ಒಂದು ಕಿಡಿಯಿಂದಾಗಿ ಹೊತ್ತಿಕೊಳ್ಳುವ ಸಾಹಿತ್ಯ, ಏನೆಲ್ಲ ಸಾಧ್ಯತೆಗಳಿಗೆ ಕಾರಣವಾಗುತ್ತದೆ ಎಂಬುದನ್ನು ಈ ಹೊತ್ತು ಅವಲೋಕಿಸಬೇಕಿದೆ. ಯಾವುದೋ ಒಂದು ಕಿಡಿಯಿಂದ ಸ್ಫೋಟಗೊಳ್ಳುವ ಪ್ರತಿರೋಧವು ಈ ನೆಲದ ಸಾಹಿತ್ಯ ಚರಿತ್ರೆಗೆ ಹೊಸದೇನೂ ಅಲ್ಲ.
ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಹುಟ್ಟಿರುವ ಹಲವು ಧಾರೆಗಳನ್ನು ಅವಲೋಕಿಸಿದರೆ ಮಹತ್ವದ ದಾಖಲೆಯಾಗಿ ಉಳಿದ ಚರಿತ್ರೆಗಳೆಲ್ಲ ಯಾವುದೋ ಒಂದು ಸಣ್ಣ ಕಿಡಿಯಿಂದ ಆರಂಭವಾಗಿ, ರಾಜ್ಯಕ್ಕೆ ವ್ಯಾಪಿಸಿದ ದೃಷ್ಟಾಂತಗಳಾಗಿಯೇ ನಮ್ಮ ಮುಂದೆ ಗೋಚರಿಸುತ್ತವೆ. ಈಗ ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ಮಾಡಿರುವ ಒಂದು ತಪ್ಪಿನ ನಡೆಯು ಅನಿವಾರ್ಯವಾದ ಚರ್ಚೆಗೆ ನಾಂದಿ ಹಾಡಿದೆ.
ಒಂದು ಕಿಡಿಯಿಂದಾಗಿ ಹೊತ್ತಿಕೊಳ್ಳುವ ಸಾಹಿತ್ಯ, ಏನೆಲ್ಲ ಸಾಧ್ಯತೆಗಳಿಗೆ ಕಾರಣವಾಗುತ್ತದೆ ಎಂಬುದನ್ನು ಈ ಹೊತ್ತು ಅವಲೋಕಿಸಬೇಕಿದೆ. ಕೆಲವು ಉದಾಹರಣೆಗಳನ್ನೇ ನೋಡಿ. ರಾಜ್ಯದಲ್ಲಿ ಹಿಂದುಳಿದ ವರ್ಗಗಳ ರಾಜಕಾರಣಕ್ಕೆ ಅಡಿಗಲ್ಲು ಹಾಕಿದ ಡಿ. ದೇವರಾಜ ಅರಸು ಅವರ ಸಂಪುಟದಲ್ಲಿ ಸಚಿವರಾಗಿದ್ದ ಬಿ.ಬಸವಲಿಂಗಪ್ಪನವರು ತಮ್ಮ ಕ್ರಾಂತಿಕಾರಕ ಭಾಷಣಗಳಿಂದ, ನಿಲುವುಗಳಿಂದ ಸಂಚಲನ ಸೃಷ್ಟಿಸಿ, ವೈಚಾರಿಕತೆ ಮೂಡಿಸುತ್ತಿದ್ದ ದಿನಗಳವು. ಮೈಸೂರಿನ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ 1973ರ ನವೆಂಬರ್ 19ರಂದು ‘ಹೊಸ ಅಲೆ’ ಎಂಬ ವಿಚಾರಸಂಕಿರಣ ಆಯೋಜನೆಯಾಗಿತ್ತು. ಮುಖ್ಯ ಅತಿಥಿಯಾಗಿ ಅವರು ಬಂದಿದ್ದರು. ಮೈಸೂರು ಭಾಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಗಳನ್ನು ಬಿತ್ತುತ್ತಿದ್ದ ವಕೀಲ ಎನ್.ಸಂಜೀವನ್ ಆ ಕಾರ್ಯಕ್ರಮದ ಆಯೋಜಕರಾಗಿದ್ದರು. ಅವರಿಗೆ ಜಾತಿ ವ್ಯವಸ್ಥೆ ಮತ್ತು ಅದರೊಂದಿಗೆ ಬೆರೆತ ಭಾಷೆಯ ಬಗ್ಗೆಯೂ ಅವರದ್ದೇ ಆದ ಚಿಂತನೆಗಳಿದ್ದವು. ಕನ್ನಡದಲ್ಲಿ ತಮ್ಮನ್ನು ಹೊಲೆಯ, ಮಾದಿಗ ಎಂದು ಹೀಯಾಳಿಸುತ್ತಾರೆಂಬ ಗ್ರಹಿಕೆ ಅವರದ್ದಾಗಿತ್ತು. ಹೀಗಾಗಿ ಸದಾ ಇಂಗ್ಲಿಷ್‌ನಲ್ಲಿಯೇ ಮಾತನಾಡುತ್ತಿದ್ದರು. ಅಂದಿನ ಕಾರ್ಯಕ್ರಮದ ಆರಂಭದಲ್ಲಿ ಅವರು ಇಂಗ್ಲಿಷ್‌ನಲ್ಲೇ ಭಾಷಣ ಶುರು ಮಾಡಿದಾಗ, ಸಭಾಂಗಣದ ಹಿಂಬದಿ ಕುಳಿತ್ತಿದ್ದ ಕೆಲವು ಹುಡುಗರು, ‘ಕನ್ನಡ ಕನ್ನಡ’ ಎಂದು ಕೂಗಾಟ ಶುರು ಮಾಡಿದರು. ಅವರನ್ನು ಸಮಾಧಾನ ಮಾಡಿ ಕೂರಿಸಲಾಯಿತು. ನಂತರ ಭಾಷಣಕ್ಕೆ ಬಂದ ಬಸವಲಿಂಗಪ್ಪನವರು, ಸುಮಾರು ಒಂದು ಗಂಟೆ ಮಾತನಾಡಿದ್ದರು. ಇದರ ನಡುವೆ ಸಂಜೀವನ್ ಅವರ ಭಾಷಣಕ್ಕೆ ಅಡ್ಡಿಪಡಿಸಿದ್ದ ಹುಡುಗರನ್ನು ಉದ್ದೇಶಿಸಿ ಒಂದೆರಡು ನಿಮಿಷ ಪ್ರಾಸಂಗಿಕವಾಗಿ ಆಡಿದ ಮಾತುಗಳು ಹೊಸ ವಿವಾದಕ್ಕೆ ಮತ್ತು ದಲಿತ ಚಳವಳಿ ಹುಟ್ಟಿಕೊಳ್ಳುವುದಕ್ಕೆ ಕಾರಣವಾಗಿದ್ದವು.
