ಇಂದಿನಿಂದ ಬೆಳಗಾವಿ ಅಧಿವೇಶನ ಆರಂಭವಾಗಲಿದ್ದು ಬಾಣಂತಿಯರ ಸಾವು, ಮುಡಾ ಪ್ರಕರಣ, ಶಿಶು ಮರಣ ಪ್ರಮಾಣ, ವಕ್ಫ್ – ಹೀಗೆ ಹಲವು ವಿಚಾರಗಳಲ್ಲಿ ಸರ್ಕಾರದ ವಿರುದ್ಧ ತರಾಟೆ ನಡೆಸಲು ವಿಪಕ್ಷಗಳು ಸಜ್ಜಾಗಿದೆ. ಬಾಣಂತಿಯರ ಸಾವು ಪ್ರಕರಣ, ವಕ್ಫ್ ವಿವಾದಗಳನ್ನು ವಿಪಕ್ಷಗಳು ಹೆಚ್ಚು ಚರ್ಚೆಗೆಳೆಯುವ ಸಾಧ್ಯತೆಯಿದೆ.
ಮುಡಾ ಪ್ರಕರಣ, ವಾಲ್ಮೀಕಿ ಹಗರಣ, ಅಬಕಾರಿ ಸಚಿವರ ವಿರುದ್ಧ 700 ಕೋಟಿ ರೂಪಾಯಿ ಹಗರಣದ ಆರೋಪ, ಬಾಣಂತಿಯರ ಸಾವು ಮೊದಲಾದ ಅಸ್ತ್ರಗಳನ್ನು ಬಿಜೆಪಿ-ಜೆಡಿಎಸ್ ಸರ್ಕಾರದೆಡೆ ಪ್ರಯೋಗಿಸುವ ಸಾಧ್ಯತೆಯಿದೆ. ಸರ್ಕಾರದ ವಿರುದ್ಧ ಒಗ್ಗಟ್ಟಾಗಿ ಪ್ರಹಾರ ಮಾಡಲು ತಮ್ಮ ಬಂಡಾಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ವಿಪಕ್ಷ ನಾಯಕ ಆರ್ ಅಶೋಕ್ ವಿಶ್ವಾಸಕ್ಕೆ ಪಡೆಯುವ ಸಕಲ ಪ್ರಯತ್ನ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಬೆಳಗಾವಿ | ಚಳಿಗಾಲ ಅಧಿವೇಶನ ಮಾದರಿಯಾಗಿ ನಡೆಸಬೇಕಿದೆ: ಸಭಾಧ್ಯಕ್ಷ ಯು ಟಿ ಖಾದರ್
ಇನ್ನೊಂದೆಡೆ ಕಾಂಗ್ರೆಸ್ ಸರ್ಕಾರವು ಕೋವಿಡ್ ಹಗರಣ, ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣ, ಬಿಡಿಎ ಹಗರಣ, ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ, ಪ್ರಜ್ವಲ್ ರೇವಣ್ಣ ಪ್ರಕರಣ – ಹೀಗೆ ಹಲವು ಬಾಣಗಳಿಂದ ಪ್ರತಿದಾಳಿ ನಡೆಸಲು ಅಣಿಯಾಗಿದೆ.
ಕರ್ನಾಟಕ ಬಿಜೆಪಿಯಲ್ಲಿ ಆಂತರಿಕ ಕಚ್ಚಾಟಗಳು ಬಹಿರಂಗವಾಗಿಯೇ ಎದ್ದು ಕಾಣುತ್ತಿದೆ. ಆದರೆ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ತಮ್ಮೆಲ್ಲ ಮನಸ್ತಾಪವನ್ನು ಬದಿಗೊತ್ತಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಮುಂದಾಗಿದೆ.
ಇಂದಿನಿಂದ ಡಿಸೆಂಬರ್ 20ರವರೆಗೆ ಬೆಳಗಾವಿ ಅಧಿವೇಶನ ನಡೆಯಲಿದೆ. ಇಂದು ಬೆಳಿಗ್ಗೆ 11 ಗಂಟೆಯಿಂದ ಅಧಿವೇಶನ ಆರಂಭವಾಗಲಿದೆ. ಇದಕ್ಕೂ ಮುನ್ನ 10.30ಕ್ಕೆ ಐತಿಹಾಸಿಕ ಅನುಭವ ಮಂಟಪ ಸ್ಮರಣೆಯ ಬೃಹತ್ ತೈಲ ವರ್ಣದ ಚಿತ್ರದ ಅನಾವರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಲಿದ್ದಾರೆ.
