ವ್ಯಂಗ್ಯವೆಂದರೆ, ಪ್ರಾಣಿದಯೆಯನ್ನು ತೋರುವ ಜನರು, ಧರ್ಮದ ಹೆಸರಿನಲ್ಲಿ ಮನುಷ್ಯರನ್ನು ಮುಟ್ಟಿಸಿಕೊಂಡರೆ ಮೈಲಿಗೆಯಾಗುತ್ತದೆ ಎಂಬುದನ್ನು ವಿರೋಧಿಸುವುದಿಲ್ಲ; ಧರ್ಮದ ಹೆಸರಲ್ಲಿ ನಡೆಯುವ ಹಿಂಸೆಯನ್ನು ಬೆಂಬಲಿಸುತ್ತಾರೆ. ದೇಶರಕ್ಷಣೆಯ ಹೆಸರಲ್ಲಿ ನಡೆಯುವ ಮಿಲಿಟರಿ ಯುದ್ಧಗಳು ಹೆಂಗಸರು-ಮಕ್ಕಳನ್ನು ಕೊಲ್ಲುವುದನ್ನು ಶೌರ್ಯವೆಂದು ವ್ಯಾಖ್ಯಾನಿಸುವರು. ಉಳಿದವರ ದೈವಪದ್ಧತಿ, ಆಚರಣೆ ಪದ್ಧತಿ, ಆಹಾರ ಪದ್ಧತಿಯನ್ನು ಅನಾಗರಿವೆಂದು ಎಗ್ಗಿಲ್ಲದೆ ಕರೆಯಬಲ್ಲರು
ಒಮ್ಮೆ ನಾನೂ ಮಿತ್ರರಾದ ರಂಗನಾಥ ಕಂಟನಕುಂಟೆ ಅವರೂ ಬೆಂಗಳೂರಿನಲ್ಲಿ ಹೋಟೆಲೊಂದಕ್ಕೆ ಹೋಗಿ, ಬಿರಿಯಾನಿಗೆ ಆರ್ಡರ್ ಕೊಟ್ಟು, ಹರಟುತ್ತ ಕುಳಿತಿದ್ದೆವು. ಅಷ್ಟರಲ್ಲಿ 35-40ರ ಪ್ರಾಯದ ಒಬ್ಬ ವ್ಯಕ್ತಿ ಹೋಟೆಲನ್ನು ಪ್ರವೇಶಿಸಿದನು. ಆತನ ಮುಖದಲ್ಲಿ ಅಪರಿಚಿತ ಜಾಗಕ್ಕೆ ಬಂದವರಲ್ಲಿರುವ ವಿಚಿತ್ರ ಗಾಬರಿ ಗೊಂದಲ ಕಂಡಿತು. ಹಣೆಯಲ್ಲಿದ್ದ ಕುಂಕುಮ ಬೆವರಿಗೆ ಕಲಸಿಕೊಂಡು ಮಸುಕಾದ ಕೆಂಬಣ್ಣ ಕಾಣುತ್ತಿತ್ತು. ಕೈಲ್ಲಿದ್ದ ಆಫೀಸ್ ಬ್ಯಾಗನ್ನೂ ಜೇಬಲ್ಲಿದ್ದ ಹಲವಾರು ಪೆನ್ ಕಂಡರೆ, ಯಾವುದಾದರೂ ಕಚೇರಿಯಲ್ಲಿ ಗುಮಾಸ್ತನಿರಬಹುದು. ಆತ ಅತ್ತಿತ್ತ ನೋಡಿ ಬೆಳಕಿಲ್ಲದ ಮೂಲೆ ಆರಿಸಿಕೊಂಡು ಕುಳಿತು, ಸಪ್ಲೇರನಿಗೆ ಪಿಸುದನಿಯಲ್ಲಿ ಚಿಕನ್ ಬಿರಿಯಾನಿ’ ಎಂದನು. ಆತ ಯಾರಾದರೂ ಪರಿಚಿತರು ಇದ್ದಾರೆಯೇ ಎಂದು ಕಳ್ಳಗಣ್ಣಿಂದ ಅತ್ತಿತ್ತ ಕಣ್ಣು ಹಾಯಿಸುತ್ತಿದ್ದನು. ಬೆದರಿದ ಹರಿಣದಂತೆ ಅಭದ್ರತೆಯಿಂದ ಚಡಪಡಿಸುತ್ತಿದ್ದ ಆತನ ಮೇಲೆ ಕಣ್ಪಹರೆ ಇಟ್ಟು ನಮ್ಮಷ್ಟಕ್ಕೆ ಉಣ್ಣತೊಡಗಿದವು. ಅಷ್ಟರಲ್ಲಿ ಅವನಿಗೂ ಹಬೆಯಾಡುವ ಬಿರಿಯಾನಿ ಬಂದಿತು. ಆತ ತಿನ್ನಲು ಚಮಚ ಬೇಕೆಂದು ಕೇಳಿದನು. ಶಾಲೆಗೆ ಹೊಸ ಅಡ್ಮಿಶನ್’ ಎಂದು ಖಾತ್ರ್ರಿಯಾಯಿತು.
ಬಿರಿಯಾನಿಯನ್ನು ಮಸಾಲೆ ಮತ್ತು ಮಾಂಸದ ತುಣುಕುಗಳ ಜತೆ ತಟ್ಟೆಯಲ್ಲೆ ಮಿದ್ದು, ತುತ್ತುಮಾಡಿ ಕೈಯಿಂದ ತಿಂದರೇನೇ ರುಚಿ; ತುಂಡನ್ನು ತೊಟ್ಟಿನಂತೆ ಎಲುಬು ಹೊರಟಿರುವ ಕಡೆ ಹಿಡಿದುಕೊಂಡು ಖಂಡಭಾಗ ಕಚ್ಚಿ ಎಳೆದರೇನೇ ಸವಿ. ಆದರೆ ಆತ ಇಡ್ಲಿಯ ತುಣುಕಿನಂತೆ ಮಾಂಸದ ತುಂಡನ್ನು ಚಮಚದಲ್ಲಿ ತೆಗೆದುಕೊಂಡು ತಿನ್ನಲಾರಂಭಿಸಿದನು. ತುಂಡು ಚಮಚದಲ್ಲಿ ಕೂರದೆ ಕೆಳಗೆ ಬೀಳುತ್ತಿತ್ತು. ಪ್ರಯಾಸದಿಂದ ಬಾಯೊಳಗೆ ಹೋದರೂ, ನುರಿಸಲು ಆಗದೆ ದವಡೆ ತುಂಬ ತುಂಬಿಕೊಂಡು ಕಷ್ಟಕೊಡುತ್ತಿತ್ತು. ಕೊಂಚ ಹೊತ್ತಿನ ಬಳಿಕ ಆತ ನಮ್ಮ ತಟ್ಟೆಗಳತ್ತ ಕಣ್ಣುಹಾಯಿಸಿ, ಜ್ಞಾನೋದಯವಾದಂತೆ ಚಮಚ ಕೆಳಗಿಟ್ಟು, ತಟ್ಟೆಗೆ ಕೈಹಾಕಿ ಸಲೀಸಾಗಿ ತಿನ್ನತೊಡಗಿದನು.
ಮಾಂಸಾಹಾರಕ್ಕೆ ತಮ್ಮನ್ನು ಉದ್ಘಾಟಿಸಿಕೊಳ್ಳುವ ಹಲವರನ್ನು ಕಂಡಿದ್ದೇನೆ. ಅವರು ಮಕ್ಕಳ ಕುತೂಹಲದಿಂದ ಮಾಂಸದ ತುಂಡನ್ನು ಹಿಡಿದು ಇದು ಯಾವ ಭಾಗ, ಹೇಗೆ ತಿನ್ನುವುದು ಎಂದು ಪ್ರಶ್ನೆ ಕೇಳುವುದು, ಬಿಡದ ಮುಜುಗರದಲ್ಲಿ ಯಾವುದೊ ಸಾಹಸ ಮಾಡುತ್ತಿರುವ ಭಾವಾವೇಶ ತೋರುವುದು ಮಾಡುತ್ತಾರೆ. ಒಮ್ಮೆ ಪ್ರವೇಶ ಪಡೆದ ಮೇಲೆ ಮುಗಿಯಿತು, ಯಾವ ಪ್ರಾಣಿ ಅಥವಾ ಪಕ್ಷಿಯ ಮಾಂಸವೆಂಬ ತರತಮವಿಲ್ಲದ ಸಮಾಜವಾದಿ ಪ್ರಜ್ಞೆಯಲ್ಲಿ, ಹಿಂಬಾಕಿ ತೀರಿಸುವಂತೆ ಎಲುಬುಗಳನ್ನೆಲ್ಲ ಜಗಿದು ಪುಡಿಗಟ್ಟತೊಡಗುತ್ತಾರೆ.
