ತಿರುಮಲ ದೇವಾಲಯ ಪ್ರವೇಶಿಸಿದ ದಲಿತರು; ಅಧಿಕಾರಿಗಳ ಸಮ್ಮುಖದಲ್ಲಿ ಮುಕ್ತ ಅವಕಾಶಕ್ಕೆ ಒಪ್ಪಿದ ಗ್ರಾಮಸ್ಥರು

Date:

Advertisements

ದಲಿತರ ಮೇಲೆ ಆಗುತ್ತಿರುವ ದೌರ್ಜನ್ಯ, ಶೋಷಣೆ ಹಾಗೂ ಅಸ್ಪೃಶ್ಯತೆಗಳು ಇನ್ನೂ ಆಚರಣೆಯಲ್ಲಿವೆ. ತಳಸಮುದಾಯಕ್ಕೆ ಸೇರುವ ಜನರು ದೇವಾಲಯಗಳಿಗೆ ಪ್ರವೇಶ ನಿರಾಕರಿಸುತ್ತಿರುವ ಘಟನೆಗಳನ್ನು ಪ್ರತಿದಿನ ನೋಡುತ್ತ, ಕೇಳುತ್ತಿದ್ದೇವೆ. ಅಂತೆಯೇ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ಇಂಥದ್ದೊಂದು ಘಟನೆ ನಡೆದಿದೆ.

ಚಿಕ್ಕಮಗಳೂರು ತಾಲೂಕಿನ ಬೆಳವಾಡಿ ಸಮೀಪದಲ್ಲಿರುವ ನರಸೀಪುರ ಗ್ರಾಮದಲ್ಲಿ ಸುಮಾರು 250-300 ವರ್ಷದಿಂದ ಜನರು ವಾಸಮಾಡುತ್ತಿದ್ದಾರೆ. ಅದರಲ್ಲಿ ಕುರುಬ ಸಮುದಾಯಕ್ಕೆ ಸೇರಿದ 250-300 ಕುಟುಂಬದವರು ಹಾಗೂ ಆದಿ ಕರ್ನಾಟಕಕ್ಕೆ ಸೇರಿದ 13-15 ಕುಟುಂಬದವರು ಮೂಲನಿವಾಸಿಗಳಾಗಿ ವಾಸ ಮಾಡುತ್ತಿದ್ದಾರೆ. ಈ ನರಸೀಪುರ ಗ್ರಾಮದಲ್ಲಿ ಬೀರಪ್ಪ, ಲಕ್ಷ್ಮಿಗುರು, ಬೂತಪ್ಪ, ಕೊಟ್ಟಿಗೆಳಮ್ಮ, ಹಿರೇಬಿದರಮ್ಮ, ದೊಡ್ಡಮ್ಮ, ಚಿಕ್ಕಮ್ಮ, ಕೆಂಚರಾಯಸ್ವಾಮಿ, ತಿರುಮಲ ಸೇರಿದಂತೆ 9 ದೇವಸ್ಥಾನಗಳಿವೆ. ಅದರಲ್ಲಿ ಗ್ರಾಮಕ್ಕೆ ಮೂಲ ದೇವಸ್ಥಾನ ತಿರುಮಲ ವೆಂಕಟಸ್ವಾಮಿ ದೇವಾಲಯವಾಗಿದೆ.