“ಕನ್ನಡ ಸಾಹಿತ್ಯದಲ್ಲಿ ಏನಪ್ಪ ಇದೆ? ನಿಮ್ಮ ಕಷ್ಟ ಸುಖ ಇದೆಯಾ? ಅಲ್ಲಿ ಬೂಸಾವೂ ಇದೆ. ಕನ್ನಡ ಎಂದು ಏಕೆ ಕೂಗುತ್ತೀರಿ, ಇಂಗ್ಲಿಷ್‌ನಲ್ಲಿಯೂ ಓದಿ, ಜಗತ್ತಿಗೆ ನಿಮ್ಮನ್ನು ತೆರೆದುಕೊಳ್ಳಿ” ಎಂದು ಕಿವಿಮಾತು ಹೇಳಿದ್ದರು ಬಸವಲಿಂಗಪ್ಪ. ಗಲಾಟೆ ಮಾಡುತ್ತಿದ್ದ ಹುಡುಗರೂ ಸಚಿವರ ಭಾಷಣವನ್ನು ಶಾಂತವಾಗಿ ಕೇಳಿ ಎದ್ದು ಹೋಗಿದ್ದರು. ಆದರೆ ಮುಂಜಾನೆ ಪತ್ರಿಕೆಗಳಲ್ಲಿ ಬಂದ ವರದಿಗಳು ಬಸವಲಿಂಗಪ್ಪನವರ ರಾಜೀನಾಮೆಗೂ ದಲಿತ ವಿದ್ಯಾರ್ಥಿಗಳ ಮೇಲಿನ ಭೀಕರ ಹಲ್ಲೆಗಳಿಗೂ ಕಾರಣವಾಗಿದ್ದವು. ‘ಕನ್ನಡ ಸಾಹಿತ್ಯದಲ್ಲಿರುವುದು ಬೂಸಾ’ ಎಂದು ಬಸವಲಿಂಗಪ್ಪನವರು ಹೇಳಿರುವುದಾಗಿ ಪತ್ರಿಕೆಗಳು ಸುದ್ದಿ ಪ್ರಕಟಿಸಿದವು. ಪತ್ರಿಕೆಗಳ ವರದಿಗಳಿಂದಾಗಿ ಮೈಸೂರು, ಮಂಡ್ಯ ಸೇರಿದಂತೆ ನಾನಾ ಕಡೆ ಗಲಾಟೆಗಳು ಶುರುವಾದವು. ದಲಿತ ವಿದ್ಯಾರ್ಥಿಗಳನ್ನು ಸಿಕ್ಕಸಿಕ್ಕಲ್ಲಿ ಹಿಡಿದು ಹೊಡೆದರು. ಬೂಸಾ ಗಲಾಟೆಯ ಸಂದರ್ಭದಲ್ಲಿ ಸಮಾಜವಾದಿ, ಪ್ರಗತಿಪರ ಹಿನ್ನೆಲೆಯ ಬರಹಗಾರರು ವ್ಯತಿರಿಕ್ತವಾಗಿ ವರ್ತಿಸಿದ್ದರಿಂದಾಗಿ, ಬಸವಲಿಂಗಪ್ಪನವರ ಪರ ನಿಲ್ಲದೆ ಇದ್ದಿದ್ದರಿಂದಾಗಿ, ನಮ್ಮ ಕಷ್ಟಗಳಿಗೆ ನಾವೇ ಆಗಬೇಕೆಂದು ದಲಿತರು ಯೋಚಿಸಿದರು. ಅದರ ಮುಂದುವರಿದ ಭಾಗವಾಗಿ ‘ಶೋಷಿತ’ ಪತ್ರಿಕೆ ಹುಟ್ಟಿಕೊಂಡಿತು. ಅದು ಮುಂದೆ ‘ಪಂಚಮ’ ಎಂಬ ಹೆಸರನ್ನು ಪಡೆಯಿತು. ಆಗಷ್ಟೇ ಅಕ್ಷರಲೋಕಕ್ಕೆ ತೆರೆದುಕೊಳ್ಳುತ್ತಿದ್ದ ಮೊದಲ ತಲೆಮಾರಿನ ದಲಿತ ಲೇಖಕರು ತಮ್ಮ ದುಃಖದುಮ್ಮಾನಗಳನ್ನು ಬರೆಯುತ್ತಾ ಹೋದರು. ಕನ್ನಡ ಸಾಹಿತ್ಯ ಲೋಕಕ್ಕೆ ಹೊಸ ಬೆಳಕು ಹರಿದುಬಂದಿತ್ತು. ‘ಪಂಚಮ’ದ ಮುಂದಿನ ಹೆಜ್ಜೆಯಾಗಿ ‘ದಲಿತ ಲೇಖಕ ಕಲಾವಿದ ಯುವ ಸಂಘಟನೆ’ (ದಲೇಕಯುಸಂ) ಹುಟ್ಟಿಕೊಂಡಿತು. ಮುಂದುವರಿದು, ‘ದಲಿತ ಸಂಘರ್ಷ ಸಮಿತಿ’ ಸ್ಥಾಪನೆಯಾಯಿತು. ಸಚಿವರಾಗಿದ್ದುಕೊಂಡೇ, ‘ಹಿಂದೂ ದೇವರುಗಳನ್ನು ಗಟಾರಕ್ಕೆ ಎಸೆಯಿರಿ, ದೇವರುಗಳು ನಮಗೆ ಏನನ್ನೂ ಮಾಡಿಲ್ಲ’ ಎಂದು ಕ್ರಾಂತಿಕಾರಕವಾಗಿ ಮಾತನಾಡುತ್ತಿದ್ದ ಬಸವಲಿಂಗಪ್ಪನವರ ಮೇಲಿನ ಅಸಹನೆಯ ಕಾರಣ, ಬೂಸಾ ನೆಪದಲ್ಲಿ ಹುಟ್ಟಿದ ಗಲಾಟೆಯು ದಲಿತ ಚಳವಳಿ ರೂಪುಗೊಳ್ಳಲು ಸ್ಫೂರ್ತಿಯಾಗಿತ್ತು. ಒಂದು ಕಿಡಿ ಹೊಮ್ಮಿ ಸಾಹಿತ್ಯ ಮತ್ತು ಚಳವಳಿಯ ದಿಕ್ಕನ್ನೇ ಬದಲಿಸಿತ್ತು.
ಇದನ್ನೂ ಓದಿರಿ: ಇತಿಹಾಸ ಬರೆಯಲಿದೆ ಮಂಡ್ಯ | ಸಾಹಿತ್ಯ ಸಮ್ಮೇಳನದಲ್ಲಿ ‘ಬಾಡೂಟ’ ಬಡಿಸಲು ಸಜ್ಜಾದ ನಾಗರಿಕರು
ದಲಿತ ಚಳವಳಿಯ ಭಾಗವಾಗಿಯೇ ಹುಟ್ಟಿದ ಬಂಡಾಯ ಸಾಹಿತ್ಯ ಸಂಘಟನೆಯೂ ಇಂತಹದ್ದೇ ಒಂದು ಕಿಡಿಯ ಸಾಹಿತ್ಯ ಬೆಳಕಾಗಿತ್ತು. 1979ರ ಮಾರ್ಚ್ 9ರಿಂದ 11ರವರೆಗೆ ಧರ್ಮಸ್ಥಳದಲ್ಲಿ ಆಯೋಜನೆಯಾಗಿದ್ದ ಸಾಹಿತ್ಯ ಸಮ್ಮೇಳನದಲ್ಲಿ ‘ದಲಿತ ವಿಚಾರಗೋಷ್ಠಿ’ಯನ್ನು ಏರ್ಪಡಿಸಬೇಕೆಂದು ಚೆನ್ನಣ್ಣ ವಾಲೀಕಾರ ಅವರು ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಒಂದು ಪತ್ರವನ್ನು ಪ್ರಕಟಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಅಂದಿನ ಕಸಾಪ ಅಧ್ಯಕ್ಷರಾಗಿದ್ದ ಹಂ.ಪ.ನಾಗರಾಜಯ್ಯ, ‘ಸಾಹಿತ್ಯದಲ್ಲಿ ದಲಿತ, ಬಲಿತ ಎಂಬುದೆಲ್ಲ ಇಲ್ಲ’ ಎಂದು ವ್ಯಂಗ್ಯವಾಡಿದ್ದು ಪರ್ಯಾಯ ಸಮಾವೇಶಕ್ಕೂ ಕಾರಣವಾಗಿತ್ತು ಮತ್ತು ಬಂಡಾಯ ಸಾಹಿತ್ಯ ಸಂಘಟನೆ ಹುಟ್ಟಿಕೊಂಡಿತ್ತು. ಅದೇ ವರ್ಷ ಮಾರ್ಚ್ 10 ಮತ್ತು 11ರಂದು ಬೆಂಗಳೂರಿನ ದೇವಾಂಗ ಸಂಘ ಹಾಸ್ಟೆಲ್‌ನಲ್ಲಿ ಬಂಡಾಯ ಸಾಹಿತ್ಯ ಸಮ್ಮೇಳನ ನಡೆದಿತ್ತು. ದಲಿತ- ಬಂಡಾಯ ಚಳವಳಿ ಒಟ್ಟಿಗೆ ಸಾಗಿದ್ದವು.