ಇತ್ತ ಬಿರಿಯಾನಿ ಪ್ರವೇಶ ಪ್ರಸಂಗದ ನಾಯಕ, ಊಟಮುಗಿಸಿ, ಬಿಲ್ಲಿನ ತಟ್ಟೆಗೆ ದುಡ್ಡಿಟ್ಟು, ಬಾಯೊರೆಸಿಕೊಳ್ಳುತ್ತ, ವೇಶ್ಯೆಯರ ಮನೆಗೆ ಬಂದ ಸಭ್ಯಸ್ಥನು ಯಾರಿಗೂ ಕಾಣಿಸದೆ ಪಾರಾಗ ಬಯಸುವಂತೆ ಮಳ್ಳಗೆ ಹೊರಬಿದ್ದು, ಗಾಂಧಿನಗರದ ಜನಜಂಗುಳಿಯಲ್ಲಿ ಕರಗಿಹೋದನು. ಮಾಂಸಾಹಾರ ವಿರೋಧಿಗಳು ತಿನ್ನುಣ್ಣುವ ಸಮುದಾಯಗಳ ಮೇಲೆ ತಿರಸ್ಕಾರ ಹುಟ್ಟಿಸುವ ಕೆಲಸವಷ್ಟೇ ಮಾಡಿಲ್ಲ, ತಿನ್ನಲು ಬಯಸುವ ತಮ್ಮ ಸಮುದಾಯಗಳ ಸದಸ್ಯರ ಮೇಲೂ ಹಿಂಸೆಯನ್ನು ಹೇರಿವೆ. ನಾವು ಕಂಡ ಈ ದೃಶ್ಯವು, ಭಾರತದಲ್ಲಿ ಜಾತಿ-ಧರ್ಮಗಳು ಆಹಾರದ ವಿಷಯದಲ್ಲಿರುವ ನಿರ್ಬಂಧಗಳು ಸೃಷ್ಟಿಸಿರುವ ವಿಚಿತ್ರ ವರ್ತನೆ, ಮುಜುಗರಗಳ ಚರಿತ್ರೆ ಮತ್ತು ವಾಸ್ತವವನ್ನೆಲ್ಲ ಪಾತ್ರವೊಂದು ರಂಗದ ಮೇಲೆ ಅಭಿನಯಿಸಿ ಹೋದಂತಿತ್ತು. ಎಲ್ಲರಿಗೂ ಗೊತ್ತಿರುವಂತೆ ಮಾಂಸಾಹಾರವನ್ನು ನಿಷೇಧಿಸಿಕೊಂಡಿರುವ ಸಮುದಾಯಗಳಲ್ಲಿ, ನಗರ ಮಧ್ಯಮವರ್ಗಕ್ಕೆ ಸೇರಿದ ಆಧುನಿಕ ತಲೆಮಾರಿನವರು, ಸಂಕೋಚವಿಲ್ಲದೆ ಹೋಟೆಲುಗಳಲ್ಲಿ ಮಾಂಸ ಮೀನು ಮೊಟ್ಟೆ ತಿನ್ನಲಾರಂಭಿಸಿದ್ದಾರೆ. ಮಾಂಸಾಹಾರದ ಹೋಟೆಲುಗಳಿಗೆ ಬರುವವರ ಸಾಮಾಜಿಕ ಹಿನ್ನೆಲೆಯನ್ನು ಒಂದೊಮ್ಮೆ ಶೋಧಿಸಿದರೆ ಇದರ ಪ್ರಮಾಣ ತಿಳಿಯುತ್ತದೆ. ಕೆಲವರು ಮನೆಯಲ್ಲೇ ಮಾಂಸದಡಿಗೆ ಮಾಡಿಕೊಳ್ಳುವಷ್ಟು ಸಹ ಮುಂದುವರೆದಿದ್ದಾರೆ. ಹಳ್ಳಿಗಳಲ್ಲಿ ಈ ವ್ಯವಹಾರ ಕದ್ದುಮುಚ್ಚಿ ನಡೆಯುತ್ತದೆ. ʼತಿನ್ನುವ’ ʼಕುಡಿಯುವ’ ಅಭ್ಯಾಸವುಳ್ಳವರು ಈ ಕಾರ್ಯವನ್ನು ಪೇಟೆಗೆ ಬಂದಾಗ ಸಾಂಗವಾಗಿ ನೆರವೇರಿಸುತ್ತಾರೆ.

ಎಷ್ಟೊ ಹಳ್ಳಿಗಳಲ್ಲಿ ಸಸ್ಯಾಹಾರಿ ಸಮುದಾಯಕ್ಕೆ ಸೇರಿದವರು, ವೈಯಕ್ತಿವಾಗಿ ತಿನ್ನದಿದ್ದರೂ ಕೋಳಿಫಾರಂ ಇಟ್ಟಿದ್ದಾರೆ. ಸಸ್ಯಾಹಾರಿ ಜಾತಿಯವರು, ತಮ್ಮ ಊರದೇವತೆಗಳ ಜಾತ್ರೆಯಲ್ಲಿ ಕೋಣ ಕುರಿಯನ್ನು ಬಲಿಗೊಡುವ ಅಥವಾ ಮೊಹರಂನಲ್ಲಿ ಕಂದೂರಿ ಮಾಡಿಸುವ ಕೆಲಸವನ್ನು ಮಾಡುವುದುಂಟು. ಇನ್ನು ಶಿಕ್ಷಣಕ್ಕೊ ಉದ್ಯೋಗಕ್ಕೊ ಅಮೆರಿಕ ಯೂರೋಪುಗಳಿಗೆ ಹೋದ ಬಹಳಷ್ಟು ಜನ ಮಾಂಸಾಹಾರಕ್ಕೆ ಒಗ್ಗಿಕೊಂಡಿದ್ದಾರೆ. ಸಸ್ಯಾಹಾರಿಯೊಬ್ಬರು ಮಾಂಸಾಹಾರಿ ಆಗುವುದು ಅಥವಾ ಮಾಂಸಾಹಾರಿಗಳು ಅದನ್ನು ಕೈಬಿಡುವುದು ದೊಡ್ಡ ಸಂಗತಿ ಆಗಬೇಕಿಲ್ಲ. ಆದರೆ ಭಾರತದಲ್ಲಿ ಅದು ತಲೆಹೋಗುವ ವಿಷಯವಾಗಿಬಿಟ್ಟಿದೆ. ಸ್ವತಃ ಸಂಘಪರಿವಾರದ ಹಿರಿತಲೆ ಅಟಲ ಬಿಹಾರಿ ವಾಜಪೇಯಿಯವರು ಮಾಂಸ ಭಕ್ಷಿಸುತ್ತಿದ್ದುದು ಎಲ್ಲರಿಗೂ ಗೊತ್ತಿದೆ. ಒಮ್ಮೆ ಅವರು ವಿದೇಶದಲ್ಲಿ ಎಳೆಗರುವಿನ ಮಾಂಸ ಭಕ್ಷಿಸಿದ ಪ್ರಕರಣ ವಿವಾದ ಹುಟ್ಟುಹಾಕಿತ್ತು. ಆಗವರು ನಾನು ತಿಂದದ್ದು ಭಾರತದ ದನದ ಮಾಂಸವಲ್ಲ ಎಂದು ಸಮಜಾಯಿಷಿ ಕೊಟ್ಟು ಪಾರಾದರು. ವರ್ತಮಾನದಲ್ಲಿ ಮಾಂಸಾಹಾರ ನಿಷೇಧಿಸಿಕೊಂಡಿರುವ ಸಮುದಾಯಗಳು, ಚರಿತ್ರೆಯ ಒಂದು ಘಟ್ಟದಲ್ಲಿ ಮಾಂಸಾಹಾರಿಗಳಾಗಿದ್ದವು, ಅದರಲ್ಲೂ ದನದ ಮಾಂಸವನ್ನೂ ಭಕ್ಷಿಸುತ್ತಿದ್ದವು ಎಂಬುದಕ್ಕೆ ಸಂಸ್ಕೃತದಲ್ಲಿರುವ ಪಠ್ಯಗಳಲ್ಲಿ ನಿದರ್ಶನಗಳಿವೆ.
ಬಲಿಕೊಟ್ಟ ಪ್ರಾಣಿಯ ಮಾಂಸವನ್ನು ತಿನ್ನುವುದು ಎಲ್ಲ ಜನಾಂಗಗಳ ಸಂಸ್ಕೃತಿಯಲ್ಲಿ ಪವಿತ್ರವಾದ ಧಾರ್ಮಿಕ ಕ್ರಿಯೆ. ವೇದಗಳಲ್ಲಿ ದೇವತೆಗಳಿಗೆ ಹವಿಸ್ಸು ಕೊಡುವಾಗ ಪ್ರಾಣಿಯ ಬಲಿಯಾಗಲೇಬೇಕಿತ್ತು. ಅಜಯಾಗ, ಅಶ್ವಮೇಧಯಾಗಗಳ ಹೆಸರುಗಳಲ್ಲೇ ಆಡು ಕುದುರೆಗಳ ಪ್ರಸ್ತಾಪವಿದೆ. ಯಾಗಕ್ಕೆ ಪ್ರಾಣಿಗಳನ್ನು ವಿವೇಚನೆಯಿಲ್ಲದೆ ಕಡಿಯುವುದರ ವಿರುದ್ಧ 12ನೇ ಶತಮಾನದ ಶರಣರು ಪ್ರತಿಭಟಿಸಿದರು. ʼವೇದಘನವೆಂಬನೆ ಪ್ರಾಣಿವಧೆಯ ಹೇಳುತ್ತಿದೆ’ ಎಂಬ ಬಸವಣ್ಣನ ಮಾತು ಇದಕ್ಕೆ ಸಾಕ್ಷಿ. ಈ ಯಾಗಬಲಿ ಪ್ರಕರಣಗಳು 20ನೇ ಶತಮಾನದಲ್ಲೂ ನಡೆದಿರುವುದುಂಟು. ಶಿವರಾಮ ಕಾರಂತರು ತಮ್ಮ ಆತ್ಮಚರಿತ್ರೆಯಲ್ಲಿ ಕೋಟದ ಬ್ರಾಹ್ಮಣರು ಅಜಯಾಗ ಮಾಡಿ ಹೋತ ಬಲಿಕೊಟ್ಟ ಪ್ರಕರಣ ದಾಖಲಿಸುತ್ತಾರೆ. ಗೋ ಚಳುವಳಿಗೆ ಹೆಸರಾಗಿರುವ ಮಠವೊಂದರಲ್ಲಿ ಅಜಯಾಗವನ್ನು ಗುಟ್ಟಾಗಿ ಮಾಡಲಾಯಿತೆಂದು ಶಿವಮೊಗ್ಗೆ ಸೀಮೆಯ ಪತ್ರಿಕೆಗಳು ವರದಿ ಮಾಡಿವೆ. ಈಗಲೂ ಮನೆಕಟ್ಟುವ ಭೂಮಿಪೂಜೆ ಮಾಡುವ ಹೊತ್ತಲ್ಲಿ, ಭಟ್ಟರು ಎಡಅಂಗೈಯ ಮೇಲೆ ಬಲ ಅಂಗೈಯನ್ನು ಕತ್ತಿಯಂತೆ ಲಂಬವಾಗಿ ಹಿಡಿದು ಹೊಡೆಯುವ ಮೂಲಕ ಬಲಿಯ ಅಭಿನಯ ಮಾಡುವುದನ್ನು ನೋಡಬಹುದು.
