2025ರ ಫೆಬ್ರವರಿ ಅಂತ್ಯದೊಳಗೆ ಪ್ರೌಢಶಾಲಾ ಸಹ ಶಿಕ್ಷಕರಿಗೆ ಬಡ್ತಿ ಪೂರ್ಣಗೊಳಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಎಸ್ ಮಧು ಬಂಗಾರಪ್ಪ ಭರವಸೆ ನೀಡಿದರು.
ವಿಧಾನ ಪರಿಷತ್‌ನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಎಸ್. ವಿ. ಸಂಕನೂರ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಇದನ್ನು ಓದಿದ್ದೀರಾ? ಪ್ರಶ್ನೆಯ ಮಹತ್ವ ಮನಗಾಣದ ಶಿಕ್ಷಣ ಸಚಿವ ಮಧು ಬಂಗಾರಪ್ಪ
ಪ್ರೌಢಶಾಲಾ ಸಹ ಶಿಕ್ಷಕರು ಉಪನ್ಯಾಸಕರ ಹುದ್ದೆಗೆ ಪದೋನ್ನತಿ ನೀಡಬೇಕೆಂದು ಬಹುದಿನಗಳಿಂದ ಆಗ್ರಹಿಸುತ್ತಿದ್ದಾರೆ. ಆದರೆ ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಸಂಕನೂರ ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, “ಮೊದಲು ಶಾಲಾ ಶಿಕ್ಷಣ ಇಲಾಖೆಯಿಂದ ರಾಜ್ಯಮಟ್ಟದ ಪ್ರೌಢಶಾಲಾ ಸಹ ಶಿಕ್ಷಕರ ಒಂದೇ ಜೇಷ್ಠತಾ ಪಟ್ಟಿ ಸಿದ್ದಪಡಿಸಿ, ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಿ, ಸ್ವೀಕೃತವಾಗುವ ಆಕ್ಷೇಪಣೆಗಳನ್ನು ಪರಿಶೀಲಿಸಿ ಅಂತಿಮ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗುವುದು. ಅದಾದ ಬಳಿಕ ಪ್ರೌಢಶಾಲಾ ಸಹ ಶಿಕ್ಷಕರಿಗೆ ಬಡ್ತಿ ನೀಡುವ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು” ಎಂದು ತಿಳಿಸಿದ್ದಾರೆ.
ಇನ್ನು “ಈಗಾಗಲೇ 2013ನೇ ಸಾಲಿನವರೆಗೆ ಪದೋನ್ನತಿ ಪ್ರಕ್ರಿಯೆ ನಡೆಸಲಾಗಿದೆ. ಪದೋನ್ನತಿ ಪ್ರಕ್ರಿಯೆ ನಡೆಸುವ ಹಿನ್ನೆಲೆಯಲ್ಲಿ ರಾಜ್ಯಮಟ್ಟದಲ್ಲಿ ಒಂದೇ ಜೇಷ್ಠತಾ ಪಟ್ಟಿಯನ್ನು ತಯಾರಿಸುವ ಬಗ್ಗೆ ಮಾರ್ಗದರ್ಶನ ಕೋರಿ 2024ರ ಫೆಬ್ರವರಿ ಮಾಹೆ ಮತ್ತು ಮಾರ್ಚ್ ಮಾಹೆಯಲ್ಲಿ ಶಾಲಾ ಶಿಕ್ಷಣ ಇಲಾಖೆ (ಪ್ರಾಥಮಿಕ ಮತ್ತು ಪ್ರೌಢ)ಯ ಆಯುಕ್ತರು ಹಾಗೂ ಏಪ್ರಿಲ್ ಮಾಹೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ( ಪದವಿ ಪೂರ್ವ) ನಿರ್ದೇಶಕರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ” ಎಂದು ವಿವರಿಸಿದರು.
ಇದನ್ನು ಓದಿದ್ದೀರಾ? ಬೆಂಗಳೂರು | ಸರ್ಕಾರಿ ನೌಕರರ ಚುನಾವಣೆ; ಮಧು ಬಂಗಾರಪ್ಪನವರ ಮಾರ್ಗದರ್ಶನ ಪಡೆದ ಅಭ್ಯರ್ಥಿಗಳು
“2024ರ ಅಕ್ಟೋಬರ್ 16ರಂದು ಈ ಪ್ರಸ್ತಾವನೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ನೀಡಿರುವ ಅಭಿಪ್ರಾಯದಂತೆ ಶಾಲಾ ಶಿಕ್ಷಣ ಇಲಾಖೆಯ ನಾಲ್ಕು ವಿಭಾಗಗಳಲ್ಲಿ ಸ್ನಾತಕೋತ್ತರ ಪದವಿ ಪಡೆದ ಅರ್ಹ ಸಹ ಶಿಕ್ಷಕರ ಜೇಷ್ಠತಾ ಪಟ್ಟಿಯನ್ನು ಪರಿಶೀಲಿಸಿ, ಸಾಮಾನ್ಯ ಜೇಷ್ಠತಾ ಪಟ್ಟಿಯನ್ನು ಅಂತಿಮಗೊಳಿಸಿ, ಅಂತಿಮ ರಾಜ್ಯಮಟ್ಟದ ಒಂದೇ ಜೇಷ್ಠತಾ ಪಟ್ಟಿಯನ್ನು ತಯಾರಿಸಲು, ಮೊದಲಾದ ಕೆಲಸಗಳನ್ನು ನಿಯಮ ಪ್ರಕಾರ ನಡೆಸಲು ಕ್ರಮಕೈಗೊಳ್ಳಲಾಗುವುದು” ಎಂದು ತಿಳಿಸಿದರು.