1990ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ 59ನೇ ಸಾಹಿತ್ಯ ಸಮ್ಮೇಳನದಲ್ಲಿ ’ಶ್ರೇಷ್ಠತೆ’ಯ ಪ್ರಶ್ನೆಯನ್ನು ಮುಂದೆ ತಂದು ಸಮ್ಮೇಳನದ ಅಧ್ಯಕ್ಷತೆಗೆ ಆರ್.ಸಿ.ಹಿರೇಮಠ್ ಅವರ ಆಯ್ಕೆಯನ್ನು ವಿರೋಧಿಸಲಾಗಿತ್ತು. ಆಗ ಬೆಂಗಳೂರಿನಲ್ಲಿ ’ಜಾಗೃತ ಸಾಹಿತ್ಯ ಸಮಾವೇಶ’ ಜರುಗಿತ್ತು. ಗೋಪಾಲಕೃಷ್ಣ ಅಡಿಗ, ಯು.ಆರ್. ಅನಂತಮೂರ್ತಿ, ಯಶವಂತ ಚಿತ್ತಾಲ, ಪಿ.ಲಂಕೇಶ್, ಪೂರ್ಣಚಂದ್ರ ತೇಜಸ್ವಿ, ರಾಮಚಂದ್ರ ಶರ್ಮ, ಶಾಂತಿನಾಥ ದೇಸಾಯಿ, ಚಂದ್ರಶೇಖರ ಕಂಬಾರ ಮೊದಲಾದವರು ಜಾಗೃತ ಸಮಾವೇಶದಲ್ಲಿ ಭಾಗಿಯಾಗಿದ್ದರಿಂದ ಸಾಹಿತ್ಯ ಸಮ್ಮೇಳನಕ್ಕಿಂತ ‘ಜಾಗೃತ ಸಾಹಿತ್ಯ ಸಮಾವೇಶ’ವೇ ಪ್ರಮುಖವಾಗಿ ಗಮನ ಸೆಳೆಯಿತು.
ಪ್ರಸ್ತುತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿರುವ ಮಹೇಶ ಜೋಶಿಯವರು ಆರಂಭದಿಂದಲೂ ವಿವಾದಗಳ ಸೃಷ್ಟಿಯಲ್ಲಿ ಸಕ್ರಿಯರಾದವರು. ಜೋಶಿಯವರು ಕಸಾಪ ಬೈಲಾವನ್ನು ತಿದ್ದಿಕೊಂಡು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆಂಬ ಆರೋಪಗಳನ್ನು ಹಲವು ಸಾಹಿತಿಗಳು ಈ ಹಿಂದೆಯೂ ಮಾಡಿದ್ದಿದೆ. ಅದಕ್ಕಿಂತ ಮುಖ್ಯವಾಗಿ ಜೋಶಿಯವರ ಕೆಲವು ನಿರ್ಧಾರಗಳು ಸಾಹಿತ್ಯ ಪ್ರತಿರೋಧಗಳಿಗೆ ಕಾರಣವಾಗುತ್ತಿದೆ. 2023ರ ಜನವರಿ 6ರಿಂದ 8ರವರೆಗೆ ಹಾವೇರಿಯಲ್ಲಿ ಆಯೋಜನೆಯಾಗಿದ್ದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಾತಿನಿಧ್ಯವನ್ನು ಕಸಾಪ ಕಡೆಗಣಿಸಿತ್ತು ಮತ್ತು ಅಂದಿನ ಆಡಳಿತರೂಢ ಬಿಜೆಪಿ ಪ್ರಣೀತ ಕೋಮು ಅಜೆಂಡಾಕ್ಕೆ ಕುಣಿದಂತೆ ಭಾಸವಾಗಿತ್ತು. ಮುಸ್ಲಿಂ ಬರಹಗಾರರನ್ನು ವೇದಿಕೆಗಳಿಂದ ಹೊರಗಿಡಸಲಾಗಿದೆ ಎಂಬುದು ದೊಡ್ಡ ಚರ್ಚೆ ನಡೆದು ಪ್ರತಿರೋಧದ ಭಾಗವಾಗಿ ಬೆಂಗಳೂರಿನಲ್ಲಿ ‘ಜನಸಾಹಿತ್ಯ ಸಮ್ಮೇಳನ’ ಜರುಗಿತು.

