ಸಾಲ ತೀರಿಸಲು ಸಾಧ್ಯವಾಗದೆ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರುವ ಘಟನೆ ಅಫಜಲಪುರ ತಾಲ್ಲೂಕಿನಲ್ಲಿ ನಡೆದಿದೆ.
ಅಫಜಲಪುರ ತಾಲ್ಲೂಕಿನ ವಡ್ಡಳ್ಳಿ ತಾಂಡಾದ ಮೋಹನ್ ರಾಠೋಡ (45) ಮೃತ ರೈತ. ಮೃತರಿಗೆ ಪತ್ನಿ, ಒಬ್ಬರು ಪುತ್ರ, ಒಬ್ಬರು ಪುತ್ರಿ ಇದ್ದಾರೆ.
ಮೋಹನ್ ಅವರಿಗೆ 7.13 ಎಕರೆ ಕೃಷಿ ಜಮೀನಿದ್ದು, ಕೃಷಿಗಾಗಿ ಬ್ಯಾಂಕ್ ಹಾಗೂ ಕೈಗಡವಾಗಿ 10 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದರು. ಅದನ್ನು ತೀರಿಸಲು ಸಾಧ್ಯವಾಗದೆ ಬೇಸತ್ತು ಡಿ.5ರಂದು ಕಲಬುರಗಿ ನಗರದ ಸಂಬಂಧಿಕರ ಮನೆಗೆ ಹೋಗಿದ್ದರು. ಮರುದಿನವೇ ಸಂಬಂಧಿಕರ ಮನೆಯಿಂದ ಹೋದವರು ಭಾನುವಾರ ಗೊಬ್ಬುರ (ಬಿ) ಗ್ರಾಮದ ಹೊಲವೊಂದರಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಮೃತದೇಹ ಪಕ್ಕದಲ್ಲಿ ವಿಷದ ಬಾಟಲಿ ಪತ್ತೆಯಾಗಿದ್ದು, ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ದೇವಲ ಗಾಣಗಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.