ಸಾಮಾಜಿಕ ನ್ಯಾಯದ ನೆಲೆಗಟ್ಟಿನಲ್ಲಿ, ನಾಡಿನ ಸಮಸ್ತ ಪ್ರಜೆಗಳಿಗೂ ಸಮಾನ ಅವಕಾಶ, ಹಕ್ಕು, ಅಧಿಕಾರ ಮತ್ತು ಆಸ್ತಿ ಹಂಚಿಕೆಯಾಗಬೇಕು ಎನ್ನುವುದು ಸಂವಿಧಾನದ ಆಶಯವಾಗಿರುತ್ತದೆ. ಎಲ್ಲರಿಗೂ ಸಮಾನ ಹಕ್ಕು, ಅಧಿಕಾರ ಮತ್ತು ಅವಕಾಶಗಳು ಸಿಗಬೇಕನ್ನುವ ಉದ್ದೇಶವನ್ನು ನಾವು ಹೊಂದಿದ್ದೇವೆ ಎಂದು ಹೇಳಿಕೊಳ್ಳುವ ಎಲ್ಲ ಪಕ್ಷಗಳ ಸರ್ಕಾರಗಳು ಇಲ್ಲಿಯವರೆಗೆ ಶೋಷಿತ, ಅವಕಾಶವಂಚಿತ ಜನ ಸಮುದಾಯಗಳಿಗೆ ದ್ರೋಹವೆಸಗುತ್ತಲೇ ಬಂದಿವೆ ಈ ನಿಟ್ಟಿನಲ್ಲಿ ಸೋಷಿಯಲ್ ಡೆಮೋಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ವತಿಯಿಂದ ಯೂ ಟರ್ನ್ ರಾಜ್ಯ ಸರಕಾರದ ವಿರುದ್ಧ, ಸಾಮಾಜಿಕ ನ್ಯಾಯಕ್ಕಾಗಿ, ಚಲೋ ಬೆಳಗಾವಿ : ಅಂಬೇಡ್ಕರ್ ಜಾಥಾ 2ನ್ನು ಡಿಸೆಂಬರ್ 10 ರಿಂದ 16 ರ ವರೆಗೆ ಉಡುಪಿಯಿಂದ ಆರಂಭಗೊಂಡು ಬೆಳಗಾವಿಗೆ ತಲುಪಲಿದೆ ಎಂದು ನಾಳೆ (10 ಡಿಸೆಂಬರ್ 2024) ಉಡುಪಿಯಲ್ಲಿ ಮುಂಜಾನೆ 10:30ಗಂಟೆಗೆ ಉದ್ಘಾಟನಾ ಸಭೆ ಮತ್ತು ಕಾಲ್ನಡಿಗೆ ಜಾಥದ ಮೂಲಕ ಚಾಲನೆಗೊಂಡು ಬೆಳಗಾವಿ ಎಡೆಗೆ ಮುಂದುವರಿಯಲಿದೆ ಎಂದು ಸೋಷಿಯಲ್ ಡೆಮೋಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ BR ಭಾಸ್ಕರ್ ಪ್ರಸಾದ್ ಹೇಳಿದರು
ಅವರು ಇಂದು ಉಡುಪಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಯೋಜನೆಗಳನ್ನು ಘೋಷಣೆ ಮಾಡುವುದು ಅದನ್ನು ವಾಪಸ್ಸು ಪಡೆಯುವ ಚಾಳಿಯನ್ನು ಬಿಡಬೇಕು ಎಂದು ಹೇಳಿದರು.
ಬೆಳಗಾವಿ ಚಲೋದ ಮೂಲಕ ಈ ಕೆಳಗಿನ ಆಗ್ರಹಗಳನ್ನು ಸರ್ಕಾರದ ಮುಂದೆ ಇಡಲಿದರ ಎಂದು ಹೇಳಿದರು.