ಈಗ ಜೋಶಿಯವರು ಮಾಡಿರುವ ಯಡವಟ್ಟು ಚಾರಿತ್ರಿಕವಾಗಿ ದಾಖಲಾಗುವ ಎಲ್ಲ ಸಾಧ್ಯತೆಯನ್ನು ತೋರಿದೆ. ಈ ತಪ್ಪಿನ ನೈತಿಕ ಹೊಣೆಯನ್ನು ಜೋಶಿಯವರು ಹೊರಲೇಬೇಕು. ಮಂಡ್ಯದಲ್ಲಿ ಇದೇ ಡಿಸೆಂಬರ್ 20ರಿಂದ 22ರವರೆಗೆ ನಡೆಯುವ ಸಮ್ಮೇಳನದಲ್ಲಿ ಮಳಿಗೆಯ ನೋಂದಣಿ ಮಾಡಿಸಿಕೊಳ್ಳುವ ವಿಚಾರವಾಗಿ ಹಾಕಲಾಗಿದ್ದ ನಿಬಂಧನೆ- ‘ಮಾಂಸಾಹಾರ, ಮದ್ಯ ಮತ್ತು ತಂಬಾಕು ಮಾರಾಟವನ್ನು ನಿಷೇಧಿಸಲಾಗಿದೆ’ ಎಂಬುದು ಹೊಸ ಚರ್ಚೆಯನ್ನೇ ಹುಟ್ಟಿ ಹಾಕಿದೆ. ಬಹುಜನರ ಆಹಾರವನ್ನು ಮಾಂಸ, ಮದ್ಯದೊಂದಿಗೆ ಹೋಲಿಸಿ, ಅದನ್ನು ತುಚ್ಛೀಕರಿಸುವ ಪ್ರವೃತ್ತಿಯ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ‘ಸಸ್ಯಾಹಾರದೊಂದೊಂದಿಗೆ ಮಾಂಸಾಹಾರವನ್ನೂ ನೀಡಬೇಕು, ಜೋಶಿ ಕ್ಷಮೆ ಕೇಳಬೇಕು, ಸರ್ಕಾರ ಮತ್ತು ಕಸಾಪ ಮಾಂಸಾಹಾರವನ್ನು ಒದಗಿಸದಿದ್ದರೆ ಮನೆಗೊಂದು ಕೋಳಿ ಸಂಗ್ರಹ ಅಭಿಯಾನ ನಡೆಸಿ, ಮಂಡ್ಯ ನೆಲದ ಆಹಾರ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತೇವೆ’ ಎಂಬ ಎಚ್ಚರಿಕೆಯನ್ನು ಮಂಡ್ಯ ಜನತೆ ನೀಡಿದ್ದಾರೆ. ಇದು ಮುಂದುವರಿದು, “ಆಹಾರ ಸಂಸ್ಕೃತಿ ಮತ್ತು ಕನ್ನಡ ಸಾಹಿತ್ಯ ಜಗತ್ತು” ಎಂಬ ವಿಚಾರದ ಕುರಿತು ಪ್ರಧಾನ ವೇದಿಕೆಯಲ್ಲಿ ಗೋಷ್ಠಿಯನ್ನು ಏರ್ಪಡಿಸಬೇಕು ಎಂಬ ಆಗ್ರಹವನ್ನೂ ಕೆಲವರು ಮಾಡತೊಡಗಿದ್ದಾರೆ.
ಈ ಪ್ರತಿರೋಧ ಏಕಾಏಕಿ ಹುಟ್ಟಿದ್ದಲ್ಲ. ಬಹುಜನರ ಆಹಾರವನ್ನು ಹೀಯಾಳಿಸುವ, ಮಾಂಸಾಹಾರವನ್ನು ಅಪರಾಧಿಕರೀಸುವ ಸಾಂಸ್ಕೃತಿಕ ರಾಜಕೀಯ ಕಳೆದೊಂದು ದಶಕದಿಂದ ಬಿರುಸಾಗಿದೆ. ಸಂಘಪರಿವಾರ ದೇಶದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದ ಬಳಿಕ ಈ ಪ್ರವೃತ್ತಿ ಹೆಚ್ಚಾಗಿರುವುದನ್ನು ಈ ನಾಡಿನ ಜನ ಗಮನಿಸುತ್ತಿದ್ದರು. ಸಂಗೀತ ನಿರ್ದೇಶಕ ಹಂಸಲೇಖ ಅವರು, ‘ಕುರಿ, ಕೋಳಿ ರಕ್ತದ ಫ್ರೈ’ ಬಗ್ಗೆ ಬಣ್ಣಿಸಿದಾಗ ಮಡಿವಂತಿಕೆಯ ಜನ ಹಂಸಲೇಖ ಅವರ ವಿರುದ್ಧ ಅಸಹನೆ ಹೊರಹಾಕಿದ್ದರು. ‘ಆಹಾರ ನಮ್ಮ ನಮ್ಮ ಹಕ್ಕು’ ಎಂದು ರಾಜ್ಯದ ಬಹುಜನರು ಹಂಸಲೇಖ ಪರ ನಿಂತರು, ಜೊತೆಗೆ ‘ಬಾಡೇ ನಮ್ ಗಾಡು’ ಎಂಬ ಅಭಿಯಾನವನ್ನೂ ನಡೆಸಿದರು. ಸಿದ್ದರಾಮಯ್ಯನವರು ಮಾಂಸ, ಮೀನು ತಿಂದು ದೇವಸ್ಥಾನಕ್ಕೆ ಹೋಗಿದ್ದಾರೆಂದು ಮಾಧ್ಯಮಗಳು ರಾಡಿ ಎಬ್ಬಿಸಿದ್ದು ಹಳೆಯ ಕಥೆ. ಮತ್ತೆ ಮತ್ತೆ ಈ ಪ್ರವೃತ್ತಿ ಪರಿವರ್ತನೆಯಾದಾಗ, “ಹೌದು ನಾನು ತಿಂತೀನಿ, ಏನಿವಾಗ? ನನ್ನ ಆಹಾರ ನನ್ನ ಹಕ್ಕು” ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು ಕೂಡ ಸಂಚಲನ ಮೂಡಿಸಿತ್ತು. ಬಾಡೂಟವನ್ನು ಹೊಲಸೆಂದು ಬಿಂಬಿಸುವ ದುರುದ್ದೇಶದ ಅಜೆಂಡಾಗಳನ್ನು ಹಿಮ್ಮೆಟ್ಟಿಸಲೇಬೇಕಾದ ತುರ್ತು ಈ ಕಾಲಘಟ್ಟದ್ದು. ತಿನ್ನುವ ಅನ್ನದಲ್ಲಿ ರಾಜಕಾರಣ ಶುರುವಾದಾಗ ಸಾಹಿತ್ಯವೂ ಅದಕ್ಕೆ ಸ್ಪಂದಿಸುತ್ತದೆ. ಜೋಶಿಯವರ ಒಂದು ಸಾಲಿನ ಕಿಡಿಗೆ ಇಷ್ಟು ಪ್ರತಿಕ್ರಿಯೆ ಬರಲು ಕಾಲಘಟ್ಟದ ತಲ್ಲಣಗಳೂ ಕಾರಣವಾಗಿವೆ.
