ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಸೂಕ್ಷ್ಮ ಮತ್ತು ಅತಿಸೂಕ್ಷ್ಮ 49 ಅಲೆಮಾರಿ ಸಮುದಾಯಗಳು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಡಿಸೆಂಬರ್ 18, 2024 ರಂದು ಬೆಳಗಾವಿಯಲ್ಲಿ “ಸುವರ್ಣಸೌಧ ಚಲೋ….” ಹೋರಾಟ-ಪ್ರದರ್ಶನ ನಡೆಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ ತಾಲ್ಲೂಕು ಅಧ್ಯಕ್ಷ ರಂಗನಾಥ್ ತಿಳಿಸಿದರು.
ಅಂದು ಮುಖ್ಯಮಂತ್ರಿಗಳು ಈಯೆಲ್ಲ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಅಲೆಮಾರಿಗಳ ಅಹವಾಲನ್ನು ಸ್ವೀಕರಿಸಿ, ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರವನ್ನು ಒದಗಿಸಿಕೊಡುವಂತೆ ಮನವಿ ಮಾಡಲಾಗುವುದು ಎಂದು ತಿಳಿಸಿದ ಅವರು, ಮುಖ್ಯಮಂತ್ರಿಗಳ ಎದುರು ಪ್ರಸ್ತಾಪಿಸಲಿರುವ ಕೆಲಮುಖ್ಯ ಬೇಡಿಕೆಗಳ ಬಗ್ಗೆ ಮಾಹಿತಿ ನೀಡಿದರು.

ಮುಖ್ಯವಾಗಿ ಶಿಕ್ಷಣ ಮತ್ತು ಸರ್ಕಾರಿ ನೌಕರಿಯಲ್ಲಿ ಸೂಕ್ತ ಪ್ರಾತಿನಿಧ್ಯವೇ ಸಿಗದೆ ಅಲಕ್ಷಿತಗೊಂಡಿರುವ ಈಯೆಲ್ಲ 49 ವಂಚಿತ ಸಮುದಾಯಗಳಿಗೆ ಶೇ.3 ರಷ್ಟು ಒಳಮೀಸಲಾತಿ ನೀಡುವುದರ ಮೂಲಕ ಇವರ ಏಳ್ಗೆಗಾಗಿ ಅವಕಾಶ ಕಲ್ಪಿಸುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿಗಳಿಗಾಗಿ ತ್ವರಿತವಾಗಿ ಅಲೆಮಾರಿ ಆಯೋಗವನ್ನು ಸ್ಥಾಪಿಸುವುದು. ಈ ಹಿಂದಿನ ಸರ್ಕಾರ ಪ.ಜಾ ಮತ್ತು ಪ.ಪಂ.ಅಲೆಮಾರಿಗಳ ಮನೆ ನಿರ್ಮಾಣಕ್ಕಾಗಿ ಬಿಡುಗಡೆ ಮಾಡಿ ಮತ್ತೆ ಹಿಂಪಡೆದಿದ್ದ 300 ಕೋಟಿ ರೂಪಾಯಿಗಳ ಅನುದಾನವನ್ನು ಈಗ ಮತ್ತೆ ಬಿಡುಗಡೆ ಮಾಡಬೇಕು. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಒಂದು ಅಲೆಮಾರಿ ಬುಡಕಟ್ಟು ಅಧ್ಯಯನ ಕೇಂದ್ರವನ್ನು ತೆರೆಯಬೇಕು. ವಿಧಾನ ಪರಿಷತ್ತಿಗೆ ನಡೆಯುವ ಆಯ್ಕೆಗಳಲ್ಲಿ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಅಲೆಮಾರಿ ಜಾತಿಯಿಂದ ಒಬ್ಬ ಸದಸ್ಯನನ್ನು ಆಯ್ಕೆ ಮಾಡಿಕೊಳ್ಳುವುದನ್ನು ಕಡ್ಡಾಯಗೊಳಿಸುವುದು. ಹೆಚ್ಚಿನ ಜನಸಂಖ್ಯೆ ಮತ್ತು ಪ್ರಬಲ ಅಲೆಮಾರಿ ಜಾತಿಗಳಾದ ಕೊರಮ ಮತ್ತು ಕೊರಚ ಜಾತಿಗಳನ್ನು ಹಾಲಿ ಇರುವ ಪ.ಜಾ ಮತ್ತು ಪ.ಪಂ.ಅಲೆಮಾರಿ ಅಭಿವೃದ್ಧಿ ನಿಗಮದಿಂದ ಬೇರ್ಪಡಿಸುವುದರ ಮೂಲಕ ಸೂಕ್ಷ್ಮ ಮತ್ತು ಅತಿಸೂಕ್ಷ್ಮ 49 ಅಲೆಮಾರಿ ಸಮುದಾಯಗಳಿಗೆ ಸೂಕ್ತ ನ್ಯಾಯ ಒದಗಿಸಿಕೊಡಬೇಕು ಎಂಬಂತಹವು ನಮ್ಮ ಪ್ರಮುಖ ಬೇಡಿಕೆಗಳು ಎಂದು ಅಲೆಮಾರಿ ಬುಡಕಟ್ಟು ಮಹಾಸಭಾ ಅಧ್ಯಕ್ಷ ರಂಗನಾಥ್ ತಿಳಿಸಿದರು.
ವರದಿ – ಸಂಚಲನ
ಚಿಕ್ಕನಾಯಕನ ಸೀಮೆಯಿಂದ
