ಗ್ರಾಮ ಪಂಚಾಯಿತಿ ಅಧಿಕಾರಿಗಳ ʼರೈತರ ಭೂ ಒತ್ತುವರಿʼ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ತಹಶೀಲ್ದಾರ್ ಮತ್ತು ತಾಲೂಕು ಪಂಚಾಯಿತಿಯ ಕಾರ್ಯ ನಿರ್ವಹಣಾಧಿಕಾರಿಗಳು ವಿವಾದಿತ ಜಾಗಕ್ಕೆ ಭೇಟಿ ನೀಡಿ ಲೋಕಾಯುಕ್ತ ನ್ಯಾಯಾಲಯಕ್ಕೆ ವರದಿ ನೀಡಲು ಸ್ಥಳ ಮಹಜರ್ ನಡೆಸಿದರು.
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ದಿದ್ದಿಗೆ ಗ್ರಾಮ ಪಂಚಾಯಿತಿಯ ಉಜ್ಜಪ್ಪ ಒಡೆಯರಹಳ್ಳಿಯ ರೈತ 65 ವರ್ಷದ ಮೇಘರಾಜಪ್ಪನವರ ಸರ್ಕಾರಿ ಪ್ರಾಥಮಿಕ ಶಾಲೆಯ ಮುಂದಿರುವ ಗ್ರಾಮ ಠಾಣಾ ಜಾಗಕ್ಕೆ ಸಂಬಂಧಿಸಿದಂತೆ ಈ ದಿನ.ಕಾಮ್ನಲ್ಲಿ “ಅಧಿಕಾರಿಗಳಿಂದ ರೈತರ ಜಾಗ ಒತ್ತುವರಿ” ಹೆಸರಿನಡಿಯಲ್ಲಿ ವರದಿ ಪ್ರಕಟಿಸಲಾಗಿತ್ತು.
ಜಗಳೂರು ತಾಲೂಕು ನ್ಯಾಯಾಲಯ 1999ರಲ್ಲಿ ಜಮೀನು, ಮೇಘರಾಜಪ್ಪನವರದು ಎಂದು ತೀರ್ಪು ನೀಡಿರುವ ವಿವಾದಿತ ಜಾಗವು ಸುಮಾರು 70 ವರ್ಷಗಳಿಂದಲೂ ತಮ್ಮ ಪಿತ್ರಾರ್ಜಿತ ಮತ್ತು ಅನುಭವದಲ್ಲಿರುವ ಜಾಗಕ್ಕೆ ಮೇಘರಾಜಪ್ಪನವರಿಗೆ ಜಾಗವನ್ನು ಇ-ಸ್ವತ್ತು ಮಾಡಿಕೊಡದೆ ಗ್ರಾಮ ಪಂಚಾಯಿತಿ ಅಧಿಕಾರಿಯೊಬ್ಬರು ಲಂಚದ ಆಮಿಷ ಒಡ್ಡಿದ್ದು, ಲಂಚ ನೀಡಲು ತಿರಸ್ಕರಿಸಿದ್ದ ಮೇಘರಾಜಪ್ಪನ ಆಸ್ತಿಯನ್ನು ಶಾಲೆಯ ಆಸ್ತಿ, ಗ್ರಾಮ ಪಂಚಾಯಿತಿಗೆ ಸೇರಿದ್ದೆಂದು ಹೇಳಿ ವಶಪಡಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಹೈಕೋರ್ಟ್ ಮತ್ತು ಲೋಕಾಯುಕ್ತ ಕೋರ್ಟ್ನಲ್ಲಿ ದಾವೆ ಸಲ್ಲಿಸಿದ್ದರು.

