ಬೆಳಗಾವಿಯ ಸುವರ್ಣ ಸೌಧದ ಮುಂಭಾಗದಲ್ಲಿ ನಡೆಯುತ್ತಿರುವ ಪಂಚಮಸಾಲಿ 2ಎ ಮೀಸಲಾತಿ ಹೋರಾಟ ಹಿಂಸಾರೂಪ ತಾಳಿದೆ. ಮಾಜಿ ಸಿಎಂ ಎಸ್‌ಎಂ ಕೃಷ್ಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ನಂತರ ವಿಧಾನ ಮಂಡಲಗಳ ಅಧಿವೇಶನವನ್ನು ಗುರುವಾರಕ್ಕೆ ಮುಂದೂಡಿದ ನಂತರ ಈ ಘಟನೆ ನಡೆದಿದೆ.
ಸುವರ್ಣ ಸೌಧ ಮುತ್ತಿಗೆ ಹಾಕಲು ಹೊರಟ ಹೋರಾಗಾರರನ್ನು ಪೊಲೀಸರು ತಡೆದಿದ್ದರು. ಸ್ಥಳಕ್ಕೆ ಸಿ ಎಂ ಸಿದ್ದರಾಮಯ್ಯ ಅವರು ಬಂದು 2ಎ ಮೀಸಲಾತಿ ಘೋಷಣೆ ಮಾಡಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದರು. ಆದರೆ ಹಿರಿಯ ಸಚಿವರಾದ ಎಚ್ ಸಿ ಮಹದೇವಪ್ಪ, ಲಕ್ಷ್ಮೀ ಹೆಬ್ಬಾಳಕರ್ ಅವರು ಸ್ಥಳಕ್ಕೆ ಹೋಗಿ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ಮಾಡಿದ್ದರು. ಆನಂತರ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದು ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು, ಚಪ್ಪಲಿ ತೂರಿದ್ದಾರೆ. ಎಡಿಜಿಪಿ ಹಿತೇಶ್ ಖುದ್ದು ಲಾಠಿ ಹಿಡಿದು ಪ್ರತಿಭಟನಾಕಾರರನ್ನು ಚದುರಿಸಿದರು.
ಶಾಸಕರಾದ ಅರವಿಂದ್ ಬೆಲ್ಲದ , ಬಸನಗೌಡ ಯತ್ನಾಳ್, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಜಯ ಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ನೂರಾರು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸುವರ್ಣಸೌಧಕ್ಕೆ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ.