ಮೈಸೂರು ವಿಶ್ವವಿದ್ಯಾನಿಲಯದ ಅಭಿವೃದ್ಧಿ ಅಧ್ಯಯನ ವಿಭಾಗದ ಪ್ರಾಧ್ಯಾಪಕರೂ ಮುಖ್ಯಸ್ಥರೂ ಆಗಿದ್ದ ಅರ್ಥಶಾಸ್ತ್ರಜ್ಞ ಪ್ರೊ. ವಿ.ಕೆ. ನಟರಾಜ್ (85) ನಿಧನರಾಗಿದ್ದಾರೆ. ಅವರ ಪಾರ್ಥಿವ ಶರೀರವನ್ನು ಮಂಗಳವಾರ (ಡಿ.10) ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಗೆ ದಾನ ಮಾಡಲಾಗುತ್ತದೆ.
ಬೆಂಗಳೂರಿನಲ್ಲಿ 1939ರಲ್ಲಿ ಜನಿಸಿದ ನಟರಾಜ್ ಅವರ ತಂದೆ ಕೃಷ್ಣಮೂರ್ತಿ ಹೆಸರಾಂತ ವಕೀಲರು. ಮೈಸೂರಿನಲ್ಲಿ ಓದಿ ಬೆಳೆದ ನಟರಾಜ್ ಅವರು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಇದನ್ನು ಓದಿದ್ದೀರಾ? ಕಲಬುರಗಿ | ಜೈಲಿನಿಂದ ಬಿಡುಗಡೆಯಾದ 93 ವರ್ಷದ ವೃದ್ಧೆ ಖೈದಿ ಮನೆಯಲ್ಲಿ ನಿಧನ
ಇಂಗ್ಲೆಂಡಿನ ಯಾರ್ಕ್ ವಿವಿ ಮತ್ತು ಮುಂಬೈನ ನ್ಯಾಷನಲ್ ಇನ್‌ಸ್ಟಿಟ್ಯೂಟ್‌ನಲ್ಲಿ ಉಪನ್ಯಾಸಕರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಬಳಿಕ 1970ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾದರು.
ನಿವೃತ್ತಿ ಪಡೆದ ಬಳಿಕ ನಟರಾಜರನ್ನು ಮದ್ರಾಸಿನ ಎಂಐಡಿಎಸ್, ನಿರ್ದೇಶಕರನ್ನಾಗಿ ನೇಮಿಸಿಕೊಂಡಿತ್ತು. ಇದರಿಂದಾಗಿ ಸುಮಾರು ಐದು ವರ್ಷಗಳ ಕಾಲ ನಟರಾಜ್, ತಮಿಳುನಾಡು ಮತ್ತು ಕರ್ನಾಟಕದ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಿದ್ದಾರೆ. ಹಾಗೆಯೇ ಕಾವೇರಿ ಕುಟುಂಬಗಳ ಸೌಹಾರ್ದತೆಗಾಗಿ ಅವರ ಶ್ರಮ ಶ್ಲಾಘನಾರ್ಹ.

ಇಂಗ್ಲೆಂಡ್‌ನ ಸನ್ಸೆಕ್ಸ್ ವಿಶ್ವವಿದ್ಯಾಲಯದಲ್ಲಿ ವಿಸಿಟಿಂಗ್ ಪ್ರೊಫೆಸರ್ ಆಗಿಯೂ ನಟರಾಜ್ ಕಾರ್ಯನಿರ್ವಹಿಸಿದ್ದಾರೆ. ಬಳಿಕ 1995ರಿಂದ 2005ರವರೆಗೆ ಇಂಡೋ-ಕೆನಡಿಯನ್ ಇನ್‌ಸ್ಟಿಟ್ಯೂಟ್‌ನ ಸಲಹಾ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದರು.
1996ರಲ್ಲಿ ಪಂಚಾಯತ್ ರಾಜ್ ತಜ್ಞರ ಸಮಿತಿ ಸದಸ್ಯರಾಗಿದ್ದ ನಟರಾಜ್ 2002ರಲ್ಲಿ ತಮಿಳುನಾಡು ಸರ್ಕಾರದ ಯೋಜನಾ ಆಯೋಗದ ಅಧ್ಯಕ್ಷರಾಗಿ, ಪೆರಿಯಾರ್ ವಿಶ್ವವಿದ್ಯಾಲಯದ ಯೋಜನಾ ಮಂಡಳಿ ಸದಸ್ಯರಾಗಿ ಕಾರ್ಯನಿರ್ವಹಿಸಿದರು. ಜೊತೆಗೆ ಮೈಸೂರಿನ ಗ್ರಾಮೀಣಾಭಿವೃದ್ಧಿ ತರಬೇತಿ ಕೇಂದ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ವರ್ಲ್ಡ್ ಬ್ಯಾಂಕಿನ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದರು.