ನರಸೀಪುರ ಗ್ರಾಮದಲ್ಲಿ ನಡೆದ ಘಟನೆ ಏನು? ಈ ವರ್ಷದ ಕೊನೆ ತಿಂಗಳಾದ ಡಿಸೆಂಬರ್ 3ರಂದು ಕುರುಬ ಸಮುದಾಯಕ್ಕೆ ಸೇರಿದ ಜನರು ಗ್ರಾಮದ ಮೂಲ ದೇವಸ್ಥಾನವಾಗಿರುವ ತಿರುಮಲ ದೇವಾಲಯದ ಒಳಗೆ ದಲಿತ ಸಮುದಾಯದ ಜನರನ್ನೂ ಪ್ರವೇಶ ಮಾಡಲು ಬಿಡುವುದಿಲ್ಲ. ಹಾಗೆಯೇ ದಲಿತ ಸಮುದಾಯಕ್ಕೆ ಸೇರುವ ಹೇಮಂತ್ ಕುಮಾರ್, ಮಧು ದಿಲೀಪ್ ಹಾಗೂ ಇತರ ಯುವಕರು ತಿರುಮಲ ದೇವಾಲಯದ ಒಳಗೆ ಕಾನೂನು ಬದ್ಧವಾಗಿ ಅಧಿಕಾರಿಗಳ ನೇತೃತ್ವದಲ್ಲಿ ಪ್ರವೇಶ ಮಾಡಿದರು. ಇದರಿಂದ ಎರಡು ದಿನಗಳ ಕಾಲ ತಿರುಮಲ ದೇವಾಲಯಕ್ಕೆ ಪೂಜೆ ಮಾಡಲಿಲ್ಲ ಎಂಬುದರ ಕುರಿತು ಎಲ್ಲೆಡೆ ಸುದ್ದಿಯಾಗಿತ್ತು.

Advertisements
Screenshot 2024 12 10 12 33 23 67 965bbf4d18d205f782c6b8409c5773a4

ಈ ಘಟನೆಯ ಕುರಿತು ಕುರುಬ ಸಮುದಾಯದ ಗ್ರಾಮಸ್ಥರು ಏನು ಹೇಳುತ್ತಾರೆ? ಅಜ್ಜ ಮುತ್ತಜ್ಜನ ಕಾಲದಿಂದ ನಾವು ನರಸೀಪುರ ಗ್ರಾಮದಲ್ಲಿ ವಾಸವಿದ್ದೇವೆ. ಎರಡೂ ಸಮುದಾಯಗಳಲ್ಲಿ ಒಗ್ಗಟ್ಟು, ಸೌಹಾರ್ದದಿಂದ ಕೂಡಿ ಬಾಳುತ್ತಿದ್ದೇವೆ. ಆಚರಣೆ, ಸಂಪ್ರದಾಯ, ಪೂಜೆ ಪುರಸ್ಕಾರ ಮಾಡುತ್ತಿದ್ದೇವೆ. ಇವತ್ತಿಂದ ಅಲ್ಲ ತಲತಲಾಂತರದಿಂದ ದಲಿತ ಸಮುದಾಯಕ್ಕೆ ಸೇರಿದ ಜನರು ದೂರ ಉಳಿಯುವ ಪದ್ಧತಿಯನ್ನು ಅವರೇ ಬೆಳೆಸಿಕೊಂಡು ಬಂದಿರುವುದು. ಮೊದಲಿನಿಂದಲೂ ದೇವಸ್ಥಾನದ ಒಳಗೆ ಪ್ರವೇಶದಿಂದ ದೂರ ಉಳಿಯುತ್ತ ಬಂದಿದ್ದಾರೆ. ನಮಗೆ ಕಾನೂನು ತಿಳಿದ ನಂತರ ನಾವು ಯಾವುದನ್ನೂ ವಿರೋಧಿಸಲು ಹೋಗಿಲ್ಲ, ಎಲ್ಲರೂ ಸೇರಿ ದೇವಸ್ಥಾನದ ಜಾತ್ರೆ, ಉತ್ಸವ, ಹಬ್ಬ ಹರಿದಿನವನ್ನು ಮಾಡುತ್ತಿದ್ದೇವೆ.

