ಮುಡಾ ಹಗರಣ | ಕರ್ನಾಟಕ ಹೈಕೋರ್ಟ್ ದೋಷಪೂರಿತ ತೀರ್ಪು ನೀಡಿತೆ?

Date:

Advertisements

ಹೈಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ ಖಾಸಗಿ ಒಡೆತನದ ಭೂಮಿಯನ್ನು ಸರ್ಕಾರವು ಸಾರ್ವಜನಿಕ ಬಳಕೆಗೆ ಬಲವಂತವಾಗಿ ಪಡೆದುಕೊಳ್ಳುವುದು ಸಂವಿಧಾನದ 300 ಎ ವಿಧಿಯ ಅನ್ವಯ ಅಪರಾಧವಾಗಿದೆ. ಯಾವುದೇ ಕಾನೂನು ಪ್ರಕ್ರಿಯೆಯಿಲ್ಲದೆ ಸಾರ್ವಜನಿಕ ಬಳಕೆಗೆ ಖಾಸಗಿ ಸ್ವತ್ತನ್ನು ವಶಪಡಿಸಿಕೊಳ್ಳುತ್ತೇವೆಂದು ಸರ್ಕಾರ ಹೇಳುವಂತಿಲ್ಲ. ಈ ಆದೇಶವು ಸುಪ್ರೀಂ ಕೋರ್ಟ್ ವಿಧಿಸಿರುವ ನಿಯಮವನ್ನು ಮುರಿಯುವ ಅಪರಾಧವಾಗಿದೆ. ವಶಪಡಿಸಿಕೊಳ್ಳುವ ಕಾನೂನನ್ನು ಸಮರ್ಥಿಸಿಕೊಳ್ಳುವುದು ಸಾರ್ವಜನಿಕ ನ್ಯಾಯವನ್ನು ಕಿತ್ತುಕೊಳ್ಳುವ ಕ್ರಮವಾಗುತ್ತದೆ.

ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಹೈಕೋರ್ಟ್ ನೀಡಿರುವ ಆದೇಶದಲ್ಲಿ ಹಲವಾರು ಸತ್ಯದೂರ ಅಂಶಗಳಿವೆ. ರಾಜ್ಯಪಾಲರ ಅನುಮತಿ ಸರಿಯೋ ತಪ್ಪೋ ಎಂಬುದನ್ನು ಏಕಸದಸ್ಯ ಪೀಠ ಹೇಳಬೇಕಿತ್ತು. ಅಲ್ಲದೆ ಜಮೀನಿನ ಮೂಲ ಮಾಲೀಕರಾದ ಜೆ ದೇವರಾಜ್ ಅವರ ವಾದವನ್ನು ಹೈಕೋರ್ಟ್ ಆಲಿಸದೆಯೇ ತೀರ್ಪು ಘೋಷಿಸಿದೆ. ಮೇಲ್ಪಂಕ್ತಿಯಾಗಬೇಕಿರುವ ಹಲವು ಸುಪ್ರೀಮ್ ಕೋರ್ಟ್ ಆದೇಶಗಳನ್ನು ಗಣನೆಗೆ ತೆಗೆದುಕೊಂಡಿಲ್ಲ.

ದೇವರಾಜು ಈಗ 80ರ ವೃದ್ಧರು. ಕ್ರಿಮಿನಲ್ ಪ್ರಾಸಿಕ್ಯೂಷನ್ ಎದುರಿಸುವುದು ಕಷ್ಟಸಾಧ್ಯ ವಯಸ್ಸು ಅವರದು. ಅದಲ್ಲದೆ ಸಿಬಿಐ ತನಿಖೆ ಕೋರಿರುವ ಅರ್ಜಿ ಕೂಡ ದುರುದ್ದೇಶಪೂರಿತ.

Advertisements

ಜೆ ದೇವರಾಜು ಪರ ವಕಾಲತ್ತು ವಹಿಸಿರುವ ಸುಪ್ರೀಮ್ ಕೋರ್ಟಿನ ಹಿರಿಯ ನ್ಯಾಯವಾದಿ ದುಷ್ಯಂತ್ ದವೆ ಅವರು ಈ ಅಂಶಗಳನ್ನು ಹೈಕೋರ್ಟಿನ ವಿಭಾಗೀಯ ಪೀಠದ ಮುಂದೆ ಮಂಡಿಸಿದ್ದಾರೆ.

“ಶ್ರೀಮತಿ ಪಾರ್ವತಿ ಸಿದ್ದರಾಮಯ್ಯ ಅವರ ಅಣ್ಣ ಬಿ ಎಂ ಮಲ್ಲಿಕಾರ್ಜುನ ಸ್ವಾಮಿ ಅವರು 2004 ಆಗಸ್ಟ್ 25 ರಂದು ಮೂಲ ಮಾಲೀಕರಾದ ಜೆ ದೇವರಾಜ್ ಅವರಿಂದ ಜಮೀನನ್ನು (ಮೈಸೂರು ತಾಲೂಕು ಕಸಬಾ ಹೋಬಳಿಯ ಕೆಸರೆ ಗ್ರಾಮದ ಸರ್ವೆ ನಂಬರ್ 464ರ 3 ಎಕರೆ 16 ಗುಂಟೆ) ಖರೀದಿಸಿದ್ದರು. ದೇವರಾಜು ಅವರು ಕೂಡ ಕಾನೂನುಬದ್ಧವಾಗಿ ದಕ್ಕಿರುವ ಹಕ್ಕಿನ ಪ್ರಕಾರ ಭೂಮಿ ಮಾರಾಟ ಮಾಡಿದ್ದಾರೆ. ಮಲ್ಲಿಕಾರ್ಜುನ ಸ್ವಾಮಿ, ವಿವಾದಿತ ಜಮೀನನ್ನು 2010ರ ಅಕ್ಟೋಬರ್ 6ರಂದು ಪಾರ್ವತಿ ಅವರಿಗೆ ದಾನವಾಗಿ ನೀಡಿದ್ದರು”.

“ಅಧಿಕೃತ ಕಾನೂನು ಪ್ರಕ್ರಿಯೆ ಪಾಲಿಸಿಯೇ ಡಿನೋಟಿಫಿಕೇಷನ್ ಮಾಡಲಾಗಿದೆ. ಜಮೀನು ಡಿನೋಟಿಫಿಕೇಷನ್ ಆದಾಗ ಜಮೀನಿನ ಮೌಲ್ಯ 3 ಲಕ್ಷ ರೂ. ಇತ್ತು. ಈಗ 56 ಕೋಟಿ ರೂ. ಆಗಿದೆ ಎಂದು ಹೈಕೋರ್ಟ್ ತೀರ್ಪು ಹೇಳಿದೆ. ಆದರೆ ಇದಕ್ಕೂ ದೇವರಾಜುಗೂ ಯಾವುದೇ ಸಂಬಂಧವಿಲ್ಲ. ಕರ್ನಾಟಕದಲ್ಲಿ ಡಿನೋಟಿಫಿಕೇಷನ್ ವಿಚಾರ ಹೊಸದಲ್ಲ. ರೈತರು ಡಿನೋಟಿಫಿಕೇಷನ್ ಅರ್ಜಿ ಸಲ್ಲಿಸಿದಾಗಲೆಲ್ಲ ಸರ್ಕಾರ ಪರಿಗಣಿಸುವುದು ಮಾಮೂಲು ಸಂಗತಿ” ಎಂಬ ವಾದವನ್ನೂ ದವೆ ಅವರು ಹೈಕೋರ್ಟ್ ವಿಭಾಗೀಯ ಪೀಠದ ಮುಂದೆ ಮಂಡಿಸಿದ್ದಾರೆ.

ಉಳಿದಂತೆ ‘ಜಾಗೃತ ವಕೀಲರ ವೇದಿಕೆ’ಯು “ಮುಡಾ ಪ್ರಕರಣ | ಕೋರ್ಟುಗಳ ಆದೇಶಗಳು: ಸತ್ಯಾಸತ್ಯತೆ” ಎಂಬ ಕಿರುಪುಸ್ತಿಕೆಯನ್ನು ಹೊರತಂದಿದೆ. ಈ ಕಿರು ಹೊತ್ತಿಗೆಯಲ್ಲಿನ ಅಂಶಗಳನ್ನು ಕೂಡ ದುಷ್ಯಂತ್ ದವೆ ಸಾಕ್ಷ್ಯಾಧಾರ ಸಹಿತ ಹೈಕೋರ್ಟ್ ಮುಂದೆ ಇರಿಸಿದ್ದಾರೆ.