ಹಿಂದೆಂದೂ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ಹಾಕಿಲ್ಲ, ಈಗ ಏಕೆ ಈ ಪ್ರಶ್ನೆ ಎಂಬ ವಾದವನ್ನು ಕೆಲವರು ಮಾಡುತ್ತಿದ್ದಾರೆ. ಆದರೆ ಒಂದು ಕಾಲದಲ್ಲಿ ಸಮ್ಮೇಳನದಲ್ಲಿ ಯಾವುದೇ ಆಹಾರವನ್ನು ನೀಡುತ್ತಿರಲಿಲ್ಲ. ಕಾಲದ ಅಗತ್ಯತೆಗಳು, ದೃಷ್ಟಿಕೋನಗಳು ಬದಲಾದಂತೆ ಸಾಹಿತ್ಯ ಸಮ್ಮೇಳನದ ಸ್ವರೂಪಗಳಲ್ಲೂ ಸ್ಥಿತ್ಯಂತರಗಳಾಗಿವೆ. ಇದು ತಿಂದುಂಡು ಹೋಗುವ ಬೇಡಿಕೆಯಂತೂ ಅಲ್ಲ, ಆಹಾರ ರಾಜಕೀಯದ ಹಿಂದಿರುವ ವೈದೀಕರಣದ ಹುನ್ನಾರಗಳನ್ನು ಹತ್ತಿಕ್ಕುವ ಹೆಜ್ಜೆಯೂ ಇದಾಗಿದೆ. ಇದರ ಭಾಗವಾಗಿ ಬಾಡಿನ ಹಾಡುಗಳು, ಕವನಗಳು, ಕತೆಗಳು ಮುನ್ನೆಲೆಗೆ ಬಂದಿವೆ.
ವಿಕಾಸ್ ಆರ್. ಮೌರ್ಯ ಅವರು-
ಬಾಡೇ ನಮ್ ದ್ಯಾವ್ರು
ಮಾರಮ್ಮನೇ ನಮ್ ಲೀಡ್ರು
ಭಗವಾನ್ ಬುದ್ಧ ನಮ್ ಗುರು
ಉಣ್ಣೋದ್ರಲ್ಲಿ ಮೋಜಿನ ಮಾತೇ ಇಲ್ಲ
ಬೇಕಾಬಿಟ್ಟಿ ತಿನ್ನಕ್ಕಿಲ್ಲ
ಹೊಟ್ಟೆಗೆಷ್ಟು ಬೇಕೋ ಅಷ್ಟ್ ಸಾಕು
ಹೊಟ್ಟೆಗಿಲ್ದೋರ್ ಸಂಕ್ಟಾನು ಬೇಕು
ನೀನೇ ಯೇಳು ಹಿಂಗಿದ್ಮೇಲೆ…
ಮತ್ಯಾಕ್ ನನ್ತಟ್ಟೆ ಮ್ಯಾಲೆ ನಿನ್ ಕಣ್ಣು
ತೆಗ್ದು ಬಿಸಾಕು ತಲೇಲಿರೋ ಹುಣ್ಣು
ಎಂದು ಬರೆದಿದ್ದಾರೆ. ಈ ಹಿಂದೆ ವಿಕಾಸ್ ಅವರೇ ಬರೆದಿದ್ದ,
‘ಕನ್ನಡವೆಂದರೆ
ಕೊರಬಾಡು ಇದ್ದಂಗೆ,
ಇರೋ ಮೂರು ಗೇಣೂ ದಾಟಿ
ಸ್ವರ್ಗನೇ ಕಂಡಂಗೆ’
ಗಂಟು ಮೂಳೆ ಕಡಿದು
ತುಪ್ಪವ ಸೊರಕ್ ಅಂತ
ಚೀಪಿದಂಗೆ
ಬೆಳ್ಳುಳ್ಳಿ ಶುಂಠಿ ಬೆರಸಿ
ಬೇಯಿಸಿದ ಸಪ್ಪೆ ಬಾಡಿನಂಗೆ’
ಎಂಬ ಕವನ ಕೂಡ ಆಹಾರ ಸಾಂಸ್ಕೃತಿಕ ರಾಜಕಾರಣದ ಭಾಗವೇ ಆಗಿದೆ. ಪಂಡಿತ್ ಜಯಕುಮಾರ್ ಹಾದಿಗೆ ಅವರು ‘ಸಸ್ಯಾಹಾರಿ ಸಮ್ಮೇಳ’ ಎಂಬ ಕವಿತೆಯನ್ನು ಬರೆದು,
ಸಮ್ಮೆಳನದಲ್ಲಿ
ಇಲ್ಲವಂತೆ ಮಾಂಸಾಹಾರ
ಅಲ್ಲೇನಿದ್ದರೂ ಸನ್ಮಾನಿತರಿಗಷ್ಟೆ
ಪಲಪುಷ್ಪದ ಹಾರ
ಎಂದು ಕುಟುಕಿದ್ದಾರೆ. ಇದರ ಜೊತೆಗೆ ಆಹಾರ ರಾಜಕೀಯದ ಬಗ್ಗೆ ಗಂಭೀರ ಚರ್ಚೆಯೂ ಆರಂಭವಾಗಿದೆ.
