ಈ ದಿನ ಸಂಪಾದಕೀಯ | ಬಾಣಂತಿಯರ ಸಾವಿನ ಹೊಣೆಯಲ್ಲ, ಮುಂದೆ ಹೀಗಾಗದಂತೆ ‘ವ್ಯವಸ್ಥೆ’ಯಲ್ಲಿ ಬದಲಾವಣೆ ಬೇಕು

Date:

Advertisements
ಸರ್ಕಾರೀ ಆರೋಗ್ಯ ವ್ಯವಸ್ಥೆಯಲ್ಲಿ ಹತ್ತು ಹಲವು ಸಮಸ್ಯೆಗಳಿರುವಂತೆಯೇ, ಉತ್ತಮ ಚಿಕಿತ್ಸೆ ನೀಡಬಲ್ಲ ಖಾಸಗಿ ವಲಯವೂ ತೀರಾ ದುಬಾರಿಯಾಗುತ್ತಿದೆ. ಆರೋಗ್ಯ ಕ್ಷೇತ್ರದಲ್ಲಿರುವ ಅಸಮಾನತೆ ಗಾಬರಿ ಹುಟ್ಟಿಸುತ್ತದೆ. ಈಗಷ್ಟೇ ಆರಂಭವಾಗಿರುವ ವಿಧಾನಮಂಡಲ ಅಧಿವೇಶನದಲ್ಲಿ ಬಾಣಂತಿಯರ ಸಾವಿರ ಕುರಿತ ಸಮಗ್ರ ಚರ್ಚೆಯಾಗುವ ಅಗತ್ಯವಿದೆ. ಇದೊಂದು ರಾಜಕೀಯ ಆರೋಪ ಪ್ರತ್ಯಾರೋಪಗಳಲ್ಲಿ ಮುಗಿದು ಹೋಗದಂತೆ ಸರ್ಕಾರ ಮತ್ತು ವಿರೋಧ ಪಕ್ಷಗಳೆರಡೂ ನಡೆದುಕೊಳ್ಳಬೇಕಿದೆ.

ಮಕ್ಕಳಿಗೆ ಜನ್ಮ ನೀಡುವ ಸಂದರ್ಭದಲ್ಲಿ ಅಥವಾ ಅದರ ನಂತರ ಸಾಯುವ ಬಾಣಂತಿಯರ ಸಂಖ್ಯೆ ಇಡೀ ರಾಜ್ಯದಲ್ಲಿ ಹೆಚ್ಚಾಗಿದೆಯೆಂದು ಬಳ್ಳಾರಿ ಮೆಡಿಕಲ್‌ ಕಾಲೇಜು ಆಸ್ಪತ್ರೆಯಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಆರು ಬಾಣಂತಿಯರು ತೀರಿಕೊಂಡ ಸಂದರ್ಭದಲ್ಲಿ ಸುದ್ದಿಯಾಗಿದೆ. ಕರ್ನಾಟಕದಲ್ಲಿ ತಾಯಂದಿರ ಮರಣ ಪ್ರಮಾಣವು ಹಿಂದಿಗಿಂತ ಕಡಿಮೆಯಾಗುತ್ತಿರುವ ಹೊತ್ತಿನಲ್ಲಿ, ಈ ಬೆಳವಣಿಗೆಯು ಆಶ್ಚರ್ಯಕರವೂ, ಆತಂಕಕಾರಿಯೂ ಆಗಿದೆ. 2017-18ರಲ್ಲಿ ವಾರ್ಷಿಕ (ಲಕ್ಷಕ್ಕೆ) 83ರಷ್ಟಿದ್ದ ತಾಯಂದಿರ ಮರಣ ಪ್ರಮಾಣವು, 2018-20ರ ಹೊತ್ತಿಗೆ 69ಕ್ಕೆ ಇಳಿದಿತ್ತು. ಅದು 2023-24ರ ಹೊತ್ತಿಗೆ 64ಕ್ಕೆ ಇಳಿದಿದೆ. ಶಿಶು ಮರಣ ಪ್ರಮಾಣವು ಕರ್ನಾಟಕದಲ್ಲಿ 1971ರಲ್ಲಿ ಸಾವಿರಕ್ಕೆ 129 ಇತ್ತು. ಈಗ ಸಾವಿರ ಜನನಗಳಲ್ಲಿ 28ಕ್ಕೆ ಇಳಿದಿದೆ.

ಬಳ್ಳಾರಿ ಅಥವಾ ಹೈದ್ರಾಬಾದ್‌ ಕರ್ನಾಟಕಗಳು ಇಂತಹ (ಶಿಶು ಮರಣ ಪ್ರಮಾಣ, ತಾಯಿ ಮರಣ ಪ್ರಮಾಣ ಇತ್ಯಾದಿ) ಮಾನವ ಅಭಿವೃದ್ಧಿ ಸೂಚ್ಯಂಕಗಳಲ್ಲಿ ಬಹಳ ಕಡಿಮೆ ಇವೆಯೆಂಬ ಅನಿಸಿಕೆ ಕೆಲವರಲ್ಲಿದೆ. ಅದು ವಾಸ್ತವವಲ್ಲ. ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ತಾಯಂದಿರ ಮರಣ ಪ್ರಮಾಣ ಇರುವ ಐದು ಜಿಲ್ಲೆಗಳ ಪೈಕಿ ಒಂದೂ ಹೈದ್ರಾಬಾದ್‌ ಕರ್ನಾಟಕದಲ್ಲಿಲ್ಲ. ಚಿಕ್ಕಬಳ್ಳಾಪುರ, ಧಾರವಾಡ, ಹಾವೇರಿ, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಅತ್ಯಂತ ಹೆಚ್ಚು ತಾಯಂದಿರ ಮರಣಪ್ರಮಾಣ ಇದೆ.