- 2013ರ ಅವಧಿಯ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅವಕಾಶ ವಂಚಿತರ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸಲು, ರಾಜ್ಯದ ಎಲ್ಲ ಜಾತಿ ಸಮುದಾಯಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಮಾಹಿತಿ ಮತ್ತು ಅಂಕಿ ಅಂಶಗಳ ಸಮೇತವಾದ ವರದಿಗಾಗಿ ಕಾಂತರಾಜ್ ಆಯೋಗವನ್ನು ರಚಿಸಿತ್ತು. ಆ ಆಯೋಗ ಸುಮಾರು 167 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ಖರ್ಚು ಮಾಡಿ ಇಡೀ ರಾಜ್ಯದ ಜಾತಿವಾರು ಆರ್ಥಿಕ, ಸಮಾಜಿಕ, ರಾಜಕೀಯ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ವರದಿಯನ್ನು ಸಿದ್ದ ಪಡಿಸಿತು. ಅದನ್ನು ಅಂದು ಸಿದ್ದರಾಮಯ್ಯ ಅವರ ಸರ್ಕಾರ ಸ್ವೀಕರಿಸಲೂ ಸಿದ್ಧವಿರಲ್ಲ. 2023ರಲ್ಲಿ ಮತ್ತೆ ಅಧಿಕಾರಕ್ಕೆ ಬಂದಾಗ ಅದನ್ನು ಸ್ವೀಕರಿಸಿತಾದರೂ ಆ ವರದಿಯನ್ನು ಒಪ್ಪಿಕೊಳ್ಳುವುದು ಬಿಡಿ, ವರದಿಯ ಅಂಶಗಳನ್ನು ಸಾರ್ವಜನಿಕಗೊಳಿಸಲೂ ಮುಂದಾಗಿಲ್ಲ. ಇದನ್ನು ನಾವು ಬಲವಾಗಿ ಖಂಡಿಸುತ್ತೇವೆ. ಕಾಂತರಾಜ್ ವರದಿಯನ್ನು ಕೂಡಲೇ ಸಾರ್ವಜನಿಕ ಗೊಳಿಸಬೇಕು ಮತ್ತು ಸಾಮಾಜಿಕ ನ್ಯಾಯಕ್ಕೆ ಹೊಸ ಮುನ್ನುಡಿ ಬರೆಯಬೇಕೆಂದು ಎಸಿಪಿಐ ಆಗ್ರಹಿಸುತ್ತದೆ.
- ಪರಿಶಿಷ್ಟರ ಮೀಸಲಾತಿ ಹಂಚಿಕೆಯಲ್ಲಿ, ಅಸ್ಪೃಶ್ಯರು ಎನ್ನುವ ಕಾರಣಕ್ಕೆ ಆ ಸಮುದಾಯಕ್ಕೆ ಮತ್ತೆ, ಮತ್ತೆ ಅನ್ಯಾಯವಾಗುತ್ತಲೇ ಬಂದಿದೆ. ಹಾಗಾಗಿ ಸಾಮಾಜಿಕ ನ್ಯಾಯಕ್ಕಾಗಿ ನಮಗೆ ಒಳಮೀಸಲಾತಿ ಬೇಕು ಎನ್ನುವ ಬೇಡಿಕೆಯನ್ನು ಮುಂದಿಟ್ಟು ಪರಿಶಿಷ್ಟ ಜಾತಿಯ ಅಸ್ಪೃಶ್ಯ ಸಮುದಾಯಗಳು ಸುಮಾರು 30 ವರ್ಷಗಳಿಂದ ಹೋರಾಡುತ್ತಲೇ ಬಂದಿವೆ. ಇದಕ್ಕೆ ಪೂರಕವಾಗಿ ರಚನೆಯಾಗಿದ್ದ ಸದಾಶಿವ ಆಯೋಗವು ಒಳಮೀಸಲಾತಿಗೆ ಶಿಫಾರಸ್ಸು ಮಾಡಿರುವ ವರದಿಯು ಸರ್ಕಾರಕ್ಕೆ ಸಲ್ಲಿಕೆಯಾಗಿ ದಶಕವೇ ಕಳೆದಿದೆ. ಆದರೆ ಇಲ್ಲಿಯವರೆಗೆ ಯಾವುದೇ ಸರ್ಕಾರ ಒಳಮೀಸಲಾತಿಯನ್ನು ಜಾರಿ ಮಾಡದೆ ಅನ್ಯಾಯವನ್ನು ಮುಂದುವರಿಸಿಕೊಂಡೇ ಹೋಗುತ್ತಿವೆ. ಇದೀಗ ಸುಪ್ರೀಂ ಕೋರ್ಟ್ ಕೂಡ, ಒಳ ಮೀಸಲಾತಿಯನ್ನು ರಾಜ್ಯ ಸರ್ಕಾರಗಳೇ ನೀಡಬಹುದು ಎಂದು ತೀರ್ಮಾನ ನೀಡಿದೆ. ಆದ ಕಾರಣ ಸದಾಶಿವ ಆಯೋಗದ ವರದಿಯ ಶಿಫಾರಸ್ಸಿನಂತೆ ಒಳ ಮೀಸಲಾತಿ ಜಾರಿ ಗೊಳಿಸಬೇಕೆಂದು ಎಸ್ಸಿಪಿಐ ಒತ್ತಾಯಿಸುತ್ತದೆ.
- ರಾಜ್ಯದಲ್ಲಿ ಸುಮಾರು 179 ಜನಸಂಖ್ಯೆ ಹೊಂದಿರುವ ಮುಸಲ್ಮಾನರಿಗೆ ಇದುವರೆಗೂ 2ಬಿ ವರ್ಗದಡಿ ಜಾರಿಯಲ್ಲಿದ್ದ 4% ಮೀಸಲಾತಿಯನ್ನು ಬಸವರಾಜ್ ಬೊಮ್ಮಾಯಿ ನೇತೃತ್ವದ ಹಿಂದಿನ ಬಿಜೆಪಿ ಸರ್ಕಾರ ರದ್ದು ಮಾಡಿತ್ತು. ಅಂದಿನ ಸರ್ಕಾರದ ಈ ಸಂವಿಧಾನ ವಿರೋಧಿ ನಿರ್ಧಾರವನ್ನು ಸುಪ್ರೀಂ ಕೋರ್ಟ್ ತಡೆ ಹಿಡಿದಿದೆ. ಆದರೂ ಮುಸ್ಲಿಮರ ಮೀಸಲಾತಿಯನ್ನು ಮುಂದುವರಿಸುವ ನಿಟ್ಟಿನಲ್ಲಿ ಈಗಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಸೂಕ್ತ ನಿರ್ಧಾರ ಕೈಗೊಳ್ಳುತ್ತಿಲ್ಲ. ಇದು ಈ ಸರ್ಕಾರದ ಮುಸಲ್ಮಾನ ವಿರೋಧಿ ನೀತಿಯನ್ನು ತೋರಿಸುತ್ತದೆ. ಇದನ್ನು ನಾವು ಖಂಡಿಸುತ್ತೇವೆ ಮತ್ತು ರದ್ದುಗೊಂಡ ಮುಸಲ್ಮಾನರ 2ಬಿ ಮೀಸಲಾತಿಯನ್ನು ಮರು ಸ್ಥಾಪಿಸುವುದರ ಜೊತೆಗೆ ಅದರ ಪ್ರಮಾಣವನ್ನು 8% ಗೆ ಹೆಚ್ಚು ಮಾಡಬೇಕೆಂದು ಒತ್ತಾಯಿಸುತ್ತೇವೆ.
- ವಖ್ ಆಸ್ತಿಗಳ ವಿಚಾರದಲ್ಲಿ ಕೋಮುವಾದಿ ಬಿಜೆಪಿ ಮತ್ತು ಸಂಘಪರಿವಾರದ ಗುಂಪುಗಳು ಜನರಲ್ಲಿ ಸುಳ್ಳು ಬಿತ್ತಿ ಮುಸ್ಲಿಮರ ವಿರುದ್ಧ ಜನರಲ್ಲಿ ದ್ವೇಷ ಭಾವನೆ ಮೂಡಿಸುತ್ತಿವೆ. ವಕ್ಸ್ ಅನ್ನುವುದು ಸರ್ಕಾರ ಮುಸ್ಲಿಂ ಸಮುದಾಯಕ್ಕೆ ನೀಡಿದ್ದಲ್ಲ, ಬದಲಿಗೆ ಅದು ಮುಸ್ಲಿಂ ಸಮುದಾಯದ ಜನರು ದಾನದ ರೂಪದಲ್ಲಿ ನೀಡಿದ ಆಸ್ತಿಗಳು. ಇದನ್ನು ಮರೆಮಾಚಿ ಮುಸ್ಲಿಂ ಸಮುದಾಯ ಜನರ ಭೂಮಿ ಕಸಿಯುತ್ತಿದೆ ಎಂಬ ಸುಳ್ಳನ್ನು ಕೋಮುವಾದಿಗಳು ಬಿತ್ತುತ್ತಿದ್ದಾರೆ. ಈ ಅಪಪ್ರಚಾರಕ್ಕೆ ಮಣಿಯದೆ, ಅತಿಕ್ರಮಣ ಆಗಿರುವ ವಕ್ಸ್ ಜಮೀನನ್ನು ಮತ್ತು ಆಸ್ತಿಗಳನ್ನು ರಕ್ಷಿಸಬೇಕೆಂದು ಪಕ್ಷವು ಆಗ್ರಹಿಸುತ್ತದೆ. 2023 ರ ಚಲೋ ಬೆಳಗಾವಿ – ಅಂಬೇಡ್ಕರ್ ಜಾಥಾ