ಭಾರತದ ಜನಪ್ರಿಯ ದೇವತೆಗಳಲ್ಲಿ ಒಬ್ಬನಾದ ಶಿವನಿಗೂ ಬಲಿಯುಂಟು. 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಶ್ರೀಶೈಲ ಮಲ್ಲಿಕಾರ್ಜುನನ ಗುಡಿಯು, ಲಿಂಗದ ಮುಂದೆ ಪ್ರಾಣಿಗಳನ್ನು ಬಲಿಗೊಡುತ್ತಿರುವ ಶಿಲ್ಪಗಳಿಂದ ತುಂಬಿಹೋಗಿದೆ. ಗುಡಿಯಲ್ಲಿರುವ ಬಲಿಪೀಠ, ರುಧಿರ ಕುಂಡಗಳು ಒಂದು ಕಾಲಕ್ಕೆ ಅಲ್ಲಿದ್ದ ಬಲಿಪದ್ಧತಿಯ ಪುರಾವೆಗಳಾಗಿವೆ. ಶಿವರೂಪಿಯಾದ ಭೈರವನ ಆಚರಣೆಗಳಲ್ಲಿ ಮಾಂಸದೆಡೆ ಕಡ್ಡಾಯ. ಈಗಲೂ ಚುಂಚನಗಿರಿ ಜಾತ್ರೆಯಲ್ಲಿ ಇದನ್ನು ನೋಡಬಹುದು. ಇನ್ನು ಶಿವನ ಮಡದಿ ರೂಪಗಳಾದ ದುರ್ಗಮ್ಮ ಕಾಳಮ್ಮ ಮಾರಮ್ಮ ಮುಂತಾದ ಸ್ತ್ರೀದೇವತೆಗಳ ಆಚರಣೆಗಳನ್ನು ಬಲಿ-ರಕ್ತ-ಮಾಂಸದಡಿಗೆಯಿಲ್ಲದೆ ಕಲ್ಪಿಸಿಕೊಳ್ಳುವಂತಿಲ್ಲ. ಪ್ರಸಿದ್ಧ ಶಕ್ತಿಪೀಠಗಳಲ್ಲಿ ಒಂದಾದ ಅಸ್ಸಾಮಿನ ಕಾಮಾಖ್ಯದಲ್ಲಿ ಬಲಿಕೊಡುವ ಪ್ರಾಣಿಪಕ್ಷಿಗಳ ಪಟ್ಟಿ ವಿಶಿಷ್ಟವಾಗಿದೆ. ಕುರಿಕೋಣವಲ್ಲದೆ, ಮೊಲ, ಜಿಂಕೆ, ಪಾರಿವಾಳಗಳನ್ನೂ ಅಲ್ಲಿ ಬಲಿಗೊಡಲಾಗುತ್ತದೆ. ವೈದಿಕರು ಅವೈದಿಕರು, ಆರ್ಯರು ದ್ರಾವಿಡರು ಎಂದು ಕರೆಯಲಾಗುವ ಎಲ್ಲ ಸಮುದಾಯಗಳಲ್ಲಿ, ಮುಸ್ಲಿಮರಲ್ಲಿ, ಗ್ರೀಕರಲ್ಲಿ, ದೇವರ ಹೆಸರಲ್ಲಿ ಪ್ರಾಣಿಬಲಿ ಕೊಡುವ ಪದ್ಧತಿ ಸಾವಿರಾರು ವರ್ಷಗಳಿಂದ ನಡೆಯುತ್ತ ಬಂದಿದೆ. ಇದು ಧರ್ಮ ದೈವ ಕಸುಬು ತಿಥಿ ಹಬ್ಬ ಮದುವೆಗಳ ಭಾಗವಾಗಿದ್ದು, ತಾರ್ಕಿಕ ಮುಂದುವರಿಕೆ ಎಂಬಂತೆ, ಮಾಂಸಾಹಾರವು ರೂಪುತಳೆದಿದೆ.

ಆದರೆ ಪ್ರಾಣಿಬಲಿಯು ಉಳುಮೆಗೆ ಎತ್ತುಗಳೂ ಹಯನಕ್ಕೆ ಹಸುಗಳೂ ಕೊರತೆ ಯಾಗುವಷ್ಟು ತೀವ್ರವಾದಾಗ, ಬುದ್ಧ ಇದಕ್ಕೆ ತಡೆಯೊಡ್ಡಿದನು. ಹಾಗೆ ಒಡ್ಡಿದರೂ ಭಿಕ್ಕುಗಳಿಗೆ ಮಾಂಸಾಹಾರ ನಿಷೇಧಿಸಲಿಲ್ಲ. ಇದು ಬೌದ್ಧಧರ್ಮವು ವೈದಿಕ ಧರ್ಮವನ್ನು ಹಿಂದಿಕ್ಕಲು ಕಾರಣವಾಯಿತು. ಈ ಕಾಲಘಟ್ಟದಲ್ಲಿ ಉಚ್ಚಜಾತಿಗಳು ಸಸ್ಯಾಹಾರಿಗಳಾಗಿ, ಮಾಂಸಾಹಾರದ ಮೇಲಿನ ನಿಷೇಧ ಮತ್ತು ತಿರಸ್ಕಾರವನ್ನು ಆರಂಭಿಸಿದರು. ಇದನ್ನು ಅಂಬೇಡ್ಕರ್ ತಮ್ಮ ʼಅಸ್ಪೃಶ್ಯರು’ (1946) ಕೃತಿಯಲ್ಲಿ ವಿಶ್ಲೇಷಿಸುತ್ತಾರೆ. ಆದರೆ ಅಸ್ಸಾಂ, ನೇಪಾಳ ಮತ್ತು ಬಂಗಾಳಗಳ ಬ್ರಾಹ್ಮಣರು ಇದಕ್ಕೆ ಅಪವಾದ. ಈಗಲೂ ಅವರಲ್ಲಿ ಪ್ರಾಣಿಬಲಿ ಮತ್ತು ಮಾಂಸಾಹಾರ ಪದ್ಧತಿ ಅನೂಚಾನವಾಗಿದೆ. ಇಷ್ಟೆಲ್ಲ ಚರಿತ್ರೆಯಿದ್ದರೂ ತಿನ್ನುವುದನ್ನು ಕೈಬಿಟ್ಟ ಉಚ್ಚಜಾತಿಗಳು, ತಾವೀಗ ಮಾಂಸ ತಿನ್ನುತ್ತಿಲ್ಲವೆಂದು ಸಲ್ಲದ ಶ್ರೇಷ್ಠತೆಯನ್ನು ತೋರುವುದು, ತಿನ್ನುಣ್ಣುವ ಜನರು ಕದ್ದುಮುಚ್ಚಿ ತಿನ್ನುವುದು, ತಾವು ಮಾಂಸಾಹಾರ ಮಾಡುವುದಿಲ್ಲವೆಂದು ಸುಳ್ಳುಹೇಳಿ ಸಿಕ್ಕಿಬಿದ್ದು ಸಲ್ಲದ ಕೀಳರಿಮೆ ಅನುಭವಿಸುವುದು ನಿಂತಿಲ್ಲ. ಇದೊಂದು ಸಾಮಾಜಿಕ ವೈರುಧ್ಯ ಮತ್ತು ಆಹಾರದ ಮೇಲೆ ನಡೆಯುತ್ತಿರುವ ಅಮಾನುಷ ಹಲ್ಲೆ. ಈಚೆಗೆ ಕರ್ನಾಟಕದಲ್ಲಿ ಬಾರು ಮತ್ತು ಮಾಂಸಾಹಾರದ ಹೋಟೆಲುಗಳ ಸಂಖ್ಯೆ ಹೆಚ್ಚಾಗಿದೆ. ಅವು ಕಿರುಪಟ್ಟಣಗಳಲ್ಲೂ ಪಟ್ಟಣಕ್ಕೆ ಸಮೀಪವಿರುವ, ಹೆದ್ದಾರಿ ಪಕ್ಕದ ದೊಡ್ಡ ಗ್ರಾಮಗಳಲ್ಲೂ ಆರಂಭವಾಗಿವೆ. ಮಾಂಸಾಹಾರಿಗಳಲ್ಲಿ ಕೆಲವರು ಆರೋಗ್ಯದ ಕಾರಣಕ್ಕೊ ಸಾಮಾಜಿಕ ಮನ್ನಣೆ ಪಡೆಯುವುದಕ್ಕೊ ಸಸ್ಯಾಹಾರಿಗಳಾಗಿ ಬದಲಾಗುವ ಪ್ರಕ್ರಿಯೆ ನಡೆದಿದ್ದರೂ ಅದರ ಪ್ರಮಾಣ ಕಡಿಮೆ. ಆಹಾರದ ಮಾಂಸಾಹಾರೀಕರಣ ಪ್ರವೃತ್ತಿ ಹೆಚ್ಚು ಹಬ್ಬುತ್ತಿದೆ. ಮಾಂಸಾಹಾರಿಗಳು ʼಅಯ್ಯೋ ತಿನ್ನಬಾರದವರು ತಿಂತಿರೋದಕ್ಕೆ ಮಾಂಸದ ರೇಟು ಈಪಾಟಿ ಹೆಚ್ಚಿದೆ’ ಎಂದು ಗೊಣಗಿಕೊಳ್ಳುವಷ್ಟು ಹೆಚ್ಚುತ್ತಿದೆ.
ಸ್ವಾರಸ್ಯವೆಂದರೆ, ಸಸ್ಯಹಾರಿ ಹೋಟೆಲುಗಳು ತಮ್ಮ ಆಹಾರದ ಐಟಮ್ಮುಗಳಿಗೆ ಮಾಂಸಾಹಾರದ ನುಡಿಗಟ್ಟನ್ನು ಜೋಡಿಸಿಕೊಳ್ಳುತ್ತಿರುವುದು. ವೆಜಿಟಬಲ್ ತಿಂಡಿಗಳಿಗೆ ಪಲಾವ್ ಬಿರಿಯಾನಿ ಕುರ್ಮ ಕುಫ್ತ ಎಂಬ ಅರಬಿ ಫಾರಸಿ ಭಾಷೆಯ ಮಾಂಸಾಹಾರ ಸೂಚಕ ವಿಶೇಷಣಗಳು ಸೇರಿಕೊಳ್ಳುತ್ತಿರುವುದು. ಕೆಲವು ಕಡೆ ಮಾಂಸದ ಅನುಭವ ಕೊಡುವ ಒಂದು ಕೃತಕ ವಸ್ತುವನ್ನು (ಸೋಯಾಬೀನಿನಿಂದ ಮಾಡಿದ್ದು) ಪಲಾವಿನಲ್ಲಿ ಹಾಕಲಾಗುತ್ತಿದೆ. ಹೀಗೆ ಸಾರ್ವಜನಿಕರಲ್ಲಿ ಮಾಂಸಾಹಾರದ ಆಕರ್ಷಣೆ ಹೆಚ್ಚಾಗುತ್ತಿರುವ ಹೊತ್ತಲ್ಲೇ, ಅದರ ಮೇಲಿನ ಸಾಮಾಜಿಕ ನಿಷೇಧ ಮತ್ತು ಹಲ್ಲೆಗಳು ಕೂಡ ಹೆಚ್ಚಾಗುತ್ತಿವೆ. ಇದೊಂದು ವೈರುಧ್ಯ. ಮಾಂಸಾಹಾರ ಪಡೆಯುತ್ತಿರುವ ಜನಪ್ರಿಯತೆ ಸೃಷಿಸಿದ ಹತಾಶೆಯಿಂದಲೊ, ಜನ ತಮ್ಮ ಸಹಜ ಆಹಾರವನ್ನು ಸ್ವೀಕರಿಸುವುದನ್ನು ಸಹಿಸಲಾಗದ ಅಸೂಯೆಯಿಂದಲೊ ಅಥವಾ ಬ್ರಾಹ್ಮಣವಾದವು ತನ್ನ ಆಹಾರ ಪದ್ಧತಿಯನ್ನು ಬಹುಸಂಖ್ಯಾತರ ಮೇಲೆ ಹೇರಿ ಸಾಂಸ್ಕೃತಿಕ ಹಿಡಿತ ಸಾಧಿಸುವ ಹುನ್ನಾರದ ಭಾಗವಾಗಿಯೊ ಈ ಹಲ್ಲೆಗಳು ಹುಟ್ಟುತ್ತಿವೆ. ಮಾಂಸಾಹಾರದ ಚರಿತ್ರೆಯನ್ನು ಅನಾವರಣ ಮಾಡುವ ವಿದ್ವಾಂಸರ ಮೇಲೂ ಹಲ್ಲೆ ನಡೆಸಲಾಗುತ್ತಿದೆ. ಪವಿತ್ರ ಹಸುವಿನ ಮಿಥ್ಯೆ ಕುರಿತು ಗ್ರಂಥ ರಚಿಸಿದ ಝಾ ಅವರ ಕೃತಿಯನ್ನು ನಿಷೇಧಿಸುವ ಮತ್ತು ಅವರಿಗೆ ಪ್ರಾಣ ಬೆದರಿಕೆ ಹಾಕಿದ ಪ್ರಕರಣ ಇದಕ್ಕೆ ಸಾಕ್ಷಿ.