ಅಂಕಿ-ಅಂಶಗಳು ಆಶಾದಾಯಕವಾಗಿರಬಹುದಾದರೂ, ತಪ್ಪಿಸಬಹುದಾಗಿದ್ದ ಒಂದೇ ಒಂದು ಸಾವು ಸಂಭವಿಸಿದರೂ ಅದು ಅಕ್ಷಮ್ಯ. ಹೀಗಾಗಿ ಬಳ್ಳಾರಿಯ ಈ ಸಾವುಗಳ ಕುರಿತು ಸಮಾಜ ಹಾಗೂ ಸರ್ಕಾರ ಬಹಳ ಗಂಭೀರವಾಗಿಯೇ ಕ್ರಮ ವಹಿಸಬೇಕಿದೆ. ಇವುಗಳಲ್ಲಿ ನಿರ್ಲಕ್ಷ್ಯದ ಕಾರಣ, ಭ್ರಷ್ಟಾಚಾರ ಇತ್ಯಾದಿಗಳೇನಾದರೂ ಕಂಡುಬಂದರೆ ಅದರ ಕುರಿತು ಕಠಿಣವಾದ ಕ್ರಮಗಳನ್ನೂ ಕೈಗೊಳ್ಳಬೇಕಿದೆ.

Advertisements

ಇಲ್ಲಿಯವರೆಗೆ ಸರ್ಕಾರ ಮತ್ತು ಆರೋಗ್ಯ ಇಲಾಖೆಗಳು ಸದರಿ ವಿಚಾರದ ಕುರಿತು ಸೂಕ್ತವಾದ ಕ್ರಮ ವಹಿಸಿರುವುದು ಕಾಣುತ್ತದೆ. ತೀರಿಕೊಂಡ ಬಾಣಂತಿಯರೆಲ್ಲರಿಗೂ, ಒಂದು ನಿರ್ದಿಷ್ಟ ಸಂಸ್ಥೆಯಿಂದ ಪೂರೈಕೆಯಾಗಿದ್ದ ಒಂದು ನಿರ್ದಿಷ್ಟ ದ್ರಾವಣ (ರಿಂಗರ್‌ ಲ್ಯಾಕ್ಟೇಟ್‌)ವನ್ನು ನೀಡಲಾಗಿತ್ತು ಎಂಬುದರತ್ತ ಬೊಟ್ಟು ಮಾಡಿ ತೋರಿಸಲಾಗುತ್ತಿದೆ. ತನಿಖಾ ತಂಡ ನೇಮಕವಾಗಿದೆ; ಹಿರಿಯ ಔಷಧ ನಿಯಂತ್ರಕರೊಬ್ಬರನ್ನು ಅಮಾನತ್ತಿನಲ್ಲಿಡಲಾಗಿದೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಅತಿಯಾದ ಮೊಬೈಲ್ ಬಳಕೆ ಚಟ ಮಾತ್ರವಲ್ಲ ಮಾರಕ ರೋಗ

ಆದರೆ, ಚಿಂತಿಸಬೇಕಿರುವುದು ಇಷ್ಟೇ ಅಲ್ಲ. ಇಡೀ ದೇಶದ ಸರಾಸರಿಗಿಂತ ಕರ್ನಾಟಕದ ಅಂಕಿ-ಅಂಶಗಳು ಉತ್ತಮವಾಗಿದ್ದರೂ, ದಕ್ಷಿಣದ ರಾಜ್ಯಗಳ ಪೈಕಿ ರಾಜ್ಯವು ನಾಲ್ಕನೇ ಸ್ಥಾನದಲ್ಲಿದೆ. ಸರ್ಕಾರೀ ಆರೋಗ್ಯ ವ್ಯವಸ್ಥೆಯಲ್ಲಿ ಹತ್ತು ಹಲವು ಸಮಸ್ಯೆಗಳಿರುವಂತೆಯೇ, ಉತ್ತಮ ಚಿಕಿತ್ಸೆ ನೀಡಬಲ್ಲ ಖಾಸಗಿ ವಲಯವೂ ತೀರಾ ದುಬಾರಿಯಾಗುತ್ತಿದೆ. ಆರೋಗ್ಯ ಕ್ಷೇತ್ರದಲ್ಲಿರುವ ಅಸಮಾನತೆ ಗಾಬರಿ ಹುಟ್ಟಿಸುತ್ತದೆ. ಸರ್ಕಾರೀ ವ್ಯವಸ್ಥೆಯಲ್ಲಿ ಗುಣಮಟ್ಟ ಖಾತರಿಗೆ ಯಂತ್ರಾಂಗವು ಇದೆಯಾದರೂ, ಇಲ್ಲಿನ ಗುಣಮಟ್ಟದ ಕುರಿತು ಸಾಮಾನ್ಯ ಜನರಿಗೆ ಖಾತರಿ ಆಗದೇ ಇರುವುದು ಏಕೆಂದು, ಇಡೀ ಇಲಾಖೆಯೇ ತಲೆ ಕೆಡಿಸಿಕೊಳ್ಳಬೇಕು. ಎಲ್ಲಿಯವರೆಗೆ ಸರ್ಕಾರೀ ವಲಯದಲ್ಲಿ ಅತ್ಯುತ್ತಮ ಆರೋಗ್ಯ ಸೇವೆ ಸಿಗುವುದು ಖಾತರಿಯಾಗುವುದಿಲ್ಲವೋ, ಅಲ್ಲಿಯವರೆಗೆ ಖಾಸಗಿಯವರ ನಿಯಂತ್ರಣವೂ ಅಸಾಧ್ಯ.