ಕಾಂತರಾಜ ವರದಿ, ಒಳಮೀಸಲಾತಿ ಮತ್ತು 28 ಮೀಸಲಾತಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಳೆದ ವರ್ಷ, ಅಂದರೆ 2023ರ ಡಿಸೆಂಬರ್ 6 ರಿಂದ ಡಿಸೆಂಬರ್ 11 ನೇ ತಾರೀಖಿನವರೆಗೆ ಬೆಂಗಳೂರಿನ ವಿಧಾನಸೌಧದ ಅಂಬೇಡ್ಕರ್ ಪ್ರತಿಮೆಯ ಮುಂಭಾಗದಿಂದ ತುಮಕೂರು, ಚಿತ್ರದುರ್ಗ, ವಿಜಯನಗರ, ಕೊಪ್ಪಳ, ರಾಯಚೂರು ಜಿಲ್ಲೆಗಳ ಮೂಲಕ ಬೆಳಗಾವಿಯ ಸುವರ್ಣ ಸೌಧದ ವರೆಗೆ ಚಲೋ ಬೆಳಗಾವಿ – ಅಂಬೇಡ್ಕರ್ ಜಾಥಾವನ್ನು ಕೈಗೊಂಡಿದ್ದೆವು. ಮಾರ್ಗದುದ್ದಕ್ಕೂ ನಮ್ಮ ಜಾಥಾಗೆ ಅಭೂತಪೂರ್ವ ಬೆಂಬಲ ಸಿಗುವುದರೊಂದಿಗೆ ನಮ್ಮ ಜಾಥಾ ಬೆಳಗಾವಿ ತಲುಪಿತ್ತು. ಆ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಸಚಿವರಾದ ಶರಣಬಸಪ್ಪ ಪಾಟೀಲ್ ಅವರು ನಮ್ಮ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ನಮ್ಮ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಸ್ವೀಕರಿಸಿ, ಎಲ್ಲ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕರ್ನಾಟಕ ಸರ್ಕಾರದ ಪರವಾಗಿ ಭರವಸೆ ನೀಡಿದ್ದರು. ಆದರೆ ವರ್ಷ ಕಳೆದರೂ ಇದರಲ್ಲಿನ ಯಾವುದೇ ಬೇಡಿಕೆ ಈಡೇರಿಲ್ಲ. ಹಾಗಾಗಿ ಈ ಬೇಡಿಕೆಗಳನ್ನು ಮತ್ತೆ ಸರ್ಕಾರದ ಮುಂದಿಡಲು ಮತ್ತು ಅವುಗಳ ಜೊತೆಗೆ ವಕ್ಸ್ ವಿಚಾರವಾಗಿ ನಮ್ಮ ಬೇಡಿಕೆಗಳನ್ನು ಒತ್ತಾಯಿಸಲು ಈಗ ಮತ್ತೆ ಚಲೋ ಬೆಳಗಾವಿ – ಅಂಬೇಡ್ಕರ್ ಜಾಥಾ : 2 ಹೆಸರಿನಲ್ಲಿ ಉಡುಪಿಯಿಂದ ಬೆಳಗಾವಿಗೆ ಡಿಸೆಂಬರ್ 10 ರಿಂದ 16 ರವರೆಗೆ ಜಾಥಾವನ್ನು ಹಮ್ಮಿಕೊಳ್ಳಬೇಕಾದ ಅವಶ್ಯಕತೆ ಎದುರಾಗಿದೆ. ಕರ್ನಾಟಕ ರಾಜ್ಯದಲ್ಲಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ರಾಜಕೀಯ ಪಕ್ಷಗಳ ದುರಾಡಳಿತ ಮತ್ತು ದ್ವೇಷ ರಾಜಕೀಯದ ಹಾವಳಿ ಹೆಚ್ಚಾಗುತ್ತಿದ್ದ ಸಂದರ್ಭದಲ್ಲಿ ಹಸಿವು ಮುಕ್ತ ಸ್ವಾತಂತ್ರ್ಯ, ಭಯ ಮುಕ್ತ ಸ್ವಾತಂತ್ರ್ಯ ಎಂಬ ಘೋಷಣೆಯೊಂದಿಗೆ ಈ ರಾಜ್ಯದ ನಾಡು ನುಡಿ, ನೆಲ ಜಲ ಸಂರಕ್ಷಣೆಯ ಜವಾಬ್ದಾರಿಯೊಂದಿಗೆ ಪರ್ಯಾಯ ರಾಜಕೀಯ ಪಕ್ಷವಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಪ್ ಇಂಡಿಯಾ (ಎಸ್.