ರಾಜ್ಯ ಬಿಜೆಪಿಯಲ್ಲಿ ಮನೆಯೊಂದು ಮೂರು ಬಾಗಿಲು ಎಂಬಂತ ಪರಿಸ್ಥಿತಿ ಉಂಟಾಗಿದೆ. ಇಡೀ ರಾಜ್ಯ ಬಿಜೆಪಿಯ ಜವಾಬ್ದಾರಿ, ಹೊಣೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಅವರ ಪುತ್ರ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಮೇಲಿದೆ. ಆದರೂ, ಅವರು ತಮ್ಮದೇ ನಿಕಟವರ್ತಿಗಳ ಪಡೆ ಕಟ್ಟಿಕೊಂಡಿದ್ದಾರೆ. ಸ್ವ-ಹಿತಾಸಕ್ತಿಯ ರಾಜಕಾರಣ ಮಾಡುತ್ತಿದ್ದಾರೆ ಎಂಬ ಆರೋಪಗಳಿವೆ. ಯಡಿಯೂರಪ್ಪ ಮತ್ತು ಅವರ ಪುತ್ರನ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿರುವ ಶಾಸಕ ಬಸನಗೌಡ ಯತ್ನಾಳ್ ಬಂಡಾಯ ಬಣ ಕಟ್ಟಿಕೊಂಡಿದ್ದಾರೆ. ಅಲ್ಲದೆ, ಶಾಸಕ ಎಸ್.ಟಿ ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ಬಿಜೆಪಿಯಿಂದ ಒಂದು ಕಾಲು ಹೊರಗಿಟ್ಟಿದ್ದಾರೆ. ಬಿಜೆಪಿಯಲ್ಲಿದ್ದುಕೊಂಡೇ ಬಿಜೆಪಿ ವಿರುದ್ಧ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಪಾಳಯದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ.
ಈ ಬಣ ರಾಜಕಾರಣ, ಬಿಜೆಪಿ ನಾಯಕರ ವಿರುದ್ಧ ಬಹಿರಂಗ ಹೇಳಿಕೆ, ವಾಗ್ದಾಳಿ ನಡೆಸುವುದನ್ನು ತಡೆಯಲು ಬಿಜೆಪಿ ಹೈಕಮಾಂಡ್ ಭಾರೀ ಕಸರತ್ತು ನಡೆಯುತ್ತಿದೆ. ಯತ್ನಾಳ್‌ಗೆ ಶೋಕಾಸ್ ನೋಟೀಸ್‌ಅನ್ನೂ ಕೊಟ್ಟಿದೆ. ಉಚ್ಚಾಟನೆಯಂತಹ ಕ್ರಮಕ್ಕೆ ಶಿಫಾರಸು ಮಾಡುವುದೂ ಮುಂದುವರೆದಿದೆ.
ಆದಾಗ್ಯೂ, ಬಿಜೆಪಿಯೊಳಗೆ ಆಂತರಿಕ ಕಲಹ ಕೊನೆಗೊಂಡಿಲ್ಲ. ಬಂಡಾಯ, ಭಿನ್ನಮತವು ಸೋಮವಾರ ಆರಂಭವಾಗಿರುವ ಚಳಿಗಾಲದ ಅಧಿವೇಶನದಲ್ಲೂ ಕಾಣಿಸಿಕೊಂಡಿದೆ. ಆಡಳಿತಾರೂಢ ಕಾಂಗ್ರೆಸ್‌ಅನ್ನು ಇಕ್ಕಟ್ಟಿಗೆ ಸಿಲುಕಿಸಲು ನಾನಾ ತಂತ್ರಗಳನ್ನು ಹೆಣೆದಿದ್ದ ಬಿಜೆಪಿಗೆ ತನ್ನೊಳಗಿನ ಬಣ ರಾಜಕಾರಣವೇ ಮುಳುವಾಗಿದೆ. ಸಮನ್ವಯದ ಕೊರತೆಯಿಂದಾಗಿ ಬಿಜೆಪಿಯೇ ಇಕ್ಕಟ್ಟಿಗೆ ಸಿಲುಕಿಕೊಂಡಿದೆ.
ಸೋಮವಾರ ಅಧಿವೇಶನ ಆರಂಭವಾದಾಗ, ವಕ್ಫ್ ವಿವಾದ ಕುರಿತ ಚರ್ಚೆಗಾಗಿ ಬಿಜೆಪಿ ಆಗ್ರಹಿತ್ತು. ವಿಪಕ್ಷ ನಾಯಕ ಆರ್ ಅಶೋಕ್, ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ, ವಿಜಯೇಂದ್ರ ಸೇರಿದಂತೆ ಹಲವು ಬಿಜೆಪಿಗರು ವಕ್ಫ್ ವಿಷಯದ ಚರ್ಚೆಗೆ ಪಟ್ಟು ಹಿಡಿದಿದ್ದರು. ಆದರೆ, ಯತ್ನಾಳ್ ಕಾರಣದಿಂದಾಗಿ ಬಿಜೆಪಿಗರ ಪಟ್ಟು ಸಡಿಲಗೊಂಡು, ಬಿಜೆಪಿ ನಾಯಕರು ಪೇಚಿಗೆ ಸಿಲುಕೊಂಡಿದ್ದಾರೆ.
