ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಮಾಜಿ ವಿದೇಶಾಂಗ ಸಚಿವ ಎಸ್‌ಎಂ ಕೃಷ್ಣ ನಿಧನದ ಹಿನ್ನೆಲೆ ರಾಜ್ಯ ಸರ್ಕಾರವು ಮೂರು ದಿನಗಳ ಕಾಲ ಶೋಕಾಚರಣೆಯನ್ನು ಘೋಷಿಸಿದೆ. ನಾಳೆ ಸರ್ಕಾರಿ ರಜೆಯನ್ನು ಘೋಷಿಸಲಾಗಿದೆ.
ಎಸ್‌ಎಂ ಕೃಷ್ಣ ಅವರ ಅಂತ್ಯಕ್ರಿಯೆಯು ಅವರ ಹುಟ್ಟುರಾದ ಮಂಡ್ಯ ಜಿಲ್ಲೆಯಲ್ಲಿ ಬುಧವಾರ (ಡಿಸೆಂಬರ್ 11) ನಡೆಯಲಿದ್ದು, ಡಿಸೆಂಬರ್ 10ರಿಂದ ಡಿಸೆಂಬರ್ 12ರವರೆಗೂ ಮೂರು ದಿನಗಳು ಶೋಕವನ್ನು ಆಚರಿಸಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಇದನ್ನು ಓದಿದ್ದೀರಾ? ಎಸ್‌ಎಂ ಕೃಷ್ಣ ನಿಧನ: ಸಿಎಂ ಸಂತಾಪ
“ಈ ಅವಧಿಯಲ್ಲಿ ಯಾವುದೇ ಸಾರ್ವಜನಿಕ ಮನೋರಂಜನಾ ಕಾರ್ಯಕ್ರಮಗಳು ಇರುವುದಿಲ್ಲ. ರಾಜ್ಯ ಸರ್ಕಾರದ ಎಲ್ಲಾ ಕಟ್ಟಡಗಳು ಮೇಲೆ ರಾಷ್ಟ್ರ ಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸಲಾಗುವುದು” ಎಂದು ಸರ್ಕಾರ ಹೇಳಿದೆ.

92 ವರ್ಷ ವಯಸ್ಸಿನ ಎಸ್‌ಎಂ ಕೃಷ್ಣ ಅವರು ವಯೋಸಹಜ ಕಾಯಿಲೆಯಿಂದ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಇಂದು (ಡಿಸೆಂಬರ್ 10) ನಸುಕಿನ ಜಾವ 2:30ರ ಸುಮಾರಿಗೆ ನಿಧನರಾದರು.