ಕಿರುಹೊತ್ತಿಗೆಯ ಪ್ರಕಾರ ಹೈಕೋರ್ಟ್ ಆದೇಶದಲ್ಲಿನ “ಸತ್ಯದೂರ” ಅಂಶಗಳು ಹೀಗಿವೆ:

ಹೈಕೋರ್ಟ್ ಆದೇಶದಲ್ಲಿನ “ಸತ್ಯದೂರ” ಅಂಶಗಳು ಹೀಗಿವೆ:

  • ಕುತೂಹಲವೇನೆಂದರೆ ಮುಡಾದ ನಿವೇಶನಗಳನ್ನು ಹಂಚಿಕೆ ಮಾಡಲು ನಿರ್ಣಯ ಅಂಗೀಕರಿಸಿರುವ ಬಹುತೇಕರು ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರು. ನಿರ್ಣಯ ಕೈಗೊಂಡಾಗ ಸಿಎಂ ಆಗಿದ್ದವರು ಬಿ.ಎಸ್ ಯಡಿಯೂರಪ್ಪನವರು. ನಿವೇಶನ ಹಂಚಿಕೆಯಾಗಿದ್ದು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಅವಧಿಯಲ್ಲಿ. ಈ ವಿಷಯಗಳು ಕೂಡ ಹೈಕೋರ್ಟ್‌ನಲ್ಲಿ ಹೆಚ್ಚು ಚರ್ಚೆಯಾಗದೆ ಸಿಎಂ ವಿರುದ್ಧ ತೀರ್ಪು ನೀಡಲಾಗಿದೆ.
  • ಒಮ್ಮೆ ಡಿನೋಟಿಫೈ ಮಾಡಿದ ಮೇಲೆ ಜಾಗದ ಅಗತ್ಯವಿದೆಯೆಂದರೆ ಮತ್ತೆ ಹೊಸದಾಗಿ ನೋಟಿಫಿಕೇಷನ್ ಹೊರಡಿಸುವುದು ನಿಯಮ. ಆದರೆ ಇಲ್ಲಿ ಯಾವ ಪ್ರಕ್ರಿಯೆಗಳು ನಡೆದಿಲ್ಲ. ಈ ಅಂಶವನ್ನು ಕೋರ್ಟ್ ಗಮನಿಸಿಲ್ಲ.
  • ಹೈಕೋರ್ಟಿನ 197 ಪುಟಗಳ ಆದೇಶದಲ್ಲಿಎಲ್ಲಿಯೂ ಮುಖ್ಯಮಂತ್ರಿ ಪಾತ್ರವಿದೆ ಎಂದು ತೋರಿಸುವ ಒಂದೇ ಒಂದು ಪದವೂ ಇಲ್ಲ. ಸಿಎಂ ಆಗಿದ್ದಾರೆ ಎಂಬ ಒಂದೇ ಕಾರಣಕ್ಕೆ ತಪ್ಪು ಮಾಡಿರಬಹುದು ಎಂಬ ತೀರ್ಮಾನಕ್ಕೆ ಬಂದಿರುವುದು ದೋಷಪೂರಿತವಾದ ತೀರ್ಮಾನವಾಗಿದೆ.
  • 2013ರಿಂದ 2018ರ ಮಾರ್ಚ್‌ವರೆಗೆ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ಅವರು ನಿವೇಶನ ಹಂಚಿಕೆ ಕುರಿತಂತೆ ಯಾವುದೇ ನಿರ್ದೇಶನವನ್ನು ಹೊರಡಿಸಿರಲಿಲ್ಲ. ಈ ಅವಧಿಯಲ್ಲಿ ಪಾರ್ವತಿ ಅವರು ಪರಿಹಾರವನ್ನು ಪಡೆದುಕೊಂಡಿರಲಿಲ್ಲ. ಹೈಕೋರ್ಟ್ ತನ್ನ ತೀರ್ಪಿನಲ್ಲಿ ಇದನ್ನು ಪರಿಗಣನೆಗೇ ತೆಗೆದುಕೊಂಡಿಲ್ಲ. 
  • ಹೈಕೋರ್ಟಿನ ಆದೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಜಮೀನು ಕಳೆದುಕೊಂಡಿರುವುದು ಮೈಸೂರಿನಿಂದ 40 ಕಿ.ಮೀ. ದೂರದಲ್ಲಿ. ಆದರೆ ಪಡೆದುಕೊಂಡಿರುವ ನಿವೇಶನಗಳು ನಗರದ ಮಧ್ಯಭಾಗದಲ್ಲಿವೆ ಎಂದು ಉಲ್ಲೇಖಿಸಲಾಗಿದೆ
  • ಹೈಕೋರ್ಟಿನ ಆದೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಜಮೀನು ಕಳೆದುಕೊಂಡಿರುವುದು ಮೈಸೂರಿನಿಂದ 40 ಕಿ.ಮೀ. ದೂರದಲ್ಲಿ. ಆದರೆ ಪಡೆದುಕೊಂಡಿರುವ ನಿವೇಶನಗಳು ನಗರದ ಮಧ್ಯಭಾಗದಲ್ಲಿವೆ ಎಂದು ಉಲ್ಲೇಖಿಸಲಾಗಿದೆ. ಹೈಕೋರ್ಟ್ ಆದೇಶದ ಈ ಅಂಶವು ಕೂಡ ಸುಳ್ಳಾಗಿದೆ. ಮೈಸೂರು ಅರಮನೆಯನ್ನು ಮೈಸೂರಿನ ಕೇಂದ್ರ ಸ್ಥಳವೆಂದು ಗುರುತಿಸಿಕೊಂಡರೆ ಕೆಸರೆ ದೇವನೂರು ಬಡಾವಣೆಯಲ್ಲಿ ಪಾರ್ವತಿ ಅವರು ಕಳೆದುಕೊಂಡಿರುವ ಜಮೀನುಗಳು ಮೈಸೂರಿನಿಂದ 7.2 ಕಿ.ಮೀ. ದೂರದಲ್ಲಿದೆ. ಮುಡಾದವರು ನೀಡಿರುವ ಬದಲಿ ನಿವೇಶನಗಳು ಮೈಸೂರಿನ ಕೇಂದ್ರ ಸ್ಥಳದಿಂದ 8 ಕಿ.ಮೀ, (ವಿಜಯನಗರ 3ನೆ ಹಂತ) ಮತ್ತು10.1 ಕಿ.ಮೀ. (4ನೇ ಹಂತ ವಿಜಯನಗರ) ದೂರದಲ್ಲಿವೆ.
  • ಪಾರ್ವತಿ ಅವರಿಗೆ 50 – 50 ಅನುಪಾತದಡಿ ನಿವೇಶನ ನೀಡಿರುವುದು ಅಧಿಕಾರ ದುರ್ಬಳಕೆ ಎಂಬ ಹೈಕೋರ್ಟ್ ಆದೇಶದ ಅಂಶ ಸತ್ಯಕ್ಕೆ ದೂರವಾದ ಮಾತು. ಬ್ರಿಟಿಷರ ಕಾಲದ ಭೂಸ್ವಾಧೀನ ಕಾಯ್ದೆಯನ್ನು ಯುಪಿಎ ಸರ್ಕಾರ ರದ್ದು ಮಾಡಿ, ರೈತಸ್ನೇಹಿ ಭೂಸ್ವಾಧೀನ ಕಾಯ್ದೆಯನ್ನು ಜಾರಿಗೆ ತಂದಿತು. ಹೊಸ ಕಾಯ್ದೆಯ ಪ್ರಕಾರ ನಗರ ಪ್ರದೇಶವಾದರೆ ಮಾರುಕಟ್ಟೆ ಬೆಲೆಯ ಎರಡರಷ್ಟು, ಗ್ರಾಮಾಂತರ ಪ್ರದೇಶವಾದರೆ ನಾಲ್ಕರಷ್ಟು ಪರಿಹಾರ ನೀಡುವಂತೆ ಸ್ಪಷ್ಟವಾಗಿ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿಯೇ ಮೊದಲು ಇದ್ದ ಶೇ.60:40 ರ ಪ್ರಮಾಣವನ್ನು ಶೇ. 50:50 ಕ್ಕೆ ಹೆಚ್ಚಿಸಲಾಗಿದೆ. ಈ ಮಾದರಿ ಅಳವಡಿಸಿಕೊಂಡ ಮೇಲೆ ಕರ್ನಾಟಕದ ರೈತರು ಸಹ ಭೂಮಿಯನ್ನು ಬಿಟ್ಟುಕೊಡಲು ಹೆಚ್ಚು ತಕರಾರು ಮಾಡುತ್ತಿಲ್ಲ. ಈ  ಅಂಶಗಳನ್ನು ಗಮನಿಸಿದರೆ ಹೈಕೋರ್ಟು ನೀಡಿರುವ ತೀರ್ಪು ಪಾರ್ವತಿಯವರಿಗೆ ವಿರುದ್ಧವಾಗಿರುವುದು ಮಾತ್ರವಲ್ಲ, ಇಡೀ ರಾಜ್ಯದ ರೈತ ಸಮುದಾಯಕ್ಕೆ ಅನ್ಯಾಯ ಮಾಡಿದಂತಾಗಿದೆ.
  • ಒಂದು ಎಕರೆಗೆ 43,560 ಅಡಿಗಳನ್ನು ಕಳೆದುಕೊಂಡರೆ ಒಂದು 40*60 ನಿವೇಶನ ಅಂದರೆ 2,400 ಅಡಿಗಳನ್ನು ಮಾತ್ರ ಕೊಡಬೇಕಾಗಿತ್ತು. ಆದರೆ ಪಾರ್ವತಿಯವರಿಗೆ ಹೆಚ್ಚಿಗೆ ಕೊಡಲಾಗಿದೆ ಎಂದು ಹೈಕೋರ್ಟಿನ ತೀರ್ಪಿನಲ್ಲಿ  ಹೇಳಲಾಗಿದೆ. ಇದು ಸತ್ಯಕ್ಕೆ ದೂರವಾದ ಅಂಶ. 