ದಿನೇಶ್ ಅಮೀನ್‍ಮಟ್ಟು ಅವರು ಸಾಕ್ಷ್ಯಾಧಾರಗಳ ಸಮೇತ ವಿವೇಕಾನಂದರು ಮಾಂಸಾಹಾರಿಯಾಗಿದ್ದರು ಎಂದು ಬರೆದಿದ್ದಕ್ಕೆ ದೊಡ್ಡ ರಂಪವೇ ಆಗಿಹೋಯಿತು. ಕರ್ನಾಟಕದಲ್ಲಿ ಮಾಂಸಾಹಾರದ ವಿಷಯದಲ್ಲಿ ಈಚಿಗೆ ನಡೆದಿರುವ ಮಾತಿನ ಮತ್ತು ದೈಹಿಕ ಹಲ್ಲೆಗಳು ದಂಗುಬಡಿಸುವಷ್ಟು ಹೆಚ್ಚುತ್ತಿವೆ. ಬಾಬಾಬುಡನಗಿರಿಯನ್ನು ʼವಿಮೋಚನೆ’ ಮಾಡಲು ಹೊರಟಿರುವ ಸಂಘಪರಿವಾರವು, ಅದಕ್ಕೆ ಕೊಟ್ಟಿರುವ ಕಾರಣಗಳಲ್ಲಿ ಅಲ್ಲಿ ಹಿಂದುಗಳ ಭಾವನೆಗಳಿಗೆ ಘಾಸಿಯಾಗುವಂತೆ ಮಾಂಸಾಹಾರ ನಡೆಯುತ್ತಿದೆ ಎಂಬುದೂ ಒಂದಾಗಿತ್ತು. ಇದೊಂದು ಅಚಾರಿತ್ರಿಕ ಹೇಳಿಕೆ. ಭಾರತದಲ್ಲಿ ಶೇಕಡ 90ರಷ್ಟು ʼಹಿಂದು’ಗಳೆಂದು ಕರೆಯಲಾಗುವ ಜನ ಮತ್ತು ಶೇಕಡ 99 ಬುಡಕಟ್ಟುಗಳು ಮಾಂಸಾಹಾರಿಗಳು. ಪರಿಸ್ಥಿತಿ ಹೀಗಿರುವಾಗ ಅಲ್ಪಸಂಖ್ಯಾತ ಸಸ್ಯಾಹಾರಿಗಳು ದಂಡಹಿಡಿದು ಮಾತಾಡುವುದು ವಿಚಿತ್ರವಾಗಿದೆ.
ಎಂ. ಚಿದಾನಂದಮೂರ್ತಿ ಅವರು ಹಂಪಿಯ ಪುರಂದರ ಮಂಟಪದ ಬಳಿ ಕೆಲವು ಕೋಳಿಪುಕ್ಕದ ಗರಿಗಳು ಸಿಕ್ಕಿವೆಯೆಂದು ಉಲ್ಲೇಖಿಸುತ್ತ, ಹಂಪಿಯ ಪಾವಿತ್ರ್ಯ ರಕ್ಷಣೆಯಲ್ಲಿ ಮಾಂಸಾಹಾರದ ಪ್ರಶ್ನೆಯನ್ನು ಸಮಸ್ಯೆಯನ್ನಾಗಿ ಮಾಡಲು ಯತ್ನಿಸಿದರು. ಆದರೆ ಇದೇ ಹಂಪಿಗೆ ಸಮೀಪವಿರುವ ಗಾಳೆಮ್ಮನಗುಡಿಯಲ್ಲಿ ಪ್ರತಿ ಮಂಗಳವಾರ ಮತ್ತು ಶನಿವಾರ, ಟ್ರಾಫಿಕ್ ಜಾಮ್ ಮಾಡುವಂತಹ ಸಣ್ಣಜಾತ್ರೆ ನೆರೆಯುತ್ತದೆ. ಕುರಿಯನ್ನು ಮೆರವಣಿಯಲ್ಲಿ ಗುಡಿಗೆ ಒಯ್ಯುವ, ಮಸಾಲೆ ಅರೆಯುವ, ಮಾಂಸದಡಿಗೆ ಮಾಡುತ್ತ ರಸ್ತೆಯಲ್ಲಿ ಹೋಗಿಬರುವವರ ಮೂಗಿಗೆ ಪರಿಮಳವನ್ನು ನುಗ್ಗಿಸಿ ಸಮ್ಮೋಹನಗೊಳಿಸುವ, ಸಾಲಾಗಿ ಕುಳಿತು ತಿನ್ನುವ, ಮರದಡಿ ಮಲಗಿ ವಿಶ್ರಾಂತಿ ಪಡೆಯುವ ದೃಶ್ಯಗಳಿಂದ ಅಲ್ಲಿನ ಪರಿಸರ ತುಂಬಿ ಹೋಗುತ್ತದೆ. ಇದೇ ದೃಶ್ಯವನ್ನು ಹಂಪಿಗೆ ಅನತಿ ದೂರದಲ್ಲಿರುವ ಹುಲಗಿಯಲ್ಲೂ ನೋಡಬಹುದು. ಇವ್ಯಾರಾರೂ ಅನ್ಯಧರ್ಮ’ದವರ ಪಿತೂರಿಯಿಂದ ಇದನ್ನು ಮಾಡುತ್ತಿಲ್ಲ. ಈ ಆಚರಣೆಯನ್ನು ಕ್ರೂರ ಎನ್ನುವುದು, ಅವರ ಆಹಾರವನ್ನು ಅನಾಗರಿಕ ವೆನ್ನುವುದು, ಹುಲಿಗೆಮ್ಮ-ಗಾಳೆಮ್ಮ ಭಕ್ತರನ್ನು ನಮ್ಮವರಲ್ಲ ಎಂದಂತೆ ತಾನೇ?
ಒಂದರ್ಥದಲ್ಲಿ ಬಲಿ ಮತ್ತು ಮಾಂಸಾಹಾರವನ್ನು ಹಿಂಸೆ ಅಪವಿತ್ರ ಎನ್ನುವವರೇ ಈ ದೇಶದ ಬಹುಸಂಖ್ಯಾತರ ಸಂಸ್ಕೃತಿಗೆ ಬಾಹಿರರು. ತಿನ್ನುವ ಕುಡಿವ ಜನರಲ್ಲಿ ಬಾಡೂಟವು ಅವರ ಬದುಕಿನಲ್ಲಿ ಒಂದು ಸಂಭ್ರಮದ ಗಳಿಗೆಯಾಗಿದೆ. ಹಬ್ಬ ಜಾತ್ರೆಗಳಲ್ಲಿ ಮಾಂಸಾಹಾರ ಇದ್ದೇ ಇರುತ್ತದೆ. ತಮಗೆ ಪ್ರಿಯವಾದ ಗೆಳೆಯರು ನಂಟರಿಷ್ಟರು ಬಂದಾಗ ʼಹೆಚ್‍ಗಟ್ಟಲೆ’ ಮಾಡುವುದೆಂದರೆ, ಅವರನ್ನು ಗೌರವಿಸುವುದು ಎಂದೇ ಅರ್ಥ. ಹಿಂದೆ ಆಶ್ರಮಕ್ಕೆ ಬಂದವರಿಗೆ ಋಷಿಗಳು ಎಳೆಗರುವಿನ ಮಾಂಸವನ್ನು ಬಡಿಸಿ ಗೌರವಿಸುವ ಸಂಪ್ರದಾಯವಿದ್ದು, ಅತಿಥಿಯನ್ನು ʼಗೋಘ್ನ’ ಎಂದು ಕರೆಯಲಾಗುತ್ತಿತ್ತಷ್ಟೆ. ಮಾಂಸದಡಿಗೆ ದಿನ ಮನೆಯವರೆಲ್ಲ ಊಟಕ್ಕೆ ಕುಳಿತಾಗ ಏರ್ಪಡುವ ಸಂಭ್ರಮ ನಾಟಕೀಯವಾಗಿರುತ್ತದೆ. ಉದಾಹರಣೆಗೆ- ಮೆತ್ತನೆಯ ತುಂಡನ್ನು ಹುಡುಕಿ ಹಲ್ಲಿಲ್ಲದವರಿಗೆ ಕೊಡುವುದು, ಅಳಿಯಂದಿರಿಗೆ ಕೋಳಿಯ ತೊಡೆ ಭಾಗವನ್ನು ಬಡಿಸುವುದು, ಮೀನಿನ ಮುಳ್ಳಿಲ್ಲದ ಭಾಗವನ್ನು ಮಕ್ಕಳಿಗೆ ಬಿಡಿಸಿಕೊಡುವುದು, ಮಾಂಸ ಕಡಿಮೆಯಿರುವ ತುಂಡು ಬಿದ್ದಾಗ ಸಂಬಂಧಪಟ್ಟವರು ಮುಖ ಊದಿಸಿಕೊಳ್ಳುವುದು, ಬಡಿಸುವವರು ಅದನ್ನು ಪತ್ತೆಹಚ್ಚಿ ಬಾಬತ್ತಿನ ನಷ್ಟ ತುಂಬಿ ಕೊಡುವಂತೆ ಇನ್ನೊಂದು ತುಂಡು ಬಡಿಸುವುದು, ನಲ್ಲಿಕೊಳವೆ ಬಿದ್ದವರು ಟ್ರಾಫಿಕ್ ಪೊಲೀಸರಂತೆ ಅದನ್ನು ಬಾಯಿಗಿಟ್ಟು ಮಜ್ಜೆ ಎಳೆಯುವುದು, ಒಣಗಿದ ಮಾಂಸ ಹುರಿದು ನಡುನಡುವೆ ಕಟಕ್ಕೆಂದು ಕಡಿಯುತ್ತ ಮುದ್ದೆ ನುಂಗುವುದು-ಇತ್ಯಾದಿ ವರ್ಣರಂಜಿತ ಘಟನೆಗಳು ಅಲ್ಲಿ ಜರುಗುತ್ತವೆ.