“ಕವಿ ನೆರೂಡ ‘ನೀವು ಎಲ್ಲ ಹೂಗಳನ್ನು ಕತ್ತರಿಸಿದರೂ ವಸಂತನ ಆಗಮನವನ್ನು ತಡೆಯಲು ಸಾಧ್ಯವಿಲ್ಲ’ ಎಂದು ಹೇಳುತ್ತಾನೆ. ಹಾಗೆಯೇ ಬ್ರಾಹ್ಮಣವಾದಿಗಳು ಎಷ್ಟೇ ತಲೆಕೆಳಗಾಗಿ ನಿಂತರೂ ಮಾಂಸದೂಟದ ಆಹಾರ ಸಂಸ್ಕೃತಿಯನ್ನು ಹತ್ತಿಕ್ಕಲು ಸಾಧ್ಯವೇ ಇಲ್ಲ. ಸಸ್ಯಾಹಾರವನ್ನು ಮುಂದಿಟ್ಟು ಶ್ರೇಷ್ಠತೆಯ ಮಾತನಾಡುವ ವಿಘ್ನ ಸಂತೋಷಿಗಳು ಸಂಪೂರ್ಣವಾಗಿ ತಿರಸ್ಕಾರಕ್ಕೆ ಒಳಗಾಗುತ್ತಾರೆ. ಇದರಲ್ಲಿ ಅನುಮಾನವಿಲ್ಲ. ಇದು ಹೊಸದೂ ಅಲ್ಲ. ಈ ಸಾಹಿತ್ಯ ಸಮ್ಮೇಳನಗಳಲ್ಲಿ ಕಟ್ಟುವಂತಾದ್ದು, ಚರ್ಚಿಸುವಂತಾದ್ದು ಎಂತದೂ ನಡೆಯಲ್ಲ; ಅದು ಬೊಗಳೆ, ಲೊಳಲೊಟ್ಟೆ ಎಂದು ಜಗಜ್ಜಾಹೀರಾಗಿರುವ ಸಂಗತಿ. ಆದರೂ ಈ ಚರ್ಚೆ ಯಾಕೆ ಶುರುವಾಯಿತು ಎಂದು ಗೊತ್ತಿದ್ದೂ ಕೆಲವರು ಸುಭಗರಂತೆ ‘ಬರೇ ಬಾಡೂಟದ ಚರ್ಚೆಯಲ್ಲಿ ಕನ್ನಡ ಪ್ರಶ್ನೆಗೆ ಹಿನ್ನಡೆಯಾಗಿದೆ’ ಎಂದು ಊಳಿಡುತ್ತಿರುವುದು ಬಾಲಿಷತನಕ್ಕಿಂತಲೂ ಕಡೆಯಾಗಿದೆ. ಇವರದು ಬಾಯಿ ಬಿಟ್ಟರೆ ಬಣ್ಣಗೇಡು ಎನ್ನುವ ಸ್ಥಿತಿಯಾಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ ಚಿಂತಕ ಬಿ.ಶ್ರೀಪಾದ ಭಟ್.
“ಕಾಡಿನಲ್ಲಿ ಹುಲಿಗಳ ಸಂತತಿ ನಾಶವಾಗಿಬಿಟ್ಟರೆ ಕಾಡಿನ ಸಸ್ಯಸಂಪತ್ತು ಹಾಗೂ ನೀರನ್ನು ಜಿಂಕೆಗಳು ಬರಿದು ಮಾಡಿ ಮುಗಿಸಿಬಿಡುತ್ತವೆ. ಸಸ್ಯಾಹಾರ ಹಾಗೂ ಮಾಂಸಾಹಾರ ಅನ್ನೋದು ಪ್ರಕೃತಿಯ ಜೈವಿಕ ಸಮತೋಲನದ ಒಂದು ಭಾಗ. ಕನ್ನಡ ಸಾಹಿತ್ಯದಲ್ಲಿ ಮಾಂಸಾಹಾರ ಅನ್ನೋ ವಿಚಾರ ಈಗಲಾದರೂ ಗಂಭೀರ ಚರ್ಚೆಗೆ ಒಳಪಡಲಿ. ಕುಂ.ವೀ.ಯವರ ದೇವರ ಹೆಣ ಕಥೆಯಾಗಲಿ, ಸಂಕ್ರಾಂತಿಯ ರುದ್ರನ ಅಪ್ಪ ಬಾಡು ಬಿಟ್ಟು ಶರಣನಾಗುವ ನಾಟಕಕ್ಕೆ ಒಳಗಾಗದೆ ಇರುವುದಾಗಲಿ, ಸಾಹಿತ್ಯದ ದೇಸಿತನದ ಭಾಗಗಳೇ. ಕೆ.ಬಿ. ಸಿದ್ದಯ್ಯನವರ ಕಾವ್ಯದಲ್ಲಿ ತನ್ನ ಜನಾಂಗದ ಹಸಿವಿಗೆ ಖಂಡ ಸಿಗುವ ರೂಪಕಗಳು ಕಾಣಸಿಗುತ್ತವೆ. ಮಂಟೇಸ್ವಾಮಿ ಕಾವ್ಯವು ಇಂತಹ ಮಡಿಮೈಲಿಗೆಗಳನ್ನು ಪ್ರಶ್ನೆ ಮಾಡುತ್ತದೆ. ಮಂಟೇಸ್ವಾಮಿ ಜಾತ್ರೆ ನಿಜಕ್ಕೂ ಸಸ್ಯಾಹಾರಿಗಳು, ಮಾಂಸಾಹಾರಿಗಳು ಭಿನ್ನಭೇದವಿಲ್ಲದೆ ಅವರವರ ಇಚ್ಛೆಯಲ್ಲಿ ಕೂತುಣ್ಣುವ ಪ್ರಕ್ರಿಯೆಯೆ ನಮಗೆ ನೀತಿಪಾಠದಂತಿದೆ” ಎನ್ನುತ್ತಾರೆ ಬರಹಗಾರ ಅಪೂರ್ವ ಡಿಸಿಲ್ವಾ.