ಈ ಅಂಶಗಳನ್ನು ವಿವರವಾಗಿ ನೋಡುವುದಾದರೆ-

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ  ಮತ್ತು ಹೈಕೋರ್ಟ್ ಏಕಸದಸ್ಯ ಪೀಠ ಈ ಅನುಮತಿಯನ್ನು ಎತ್ತಿಹಿಡಿದಿರುವ ವಿದ್ಯಮಾನ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಬಿಜೆಪಿ ಮತ್ತು ಜೆ.ಡಿ.(ಎಸ್) ಬಕಪಕ್ಷಿಗಳಂತೆ ಸಿದ್ದರಾಮಯ್ಯ ಈಗ ರಾಜೀನಾಮೆ ನೀಡುತ್ತಾರೆ, ಆಗ ರಾಜೀನಾಮೆ ನೀಡುತ್ತಾರೆ ಎಂದು ಕಾಯುತ್ತ ಕುಳಿತಿವೆ. ಸಿಎಂ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ನೇತೃತ್ವದ ವಿಭಾಗೀಯ ಪೀಠ ನಡೆಸಿದೆ.

ರಾಜ್ಯಪಾಲರು ಮತ್ತು ಸಿಬಿಐಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿದ್ದು, ವಿಚಾರಣೆಯನ್ನು 2025ರ ಜನವರಿ 25ಕ್ಕೆ ಮುಂದೂಡಲಾಗಿದೆ.

Highcourt karnataka

ಜಾತ್ಯತೀತ ತತ್ವದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳದ ಮುಖ್ಯಮಂತ್ರಿ ಸಿದ್ದರಾಮಯ್ಯ  ವಿರುದ್ಧ ಬಿಜೆಪಿ-ಜೆಡಿಎಸ್ ಮತ್ತು ಇತರೆ ಶಕ್ತಿಗಳು ಸೇರಿಕೊಂಡು ಕಳಂಕಿತರು ಎಂದು ಬಿಂಬಿಸಲು ಪ್ರಯತ್ನಿಸುತ್ತಿವೆ. ಭ್ರಷ್ಟಾಚಾರದ ಆರೋಪಕ್ಕೆ ಅವಕಾಶವೇ ಇಲ್ಲದಿದ್ದರೂ, ಅದರ ಕೆಸರು ಮೆತ್ತಿಸಲು ಇನ್ನಿಲ್ಲದ ಪ್ರಯತ್ನವನ್ನು ಮತೀಯ ಮನಸ್ಸುಗಳು ಮಾಡುತ್ತಿವೆ ಎಂಬುದು ಸಿದ್ದರಾಮಯ್ಯ ಬೆಂಬಲಿಗರ ಅಸಮಾಧಾನ.

ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಹಾಂ ನೀಡಿದ 1,200 ಪುಟಗಳ ದೂರನ್ನು ಸ್ವೀಕರಿಸಿದ ರಾಜ್ಯಪಾಲರು ಸತ್ಯವನ್ನು ಪರಿಶೀಲಿಸದೆ ಕೆಲವೇ ಗಂಟೆಗಳಲ್ಲಿ ಪ್ರಾಸಿಕ್ಯೂಷನ್‌ಗೆ ನೀಡುವ ತೀರ್ಮಾನ ತೆಗೆದುಕೊಳ್ಳುತ್ತಾರೆ. ವಾಸ್ತವವಾಗಿ ಆ ದೂರು ಕನ್ನಡದಲ್ಲಿತ್ತು. ಸರ್ಕಾರದ ಎಲ್ಲ ಭಾಷಣಗಳನ್ನು ಹಿಂದಿಯಲ್ಲಿ ಬರೆದುಕೊಡಿ ಎಂದು ಬೇಡಿಕೆಯಿಡುವ ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಕನ್ನಡದಲ್ಲಿದ್ದ ವಿವಾದಿತ ದೂರನ್ನು ನೋಡಿ ಗಂಟೆಗಳಲ್ಲಿ ಅನುಮತಿಯ ಆದೇಶ ನೀಡುತ್ತಾರೆ. ಎಚ್ ಡಿ ಕುಮಾರಸ್ವಾಮಿಯವರ ಮೇಲೆ ಎಸ್‌ಐಟಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿದರೆ ದಾಖಲೆಗಳನ್ನು ಇಂಗ್ಲಿಷಿಗೆ ಅನುವಾದ ಮಾಡಿಕೊಂಡು ಬನ್ನಿ ಎಂದು ವಾಪಸ್ ಕಳಿಸುತ್ತಾರೆ ಎಂಬುದು ರಾಜ್ಯಪಾಲರ ಮೇಲಿನ ಆಪಾದನೆ.

ಈ ಸುದ್ದಿ ಓದಿದ್ದೀರಾ? ಸಮಗ್ರ ವರದಿ | ವಕ್ಫ್ ಬಗ್ಗೆ ಬಿಜೆಪಿ ಬಿತ್ತಿದ ಭಯಾನಕ ಸುಳ್ಳುಗಳು!

ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ, ಯಡಿಯೂರಪ್ಪ, ಶಶಿಕಲಾ ಜೊಲ್ಲೆ, ಜನಾರ್ದನ ರೆಡ್ಡಿ, ಮುರುಗೇಶ್ ನಿರಾಣಿ ಮುಂತಾದವರ ಮೇಲೆ ಗಂಭೀರ ಹಾಗೂ ಗುರುತರವಾದ ಆರೋಪಗಳಿವೆ. ಇನ್ನೂ ಕೆಲವರ ವಿರುದ್ಧ ಪ್ರಾಥಮಿಕ ತನಿಖೆ ಮಾಡಿ ವರದಿ ಸಲ್ಲಿಸಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ ಎಂದು ಲೋಕಾಯುಕ್ತ ಮತ್ತು ಎಸ್‌ಐಟಿಯವರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ. ಆದರೆ ರಾಜ್ಯಪಾಲರು ಮಾತ್ರ ಇವರೆಲ್ಲರನ್ನು ಸಿದ್ದರಾಮಯ್ಯನವರ  ವಿರುದ್ಧ ತತ್‌ಕ್ಷಣವೇ ತನಿಖೆಗೆ ಆದೇಶಿಸುತ್ತಾರೆ. ಇದೇ ಟಿ ಜೆ ಅಬ್ರಹಾಂ ಅವರಿಗೆ ತಪ್ಪಾದ ಅರ್ಜಿ ಸಲ್ಲಿಸಿದ ಕಾರಣಕ್ಕೆ ಹಿಂದೊಮ್ಮೆ ಸುಪ್ರೀಂ ಕೋರ್ಟ್ 25 ಲಕ್ಷ ರೂ. ದಂಡ ವಿಧಿಸಿತ್ತು.

ವಾಸ್ತವವನ್ನು ಪರಿಶೀಲಿಸದೆ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿದರೆ, ಹೈಕೋರ್ಟ್‌ ತೀರ್ಪು ರಾಜ್ಯಪಾಲರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಹಲವಾರು ಸತ್ಯಾಂಶಗಳನ್ನು ಗಮನಿಸದೆ ತೀರ್ಪು ನೀಡಿದೆ.

ಹೈಕೋರ್ಟ್ ತೀರ್ಪಿನಲ್ಲಿ ಊಹಾತ್ಮಕ ಅಪರಾಧ ಪ್ರಸ್ತಾಪ

ಹೈಕೋರ್ಟಿನ ಆದೇಶದಲ್ಲಿ ಭಾರತದ ನ್ಯಾಯಾಂಗದ ಇತಿಹಾಸದಲ್ಲಿ ಎಲ್ಲಿಯೂ ಹೇಳದ, ಕಾನೂನಿನಲ್ಲಿಲ್ಲದ ಊಹಾತ್ಮಕ ಅಪರಾಧವನ್ನು ಪ್ರಸ್ತಾಪಿಸಲಾಗಿದೆ. ಆದ ಕಾರಣವೆ ಹಿರಿಯ ನ್ಯಾಯವಾದಿಗಳು ನ್ಯಾಯಾಲಯದ ತೀರ್ಪನ್ನು ವಿಶ್ಲೇಷಣೆ ಮಾಡುವಾಗ, ತೀರ್ಪು ಹಲವು ಲೋಪದೋಷಗಳಿಂದ ಕೂಡಿದೆ ಹಾಗೂ ತೀರ್ಪಿನಲ್ಲಿ ಕೂಡ ‘ಮೈಂಡ್ ಆಫ್ ಅಪ್ಲಿಕೇಶನ್’ ಇಲ್ಲ ಎಂದು ಹೇಳಿದ್ದಾರೆ. ಇದೆಲ್ಲದರ ಜೊತೆ ತೀರ್ಪಿನಲ್ಲಿ ಅನೇಕ ವೈರುಧ್ಯಗಳಿವೆ. ಈ ತೀರ್ಪಿನಲ್ಲಿ ಒಂದು ಕಡೆ ಪ್ರಸ್ತಾಪಿಸಿರುವಂತೆ ತನಿಖೆ ಆಗುವ ಮೊದಲೆ ಬಿಎನ್ಎಸ್ಎಸ್ ಕಾಯ್ದೆಯ ಸೆಕ್ಷನ್ 218 ರಡಿ ತನಿಖೆಗೆ ನೀಡಲು ಬರುವುದಿಲ್ಲ ಎಂದು ಪ್ರಸ್ತಾಪಿಸಿದ್ದಾರೆ. ಆದರೆ ಅದೇ ಸಂದರ್ಭದಲ್ಲಿ ಹೈಕೋರ್ಟ್‌ ಸ್ವತಃ ವಿಚಾರಣಾ ನ್ಯಾಯಾಲಯದ ಕೆಲಸ ಮಾಡಿದೆ. ಆದರೆ ಏಕಮುಖವಾಗಿ ಮಾಡಿದೆ. ಅದರಲ್ಲಿ ಅರ್ಜಿದಾರರು ಮಂಡಿಸಿದ ವಾದ / ಸಲ್ಲಿಸಿದ ದಾಖಲೆಗಳು ಆದೇಶದಲ್ಲಿ ದಾಖಲಾಗಿಲ್ಲ. ಹೈಕೋರ್ಟಿಗೆ ‘ಮೆರಿಟ್ಸ್ ಆಫ್ ದ ಕೇಸ್‌’ನ ವಿವರಗಳಿಗೆ ಹೋಗಲು ಯಾರೂ ಅರ್ಜಿ ಹಾಕಿರಲಿಲ್ಲ. ಹಾಗೆಯೇ ತೀರ್ಪಿನಲ್ಲಿ ಸತ್ಯದ ತಲೆಯ ಮೇಲೆ ಹೊಡೆದಂತೆ ಅಂಶಗಳನ್ನು ಪ್ರಸ್ತಾಪಿಸಲಾಗಿದೆ. ಈ ಅಂಶಗಳಲ್ಲಿ ಸತ್ಯವನ್ನು ಹುಡುಕಿದರೂ ಕಾಣುವುದಿಲ್ಲ ಎಂಬ ವಾಸ್ತವವನ್ನು ಸಂಬಂಧಪಟ್ಟ ದಾಖಲೆದಸ್ತಾವೇಜುಗಳು ತರೆದಿಟ್ಟಿವೆ.