ಪಂಕ್ತಿಯಲ್ಲಿ ಕುಳಿತಾಗ ತಮ್ಮ ಪ್ರಿಯರಾದವರಿಗೆ ನಿರ್ದಿಷ್ಟ ತುಂಡುಗಳನ್ನು ಹುಡುಕಿಹಾಕುವ ಪಕ್ಷಪಾತ ನಡೆದು, ಅದು ದೊಡ್ಡ ಕದನಗಳಿಗೆ ಕಾರಣವಾಗಿರುವುದುಂಟು. ನಮ್ಮ ನಂಟರಲ್ಲೊಬ್ಬರು- ಕುವೆಂಪು ಕಾದಂಬರಿಯ ಬಾಡುಗಳ್ಳ ಸೋಮನ ಜಾತಿಯವರು- ಮಗನಿಗೆ ಹೆಣ್ಣು ನೋಡಲು ಹೋಗಿ, ತಮಗೆ ಸರಿಯಾದ ತುಂಡು ಬಡಿಸಲಿಲ್ಲವೆಂದು, ಆ ಹೆಣ್ಣೇಬೇಡ ಎಂದು ಸಂಬಂಧ ಹರಿದುಕೊಂಡು ಬಂದಿದ್ದರು. ಆದ್ದರಿಂದಲೇ ಇರಬೇಕು- ಮಾಂಸದಡಿಗೆಯನ್ನು ಉತ್ಸಾಹದಿಂದ ಮಾಡುವ ಹೆಂಗಸರು, ಬಡಿಸುವ ಹೊತ್ತು ಬಂದಾಗ ನಿಷ್ಠುರ ಯಾಕೆ ಕಟ್ಟಿಕೊಳ್ಳಬೇಕು ಎಂದು ಹಿಂಜರಿಯುತ್ತಾರೆ. ಇವೆಲ್ಲವೂ ಪರೋಕ್ಷವಾಗಿ ಮಾಂಸಾಹಾರದ ಜತೆಗಿರುವ ತಳವರ್ಗದ ದುಡಿಯುವ ಜನರ ಸಂಭ್ರಮವನ್ನು ಸೂಚಿಸುತ್ತವೆ. ಒಳ್ಳೇ ಮಾಂಸದಡಿಗೆಯ ಔತಣ ಮಾಡಿಕೊಂಡು ಬಂದವರು ಅದನ್ನು ಇಡೀ ವರ್ಷ ಹೊಗಳುತ್ತ ಇರುವುದುಂಟು. ಹೀಗಾಗಿ ನಿತ್ಯ ಹಸಿವಿಗೆ ಮಾಡುವ ಊಟವು ಮಾಂಸದ ವಿಷಯ ಬಂದಾಗ ಅಪೂರ್ವ ಸಾಂಸ್ಕೃತಿಕ ವಿದ್ಯಮಾನವಾಗಿ ಬಿಡುವ ಜೀವನಕ್ರಮ ತಿನ್ನುವ ಸಮುದಾಯಗಳಲ್ಲಿದೆ. ಆದರೆ ತಿನ್ನುವ ಸಮುದಾಯದ ಕೆಲವು ಕುಟುಂಬ ಮತ್ತು ವ್ಯಕ್ತಿಗಳು ಬ್ರಾಹ್ಮಣೀಕರಣಗೊಂಡ ಪರಿಣಾಮವಾಗಿ ಶುಭ’ ಸಂದರ್ಭಗಳಲ್ಲಿ ಮಾಂಸದೂಟವನ್ನು ನಿವಾರಿಸಿಕೊಂಡಿವೆ. ಆದರೂ ಶುಭ’ ಸಂದರ್ಭ ಮುಗಿದ ಕೂಡಲೇ ಅದರ ಸಪ್ಪೆತನ ಕಳೆಯಲು ಬಾಡೂಟ ನುಗ್ಗಿ ವಿಜೃಂಭಿಸುತ್ತದೆ. ಈ ಸಮಾರೋಪ ಕಾರ್ಯಕ್ರಮ ಮುಗಿಸಿಕೊಂಡೇ ಬಂದ ನಂಟರು ತಳಕೀಳುವುದು. ಕೆಲವು ಕಡೆ ಯುಗಾದಿಯ ಮಾರನೆ ದಿನ, ಬೇಟೆಯಾಡುವ ಮತ್ತು ಮಾಂಸದೂಟ ಮಾಡುವ ಸಂಪ್ರದಾಯವಿದೆ. ಮಂಡ್ಯ ಹಾಸನ ಭಾಗದಲ್ಲಿ ಹರಿಸೇವೆ ಮಾಡುವವರು, ಕೊನೆಯ ದಿನ ಮಾಂಸದೂಟ ಇಟ್ಟುಕೊಳ್ಳುತ್ತಾರೆ. ವೈಷ್ಣವ ಸಂಪ್ರದಾಯದ ಮುತ್ತತ್ತಿಯಲ್ಲಿ ಆಂಜನೇಯನಿಗೂ ಬೇಟೆ ಸೇವೆಯಿದೆ. ಮಂಟೆಸ್ವಾಮಿ ಜಾತ್ರೆಯಲ್ಲಿ ಮಾಂಸದ ಸಾರು ಮುದ್ದೆ ಬಡಿಸುವ ಸಂಪ್ರದಾಯವಿದೆ. ಗುಲಬರ್ಗಾ ಜಿಲ್ಲೆಯಲ್ಲಿ ಎಷ್ಟು ಮರಿಗಳು ಬಿದ್ದವು ಎಂಬುದರ ಮೇಲೆ ಆಯಾ ಊರಿನ ಮೊಹರಂ ವೈಭವವನ್ನು ಅಳೆಯಲಾಗುತ್ತದೆ. ತಿಥಿಗಳಲ್ಲಿ ಸತ್ತವರ ನೆನಪಿನ ದುಃಖಸೂಚಕ ಆಚರಣೆಯಲ್ಲಿ ಮಾಂಸಾಹಾರ ಸೇರಿರುವುದು ಬಹುಶಃ ಸಾವಿನ ದುಗುಡವನ್ನು ಊಟದ ಸಂಭ್ರಮದ ಮೂಲಕ ಜೀವಂತವಿದ್ದವರು ಮರೆಯುವ ಪರಿಯೂ ಇದ್ದೀತು.

ಮುಸ್ಲಿಮರ ಬಕ್ರೀದ್, ಸತ್ತವರ ಹೆಸರಲ್ಲಿ ಬಲಿಕೊಡುವ (ಖುರ್ಬಾನಿ) ಹಬ್ಬವಾಗಿದ್ದು ಮಾಂಸದಾನ ಮಾಡುವುದು ಅಲ್ಲಿನ ಮುಖ್ಯ ಆಚರಣೆಯಾಗಿದೆ. ಇಡೀ ದಿನ ಬೇರೆಬೇರೆ ಮನೆಗಳಿಂದ ಮಾಂಸದ ಸಣ್ಣಪೊಟ್ಟಣಗಳೂ ಮನೆಗೆ ಬಂದು ಬೀಳುತ್ತಿರುತ್ತವೆ. ಮನೆಯಲ್ಲಿ ಕುರ್ಬಾನಿ ಕೊಟ್ಟರೆ, ಎಲ್ಲರ ಮನೆಗೆ ಮಾಂಸ ಹಂಚಿಕೊಂಡು ತಿರುಗುವುದು ಬಾಲ್ಯದಲ್ಲಿ ನಮಗೆ ಸಂಭ್ರಮದ ವಿಷಯವಾಗಿತ್ತು. ಹೆಂಗಸರು ಹೆಚ್ಚಿನ ಮಾಂಸವನ್ನು ಉದ್ದಕ್ಕೆ ಕುಯ್ದು ಉಪ್ಪು ಅರಿಸಿಣ ಮೆಣಸಿನ ಹುಡಿ ಹಚ್ಚಿ, ಸರವಾಗಿ ಪೋಣಿಸಿ, ಬೆಕ್ಕು-ಕಾಗೆ ತಿನ್ನದಂತೆ ದಿನ ಹುಶಾರಾಗಿ ಒಣಗಿಸಿ, ಇಡೀ ವರ್ಷಕ್ಕೆ ಆಗುವಂತೆ ಸಂಗ್ರಹಿಸುವ ಕೆಲಸವನ್ನು, ಉಪಗ್ರಹವನ್ನು ಅಂತರಿಕ್ಷಕ್ಕೆ ಕಳಿಸುವ ವಿಜ್ಞಾನಿಗಳ ಶ್ರದ್ಧೆಯಲ್ಲಿ ಮಾಡುತ್ತಾರೆ. ಮಾಂಸದೂಟದ ಆಚರಣೆಗಳು ಜನರ ದುಡಿಮೆಯ ಲೋಕಕ್ಕೂ ಕಸುಬಿನ ಜಗತ್ತಿಗೂ ಸಂಬಂಧಪಟ್ಟಿವೆ. ಚರಗ ಚೆಲ್ಲುವ ಕೃಷಿ ಆಚರಣೆಯಲ್ಲಿ ಬಲಿಪ್ರಾಣಿಯ ರಕ್ತವನ್ನು ಬೆರೆಸಲೇಬೇಕು. ಆಯುಧಪೂಜೆಯ ದಿನ ವರ್ಷವಿಡೀ ಕೆಲಸಕ್ಕೆ ಒದಗುವ ಸಲಕರಣೆಗಳ ಪೂಜೆಯನ್ನು ಬಲಿಕೊಟ್ಟು ಮಾಡಲೇಬೇಕು. ಹೀಗೆ ಜನರ ಕಸುಬುಗಳಿಗೂ ದೈವಗಳಿಗೂ ಧಾರ್ಮಿಕ ಆಚರಣೆಗಳಿಗೂ ಆಹಾರಕ್ಕೂ ಸಂಬಂಧಗಳಿದ್ದು, ಅವು ಬಳ್ಳಿಯಂತೆ ಬೆಸೆದುಕೊಂಡಿವೆ.