“ದಲಿತ ಸಮುದಾಯಕ್ಕೆ ಸೇರಿದ ಯುವಕರು ಅಂಬೇಡ್ಕರ್ ಭವನ ನಿರ್ಮಿಸಲು 7 ವರ್ಷದ ಹಿಂದೆಯೇ ಊರಿನ ಜನರ ಮುಂದೆ ಕೇಳಿದಾಗ ಅವರಿಗೆ ದೇವಸ್ಥಾನದಿಂದ 50 ಮೀಟರ್ ದೂರದಲ್ಲಿ ಜಾಗ ನೀಡಿದ್ವಿ, ಆ ಜಾಗದಲ್ಲಿ ಅವರು ಅಂಬೇಡ್ಕರ್ ಇರುವ ಭಾವಚಿತ್ರದ ಫಲಕವನ್ನು ಹಾಕಿದ್ದರು. ಜಾಗ ಗುರುತಿಸಿ ಕೊಟ್ಟು ಅವತ್ತಿನ ದಿನ ಎರಡೂ ಸಮುದಾಯದ ಊರಿನ ಜನರು ಸಂತೋಷದಿಂದ ಪೂಜೆಗೆ ಭಾಗವಹಿಸಿದ್ವಿ, ಯಾವುದೇ ಜಾತಿ ನಿಂದನೆ, ಜಗಳ, ಹಲ್ಲೆ ಮಾಡುವುದಾಗಲಿ ಅಂತಹ ಘಟನೆ ಈವರೆಗೂ ಆಗಿಲ್ಲ” ಎಂದು ಕುರುಬ ಸಮುದಾಯದ ಗ್ರಾಮಸ್ಥರು ಈ ದಿನ.ಕಾಮ್ ಜೊತೆ ಮಾತಾಡಿದ್ದಾರೆ.

Screenshot 2024 12 10 12 29 55 65 965bbf4d18d205f782c6b8409c5773a4

“ಎರಡು ವರ್ಷದ ಹಿಂದೆಯೇ ಅಂಬೇಡ್ಕರ್ ಭವನ ನಿರ್ಮಿಸಲು ಜಾಗ ಸಾಲುತ್ತಿಲ್ಲವೆಂದು ದಲಿತ ಸಮುದಾಯದ ಯುವಕರು ತಿಳಿಸಿದರು. ಅದಕ್ಕಾಗಿ ಪಕ್ಕದಲ್ಲಿರುವ ಜಾಗವನ್ನು ಅವರೊಂದಿಗೆ ಮಾತಾಡಿ ಕಡಿಮೆ ದರದಲ್ಲಿ ಜಾಗವನ್ನು ಕೊಂಡುಕೊಳ್ಳುವಂತೆ ತಿಳಿಸಲಾಗಿತ್ತು. ನಮ್ಮೂರಿನಲ್ಲಿ ಶಾಲೆ ನಡೆಯುತ್ತಿತ್ತು, ಅದು ಹಳೆಯದಾಗಿದೆ ಎಂಬ ಕಾರಣ ಶಾಲೆ ಮಕ್ಕಳಿಗೆ ಪ್ರಾಣಾಪಾಯ ಆಗುತ್ತದೆಂದು ಬೇರೆ ಶಾಲೆ ನಿರ್ಮಿಸಿ, ಹಳೇ ಶಾಲೆಯಲ್ಲಿ ಸುಮಾರು 10-15 ವರ್ಷದಿಂದ ಹಾಲಿನ ಡೈರಿ ಮಾಡಿಕೊಂಡು ಊರಿನ ಜನರು ಹಾಲನ್ನು ತಂದು ಡೈರಿಗೆ ಹಾಕುತ್ತಾರೆ. ಆ ಜಾಗ ನಾಶಗೊಳಿಸಿ ಅಲ್ಲಿ ಅಂಬೇಡ್ಕರ್ ಭವನ ನಿರ್ಮಿಸುತ್ತೇವೆಂದು ಕೇಳುತ್ತಿದ್ದಾರೆ. ಕತ್ತಲಾದರೂ ಮಕ್ಕಳು, ಮಹಿಳೆಯರಿಗೆ ಹಾಗೂ ಎರಡೂ ಸಮುದಾಯದವರಿಗೆ ಹಾಲು ಹಾಕಲು ಸೂಕ್ತ ಹಾಗೂ ಹಾಲಿನ ಗಾಡಿ ಬರಲು ಜಾಗವೂ ಅನುಕೂಲವಾಗಿದೆ. ಶೇ.80ರಷ್ಟು ಹೈನುಗಾರಿಕೆ ಅಳವಡಿಸಿಕೊಂಡು ಜೀವನ ನಡೆಸುತ್ತಿದ್ದೇವೆ. ಇದರ ಬದಲು ಬದಲಿ ಜಾಗ ಕೊಡುತ್ತೇವೆಂದರೂ ದಲಿತ ಯುವಕರು ಕೇಳುತ್ತಿಲ್ಲ” ಎಂದರು.