Muda 1

ಹಲವು ದೋಷಗಳಿಂದ ಕೂಡಿರುವ ಹೈಕೋರ್ಟ್ ತೀರ್ಪು

ರಾಜ್ಯಪಾಲರ ಅನುಮತಿಯನ್ನು ಎತ್ತಿಹಿಡಿದಿರುವ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರ ತೀರ್ಪಿನಲ್ಲಿ ಹಲವು ದೋಷಗಳಿವೆ. ಜಮೀನು ಮಾರಾಟ, ಭೂಪರಿವರ್ತನೆ ಮುಂತಾದ ಹಲವು ಪ್ರಕ್ರಿಯೆಗಳಲ್ಲಿ ಸಿದ್ದರಾಮಯ್ಯ ಅವರ ಪಾತ್ರವಿರುವ ಬಗ್ಗೆ ಎಲ್ಲಿಯೂ ಪ್ರಸ್ತಾಪವಿಲ್ಲ. ಹೈಕೋರ್ಟಿನ 197 ಪುಟಗಳ ಆದೇಶದಲ್ಲಿಎಲ್ಲಿಯೂ ಮುಖ್ಯಮಂತ್ರಿ ಪಾತ್ರವಿದೆ ಎಂದು ತೋರಿಸುವ ಒಂದೇ ಒಂದು ಪದವೂ ಇಲ್ಲ. ಸಿಎಂ ಆಗಿದ್ದಾರೆ ಎಂಬ ಒಂದೇ ಕಾರಣಕ್ಕೆ ತಪ್ಪು ಮಾಡಿರಬಹುದು ಎಂಬ ತೀರ್ಮಾನಕ್ಕೆ ಬಂದಿರುವುದು ದೋಷಪೂರಿತವಾದ ತೀರ್ಮಾನವಾಗಿದೆ.

 ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಹೆಸರಿಗೆ ವರ್ಗಾವಣೆಯಾಗಿರುವ ಮೈಸೂರು ತಾಲೂಕು ಕಸಬಾ ಹೋಬಳಿಯ ಕೆಸರೆ ಗ್ರಾಮದ ಸರ್ವೆ ನಂಬರ್‌ 464ರ 3 ಎಕರೆ 16 ಗುಂಟೆ ಜಮೀನಿನ ಮೂಲ ಮಾಲೀಕರು ನಿಂಗ, ಜವರ ಎಂಬುವವರು. ಇವರಿಗೆ 1935ರಲ್ಲಿ ಅಂದಿನ ಜಿಲ್ಲಾಡಳಿತ ಹರಾಜಿನ ಮೂಲಕ 1 ರೂಪಾಯಿಗೆ ಭೂಮಿಯನ್ನು ನೀಡಿತ್ತು. ಇವರ ಮೂರನೇ ಪುತ್ರ ಜೆ ದೇವರಾಜು ಎಂಬುವವರು ಸದರಿ ಜಮೀನಿನ್ನು 2004 ಆಗಸ್ಟ್‌ 25 ರಂದು ಪಾರ್ವತಿ ಅವರ ಸಹೋದರನಾದ ಬಿ.ಎಂ ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ಮಾರಾಟ ಮಾಡಿರುತ್ತಾರೆ. ಖಾತೆಯು 2004 ಅಕ್ಟೋಬರ್‌ನಲ್ಲಿ ಇವರ ಹೆಸರಿಗೆ ವರ್ಗಾವಣೆಯಾಗಿದೆ. ಈ ಕೃಷಿ ಜಮೀನನ್ನು 2005 ಜುಲೈ 15ರಂದು ಮೈಸೂರು ಜಿಲ್ಲಾಧಿಕಾರಿಗಳು ವಸತಿ ಉದ್ದೇಶಕ್ಕಾಗಿ ಭೂಪರಿವರ್ತನೆ ಮಾಡಿ ಆದೇಶಿಸಿರುತ್ತಾರೆ. ಕಂದಾಯ ಜಮೀನುಗಳಾದ ಕಾರಣ ಕಂದಾಯ ಇಲಾಖೆ ಭೂಪರಿವರ್ತನೆಗೊಳಿಸಿದೆ. ಭೂಪರಿವರ್ತನೆಯ ಸಂದರ್ಭದಲ್ಲಿ ಮಾಲೀಕರಾದ ಮಲ್ಲಿಕಾರ್ಜುನ ಸ್ವಾಮಿ ಅವರ ಯಾವುದೇ ಅನುಮತಿಯನ್ನು ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ)  ಪಡೆದಿರಲಿಲ್ಲ. ಇದರ ನಂತರವೂ ಮುಡಾ ಡಿನೋಟಿಫೈ ಮಾಡಿದ ಜಮೀನಿನಲ್ಲಿ ನಿವೇಶನ ಹಂಚಿಕೆ ಮಾಡಲಾಗಿದೆ. ಒಮ್ಮೆ ಡಿನೋಟಿಫೈ ಮಾಡಿದ ಮೇಲೆ ಜಾಗದ ಅಗತ್ಯವಿದೆಯೆಂದರೆ ಮತ್ತೆ ಹೊಸದಾಗಿ ನೋಟಿಫಿಕೇಷನ್‌ ಹೊರಡಿಸುವುದು ನಿಯಮ. ಆದರೆ ಇಲ್ಲಿ ಯಾವ ಪ್ರಕ್ರಿಯೆಗಳು ನಡೆದಿಲ್ಲ. ಈ ಅಂಶವನ್ನು ಕೋರ್ಟ್ ಗಮನಿಸಿಲ್ಲ.