ಪ್ರಾಣಿ ಇಲ್ಲವೇ ಪಕ್ಷಿಯ ಬಲಿಯನ್ನೊ ಮಾಂಸಾಹಾರವನ್ನೊ ನಿರ್ದಿಷ್ಟ ಜಾತಿ ಸಮುದಾಯ ಅಥವಾ ವ್ಯಕ್ತಿಗಳು ವೈಯಕ್ತಿಕವಾಗಿ ನಿಷೇಧಿಸಿಕೊಳ್ಳುವುದು ಸಮಸ್ಯೆಯಲ್ಲ; ಆದರೆ ಅದು ಬಲಿಗೊಡುವವರ ಮತ್ತು ತಿನ್ನುವವರ ಮೇಲಣ ದೈಹಿಕ ಮತ್ತು ಸಾಂಸ್ಕೃತಿಕ ಹಲ್ಲೆಯಾಗಿ ಪರಿಣಮಿಸಿರುವುದು ಸಮಸ್ಯೆ. ತಿನ್ನುಣ್ಣುವ ಜನ ತಮ್ಮ ದೇವತೆಗಳಿಗೆ ಪ್ರಾಣಿಬಲಿ ಕೊಡುವುದನ್ನು ಬರ್ಬರ ಹತ್ಯೆ ಎಂದು ಭಾವಿಸಿರುವ ಜನರಿದ್ದಾರೆ. ಕೆಲವು ಪತ್ರಕರ್ತರು ಗ್ರಾಮದೇವತೆಗಳ ಜಾತ್ರೆಗಳ ಮೇಲೆ ಪೊಲೀಸರ ಸಮ್ಮುಖದಲ್ಲಿ ಹಾಡುಹಗಲೇ ಪ್ರಾಣಿಗಳ ಕೊಲೆ’ಜಾತ್ರೆಯಲ್ಲಿ ಸಾವಿರಾರು ಪ್ರಾಣಿಗಳ ʼಬರ್ಬರ ಹತ್ಯೆ’ ಎಂದು ವರದಿ ಮಾಡುತ್ತಾರೆ. ಮಕ್ಕಾದಲ್ಲಿ ಬಕ್ರೀದ್ ದಿನ ನಡೆದ ಬಲಿ ಆಚರಣೆಯ ಬಗ್ಗೆ ಕೂಡ ಲಕ್ಷಾಂತರ ʼಮುಗ್ಧ ಪ್ರಾಣಿಗಳ ವಧೆ’ ಎಂದು ಬರೆಯಲಾಗುತ್ತದೆ. ಬಲಿಯು ಜೈವಿಕವಾಗಿ ತಾಂತ್ರಿಕವಾಗಿಹತ್ಯೆ’ ನಿಜ. ಆದರೆ ಅದನ್ನು ಕೊಲೆ ವಧೆ ಎಂಬ ಪರಿಭಾಷೆಯಲ್ಲಿ ಬಣ್ಣಿಸುವುದು ಅಸಾಂಸ್ಕೃತಿಕ ದೃಷ್ಟಿಕೋನ. ಮಾಂಸಾಹಾರಿಗಳನ್ನು ತಟ್ಟೆಯಲ್ಲಿ ಪ್ರಾಣಿ ಪಕ್ಷಿಗಳ ಶವಭಕ್ಷಣೆ ಮಾಡುವವರು ಎಂಬಂತೆ ಒಮ್ಮೆ ಮೇನಕಾ ಗಾಂಧಿ ಬಣ್ಣಿಸಿದ್ದರು. ಇದೂ ಅಸಾಂಸ್ಕøತಿಕ ಬಣ್ಣನೆಯೇ. ಈ ಅರ್ಥದಲ್ಲಿ ನೀರಲ್ಲಿ ಜೀವಂತವಾಗಿ ಆಡಿಕೊಂಡಿರುವ ಮೀನನ್ನು ಬೆಸ್ತರು ಹಿಡಿಯುವುದೂ ತಾರ್ಕಿಕವಾಗಿ ಕೊಲೆಯಾಗುತ್ತದೆ ನಿಜ. ಆದರೆ ಜೀವಹತ್ಯೆಯ ಚರ್ಚೆಯನ್ನು ಅತಿಗೆ ಒಯ್ದರೆ, ಮಾಂಸದೊಳುತ್ಪತ್ತಿ ಕ್ಷೀರ’ವನ್ನು ಕುಡಿಯುವುದೂ, ಸೂಕ್ಷ್ಮಾಣು ಜೀವಿಗಳ ನೆರವಿನಿಂದ ಸಿಹಿಯಾದ ಹಾಲು ಹುಳಿಯಾಗಿ ಮಾರ್ಪಡುವ ಮೊಸರನ್ನೂ ತಿನ್ನುವುದು ಹಿಂಸೆಯಾಗುತ್ತದೆ. ಸಸ್ಯಗಳಿಗೂ ಜೀವವಿದೆಯಾಗಿ ಸಸ್ಯಾಹಾರವೂ ಅಹಿಂಸೆಯಾಗುತ್ತದೆ.
ವ್ಯಂಗ್ಯವೆಂದರೆ, ಪ್ರಾಣಿದಯೆಯನ್ನು ತೋರುವ ಜನರು, ಧರ್ಮದ ಹೆಸರಿನಲ್ಲಿ ಮನುಷ್ಯರನ್ನು ಮುಟ್ಟಿಸಿಕೊಂಡರೆ ಮೈಲಿಗೆಯಾಗುತ್ತದೆ ಎಂಬುದನ್ನು ವಿರೋಧಿಸುವುದಿಲ್ಲ; ಧರ್ಮದ ಹೆಸರಲ್ಲಿ ನಡೆಯುವ ಹಿಂಸೆಯನ್ನು ಬೆಂಬಲಿಸುತ್ತಾರೆ. ದೇಶರಕ್ಷಣೆಯ ಹೆಸರಲ್ಲಿ ನಡೆಯುವ ಮಿಲಿಟರಿ ಯುದ್ಧಗಳು ಹೆಂಗಸರು-ಮಕ್ಕಳನ್ನು ಕೊಲ್ಲುವುದನ್ನು ಶೌರ್ಯವೆಂದು ವ್ಯಾಖ್ಯಾನಿಸುವರು. ಉಳಿದವರ ದೈವಪದ್ಧತಿ, ಆಚರಣೆ ಪದ್ಧತಿ, ಆಹಾರ ಪದ್ಧತಿಯನ್ನು ಅನಾಗರಿವೆಂದು ಎಗ್ಗಿಲ್ಲದೆ ಕರೆಯಬಲ್ಲರು. ಮಾಂಸಾಹಾರದ ವಿರುದ್ಧ ಸಸ್ಯಾಹಾರವಾದಿ ಉಚ್ಚಜಾತಿಗಳು ಯುದ್ಧವನ್ನೇ ಸಾರಿದಂತೆ ಕಾಣುತ್ತದೆ. ಗಂಗಾನದಿ ತೀರದಲ್ಲಿ ಅಡ್ಡಾಡುವಾಗ ಹೃಷಿಕೇಶದಲ್ಲಿ ನಾನೊಂದು ಬೋರ್ಡನ್ನು ನೋಡಿದೆ. ಅದರಲ್ಲಿ ಮಾಂಸಾಹಾರವನ್ನು ಹೇಯವೆಂದು ಬಣ್ಣಿಸುವ ಬರೆಹವಿತ್ತು. ಬೆಂಗಳೂರಿನ ಜಯನಗರ ಮುಂತಾದ ಬಡಾವಣೆಗಳಲ್ಲಿ ಮೀನಿನಂಗಡಿ ತೆರೆಯುವುದಕ್ಕೆ ಮೀನುಗಾರಿಕೆ ಇಲಾಖೆ ಅಲೋಚಿಸುವಾಗ, ಅದನ್ನು ವಿರೋಧಿಸಿ ಪ್ರಜಾವಾಣಿಯಲ್ಲಿ ಆನಂದರಾಮ ಶಾಸ್ತ್ರಿ ಎಂಬುವವರು ಒಂದು ಪತ್ರ ಬರೆದಿದ್ದರು. ಅದರ ಧಾಟಿಯು ʼನಮ್ಮ ಮನೆಯಗಳ ಸುತ್ತ ಈ ನರಕ ತಂದು ಸ್ಥಾಪಿಸುತ್ತೀರಿ’ ಎಂಬ ಹೇವರಿಕೆಯ ದನಿಯಲ್ಲಿತ್ತು. ವಾಸ್ತವದಲ್ಲಿ ಇದು ಮೀನು ಮಾಂಸ ತಿನ್ನುವವರ ಆಹಾರದ ಹಕ್ಕಿನ ಪ್ರಶ್ನೆ ಮಾತ್ರವಲ್ಲ, ನಾಡಿನ ಮೀನುಗಾರರ ಮತ್ತು ಪಶುಪಾಲಕರ ಉದ್ಯೋಗದ ಪ್ರಶ್ನೆ ಕೂಡ. ಆದರೂ ಈ ದೇಶದ ಬಹುಸಂಖ್ಯಾತ ದುಡಿವ ಮಂದಿ ಮಾಂಸ ಮೀನು ಮೊಟ್ಟೆಗಳ ಸೇವಿಸುವ ವಿಷಯ ಬಂದಾಗ, ಯಾಕೆ ಹಿಂಸೆ ಕ್ರೂರ ಅಸಹ್ಯ ಬರ್ಬರ ವಧೆ ಎಂಬ ನುಡಿಗಟ್ಟಿನಲ್ಲಿ ಚರ್ಚಿಸಲಾಗುತ್ತದೆ. ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ಕೊಡಲು ಸರ್ಕಾರ ಯೋಚಿಸಿದ ಪ್ರಕರಣದಲ್ಲಿ ಬಂದ ಪ್ರತಿರೋಧವನ್ನು ಗಮನಿಸಬೇಕು.