ಇದನ್ನೂ ಓದಿರಿ: ಆಹಾರದ ಸ್ವಾತಂತ್ರ್ಯವನ್ನು ಮನ್ನಿಸದ ಸಮಾಜದಲ್ಲಿ ಅರ್ಥಪೂರ್ಣ ಡೆಮಾಕ್ರಸಿಯಿದೆ ಎನ್ನಲಾಗದು
ಹೌದು, ನಮ್ಮ ಸಾಹಿತ್ಯಕ್ಕೂ ಮಾಂಸಾಹಾರಕ್ಕೂ ಅವಿನಾಭಾವ ಸಂಬಂಧವಿದೆ. ನಮ್ಮ ಸಾಹಿತ್ಯದೊಳಗೆ ಮಾಂಸಾಹಾರವೇ ಹಾಸುಹೊಕ್ಕಿದೆ. ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಬಾಡಿನ ಗಮಲಿದೆ, ತೇಜಸ್ವಿಯವರ ಕೃತಿಗಳಲ್ಲಿ ಶಿಕಾರಿಯ ಸೌಂದರ್ಯವಿದೆ. ಸಾರಾ ಅಬುಬೂಕರ್ ಅಂತಹ ದೈತ್ಯ ಕತೆಗಾರ್ತಿಯ ಕಥೆಗಳು ಮೀನಿನ ಸಾರಿನ ಪ್ರಸ್ತಾಪವಿಲ್ಲದೆ ಮುಗಿಯುವುದೇ ಅಪರೂಪ. ಕನ್ನಡ ಸಾಹಿತ್ಯದಲ್ಲಿ ಸಂಚಲನವನ್ನೇ ಮೂಡಿಸಿದ ‘ಹೊಲೆಮಾದಿಗರ ಹಾಡು’ ಕವನ ಸಂಕಲನದಲ್ಲಿ ಸಿದ್ದಲಿಂಗಯ್ಯನವರು ‘ಒಂದು ಮೂಳೆಯ ಹಾಡು’ ಎಂಬ ಕವನವನ್ನೇ ಬರೆದು,
“ಸೌದೆ ಸಿಗದಂಗ್ ಸಿಗಿತಿನಿ, ಸಾವ್ಕಾರಿ ಮಯ್ಯ
ಕಳ್ಳು, ಪಚ್ಚಿ ಬಗಿತಿನಿ, ಕುಟ್ತೀನಿ
ಗಂಟ್ಮೋಳೆ ಕೊಬ್ಬ”
ಎಂಬ ಸಾಲುಗಳ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಾರೆ. ತಮ್ಮ ಆಹಾರ ಸಂಸ್ಕೃತಿಯನ್ನು ರೂಪಕವಾಗಿಸಿ, ಕಾವ್ಯವನ್ನು ಬೆರಗುಗೊಳಿಸುತ್ತಾರೆ. ಇದು ಪ್ರಾತಿನಿಧಿಕವಾಗಿ ಕೆಲವು ಉದಾಹರಣೆಗಳಷ್ಟೇ. ಮಾಂಸಾಹಾರ ಸಂಸ್ಕೃತಿಯು ಈ ದೇಶದ ಬಹುಜನರದ್ದು. ಕರ್ನಾಟಕದಲ್ಲಿ ಶೇ. 79.1ರಷ್ಟು ಜನರು ಮಾಂಸಾಹಾರ ಸೇವಿಸುತ್ತಾರೆಂದು ಇಂಡಿಯಾ ಟುಡೆಯ ಅಧ್ಯಯನ ಹೇಳುತ್ತದೆ. ಇಷ್ಟು ದೊಡ್ಡ ಪ್ರಮಾಣದ ಜನ ಸಮೂಹದ ಆಹಾರ ಕ್ರಮದ ಮೇಲೆ ದಾಳಿ ಮಾಡುವ ಸಾಂಸ್ಕೃತಿಕ ರಾಜಕೀಯದ ವಿರುದ್ಧ ಜನ ಜಾಗೃತರಾಗಿರುವುದು, ಆಹಾರ ಸಂಸ್ಕೃತಿ ಮತ್ತು ಕನ್ನಡ ಸಾಹಿತ್ಯದ ಬಗ್ಗೆ ಗಂಭೀರ ಚರ್ಚೆ ಆರಂಭವಾಗಿರುವುದು ಸ್ವಾಗತಾರ್ಹವಾಗಿದೆ.

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.