ಸಿಎಂ ಆಗಿದ್ದ ಅವಧಿಯಲ್ಲಿ ಪರಿಹಾರ ಪಡೆಯದ ಪತ್ನಿ ಪಾರ್ವತಿ

2005ರಲ್ಲಿ ಭೂಪರಿವರ್ತನೆಯಾದ ಮೇಲೆ ಮಲ್ಲಿಕಾರ್ಜುನ ಸ್ವಾಮಿ ಅವರು ತಮ್ಮ ತಂಗಿ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಬಿ ಎಂ ಪಾರ್ವತಿ ಅವರಿಗೆ 2010ರ ಅಕ್ಟೋಬರ್‌ 6ರಂದು ಸರ್ವೆ ನಂಬರ್‌ 464ರ 3 ಎಕರೆ 16 ಗುಂಟೆ ಜಮೀನನ್ನು ದಾನಪತ್ರದ ಮೂಲಕ ದಾನ ಮಾಡಿದ್ದಾರೆ. ಅಂದಿನಿಂದ ಈ ಜಮೀನು ಪಾರ್ವತಿ ಅವರ ಹಕ್ಕಿಗೆ ಒಳಪಟ್ಟಿದೆ. ಜಮೀನಿನ ಮೊದಲ ಮಾಲೀಕರಾದ ಮಲ್ಲಿಕಾರ್ಜುನ ಸ್ವಾಮಿ ಅವರ ಅನುಮತಿ ಪಡೆಯದೆ ಜಮೀನನ್ನು ಭೂಪರಿವರ್ತನೆಗೊಳಿಸಿ ಹಂಚಿಕೆ ಮಾಡಿರುವುದಕ್ಕೆ ಪರಿಹಾರ ನೀಡುವಂತೆ ದಾನಪತ್ರದಿಂದ ಭೂಮಿಯ ಹಕ್ಕು ಪಡೆದುಕೊಂಡಿದ್ದ ಬಿ.ಎಂ ಪಾರ್ವತಿ ಅವರು 2014ರ ಜೂನ್‌ 25ರಂದು ಮನವಿ ಸಲ್ಲಿಸುತ್ತಾರೆ. ಮುಡಾ ಕೂಡ ತಮ್ಮ ಪ್ರಾಧಿಕಾರದಿಂದ ತಪ್ಪಾಗಿದೆ ಎಂದು 2017 ಡಿಸೆಂಬರ್‌ 30 ರಂದು ನಿರ್ಣಯ ಕೈಗೊಂಡು ಸ್ವಾಧೀನಪಡಿಸಿಕೊಂಡ ಜಮೀನಿಗೆ ಬದಲಿಯಾಗಿ ಜಮೀನು ನೀಡುವುದಾಗಿ ತೀರ್ಮಾನಿಸಿತು. ಆದರೆ ಬದಲಿ ಜಮೀನನ್ನು ಪಾರ್ವತಿ ಅವರಿಗೆ ನೀಡಲಾಗಿರಲಿಲ್ಲ. ಇನ್ನೊಂದು ಮುಖ್ಯವಾದ ವಿಷಯವೆಂದರೆ 2013ರಿಂದ 2018ರ ಮಾರ್ಚ್‌ವರೆಗೆ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ಅವರು ನಿವೇಶನ ಹಂಚಿಕೆ ಕುರಿತಂತೆ ಯಾವುದೇ ನಿರ್ದೇಶನವನ್ನು ಹೊರಡಿಸಿರಲಿಲ್ಲ. ಈ ಅವಧಿಯಲ್ಲಿ ಪಾರ್ವತಿ ಅವರು ಪರಿಹಾರವನ್ನು ಪಡೆದುಕೊಂಡಿರಲಿಲ್ಲ. ಹೈಕೋರ್ಟ್ ತನ್ನ ತೀರ್ಪಿನಲ್ಲಿ ಇದನ್ನು ಪರಿಗಣನೆಗೇ ತೆಗೆದುಕೊಂಡಿಲ್ಲ. 

ಖಾಸಗಿ ಆಸ್ತಿಯನ್ನು ಬಲವಂತವಾಗಿ ಕಸಿದುಕೊಳ್ಳುವುದು ಅಪರಾಧ

ಖಾಸಗಿ ಒಡೆತನದ ಭೂಮಿಯನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಕೆ ಮಾಡುವ ಸಂದರ್ಭದಲ್ಲಿ ಸರ್ಕಾರವು ಪಾಲಿಸಬೇಕಾದ ನಿಯಮಗಳ ಕುರಿತು ಕರ್ನಾಟಕ ಹೈಕೋರ್ಟ್ 2019ರ ಮಾರ್ಚ್‌ 1ರ ಪಿ.ಜಿ ಬೆಳ್ಳಿಯಪ್ಪ ವರ್ಸಸ್‌ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಪ್ರಕರಣದಲ್ಲಿ ಕೆಲವೊಂದು ನಿರ್ದೇಶನ ನೀಡಿದೆ. ಹೈಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ ಖಾಸಗಿ ಒಡೆತನದ ಭೂಮಿಯನ್ನು ಸರ್ಕಾರವು ಸಾರ್ವಜನಿಕ ಬಳಕೆಗೆ ಬಲವಂತವಾಗಿ ಪಡೆದುಕೊಳ್ಳುವುದು ಸಂವಿಧಾನದ 300 ಎ ವಿಧಿಯ ಅನ್ವಯ ಅಪರಾಧವಾಗಿದೆ. ಯಾವುದೇ ಕಾನೂನು ಪ್ರಕ್ರಿಯೆಯಿಲ್ಲದೆ ಸಾರ್ವಜನಿಕ ಬಳಕೆಗೆ ಖಾಸಗಿ ಸ್ವತ್ತನ್ನು ವಶಪಡಿಸಿಕೊಳ್ಳುತ್ತೇವೆಂದು ಸರ್ಕಾರ ಹೇಳುವಂತಿಲ್ಲ. ಈ ಆದೇಶವು ಸುಪ್ರೀಂ ಕೋರ್ಟ್ ವಿಧಿಸಿರುವ ನಿಯಮವನ್ನು ಮುರಿಯುವ ಅಪರಾಧವಾಗಿದೆ. ವಶಪಡಿಸಿಕೊಳ್ಳುವ ಕಾನೂನನ್ನು ಸಮರ್ಥಿಸಿಕೊಳ್ಳುವುದು ಸಾರ್ವಜನಿಕ ನ್ಯಾಯವನ್ನು ಕಿತ್ತುಕೊಳ್ಳುವ ಕ್ರಮವಾಗುತ್ತದೆ. ಈ ಹಿನ್ನೆಲೆಯಲ್ಲಿ ಅನಧಿಕೃತವಾಗಿ ಬಳಸಿಕೊಂಡ ಭೂಮಿಯನ್ನು ಮರಳಿಸಲು ಅಥವಾ ಪರಿಹಾರದ ನೆರವು ನೀಡಲು ಬಿಡಿಎ ಅಧಿಕಾರಿಗಳು ಅರ್ಜಿದಾರರಿಗೆ ಜವಾಬ್ದಾರರಾಗಿರುತ್ತಾರೆ. ಈ ರೀತಿ ಕ್ರಮ ಕೈಗೊಂಡ ಅಧಿಕಾರಿಗಳ ಸೇವಾ ನೋಂದಣಿ ಪುಸ್ತಕದಲ್ಲಿ ತಪ್ಪಿತಸ್ಥ ಅಂಶವನ್ನು ಸೇರಿಸಬಹುದು ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.  ಈ ಹಿನ್ನೆಲೆಯಲ್ಲಿ ಜಮೀನಿನ ಮಾಲೀಕರ ಅನುಮತಿಯಿಲ್ಲದೆ ಯಾವುದೇ ಭೂಮಿಗಳನ್ನು ಬಳಸಿಕೊಳ್ಳುವುದು ತಪ್ಪಾಗುತ್ತದೆ.  ಹೈಕೋರ್ಟಿನ ಈ ತೀರ್ಪನ್ನು ಕೂಡ ನ್ಯಾಯಮೂರ್ತಿ ನಾಗಪ್ರಸನ್ನ ಪೀಠ ನಿರ್ಲಕ್ಷಿಸಿದೆ.

ಬಿಜೆಪಿ ಮುಖ್ಯಮಂತ್ರಿಗಳ ಅವಧಿಯಲ್ಲಿ ನಿವೇಶನಗಳ ಹಂಚಿಕೆ

ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಅಧಿಕಾರ ದುರುಪಯೋಗದ ವಿರುದ್ಧ ಇ.ಡಿ, ಸಿಬಿಐ ತನಿಖೆಗೊಳಪಡಿಸಬೇಕೆಂದು ಆಗ್ರಹಿಸುತ್ತಿರುವ ಪ್ರತಿಪಕ್ಷಗಳ ಸದಸ್ಯರು ನಿವೇಶನಗಳ ಹಂಚಿಕೆ ಯಾರ ಕಾಲದಲ್ಲಿ ಆಗಿದೆಯೆಂಬುದನ್ನು ಮರೆತುಬಿಟ್ಟಂತಿದೆ. ಪಾರ್ವತಿ ಅವರ ಪರಿಹಾರ ಮನವಿಯ ಅರ್ಜಿಯನ್ನು ಪರಿಗಣಿಸಿದ ಮುಡಾ ಆಯುಕ್ತರು 2019 ನವೆಂಬರ್‌ನಲ್ಲಿ ಕೆಸರೆ ಗ್ರಾಮದಲ್ಲಿ ವಶಪಡಿಸಿಕೊಂಡ ಜಮೀನಿಗೆ ಬದಲಿ ಜಮೀನನ್ನು ಮಂಜೂರು ಮಾಡಬೇಕೆಂದು ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರವನ್ನು ಬರೆಯುತ್ತಾರೆ. ಈ ಆದೇಶದ ಅನ್ವಯ ಭೂಮಾಲೀಕರಾದ ಬಿ.ಎಂ ಪಾರ್ವತಿ ಅವರಿಗೆ ಸರ್ಕಾರದ ಅಧಿಸೂಚನೆಯಂತೆ ಶೇ. 50:50 ಅನುಪಾತದಲ್ಲಿ ನಿಯಮಾನುಸಾರ ಲಭ್ಯವಾಗುವ ಪರಿಹಾರವನ್ನು ನೀಡಲು 2020 ಸೆಪ್ಟೆಂಬರ್‌ 14ರಂದು ತೀರ್ಮಾನಿಸಲಾಗುತ್ತದೆ. ಇದರನ್ವಯ 2021 ಡಿಸೆಂಬರ್ 30 ರಂದು 38,284 ಚದರ ಅಡಿ ಅಳತೆಯ ನಿವೇಶನಗಳನ್ನು ಪರಿಹಾರ ರೂಪದಲ್ಲಿ ಮಂಜೂರು ಮಾಡಲಾಗುತ್ತದೆ. ಕುತೂಹಲವೇನೆಂದರೆ ಮುಡಾದ ನಿವೇಶನಗಳನ್ನು ಹಂಚಿಕೆ ಮಾಡಲು ನಿರ್ಣಯ ಅಂಗೀಕರಿಸಿರುವ ಬಹುತೇಕರು ಜೆಡಿಎಸ್‌ ಹಾಗೂ ಬಿಜೆಪಿ ಸದಸ್ಯರು. ನಿರ್ಣಯ ಕೈಗೊಂಡಾಗ ಸಿಎಂ ಆಗಿದ್ದವರು ಬಿ.ಎಸ್‌ ಯಡಿಯೂರಪ್ಪನವರು. ನಿವೇಶನ ಹಂಚಿಕೆಯಾಗಿದ್ದು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಅವಧಿಯಲ್ಲಿ. ಈ ವಿಷಯಗಳು ಕೂಡ ಹೈಕೋರ್ಟ್‌ನಲ್ಲಿ ಹೆಚ್ಚು ಚರ್ಚೆಯಾಗದೆ ಸಿಎಂ ವಿರುದ್ಧ ತೀರ್ಪು ನೀಡಲಾಗಿದೆ.