ಬಹುಸಂಖ್ಯಾತ ಬಡವರ ಹಳ್ಳಿಗಾಡಿನ ಮಕ್ಕಳು ಪೌಷ್ಟಿಕವಾದ ಆಹಾರ ಪಡೆಯುವ ಸಣ್ಣ ಅವಕಾಶವನ್ನು ಅಲ್ಪಸಂಖ್ಯಾತರೂ ಪ್ರಭಾವಶಾಲಿಗಳೂ ಆದ ಮೇಲ್ಜಾತಿಯ ಸಸ್ಯಾಹಾರಿಗಳು ತಪ್ಪಿಸಿಬಿಟ್ಟರು. ಆ ಹೊತ್ತಲ್ಲಿ ಸ್ವಾಮಿಜಿಯೊಬ್ಬರು, ಮೊಟ್ಟೆ ಕೊಟ್ಟರೆ ಶಾಲೆಗಳಿಂದ ವೀರಪ್ಪನ್‍ಗಳು ಹುಟ್ಟುತ್ತಾರೆ ಎಂದು ಎಚ್ಚರಿಸಿದರು.
ಮಾಂಸಾಹಾರಕ್ಕೂ ಮಾನವ ಸ್ವಭಾವಕ್ಕೂ ಸಂಬಂಧ ಜೋಡಿಸುವ ಮತ್ತು ಅದನ್ನು ರಾಕ್ಷಸೀಕರಿಸುವ ಮನೋಭಾವ ಸೋಜಿಗ ಹುಟ್ಟಿಸುತ್ತದೆ. ಒಬ್ಬ ವ್ಯಕ್ತಿ ದುಷ್ಟನೆಂದು ಸೂಚಿಸಲು ಅವನ ಮಾಂಸಾಹಾರಕ್ಕೆ ಲಗತ್ತಿಸಲಾಗುತ್ತದೆ. ರಾಕ್ಷಸರು ಯಾಗ ಕೆಡಿಸಲು ಮಾಂಸ ತಂದು ಹಾಕುತ್ತಿದ್ದರು, ಅವರಿಗೆ ಕೋರೆಹಲ್ಲು ಗಳಿದ್ದವು, ಅವರು ಮಾಂಸ ತಿನ್ನುತ್ತಿದ್ದರು ಎಂಬ ಬ್ರಾಹ್ಮಣವಾದಿ ಪುರಾಣಗಳ ಆಧುನಿಕ ಆವೃತ್ತಿಗಳಿವು. ಈಗಲೂ ಸಿನಿಮಾಗಳಲ್ಲಿ ಭೂಗತ ಜಗತ್ತಿನ ಕೇಡಿಗಳು ಕೊಲೆಮಾಡಿಸಿದ ಬಳಿಕ ಮಾಂಸದೂಟ ಮಾಡುವ ದೃಶ್ಯಗಳಿರುತ್ತವೆ. ʼಆವರಣ’ ಕಾದಂಬರಿಯಲ್ಲಿ ನೀಚ ಪಾತ್ರವಾದ ಶಾಸ್ತ್ರಿಯು ಹೋಟೆಲಿನಲ್ಲಿ ದನದ ಮಾಂಸ ತಿನ್ನುವ ಮತ್ತು ಕಾದಂಬರಿ ಸಜ್ಜನನೆಂದು ಚಿತ್ರಿಸುವ ಮತ್ತು ಶೂದ್ರನೊಬ್ಬ ಮಾಂಸಾಹಾರ ಬಿಟ್ಟು ಸಜ್ಜನನೆನಿಸುವ ಸನ್ನಿವೇಶವಿದೆ. ದನದಮಾಂಸ ತಿನ್ನುವವರ ಕೈಕಡಿಯಬೇಕು, ನಾಲಿಗೆ ಕತ್ತರಿಸಬೇಕು ಎಂಬ ಹುಕುಮುಗಳನ್ನು ಮಾಜಿ ಮಂತ್ರಿ ಕೆ.ಎಸ್.ಈಶ್ವರಪ್ಪನವರು ನೂರಾರು ಸಲ ಮಾಡಿದರು. ವ್ಯಂಗ್ಯವೆಂದರೆ, ಪಶುಪಾಲಕ ಸಮುದಾಯದಿಂದ ಬಂದವರು ಅವರು. ಹರಿಯಾಣದಲ್ಲಿ ಸತ್ತ ದನದ ಮಾಂಸ ಸಂಗ್ರಹಿಸುತ್ತಿದ್ದ ದಲಿತರನ್ನು ಕೊಂದು ಹಾಕಿದ ಜಜ್ಜರ್ ಪ್ರಕರಣದಲ್ಲಿ ಒಬ್ಬ ಧಾರ್ಮಿಕ ಮುಖಂಡರು ದಲಿತರಿಗಿಂತ ದನದ ಜೀವ ಹೆಚ್ಚು ಪವಿತ್ರ’ ಎಂದು ಹೇಳಿದರು. ಲಂಕೇಶ್ ಅವರು ಇಟ್ಟಿಗೆ ಪವಿತ್ರವಲ್ಲ ಜೀವ ಪವಿತ್ರ’ ಎಂದು ಹೇಳಿದ್ದಕ್ಕೆ ವಿರುದ್ಧವಾದ ಹೇಳಿಕೆಯಿದು.
ಭಾರತದಲ್ಲಿ ಮಾಂಸಾಹಾರದ ಮೇಲಿನ ಹಲ್ಲೆಯನ್ನು ಸಸ್ಯಾಹಾರವಾದಿ ಕ್ಲಬ್ಬುಗಳ, ವೈದ್ಯರ ಹೇಳಿಕೆಗಳ, ಗೋರಕ್ಷಣ ಚಳುವಳಿಗಳ, ಪ್ರಾಣಿದಯಾ ಸಂಘಗಳ ಮೂಲಕ ನಿರಂತರ ಮಾಡಲಾಗುತ್ತಿದೆ. ಮಾಂಸಾಹಾರದ ಮೇಲೆ ಸಾರಲಾಗಿರುವ ಈ ಯುದ್ಧವು ಕೇವಲ ಆಹಾರದ ಮೇಲಿನ ಹಲ್ಲೆಯಲ್ಲ. ಆಳದಲ್ಲಿ ಕೆಳಜಾತಿಗಳ ದಲಿತರ ಮುಸ್ಲಿಮರ ಕ್ರೈಸ್ತರ ಮೇಲೆ, ಅವರ ಧರ್ಮ, ದೈವಗಳು, ಜೀವನಕ್ರಮ ಮತ್ತು ಚಿಂತನೆಗಳ ಮೇಲೆ ಸಾರಿರುವ ಸಾಂಸ್ಕೃತಿಕ ಹಲ್ಲೆ ಕೂಡ. ಜನ ತಮ್ಮ ಆಹಾರದ ಕಾರಣದಿಂದ ಮುಜುಗರಕ್ಕೆ ಈಡಾಗುವ, ಅಪಮಾನಿತರಾಗುವ ಪ್ರಾಣ ಕಳೆದುಕೊಳ್ಳಬೇಕಾದ ಪರಿಸ್ಥಿತಿಯಿರುವ ಸಮಾಜ ಅಮಾನುಷವಾದುದು. ಹೀಗೆ ಅಪಮಾನ ಮುಜುಗರ ಮತ್ತು ಕೊಲೆಗೆ ಈಡಾಗುವವರಲ್ಲಿ ಬ್ರಾಹ್ಮಣರು ಇದ್ದರೂ ಹೆಚ್ಚಿನ ಬಲಿಪಶುಗಳು ದಲಿತರು ಮತ್ತು ಮುಸ್ಲಿಮರು. ಬಾಳೆಹೊನ್ನೂರಿನ ಬಳಿ ದನದ ಮಾಂಸ ಒಯ್ಯುತ್ತಿದ್ದ ದಲಿತ ಹಾಗೂ ಮುಸ್ಲಿಮರನ್ನು ಹಿಡಿದು ಅವರ ಕೊರಳಿಗೆ ಅದನ್ನೇ ಹಾರವಾಗಿ ಹಾಕಿ ಅರೆಬೆತ್ತಲೆ ಮೆರವಣಿಗೆ ಮಾಡಲಾದ ವರದಿ ಇದಕ್ಕೆ ಸಾಕ್ಷಿ.
ಆಹಾರದ ಮೇಲಿನ ಹಲ್ಲೆಗಳು ಕೇವಲ ಮೇಲುಜಾತಿಗಳು ಕೆಳಜಾತಿಗಳ ಮೇಲೆ ಮಾಡುವುದಲ್ಲ, ಮಾಂಸಾಹಾರಿ ಜಾತಿಗಳ ಒಳಗೂ ಹಲವು ರೂಪದಲ್ಲಿ ಜಾರಿಯಲ್ಲಿವೆ. ಕೋಳಿ ಕುರಿ ತಿನ್ನುವವರು ದನದ ಮಾಂಸ ತಿನ್ನುವವರನ್ನು ಕೀಳೆಂದು ತಿಳಿಯುವರು; ಮೀನು ತಿನ್ನುವ ಕೊಂಕಣಿ ಬ್ರಾಹ್ಮಣರನ್ನು ಉಳಿದ ಬ್ರಾಹ್ಮಣರು ಕೀಳಾಗಿ ನೋಡುವರು; ದನದ ಮಾಂಸ ತಿನ್ನದ ಮುಸ್ಲಿಮರಲ್ಲಿ ಕೆಲವರು, ತಿನ್ನುವವರನ್ನು ಕೀಳಾಗಿ ನೋಡುವರು. ಕುರಿ, ಕೋಳಿ, ದನದ ಮಾಂಸದ ಅಂಗಡಿಗಳಿಗೆ ಬರುವ ಗಿರಾಕಿಗಳ ಸಾಮಾಜಿಕ ಆರ್ಥಿಕ ಹಿನ್ನೆಲೆಯನ್ನು ಅಧ್ಯಯನ ಮಾಡಿದರೆ, ಮಾಂಸಕ್ಕೂ ಮಾಂಸಾಹಾರಿಗಳಲ್ಲೇ ಇರುವ ವರ್ಗ ಮತ್ತು ಜಾತಿಗಳಿಗೂ ಇರುವ ಆಂತರಿಕ ಸಂಬಂಧಗಳು ಗೊತ್ತಾಗುತ್ತವೆ.