ಡಿ.ಪಿ.ಐ) ಎಂಬ ನಮ್ಮ ಪಕ್ಷ 2009ರ ಜೂನ್ 21 ರಂದು ಕರ್ನಾಟಕ ಜನತೆಯ ಸೇವೆಗೆ ಆರಂಭವಾಯಿತು. ಆರಂಭದ ವರ್ಷಗಳಲ್ಲಿ ಇದ್ದ ಸವಾಲುಗಳು ಇಂದು ಮತ್ತೂ ಹೆಚ್ಚಾಗುವುದರ ಜೊತೆಗೆ ಜಟಿಲ ಮತ್ತು ಅಪಾಯಕಾರಿಯಾಗಿ ಬೆಳೆದು ನಿಂತಿವೆ. ಪಕ್ಷ ಆರಂಭಗೊಂಡಾಗ ಈ ದೇಶದಲ್ಲಿ ಫ್ಯಾಸಿಸಂ, ಕೋಮು ಧ್ರುವೀಕರಣ, ಜನರ ನಡುವೆ ಧರ್ಮದ ಆಧಾರದ ಮೇಲೆ ಅಪಾಯಕಾರಿ ಒಡಕು, ಭ್ರಷ್ಟಾಚಾರ ಮತ್ತು ಅಲ್ಪಸಂಖ್ಯಾತರ ಜೀವ, ಜೀವನ ಎರಡಕ್ಕೂ ಅಪಾಯ ಒಂದು ಮಟ್ಟಕ್ಕೆ ಇತ್ತಾದರೂ ಇಂದು ಅದು ಎದೆ ನಡುಗಿಸುವ ಮಟ್ಟಕ್ಕೆ ಹೆಚ್ಚಾಗಿದೆ. ಆ ವಿಷ ಗಾಳಿ ಸರ್ವ ಜನಾಂಗದ ತೋಟವಾಗಿದ್ದ ಕರ್ನಾಟಕಕ್ಕೂ ಹಬ್ಬಿದ್ದು, ಕೆಲವು ಪ್ರದೇಶಗಳು 24/7 ಪ್ರಕ್ಷುಬ್ಧ ವಾತಾವರಣದಲ್ಲಿ ಬದುಕುವ ದುರ್ಗತಿ ಬಂದೊದಗಿದೆ. ಈ ಸಂದರ್ಭದಲ್ಲಿ ನಮ್ಮ ಪಕ್ಷ ಸರ್ವ ಜಾತಿ, ಧರ್ಮ, ಪಂಗಡಗಳ ಪಕ್ಷವಾಗಿ ಜನರ ಸಂಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ನಮ್ಮ ಹೋರಾಟಗಳು ನಿರಂತರವಾಗಿ ಸಾಗುತ್ತಿವೆ. ನಮ್ಮ ಹೋರಾಟದ ಭಾಗವಾಗಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಚಲೋ ಬೆಳಗಾವಿ – ಅಂಬೇಡ್ಕರ್ ಜಾಥಾ : 2 ನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು
ಪತ್ರಿಕಾಗೋಷ್ಠಿಯಲ್ಲಿ ಎಸ್ ಡಿ ಪಿ ಐ ರಾಜ್ಯ ಕಾರ್ಯದರ್ಶಿ ಅಪ್ಪರ್ ಕೊಡ್ಲಿಪೇಟೆ ರಿಯಾಝ್ ಕಡಂಬು, ರಾಜ್ಯ ಕಾರ್ಯದರ್ಶಿ ಮತ್ತು ಮಾಧ್ಯಮ ಸಂಯೋಜಕರಾದ ರಂಜಾನ್ ಕಡಿವಾಳ್, ಉಡುಪಿ ಜಿಲ್ಲಾಧ್ಯಕ್ಷರು ಶಾಹಿದ್ ಅಲಿ ಉಪಸ್ಥಿತರಿದ್ದರು.