ಇದನ್ನೂ ಓದಿದ್ದೀರಾ?ಈ ದಿನ ಇಂಪ್ಯಾಕ್ಟ್ | ಮೇಲನಹಳ್ಳಿ ಕಾಲೋನಿ ಸಮಸ್ಯೆಗೆ ಸ್ಪಂದಿಸಿದ ಸಮಾಜ ಕಲ್ಯಾಣ ಇಲಾಖೆ; ನಿವೇಶನ ಹಂಚಿಕೆ ಭರವಸೆ

“ದೇವಸ್ಥಾನ ಪ್ರವೇಶ ಮಾಡುವುದಕ್ಕೆ ಮೊದಲೇ ಎರಡ್ಮೂರು ಬಾರಿ ಊರಿನವರೆಲ್ಲ ಕುಳಿತು ಸಭೆ ಮಾಡಿದ್ವಿ, ಬದಲಿ ಜಾಗ ಅಥವಾ ಪಕ್ಕದಲ್ಲಿರುವ ಜಾಗ ಕೊಳ್ಳುವುದು ಮತ್ತು ದೇವಸ್ಥಾನದ ಎಲ್ಲಾ ಜವಾಬ್ದಾರಿ ವಹಿಸಬೇಕು ಎಂದು ಕೇಳಿದಾಗ ದಲಿತ ಯುವಕರು ಯಾವುದಕ್ಕೂ ಮುಂದೆ ಬರಲಿಲ್ಲ. ಡಿಸೆಂಬರ್ 3 ಮಂಗಳವಾರ ದಲಿತ ಯುವಕರು ದೇವಾಲಯದ ಒಳಗೆ ಪ್ರವೇಶ ಮಾಡುವಾಗ ನಮ್ಮವರು ಯಾರೂ ಕೂಡ ಅವರಿಗೆ ಹಲ್ಲೆ ಹಾಗೂ ನಿಂದಿಸುವ ಕೆಲಸ ಮಾಡಿಲ್ಲ” ಎಂದು ಊರಿನ ಗ್ರಾಮಸ್ಥರು ಮತ್ತು ದಲಿತ ಸಮುದಾಯದವರು ಈ ದಿನ.ಕಾಮ್ ಜೊತೆ ಮಾಹಿತಿ ಹಂಚಿಕೊಂಡರು.

Screenshot 2024 12 10 12 34 32 29 965bbf4d18d205f782c6b8409c5773a4

ಈ ಘಟನೆ ಕುರಿತು ದಲಿತ ಸಮುದಾಯದ ಗ್ರಾಮಸ್ಥರು ಏನೇಳುತ್ತಾರೆ.?

