ಕೇಂದ್ರ ಹಣಕಾಸು ಸಚಿವಾಲಯದಲ್ಲಿ ಕಂದಾಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ 1990ನೇ ಸಾಲಿನ ರಾಜಸ್ಥಾನ ಕೇಡರ್‌ನ ಐಎಎಸ್ ಅಧಿಕಾರಿ ಸಂಜಯ್ ಮಲ್ಹೋತ್ರಾ ಅವರನ್ನು ನೂತನ ಆರ್‌ಬಿಐ ಗವರ್ನರ್ ಆಗಿ ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶಿಸಿದೆ.
ಸಂಜಯ್ ಮಲ್ಹೋತ್ರಾ ಅವರು ಹಾಲಿ ಗವರ್ನರ್ ಶಕ್ತಿಕಾಂತ್ ದಾಸ್ ಅವರಿಂದ ನಾಳೆ(ಡಿ.10) ಅಧಿಕಾರ ಸ್ವೀಕರಿಸಲಿದ್ದಾರೆ.
ಶಕ್ತಿಕಾಂತ್ ದಾಸ್ ಡಿಸೆಂಬರ್ 2018 ರಲ್ಲಿ ಆರ್‌ಬಿಐ ಗವರ್ನರ್ ಆಗಿ ನೇಮಕಗೊಂಡರು. ಆಗಿನ ಆರ್‌ಬಿಐ ಗವರ್ನರ್ ಉರ್ಜಿತ್ ಪಟೇಲ್ ಅವರು ತಮ್ಮ ಅಧಿಕಾರಾವಧಿ ಮುಗಿಯುವ ಮೊದಲು ರಾಜೀನಾಮೆ ನೀಡಿದ್ದರು. ನಂತರ 2021 ರ ಡಿಸೆಂಬರ್‌ನಲ್ಲಿ ದಾಸ್ ಅವರಿಗೆ ಮೂರು ವರ್ಷಗಳ ಹೆಚ್ಚುವರಿ ಅವಧಿಯನ್ನು ವಿಸ್ತರಿಸಲಾಯಿತು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಅತಿಯಾದ ಮೊಬೈಲ್ ಬಳಕೆ ಚಟ ಮಾತ್ರವಲ್ಲ ಮಾರಕ ರೋಗ
ಮಲ್ಹೋತ್ರಾ ಅವರು ರಾಜಸ್ಥಾನ ಕೇಡರ್‌ನ 1990 ಸಾಲಿನ ಭಾರತೀಯ ಆಡಳಿತ ಸೇವಾ ಅಧಿಕಾರಿ. ಕಾನ್ಪುರದ ಐಐಟಿಯಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಜಿನಿಯರಿಂಗ್ ಪದವಿ ಮತ್ತು ಅಮೆರಿಕದ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ನೀತಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ತಮ್ಮ 33 ವರ್ಷಗಳ ಅನುಭವದಲ್ಲಿ ಮಲ್ಹೋತ್ರಾ ಅವರು ವಿದ್ಯುತ್, ಹಣಕಾಸು, ತೆರಿಗೆ, ಮಾಹಿತಿ ತಂತ್ರಜ್ಞಾನ ಮತ್ತು ಗಣಿಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಈ ಹಿಂದೆ ಅವರು ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿದ್ದರು.