ಕಳೆದುಕೊಂಡಿರುವ ಜಮೀನಿನ ಅಂತರ ಕೂಡ ತಪ್ಪಾಗಿ ಉಲ್ಲೇಖ

ಹೈಕೋರ್ಟಿನ ಆದೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಜಮೀನು ಕಳೆದುಕೊಂಡಿರುವುದು ಮೈಸೂರಿನಿಂದ 40 ಕಿ.ಮೀ. ದೂರದಲ್ಲಿ. ಆದರೆ ಪಡೆದುಕೊಂಡಿರುವ ನಿವೇಶನಗಳು ನಗರದ ಮಧ್ಯಭಾಗದಲ್ಲಿವೆ ಎಂದು ಉಲ್ಲೇಖಿಸಲಾಗಿದೆ. ಹೈಕೋರ್ಟ್ ಆದೇಶದ ಈ ಅಂಶವು ಕೂಡ ಸುಳ್ಳಾಗಿದೆ. ಮೈಸೂರು ಅರಮನೆಯನ್ನು ಮೈಸೂರಿನ ಕೇಂದ್ರ ಸ್ಥಳವೆಂದು ಗುರುತಿಸಿಕೊಂಡರೆ ಕೆಸರೆ ದೇವನೂರು ಬಡಾವಣೆಯಲ್ಲಿ ಪಾರ್ವತಿ ಅವರು ಕಳೆದುಕೊಂಡಿರುವ ಜಮೀನುಗಳು ಮೈಸೂರಿನಿಂದ 7.2 ಕಿ.ಮೀ. ದೂರದಲ್ಲಿದೆ. ಮುಡಾದವರು ನೀಡಿರುವ ಬದಲಿ ನಿವೇಶನಗಳು ಮೈಸೂರಿನ ಕೇಂದ್ರ ಸ್ಥಳದಿಂದ 8 ಕಿ.ಮೀ, (ವಿಜಯನಗರ 3ನೆ ಹಂತ) ಮತ್ತು10.1 ಕಿ.ಮೀ. (4ನೇ ಹಂತ ವಿಜಯನಗರ) ದೂರದಲ್ಲಿವೆ. ಈ ಸುಳ್ಳು ಮಾಹಿತಿ ನೀಡಿದ ದೂರುದಾರ ಸ್ನೇಹಮಯಿ ಕೃಷ್ಣ ವಿರುದ್ಧ ಹೈಕೋರ್ಟು ಯಾವ ಕ್ರಮವನ್ನು ತೆಗೆದುಕೊಂಡಿಲ್ಲ. ಇ.ಡಿಗೆ ಬರೆದ ಅರ್ಜಿಯಲ್ಲೂ 15 ಕಿ.ಮೀ ದೂರ ಎಂದು ಬರೆಯಲಾಗಿದೆ. ಹಸಿ ಸುಳ್ಳು ಆರೋಪಗಳನ್ನು ಮಾಡಿದ ಸ್ನೇಹಮಯಿ ಕೃಷ್ಣ ವಿರುದ್ಧ ಶಿಕ್ಷೆ ವಿಧಿಸಬೇಕಾಗಿದೆ. ಆದರೆ ಈ ವಿಚಾರದ ಬಗ್ಗೆ ಪ್ರಸ್ತಾಪ ಮಾಡದೆ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರನ್ನು ಸತ್ಯದೂರ ಆರೋಪಕ್ಕೆ  ಗುರಿ ಮಾಡಲಾಗಿದೆ.

ಜಮೀನನ್ನುಮುಡಾಅಭಿವೃದ್ಧಿ ಪಡಿಸಿತ್ತು ಎಂಬುದು ಸುಳ್ಳು

ಹೈಕೋರ್ಟ್‌ ನೀಡಿರುವ ಆದೇಶದಲ್ಲಿ ಕೆಸರೆ ಗ್ರಾಮದ ಸರ್ವೆ ನಂಬರ್ 464 ರಲ್ಲಿನ 3 ಎಕರೆ 16 ಗುಂಟೆಗೆ ಸಂಬಂಧಿಸಿದ ಭೂಮಿಯನ್ನು ಮುಡಾ ಅಭಿವೃದ್ಧಿಪಡಿಸಿತ್ತು ಎಂದು ನಮೂದಿಸಲಾಗಿದೆ. 1998ರ ಅಕ್ಟೋಬರ್‌ 31ರಂದು ಈ ಜಮೀನಿಗೆ ಮುಡಾ ಬಡಾವಣೆ ನಕ್ಷೆಯನ್ನು ಸಿದ್ಧಪಡಿಸಿ ಸಹಿ ಮಾಡಿ ಅನುಮೋದಿಸಿತ್ತು. ಆ ನಕ್ಷೆಯಲ್ಲಿ ಡಿನೋಟಿಫೈಡ್ ಪ್ರದೇಶ ಎಂದು ನಮೂದು ಮಾಡಲಾಗಿದ್ದು, ಈ ಜಾಗದಲ್ಲಿ ನಿವೇಶನ, ಪಾರ್ಕು ಇತ್ಯಾದಿಗಳೇನನ್ನೂ ನಮೂದು ಮಾಡಿರಲಿಲ್ಲ. ಅಲ್ಲದೆ ಆ ಸಂದರ್ಭದಲ್ಲಿ ಜಮೀನು ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ಮಾರಾಟವಾಗಿರದೆ, ಮೂಲ ಮಾಲೀಕ ಜೆ ದೇವರಾಜು ಅವರ ಮಾಲೀಕತ್ವದಲ್ಲಿತ್ತು. 2003, ಡಿಸೆಂಬರ್‌ 18 ರಂದು ಮುಡಾ ಆಯುಕ್ತರು ಮೈಸೂರು ತಾಲೂಕಿನ ತಹಶೀಲ್ದಾರ್ ಅವರಿಗೆ ಪತ್ರ ಬರೆದು ಕೆಸರೆ ಗ್ರಾಮದ ಸರ್ವೆ ನಂಬರ್‌ 464ರ 3.16 ಎಕರೆ ಮತ್ತು 462ರಲ್ಲಿ 0-37 ಎಕರೆ ಜಮೀನನ್ನು ಭೂಸ್ವಾಧೀನದಿಂದ ಕೈಬಿಟ್ಟಿರುವ ಬಗ್ಗೆ ಸರ್ಕಾರದ ಆದೇಶದ ಗೆಜೆಟ್‌ನ ಜೆರಾಕ್ಸ್ ಪ್ರತಿಯನ್ನು ಲಗತ್ತಿಸಿದ್ದು, ಅಂದ ಮೇಲೆ 2003ರ ಡಿಸೆಂಬರ್‌ನಲ್ಲಿ ಈ ಜಮೀನುಗಳು ಯಾವುದೇ ರೀತಿಯಲ್ಲಿ ಅಭಿವೃದ್ಧಿಯಾಗಿರಲಿಲ್ಲ. ಹೈಕೋರ್ಟ್ ತೀರ್ಪು ನೀಡುವಾಗ ಈ ಅಂಶವನ್ನು ಗಣನೆಗೆ ತೆಗೆದುಕೊಂಡಿಲ್ಲ.