ಒಬ್ಬ ವ್ಯಕ್ತಿ, ಜಾತಿ ಅಥವಾ ಸಮುದಾಯ ಮಾಂಸ ತಿನ್ನುವುದು ಅಥವಾ ತಿನ್ನದೆ ಇರುವುದು ಅಪರಾಧವಾಗಲಿ ಸಾಧನೆಯಾಗಲಿ ಅಲ್ಲ. ಆದರೂ ಅದು ನಮ್ಮ ಸಮಾಜದಲ್ಲಿ ದ್ವೇಷ ಮತ್ತು ಹಲ್ಲೆಗೆ ಕಾರಣವಾಗಿರುವುದು ವಾಸ್ತವ. ಸಮಾಜದಲ್ಲಿ ವ್ಯಕ್ತಿಯ ಅಥವಾ ಗುಂಪಿನ ಮೇಲೆ ಅನೇಕ ಕಾರಣಕ್ಕಾಗಿ ಹಲ್ಲೆಗಳು ನಡೆಯುತ್ತಿವೆ. ಅವನ್ನು ರಾಜಕೀಯ ಹಲ್ಲೆ, ಜಾತಿದ್ವೇಷದ ಹಲ್ಲೆ, ಕೋಮುದ್ವೇಷದ ಹಲ್ಲೆ, ಅನ್ಯಭಾಷಿಕರ ಮೇಲಣ ಹಲ್ಲೆ, ವಲಸೆಗಾರರ ಮೇಲಣ ಹಲ್ಲೆ ಎಂದು ಪಟ್ಟಿಮಾಡಬಹುದು. ನಾಗರಿಕ ಸಮಾಜಗಳು ಬುಡಕಟ್ಟಿನ ಮೇಲೆ ಮಾಡುವ ದಬ್ಬಾಳಿಕೆಯಿದೆ. ಗಂಡಸರು ಮಹಿಳೆಯರ ಮೇಲೆ ಎಸಗುತ್ತಿರುವ ಕೌಟುಂಬಿಕ ಹಿಂಸೆಗಳಿವೆ. ಚರ್ಮದ ಬಣ್ಣದ ಕಾರಣಕ್ಕಾಗಿ ಹಲ್ಲೆಗೊಳಗಾದ ನೀಗ್ರೋಗಳಿದ್ದಾರೆ. ಯಹೂದಿಗಳು ಧರ್ಮಕಾರಣಕ್ಕಾಗಿ ಕೊಲ್ಲಲ್ಪಟ್ಟರು. ಚಾರ್ವಾಕರು ತಾವು ನಂಬಿದ ವಿಚಾರಧಾರೆಯ ಕಾರಣದಿಂದ ಕೊಲ್ಲಲ್ಪಟ್ಟರು. ಈ ಬಹುರೂಪಿಯಾದ ಹಲ್ಲೆಗಳಲೆಲ್ಲ ಆಹಾರದ ಮೇಲಣ ಹಲ್ಲೆ ಅತ್ಯಂತ ನೀಚತಮವಾಗಿದೆ.
ಆದರೆ ಆಹಾರವು ಸಂಸ್ಕೃತಿಯ ಸೂಕ್ಷ್ಮಸಂವೇದನೆಗೆ ಸಂಬಂಧಪಟ್ಟ ಮತ್ತು ಆಳವಾಗಿ ಬೇರುತಳೆದ ಸಂಗತಿಯಾಗಿದ್ದು, ಅದನ್ನು ದೈಹಿಕ ಮತ್ತು ಸಾಂಸ್ಕೃತಿಕ ಹಲ್ಲೆಗಳಿಂದ ಸೋಲಿಸಲು ಸಾಧ್ಯವಿಲ್ಲ. ಜಿಗುಟುತನದಿಂದ ಅದು ತನ್ನನ್ನು ಬದುಕಿಸಿಕೊಳ್ಳುತ್ತದೆ. ಮಾಂಸಾಹಾರವನ್ನು ಲಿಂಗದೀಕ್ಷೆ ಪಡೆದವರಿಗೆ ನಿಷೇಧಿಸಿದ ಬಸವಣ್ಣ ಕಡೆಗೆ ಒಂದು ಕೈಯಲ್ಲಿ ಮಾಂಸ, ಬಾಯಲ್ಲಿ ಸುರೆಗಡಿಗೆ, ಕೊರಳಲ್ಲಿ ಲಿಂಗ ಇರುವವರನ್ನು ಮುಖಲಿಂಗಿಗಳು ಎಂದು ಒಪ್ಪಿಕೊಳ್ಳಬೇಕಾಯಿತು.
ಇದನ್ನೂ ಓದಿ ಬಹುಸಂಖ್ಯಾತರ ಇಚ್ಛೆಯಂತೆ ದೇಶ, ಕಾನೂನು ನಡೆಯುತ್ತದೆ: ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ!
ಲಂಕೇಶರ ʼಸಂಕ್ರಾಂತಿ’ ನಾಟಕವು ಆಹಾರ ಮತ್ತು ದೈವಗಳ ಮೇಲಿನ ಹಲ್ಲೆಗಳು ಒಂದೇ ಕೇಂದ್ರದಿಂದ ಹುಟ್ಟುವುದನ್ನು ಮತ್ತು ಅವು ಹಿಂಸೆ ಮತ್ತು ಪ್ರತಿರೋಧಗಳನ್ನು ಹುಟ್ಟಿಸುವುದನ್ನು ಕಾಣಿಸುತ್ತದೆ. ಮಾಂಸಾಹಾರವು ತಾಮಸ ಪ್ರವೃತ್ತಿಯನ್ನು ಹುಟ್ಟಿಸುತ್ತದೆಯೆಂದು ಸಸ್ಯಾಹಾರವಾದಿಗಳು ವಾದಿಸುವುದುಂಟು. ಆದರೆ ಆರೂವರೆ ಲಕ್ಷ ಯಹೂದಿಗಳ ನರಮೇಧಕ್ಕೆ ಕಾರಣನಾದ ಹಿಟ್ಲರ್ ಸಸ್ಯಾಹಾರಿಯಾಗಿದ್ದ ಎಂದು ಅವರಿಗೆ ಗೊತ್ತಿಲ್ಲ. ದನದ ಮಾಂಸ ತಿನ್ನುವವರು ರಾಕ್ಷಸರು ಎಂದು ಹೇಳಿದ ರಾಮಚಂದ್ರಾಪುರದ ಸ್ವಾಮಿಗಳ ಮಾತಿಗೆ, ಪುಟ್ಟಣ್ಣಚೆಟ್ಟಿ ಹಾಲಿನ ಎದುರು ದಲಿತರು ಮಾಂಸ ಬೇಯಿಸಿ ತಿನ್ನುವ ಮೂಲಕ ಪ್ರತಿಕ್ರಿಯಿಸಿದರು. ಆದರೂ ಈ ಆಹಾರದ ಹಲ್ಲೆಯನ್ನು ಬೇರೆಬೇರೆ ರೂಪದಲ್ಲಿ ಭವಿಷ್ಯದಲ್ಲಿ ಎದುರಿಸುತ್ತಲೇ ಇರಬೇಕಾದ ಸನ್ನಿವೇಶ ದುಗುಡದಾಯಕವಾಗಿದೆ. ದನದ ಮಾಂಸ ತಿನ್ನುತ್ತಿದ್ದ ಬ್ರಿಟಿಷರಿಗೆ ಊಳಿಗ ಮಾಡುವಾಗ ಬಾರದ ಕೋಪ, ದನದ ಮಾಂಸ ತಿನ್ನುವ ಸಮಾಜಗಳಿರುವ ದೇಶಗಳಿಗೆ ಹೋಗಿ ನೆಲೆಸುವಾಗ ಬಾರದ ದ್ವೇಷ, ತಮ್ಮ ಜತೆಯಲ್ಲಿ ಬದುಕುವ ಜನರ ಮೇಲೆ ಹುಟ್ಟುತ್ತದೆ. ʼಅಸ್ಪೃಶ್ಯರು’ ಕೃತಿ ರಚಿಸುವಾಗ ಅಂಬೇಡ್ಕರ್ ಅವರಲ್ಲಿದ್ದುದು, ಆಹಾರ ಸಂಸ್ಕೃತಿಯ ಚರಿತ್ರೆಯನ್ನು ಹೊರಗೆಡಹುವ ವಿದ್ವತ್ತಿನ ಪ್ರಖರತೆ ಮಾತ್ರವಲ್ಲ; ಇಂತಹ ಸಣ್ಣ ವಿಷಯಕ್ಕೂ ಅಪಮಾನ ಹಿಂಸೆ ಸೃಷ್ಟಿ ಮಾಡಿರುವ ಸಮಾಜದಲ್ಲಿ ಬದುಕಬೇಕಾದ ಗಾಢ ವಿಷಾದ. ಆಹಾರದ ಹಕ್ಕನ್ನು ಮನ್ನಿಸದ ಸಮಾಜವು ಎಂದೂ ಮಾನುಷವಾಗಿರುವುದು ಸಾಧ್ಯವಿಲ್ಲ. ಒಂದು ದೇಶದಲ್ಲಿ ಚುನಾವಣೆಗಳು ಸಕಾಲಕ್ಕೆ ನಡೆಯುತ್ತಿವೆ ಎಂಬ ಕಾರಣಕ್ಕೆ ಡೆಮಾಕ್ರಸಿ ಇರಬಹುದು. ಆದರೆ ಆಹಾರದ ಸ್ವಾತಂತ್ರ್ಯವನ್ನು ಮನ್ನಿಸದ ಸಮಾಜದಲ್ಲಿ ಅರ್ಥಪೂರ್ಣ ಡೆಮಾಕ್ರಸಿಯಿದೆ ಎನ್ನಲಾಗದು.
(ನೇತುಬಿದ್ದ ನವಿಲು ಕೃತಿಯಿಂದ)

ರಹಮತ್ ತರೀಕೆರೆ
ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ರಹಮತ್ ತರೀಕೆರೆ ಅವರು ಸಂಶೋಧಕ, ವಿಮರ್ಶಕ, ಲೇಖಕ. ’ಕತ್ತಿಯಂಚಿನ ದಾರಿ’, ’ಅಂಡಮಾನ್ ಕನಸು’, ಕದಳಿ ಹೊಕ್ಕು ಬಂದೆ’ ಇವರ ಪ್ರಮುಖ ಕೃತಿಗಳು. ಕರ್ನಾಟಕದ ಸೂಫಿಗಳು, ಶಾಕ್ತಪಂಥ ಸೇರಿದಂತೆ ಸಂಸ್ಕೃತಿ ಸಂಶೋಧನಾ ಕ್ಷೇತ್ರದಲ್ಲಿ ರಹಮತ್ ಮಹತ್ವದ ಕೆಲಸ ಮಾಡಿದ್ದಾರೆ.