ಬಳ್ಳಾರಿ ಬಾಣಂತಿಯರ ಸಾವು – ತಪ್ಪಿಸಬಹುದಾದ ಒಂದು ಸಾವನ್ನೂ ತಪ್ಪಿಸುವ ಹಾಗೆ ವ್ಯವಸ್ಥೆಯಲ್ಲಿ ಮಾರ್ಪಾಡು ತರುವ ನಿಟ್ಟಿನಲ್ಲಿ ಖಚಿತ ಹೆಜ್ಜೆಯಿಡಲು ದಾರಿಯಾಗಬೇಕು. ಇಲ್ಲದಿದ್ದರೆ, ಆಯಾ ಸಂದರ್ಭದ ತಕ್ಷಣದ ಆರೋಪ-ಪ್ರತ್ಯಾರೋಪಗಳಲ್ಲಿ ‘ಪ್ರಕರಣ’ ಮುಕ್ತಾಯಗೊಳ್ಳುತ್ತದೆ. ತಮಿಳುನಾಡು, ಕೇರಳ, ದೆಹಲಿ ಸರ್ಕಾರಗಳು ತಮ್ಮದೇ ರೀತಿಯಲ್ಲಿ ಸರ್ಕಾರೀ ವ್ಯವಸ್ಥೆಯಲ್ಲಿ ಕೆಲವು ಮಾದರಿಗಳನ್ನು ನಿರ್ಮಿಸಿ ತೋರಿಸಿವೆ. ಕೇರಳ ಮತ್ತು ತಮಿಳುನಾಡುಗಳಲ್ಲಿ ಇದಕ್ಕೆ ಯಾವುದೇ ಒಂದು ಪಕ್ಷ ಅಥವಾ ಸರ್ಕಾರ ಕಾರಣವಾಗಿಲ್ಲ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ, ಸುಸೂತ್ರವಾಗಿ ನಡೆದುಕೊಂಡು ಹೋಗುವ ‘ವ್ಯವಸ್ಥೆ’ಯನ್ನು ಅಲ್ಲಿ ನಿರ್ಮಿಸಲಾಗಿದೆ. ಇದಕ್ಕೆ ಅಗತ್ಯವಿರುವುದು ಪಕ್ಷಾತೀತವಾದ ಕಾಳಜಿ ಹಾಗೂ ಮುನ್ನೋಟ.

ಈಗಷ್ಟೇ ಆರಂಭವಾಗಿರುವ ವಿಧಾನಮಂಡಲ ಅಧಿವೇಶನದಲ್ಲಿ ಈ ಕುರಿತ ಸಮಗ್ರ ಚರ್ಚೆಯಾಗುವ ಅಗತ್ಯವಿದೆ. ಇದೊಂದು ರಾಜಕೀಯ ಆರೋಪ ಪ್ರತ್ಯಾರೋಪಗಳಲ್ಲಿ ಮುಗಿದು ಹೋಗದಂತೆ ಸರ್ಕಾರ ಮತ್ತು ವಿರೋಧ ಪಕ್ಷಗಳೆರಡೂ ನಡೆದುಕೊಳ್ಳಬೇಕು. ದೇಶದಲ್ಲಿ ನಂ.1 ಆಗುವ ಮಾತು ಆಗಾಗ ಬರುತ್ತಿರುತ್ತದೆ. ಆರೋಗ್ಯ ವ್ಯವಸ್ಥೆಯ ವಿಚಾರದಲ್ಲಿ ಕರ್ನಾಟಕಕ್ಕೆ ಅಂತಹ ಅವಕಾಶವೊಂದು ಮುಂದೆ ಬಂದು ನಿಂತಿದೆ. ಕರ್ನಾಟಕ ಸರ್ಕಾರವು ಈ ನಿಟ್ಟಿನಲ್ಲಿ ಮನಸ್ಸು ಮಾಡುವ ಅಗತ್ಯವಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X