50 – 50 ಅನುಪಾತದಡಿ ನಿವೇಶನ; ಕಾನೂನಡಿಯಲ್ಲಿಯೇ ನಿಯಮ

ಪಾರ್ವತಿ ಅವರಿಗೆ 50 – 50 ಅನುಪಾತದಡಿ ನಿವೇಶನ ನೀಡಿರುವುದು ಅಧಿಕಾರ ದುರ್ಬಳಕೆ ಎಂಬ ಹೈಕೋರ್ಟ್ ಆದೇಶದ ಅಂಶ ಸತ್ಯಕ್ಕೆ ದೂರವಾದ ಮಾತು. ನಿವೇಶನ ಹಂಚಿಕೆಯ ನಿಯಮಗಳು ಅಂಗೈ ರೇಖೆಗಳಷ್ಟು ಸ್ಪಷ್ಟವಾಗಿವೆ. 2013 ರಲ್ಲಿ ದೇಶದಲ್ಲಿ ಹೊಸ ಭೂಸ್ವಾಧೀನ ಕಾಯ್ದೆ ಜಾರಿಗೆ ಬಂದಿದೆ. ಹಳೆಯದಾದ ರೈತ ವಿರೋಧಿಯಾದ ಬ್ರಿಟಿಷ್ ಕಾಲದ ಭೂಸ್ವಾಧೀನ ಕಾಯ್ದೆಯನ್ನು ಯುಪಿಎ ಸರ್ಕಾರವು ರದ್ದು ಮಾಡಿ ರೈತಸ್ನೇಹಿ ಭೂಸ್ವಾಧೀನ ಕಾಯ್ದೆಯನ್ನು ಜಾರಿಗೆ ತಂದಿತು. ಹೊಸ ಕಾಯ್ದೆಯ ಪ್ರಕಾರ ನಗರ ಪ್ರದೇಶವಾದರೆ ಮಾರುಕಟ್ಟೆ ಬೆಲೆಯ ಎರಡರಷ್ಟು, ಗ್ರಾಮಾಂತರ ಪ್ರದೇಶವಾದರೆ ನಾಲ್ಕರಷ್ಟು ಪರಿಹಾರ ನೀಡುವಂತೆ ಸ್ಪಷ್ಟವಾಗಿ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿಯೆ ಮೊದಲು ಇದ್ದ ಶೇ.60;40 ರ ಪ್ರಮಾಣವನ್ನು ಶೇ. 50;50 ಕ್ಕೆ ಹೆಚ್ಚಿಸಲಾಗಿದೆ. ದೆಹಲಿಯಲ್ಲಿ ಈ ಪ್ರಮಾಣ ಶೇ.60 ರವರೆಗೆ ಇದೆ. ಗುಜರಾತಿನಲ್ಲಿಯೂ ಶೇ.50 ರವರೆಗೆ ಇದೆ. ಕರ್ನಾಟಕದಲ್ಲಿ ಶೇ.50;50 ರ ಅನುಪಾತದಲ್ಲಿ ಭೂ ಮಾಲೀಕರಿಗೆ ಪರಿಹಾರ ನೀಡುವ ಮಾದರಿ ಅಳವಡಿಸಿಕೊಂಡ ಮೇಲೆ ರೈತರು ಸಹ ಭೂಮಿಯನ್ನು ಬಿಟ್ಟುಕೊಡಲು ಹೆಚ್ಚು ತಕರಾರು ಮಾಡುತ್ತಿಲ್ಲ. ಈ ಎಲ್ಲ ಅಂಶಗಳನ್ನು ಗಮನಿಸಿದರೆ ಹೈಕೋರ್ಟು ನೀಡಿರುವ ತೀರ್ಪು ಪಾರ್ವತಿಯವರಿಗೆ ವಿರುದ್ಧವಾಗಿರುವುದು ಮಾತ್ರವಲ್ಲ, ಇಡೀ ರಾಜ್ಯದ ರೈತ ಸಮುದಾಯಕ್ಕೆ ಅನ್ಯಾಯ ಮಾಡಿದಂತಾಗಿದೆ.

Siddaramaiah 1 4

ಒಂದು ಎಕರೆಗೆ 43,560 ಅಡಿಗಳನ್ನು ಕಳೆದುಕೊಂಡರೆ ಒಂದು 40*60 ನಿವೇಶನ ಅಂದರೆ 2,400 ಅಡಿಗಳನ್ನು ಮಾತ್ರ ಕೊಡಬೇಕಾಗಿತ್ತು. ಆದರೆ ಪಾರ್ವತಿಯವರಿಗೆ ಹೆಚ್ಚಿಗೆ ಕೊಡಲಾಗಿದೆ ಎಂದು ಹೈಕೋರ್ಟಿನ ತೀರ್ಪಿನಲ್ಲಿ  ಹೇಳಲಾಗಿದೆ. ಇದು ಸತ್ಯಕ್ಕೆ ದೂರವಾದ ಅಂಶ.  ಪಾರ್ವತಿಯವರು ನೀಡಿರುವ ಅರ್ಜಿಯಲ್ಲಿ ಇಂತಹುದೇ ಬಡಾವಣೆಯಲ್ಲಿ ನಿವೇಶನಗಳನ್ನು ಕೊಡಿ ಎಂದು ಕೇಳಿಲ್ಲ. ಸಮಾನಾಂತರ ಬಡಾವಣೆಯಲ್ಲಿ ಕೊಡಿ ಎಂದು ಕೇಳಿದ್ದಾರೆ. ಬಿಜೆಪಿ ಸರ್ಕಾರದ ಆಡಳಿತದ ಅವಧಿಯಲ್ಲಿದ್ದ ಮುಡಾದವರು ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು 3.16 ಎಕರೆ ಜಮೀನು ಕಳೆದುಕೊಂಡ ಪಾರ್ವತಿಯವರಿಗೆ 38,284 ಅಡಿಗಳನ್ನು ಮಾತ್ರ ಕೊಟ್ಟಿದ್ದಾರೆ [148104 ಅಡಿಗಳನ್ನುಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ]. ಇದನ್ನು ಕೂಡ ತಪ್ಪು ಎಂಬಂತೆ ತೀರ್ಪಿನಲ್ಲಿಉಲ್ಲೇಖ ಮಾಡಲಾಗಿದೆ. ಅಲ್ಲದೆ ಮುಡಾದವರೆ ಸಿಎಂ ಪತ್ನಿಗೆ ಮಾತ್ರ ವಿಜಯನಗರ 3 ಮತ್ತು 4ನೇ ಹಂತದ ಬಡಾವಣೆಯಲ್ಲಿ ನಿವೇಶನ ನೀಡಲಾಗಿದೆ ಎಂದು ಹೇಳಿರುವುದು ಕೂಡ ಸುಳ್ಳು. ಜಮೀನು ಕಳೆದುಕೊಂಡ 125ಕ್ಕೂ ಹೆಚ್ಚು ಜನರಿಗೆ ಪರ್ಯಾಯ ಹಾಗೂ ಪರಿಹಾರಾತ್ಮಕ ನಿವೇಶನಗಳನ್ನು ವಿಜಯನಗರ ಬಡಾವಣೆಯಲ್ಲಿ ನೀಡಲಾಗಿದೆ.  ಹೈಕೋರ್ಟಿನ ಆದೇಶದಲ್ಲಿ ಮುಡಾದವರು ಶೇ. 50:50 ರ ಅನುಪಾತದಲ್ಲಿ ಪಾರ್ವತಿಯವರಿಗೆ ಜಮೀನು ನೀಡಲು ನಿರ್ಧಾರ ಕೈಗೊಂಡು ನಂತರ ರದ್ದು ಮಾಡಿದ್ದಾರೆ ಎಂದು ಹೇಳಿರುವುದರಲ್ಲಿ ಕೂಡ ಯಾವುದೇ ಹುರುಳಿಲ್ಲ. ಮುಡಾ ಆದೇಶವನ್ನು ರದ್ದುಪಡಿಸಿದ್ದು 2023ರಲ್ಲಿ, ಆದರೆ ಪಾರ್ವತಿ ಅವರ ಆದೇಶ 2020 ಸೆಪ್ಟೆಂಬರ್‌ 14ಕ್ಕೆ ಸಂಬಂಧಪಟ್ಟ ಕಾರಣ ಅವರಿಗೆ ನೀಡಿರುವ ನಿವೇಶನದ ಆದೇಶ ರದ್ದಾಗಿಲ್ಲ. ಹೀಗಿದ್ದರೂ ಹೈಕೋರ್ಟ್ ತನ್ನ ಆದೇಶದಲ್ಲಿ ತಪ್ಪು ಮಾಹಿತಿಯನ್ನು ಆಧರಿಸಿ ತೀರ್ಪು ನೀಡಿದೆ.

ಯತೀಂದ್ರ ಸಿದ್ದರಾಮಯ್ಯನವರ ಪಾತ್ರ ಕೂಡ ಅಪ್ಪಟ ಸುಳ್ಳು

ಸಿಎಂ ಪುತ್ರ, ವಿಧಾನ ಪರಿಷತ್‌ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಮುಡಾದಲ್ಲಿ ತಮ್ಮ ತಾಯಿಗೆ ನಿವೇಶನಗಳನ್ನು ಕೊಡಿಸುವಲ್ಲಿ ಪಾತ್ರ ವಹಿಸಿದ್ದಾರೆ ಎಂಬ ಹೈಕೋರ್ಟ್ ತೀರ್ಪಿನ ಅಂಶ ಕೂಡ ಸತ್ಯದೂರ.  ಸಂಬಂಧಪಟ್ಟ ಸಭೆಯಲ್ಲಿ ಡಾ. ಯತೀಂದ್ರ ಗೈರು ಹಾಜರಾಗಿದ್ದರು. 2021ರ ಮಾರ್ಚ್‌ 20ರಂದು ನಡೆದ ಸಭೆಯಲ್ಲಿ ಈ ವಿಷಯದ ಕುರಿತು ಯಾವುದೇ ತೀರ್ಮಾನವಾಗಿರುವುದಿಲ್ಲ.  “ವಿಷಯವನ್ನು ಮುಂದೂಡಲಾಗಿದೆ” ಎಂದು ಷರಾ ಬರೆಯಲಾಗಿದೆ. ಆದರೂ ಹೈಕೋರ್ಟು ತನ್ನ ಆದೇಶದಲ್ಲಿ ಡಾ. ಯತೀಂದ್ರ ಅವರ ಪಾತ್ರವನ್ನು ಪ್ರಸ್ತಾಪಿಸಿದೆ.