ಆರಂಭದಲ್ಲಿ, ವಕ್ಫ್ ವಿಚಾರವನ್ನು ಚರ್ಚಿಸಲು ಸರ್ಕಾರ ಸಿದ್ಧವಿದೆ. ಹಲವು ಪ್ರಮುಖ ಚರ್ಚೆಗಳ ಬಳಿಕ, ವಕ್ಫ್ ಕುರಿತ ಚರ್ಚೆಗೆ ಅವಕಾಶ ನೀಡುತ್ತೇವೆಂದು ಸ್ಪೀಕರ್ ಯು.ಟಿ ಖಾದರ್ ಭರವಸೆ ನೀಡಿದರು. ಬಿಜೆಪಿಗರ ಮನವೊಲಿಸಲು ಯತ್ನಸಿದರು. ಆದಾಗ್ಯೂ, ಅಶೋಕ್ ಆದಿಯಾಗಿ ಹಲವರು ಪಟ್ಟು ಬಿಡಲಿಲ್ಲ.
ಆದರೆ, ಬಿಜೆಪಿಗರ ಪಟ್ಟಿಗೆ ಪ್ರತಿಪಟ್ಟು ಹಾಕಿದ ಯತ್ನಾಳ್, ಬಿಜೆಪಿ ನಾಯಕರನ್ನು ಕಕ್ಕಾಬಿಕ್ಕಿಯಾಗುವಂತೆ ಮಾಡಿದ್ದಾರೆ. ವಕ್ಫ್ ವಿಚಾರದ ಬಗ್ಗೆ ಆರ್ ಅಶೋಕ್ ಮಾತನಾಡುವಾಗಲೇ ಮಧ್ಯ ಪ್ರವೇಶಿಸಿದ ಯತ್ನಾಳ್, ‘ಪಂಚಮಸಾಲಿ ಲಿಂಗಾಯತ ಸಮುದಾಯ ಪ್ರತಿಭಟನೆ ನಡೆಸಲು ಉದ್ದೇಶಿಸಿದೆ. ಆದರೆ, ಜಿಲ್ಲಾಡಳಿತ ಅವಕಾಶ ನೀಡದೆ ನಿರ್ಬಂಧ ಹೇಳಿದೆ. ಪ್ರತಿಭಟನೆಗೆ ಅವಕಾಶ ನೀಡಬೇಕು’ ಎಂದು ಆಗ್ರಹಿಸಿದೆ. ಯತ್ನಾಳ್ ಮತ್ತು ಪ್ರತಿಪಕ್ಷದ ಉಪನಾಯಕ ಅರವಿಂದ್ ಬೆಲ್ಲದ್, ಸಿ.ಸಿ ಪಾಟೀಲ್ ಮುಂತಾದವರು ದಿಢೀರನೆ ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು.
ಈ ವರದಿ ಓದಿದ್ದೀರಾ?: ಬಿಜೆಪಿ ಶಾಸಕ ಸೋಮಶೇಖರ್, ಹೆಬ್ಬಾರ್ ಅಮಾನತಿಗೆ ಶಿಫಾರಸು!
ಇದು, ಆರ್ ಅಶೋಕ್, ಅಶ್ವತ್ಘ ನಾರಾಯಣ, ವಿಜಯೇಂದ್ರ ಸೇರಿದಂತೆ ಬಿಜೆಪಿಗರಿಗೆ ಮುಜುಗರ ಉಂಟಾಗುವಂತೆ ಮಾಡಿತು. ಪ್ರತಿಭಟನೆಗಳಿದ ಯತ್ನಾಳ್ ತಂಡವನ್ನು ಸುಮ್ಮನಿರಿಸಲಾಗದೆ, ಮೂವರೂ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡು ಮೌನಕ್ಕೆ ಶರಣಾದರು.
ಬಿಜೆಪಿಯಲ್ಲಿಯೇ ಸಮನ್ವಯ ಇಲ್ಲದೇ ಇರುವುದರ ಬಗ್ಗೆ ಬಿಜೆಪಿಗರ ವಿರುದ್ಧ ಹರಿಹಾಯ್ಡ ಸಚಿವ ಕೃಷ್ಣ ಬೈರೇಗೌಡ, “ಬಿಜೆಪಿಯಲ್ಲಿ ಎರಡು ಬಣಗಳಿವೆ. ಒಂದು ಬಣ ಸದನದ ಬಾವಿಯಲ್ಲಿದೆ. ಮತ್ತೊಂದು ಬಣ ಆಸನಗಳಲ್ಲಿದೆ. ಇವರಲ್ಲಿ ಯಾರನ್ನು ಪರಿಗಣಿಸಬೇಕು. ಯಾವುದರ ಬಗ್ಗೆ ಚರ್ಚೆ ಮಾಡಬೇಕು” ಎಂದು ಕುಟುಕಿದರು.