ರಿಂದ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನದಲ್ಲಿ ಈ ವಿಷಯದ ಕುರಿತು ಸದನದಲ್ಲಿ ಧ್ವನಿಯೆತ್ತಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಳಾಂತರಕ್ಕೆ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಚಳಿಗಾಲ ಅಧಿವೇಶನ | ನಾಲ್ಕು ದಿನ ಉತ್ತರ ಕರ್ನಾಟಕ ಸಮಸ್ಯೆ ಬಗ್ಗೆ ಚರ್ಚೆ: ಸಭಾಪತಿ ಹೊರಟ್ಟಿ
ಈ ವೇಳೆ ಗ್ರಾಮಸ್ಥರಾದ ಯುವರಾಜ್ ಎಸ್. ಐಹೊಳ್ಳಿ, ಗುರು ಪಾಟೀಲ್, ಶೇಖ್ ಮಕ್ಸುದ್, ಅನಿಲ್ ದೊಡ್ಡಿ, ರೇವಣಪ್ಪ ಮರ್ಕಲ್, ಮಂಜುನಾಥ್ ಕಾಡವಾದಿ, ರಾಜು ಪಾಟೀಲ್, ನವೀನ್ ಹವನಾಯಕ್, ಅಣವೀರ್, ಉಮೇಶ್ ದಾಡಗಿ, ಅರುಣ್ ಸೇರಿದಂತೆ ಇತರರಿದ್ದರು.