“ಮುತ್ತಜ್ಜನ ಕಾಲದಲ್ಲಿ ಊರಲ್ಲಿ ಒಂದು ಬಾವಿ ಇತ್ತು, ನೀರು ತೆಗೆದು ನಮ್ಮ ಬಿಂದಿಗೆಗೆ ಹಾಕುತ್ತಿದ್ದರು, ಇದು ಸುಮಾರು ವರ್ಷಗಳ ಹಿಂದೇ ಘಟನೆ ಆಗಿದ್ದು, ನಂತರ ನಮ್ಮ ಜನ್ರಿಗೆ ಅಕ್ಕಿ, ರಾಗಿ ಕೊಟ್ಟು ನಾವು ಕಷ್ಟದಲ್ಲಿ ಇದ್ದಾಗ ಕಾಪಾಡವ್ರೆ, ದಿನ ಬದಲಾದಂತೆ ಅಣ್ಣ ತಮ್ಮಂದಿರಾಗಿ ಎರಡೂ ಸಮುದಾಯದವರು ಬದುಕಿದ್ದೇವೆ. ಹಬ್ಬ ಬಂದ್ರೆ ಅವರು ಮನೆಗೂ ಹೋಗುತ್ತಿದ್ವಿ ಅವ್ರು ನಮ್ಮ ಮನೆಗೆ ಬರುತ್ತಿದ್ರು. ಅವ್ರು ಮನೆಗೆ ಊಟಕ್ಕೆ ಹೋದ್ರೆ ಎಲ್ರು ಜೊತೇಲಿ ಕೂತು ಊಟ ಮಾಡ್ತಿದ್ವಿ. ನಾವು ದಲಿತರೆಂದು ತಾರತಮ್ಯ ಮಾಡದೆ ಊಟ ಮಾಡಿರುವ ಎಂಜಲು ತಟ್ಟೆಯನ್ನು ಕುರುಬ ಸಮುದಾಯದ ಮಹಿಳೆಯರು ಚಲ್ಲುತ್ತಿದ್ದರು. ನಾವು ಊಟ ಮಾಡಿರುವ ತಟ್ಟೆಯನ್ನು ಅವರು ತೊಳೆದಿದ್ದಾರೆ, ದೇವಸ್ಥಾನಕ್ಕೆ ಹೋಗ್ತಿದ್ವಿ. ಆದರೆ ನಾವೇ ಒಳಗೆ ಹೋಗ್ತ ಇರಲಿಲ್ಲ. ನಮಗೆ ಮೊದಲಿನಿಂದ ರೂಢಿ ಇರಲಿಲ್ಲ. ಹಾಗೆಯೇ, ದೇವಸ್ಥಾನವನ್ನು ಊರಿನ ಕುರುಬ ಸಮುದಾಯದವರು ಹಣ ಹಾಕಿ ಕಟ್ಟಿದ್ದಾರೆ” ಎಂದು ದಲಿತ ಸಮುದಾಯದವರು ಹೇಳಿದರು.

ಮೊದಲು ನೀಡಿರುವ ಜಾಗ ಅದು ರಾಜ್ಯಪಾಲರಿಗೆ ಸೇರಿದೆ. ಹಾಗೆಯೇ ಅಂಬೇಡ್ಕರ್ ಭವನ ನಿರ್ಮಿಸಲು ಜಾಗ ಸಾಲುವುದಿಲ್ಲ, ಹಾಗಾಗಿ ಹಾಲಿನ ಡೈರಿ ಮಾಡಿರುವ ಜಾಗವೇ ನಮಗೆ ಬೇಕಾಗಿದೆ. ಅಧಿಕಾರಿಗಳ ನೇತೃತ್ವದಲ್ಲಿ ತಿರುಮಲ ದೇವಸ್ಥಾನಕ್ಕೆ ಒಳಗೆ ಪ್ರವೇಶ ಮಾಡುವಾಗ ನಮಗೆ ಯಾರೂ ಏನೂ ಮಾತಾಡಿಲ್ಲ. ಊರಿನಲ್ಲಿ ಗಲಭೆ ಆಗಬಾರದೆಂದು ಎರಡು ದಿನಗಳ ಕಾಲ ಪೂಜೆ ನಿಲ್ಲಿಸಲಾಗಿತ್ತು. ಆರಂಭದಲ್ಲಿ ಗ್ರಾಮಸ್ಥರು ನಮ್ಮ ಪ್ರವೇಶಕ್ಕೆ ಸಮ್ಮತಿ ಸೂಚಿಸಲಿಲ್ಲ. ಪೂಜೆ ಸೇರಿದಂತೆ ಎಲ್ಲ ಆಚರಣೆಗಳನ್ನು ದಲಿತರೇ ನಿರ್ವಹಿಸಲಿ ಎಂದು ಹೇಳಿದ್ದರು, ಅದಕ್ಕೆ ನಾವು ಪೂಜೆಯ ಅವಕಾಶ ಕೇಳುತ್ತಿಲ್ಲ. ಕೇವಲ ದೇವರಿಗೆ ಕೈ ಮುಗಿಯುವ ಅವಕಾಶ ಕೇಳುತ್ತಿದ್ದೇವೆಂದು ಅಧಿಕಾರಿಗಳ ನೇತೃತ್ವದಲ್ಲಿ ತಿಳಿಸಿದ್ದೇವೆ. ಈಗ ಎಂದಿನಂತೆ ಪೂಜೆ ಆಗುತ್ತಿದೆ” ಎಂದು ದೇವಾಲಯಕ್ಕೆ ಪ್ರವೇಶ ಮಾಡಿದ ದಲಿತ ಯುವಕರು ಮಾತಾಡಿದ್ದಾರೆ.

Screenshot 2024 12 10 12 28 21 37 7352322957d4404136654ef4adb64504

ದೇವಸ್ಥಾನಕ್ಕೇ ಪ್ರವೇಶ ನೀಡಿದ ದಿನ: “ತಿರುಮಲ ದೇವರ ಗುಡಿಯೇ ಊರ ಪ್ರಮುಖ ದೇಗುಲವಾಗಿದ್ದು, ಮುಜರಾಯಿ ಇಲಾಖೆ ಮೂಲಕ ಅರ್ಚಕರನ್ನು ನೇಮಿಸಲಾಗಿದೆ. ಅಸ್ಪೃಶ್ಯತೆ ಆಚರಣೆ ಕಾನೂನುಬಾಹಿರ, ಎಲ್ಲ ಜಾತಿಯ ಜನರಿಗೂ ದೇಗುಲದಲ್ಲಿ ಮುಕ್ತ ಅವಕಾಶವಿದೆ ಎಂಬ ಫಲಕವನ್ನು ಈ ದೇವಸ್ಥಾನದಲ್ಲಿ ಅಳವಡಿಸಬೇಕು, ಗ್ರಾಮಸ್ಥರು ಅರ್ಥ ಮಾಡಿಕೊಳ್ಳಬೇಕು” ಎಂದು ಉಪವಿಭಾಗಾಧಿಕಾರಿ ದಲ್ಜಿತ್ ಕುಮಾರ್, ಡಿವೈಎಸ್‌ಪಿ ಶೈಲೇಂದ್ರ, ತಹಶೀಲ್ದಾರ್ ಸುಮಂತ್ ಸೇರಿದಂತೆ ಹಲವು ಅಧಿಕಾರಿಗಳು ಗ್ರಾಮಸ್ಥರನ್ನು ಕೂರಿಸಿ ಸಭೆ ನಡೆಸಿ ಮನವರಿಕೆ ಮಾಡಿದ್ದಾರೆ. ಎಲ್ಲರಿಗೂ ಮುಕ್ತ ಅವಕಾಶ ನೀಡಲು ಗ್ರಾಮಸ್ಥರು ಒಪ್ಪಿದ್ದಾರೆ. ಒಂದು ವೇಳೆ ದಲಿತರಿಗೆ ಪ್ರವೇಶ ನಿರಾಕರಿಸಿದರೆ ಕಾನೂನು ಕ್ರಮ ಜರುಗಿಸುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ದಲಿತರ ಗುಡಿಸಲನ್ನು ನೆಲಸಮ ಮಾಡಿದ ತಾಲೂಕು ಅಧಿಕಾರಿಗಳು

ಇದೇ ರೀತಿಯಲ್ಲಿ ಎರಡೂ ಸಮುದಾಯದವರು ಒಗ್ಗಟ್ಟಿನಿಂದ ತಿರುಮಲ ದೇವಾಲಯದಲ್ಲಿ ಪೂಜೆ ಮಾಡಿಕೊಂಡು ಹೋಗುತ್ತಾರೆಯೇ, ಹಾಗೆಯೇ ಅಂಬೇಡ್ಕರ್ ಭವನ ನಿರ್ಮಿಸಲು ಅದೇ ಜಾಗ ಅಥವಾ ಬದಲಿ ಸೂಕ್ತ ಜಾಗ ಕೊಡುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

WhatsApp Image 2024 10 24 at 12.02.30
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X