ಸುದೀರ್ಘ ವಿಚಾರಣೆಯನ್ನು ನಡೆಸಿದ ಲೋಕಾಯುಕ್ತ ನ್ಯಾಯಾಲಯ ತಹಶೀಲ್ದಾರ್, ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಆದೇಶ ನೀಡಿ ಸ್ಥಳ ಮಹಜರು ನಡೆಸಿ ವರದಿ ನೀಡುವಂತೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಉಜ್ಜಪ್ಪವಡೇರಹಳ್ಳಿಗೆ ಶನಿವಾರ ಬೆಳಗ್ಗೆ 11:30 ಕ್ಕೆ ಮೇಘರಾಜ್ ಅವರ ಹೆಸರಿನಲ್ಲಿರುವ 78×135 ಅಡಿ ಅಳತೆಯ ಜಾಗಕ್ಕೆ ಭೇಟಿ ನೀಡಿ ಲೋಕಾಯುಕ್ತಕ್ಕೆ ವರದಿ ನೀಡಲು ಸ್ಥಳ ಪರಿಶೀಲನೆ ನಡೆಸಿದರು.
ಈ ಸುದ್ದಿ ಓದಿದ್ದೀರಾ? ಬಿಡದಿ | ಮಂಚನಾಯಕನಹಳ್ಳಿಯಲ್ಲಿ ಹೆಚ್ಚಿದ ಕಳ್ಳತನ ಪ್ರಕರಣ; ಪೊಲೀಸರ ನಿರ್ಲಕ್ಷ್ಯ, ಆರೋಪ
ಈ ವೇಳೆ ಮಾತನಾಡಿದ ರೈತ ಮೇಘರಾಜಪ್ಪ ಮತ್ತು ಅವರ ಧರ್ಮಪತ್ನಿ, “ಈ ಜಾಗದಲ್ಲಿ ನಮ್ಮ ತಂದೆಯ ಕಾಲದಿಂದಲೂ 70-80 ವರ್ಷಗಳಿಂದಲೂ ನಾವು ಅನುಭವದಲ್ಲಿದ್ದೇವೆ. ಈ ಬಗ್ಗೆ ತಾಲೂಕು ನ್ಯಾಯಾಲಯದಲ್ಲಿ ತಕರಾರು ನಡೆದು 1999ರಲ್ಲಿ ನ್ಯಾಯಾಲಯ ಈ ಜಾಗ ನಮಗೆ ಸೇರಿದ್ದು ಎಂದು ಆದೇಶ ನೀಡಿದೆ. ಅಲ್ಲಿಂದ ಯಾವುದೇ ವಿವಾದ ಇಲ್ಲದಿದ್ದರೂ, 2021ರಲ್ಲಿ ನಮ್ಮ ಅನುಭವದಲ್ಲಿದ್ದ ಈ ಜಾಗಕ್ಕೆ ಇ-ಸ್ವತ್ತು ಮಾಡಿಕೊಡಲು ಕೇಳಿದಾಗ ಪಟ್ಟಭದ್ರ ಹಿತಾಸಕ್ತಿಗಳು ಲಂಚದ ಕಾರಣದಿಂದ ಯಾವುದೇ ದಾಖಲೆ ಇಲ್ಲದಿದ್ದರೂ ಪಂಚಾಯಿತಿಗೆ ಸೇರಿದ ಜಾಗವೆಂದು ಅಕ್ರಮವಾಗಿ ವಶಪಡಿಸಿಕೊಳ್ಳಲು ಮುಂದಾಗಿದ್ದಾರೆ. ನಮಗೆ ಸಾಕಷ್ಟು ದೈಹಿಕ ಮತ್ತು ಮಾನಸಿಕ ಹಿಂಸೆ, ಕಿರುಕುಳವನ್ನು ನೀಡಿದ್ದಾರೆ. ಹಿರಿಯ ಅಧಿಕಾರಿಗಳು ಗಮನಹರಿಸಿ ನಮಗೆ ನ್ಯಾಯ ಕೊಡಿಸಲು ಮುಂದಾಗಬೇಕು” ಎಂದು ಕಣ್ಣೀರಿಟ್ಟರು.