ಅಕ್ರಮ ಸ್ವಾಧೀನದ ವಿರುದ್ಧ ಹೈಕೋರ್ಟ್ ತೀರ್ಪುಸುಂದರಮ್ಮ ಪ್ರಕರಣ

ಮುಖ್ಯಮಂತ್ರಿಯವರ ಪತ್ನಿ ಪಾರ್ವತಿ ಅವರ ಪ್ರಕರಣದಲ್ಲಿ ವಾಸ್ತವವಾಗಿ ಮುಡಾ ಅನ್ಯಾಯ ಮಾಡಿದೆ. ಡಿನೋಟಿಫೈ ಮಾಡಿದ ಜಾಗವನ್ನುಅಕ್ರಮವಾಗಿ ಪ್ರವೇಶಿಸಿ ನಿವೇಶನ, ಪಾರ್ಕು, ರಸ್ತೆ ಮಾಡಲಾಗಿದೆ. ಮುಡಾ ತಪ್ಪು ಮಾಡಿದೆ ಎಂದು ನಿರ್ಣಯಿಸಿದ್ದಾರೆ. ಈ ಹಿಂದೆ ಇದೇ ರೀತಿ ಅಕ್ರಮವಾಗಿ ಸುಂದರಮ್ಮ ಎನ್ನವವರ ಜಮೀನಿಗೆ ನುಗ್ಗಿ ಅಭಿವೃದ್ಧಿಪಡಿಸಿದ್ದ ಕುರಿತು ಕರ್ನಾಟಕ ಹೈಕೋರ್ಟ್ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಅಧಿಕಾರಿಗೆ ದಂಡ ವಿಧಿಸಲು, ಶಿಸ್ತುಕ್ರಮ ತೆಗೆದುಕೊಳ್ಳಲು ನಿರ್ದೇಶನಗಳನ್ನು ನೀಡಿದೆ.

ಸುಂದರಮ್ಮ ಪ್ರಕರಣದ ರೀತಿಯಲ್ಲಿ 2000ರಿಂದ ಮುಡಾ ಹೈಕೋರ್ಟ್ ತೀರ್ಪುಗಳನ್ನು ಮಾನದಂಡವಾಗಿಟ್ಟುಕೊಂಡು 1300ಕ್ಕೂ ಹೆಚ್ಚುನಿವೇಶನಗಳನ್ನು ಪರಿಹಾರವಾಗಿ ನೀಡಿದೆ.

ಮಾರುಕಟ್ಟೆ ದರದ ಬಗ್ಗೆಯೂ ತಪ್ಪು ಉಲ್ಲೇಖ

ಹೈಕೋರ್ಟ್ ತನ್ನ ಆದೇಶದಲ್ಲಿ ಪಾರ್ವತಿ ಅವರಿಗೆ ವಿಜಯನಗರದ 3 ಮತ್ತು 4ನೇ ಹಂತದ ಬಡಾವಣೆಗಳಲ್ಲಿ ನೀಡಿರುವ ನಿವೇಶನಗಳ ಕುರಿತು ಊಹಾತ್ಮಕ ಲೆಕ್ಕಾಚಾರವನ್ನು ಮಂಡಿಸಿದೆ. ಈ ಬಡಾವಣೆಗಳಲ್ಲಿ ಚದರ ಅಡಿಗೆ ಮಾರ್ಗಸೂಚಿ ದರ ರೂ.2,300 ರಿಂದ 24,000 ರೂ.ವರೆಗೆ ಇದೆ. ಆದರೆ, ಮಾರುಕಟ್ಟೆ ದರ 15,000 ರೂಪಾಯಿಗಳಷ್ಟು ಇದೆ ಎಂದು ಲೆಕ್ಕ ಹಾಕಿ, ಪರಿಹಾರ ರೂಪದಲ್ಲಿ ನೀಡಿರುವ ಈ 14 ನಿವೇಶನಗಳು 56 ಕೋಟಿ ರೂಪಾಯಿಗಳಷ್ಟು ಬೆಲೆ ಬಾಳುತ್ತವೆ ಎಂದು ಆದೇಶದಲ್ಲಿ ನಮೂದು ಮಾಡಲಾಗಿದೆ. ವಾಸ್ತವವಾಗಿ ಈ ಬಡಾವಣೆಯ ನಿವೇಶನಗಳ ಮಾರುಕಟ್ಟೆ ಬೆಲೆ ಚದರ ಅಡಿಯೊಂದಕ್ಕೆ ಸುಮಾರು 6,000 ರೂ. ಮೇಲ್ಮಟ್ಟು ಮಾರಾಟವಾಗುತ್ತಿದೆ. ಈ ವಿಚಾರದಲ್ಲಿಯೂ ಹೈಕೋರ್ಟಿನ ಆದೇಶವು ಸತ್ಯಕ್ಕೆ ದೂರವಾಗಿದೆ.

ಹೈಕೋರ್ಟ್ ಆದೇಶಗಳು ಒಳಗೊಂಡು ಇಷ್ಟೆಲ್ಲ ಆದೇಶಗಳು ಜರುಗಿದ್ದರೂ ವಾಸ್ತವವಾಗಿ ಪಾರ್ವತಿಯವರಿಗೂ ಇದೇ ಮಾದರಿಯಲ್ಲಿ ನಿವೇಶನ ನೀಡಬೇಕಿತ್ತು. ಹೀಗಿದ್ದರೂ ವಿರೋಧ ಪಕ್ಷದವರು ತಮ್ಮ ಕ್ಷುಲ್ಲಕ ರಾಜಕಾರಣಕ್ಕಾಗಿ ಸಿದ್ದರಾಮಯ್ಯ ಅವರ ಪತ್ನಿಯವರು ಮಾತ್ರ ನಿವೇಶನ ಪಡೆದಿದ್ದಾರೆ ಎಂದು ಸುಳ್ಳನ್ನೇ ಬಡಬಡಿಸಿ ದೂರು ದಾಖಲಿಸಿದ್ದಾರೆ. ವಾಸ್ತವ ಹೀಗಿರುವಾಗ ರಾಜ್ಯಪಾಲರು ನೀಡಿರುವ ಅನುಮತಿ ರಾಜಕೀಯಪ್ರೇರಿತ ಹಾಗೂ ದುರುದ್ದೇಶದಿಂದ ಕೂಡಿದೆ. ಹೈಕೋರ್ಟ್ ಕೂಡ ಹಲವು ತಪ್ಪುಗಳನ್ನು ಗಮನಿಸದೆ ತೀರ್ಪು ನೀಡಿದೆ. ಕರ್ನಾಟಕದ ರಾಜ್ಯಪಾಲರು, ಹೈಕೋರ್ಟು ಹಾಗೂ ಅಧೀನ ನ್ಯಾಯಾಲಯಗಳು ಸುಳ್ಳುಗಳನ್ನು ಪರಿಶೀಲಿಸದೆ ರಾಜಕೀಯ ಪ್ರೇರಿತವಾಗಿ ನೀಡಿರುವ ಆದೇಶಗಳು ಸಂವಿಧಾನಕ್ಕೆ, ನ್ಯಾಯಾಂಗದ ಪರಂಪರೆಗೆ ದ್ರೋಹ ಮಾಡುತ್ತಿರುವುದು ಕಂಡುಬರುತ್ತಿದೆ. ಸಂವಿಧಾನ ವಿರೋಧಿ ಶಕ್ತಿಗಳಿಗೆ ತಡೆ ನೀಡಬೇಕೆಂದರೆ ಶೀಘ್ರವಾಗಿ ಸುಪ್ರೀಂಕೋರ್ಟ್ ಮಧ್ಯೆ ಪ್ರವೇಶಿಸಿ ಕೆಳ ಹಂತದ ನ್ಯಾಯಾಲಯಗಳು ಮಾಡಿರುವ ಅನ್ಯಾಯಗಳನ್ನು ಸರಿಪಡಿಸಿ ಜನರಲ್ಲಿ ನ್ಯಾಯಾಂಗದ ಬಗ್ಗೆ ಗೌರವ ಭಾವನೆಗಳನ್ನು ಮರುಸ್ಥಾಪಿಸಲು ಮುಂದಾಗಬೇಕಿದೆ. ನ್ಯಾಯಾಲಯಗಳೇ ತಪ್ಪನ್ನು ಗಮನಿಸದಿದ್ದರೆ ಅದು ತಪ್ಪು ಎಂದು ಹೇಳುವ ಅಧಿಕಾರ ಪ್ರತಿಯೊಬ್ಬ ಪ್ರಜೆಗೂ ಇದೆ.

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

3 COMMENTS

  1. ಹಲವಾರು ಸತ್ಯಾಂಶಗಳನ್ನು ಮರೆಮಾಚಿ ಕೇವಲ ತಮ್ಮ ಮೂಗಿನ ನೇರಕ್ಕೇ ವಾದ ಮಾಡಿದ್ದಾರೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025ಕ್ಕೆ ವಿಧಾನ ಪರಿಷತ್ತಿನಲ್ಲೂ ಅಂಗೀಕಾರ

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025 ಕ್ಕೆ ವಿಧಾನ ಪರಿಷತ್ತಿನಲ್ಲಿ...

ಸರ್ಕಾರಿ ಶಾಲೆಗಳನ್ನು ಮುಚ್ಚಿ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರದಿಂದಲೇ ಷಡ್ಯಂತ್ರ: ಪ್ರೊ. ಮುರಿಗೆಪ್ಪ

"ತನ್ನ ಮೇಲಿನ ಭಾರವನ್ನು ಇಳಿಸಿಕೊಳ್ಳಲು ಸರ್ಕಾರಿ ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆಗಳಿಗೆ...

Download Eedina App Android / iOS

X