ಅತಿಯಾದ ಆಧುನಿಕ ಸಂಸ್ಕೃತಿ ಹಾಗೂ ಜಾಗತೀಕರಣ ದಾಳಿಯಿಂದಾಗಿ ಜಾನಪದ ಅಳಿವಿನಂಚಿಗೆ ತಲುಪುತ್ತಿದೆ. ಜಾನಪದ ಉಳಿಸುವ ಜವಾಬ್ದಾರಿ ಹೊಸ ಪೀಳಿಗೆಯ ಮೇಲಿದೆ ಎಂದು ಬೀದರ ವಿಶ್ವವಿದ್ಯಾಲಯದ ನಿವೃತ್ತ ಡೀನ್ ಡಾ.ಜಗನ್ನಾಥ ಹೆಬ್ಬಾಳೆ ಹೇಳಿದರು.
ಬೀದರ್ ಬರಹಗಾರರ ಮತ್ತು ಕಲಾವಿದರ ಸಂಘದ ಸಹಯೋಗದಲ್ಲಿ ಬಸವಕಲ್ಯಾಣ ತಾಲೂಕಿನ ನಾರಾಯಣಪುರ ನವೋದಯ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಜಾನಪದ ಸಂಗಮ ಸಮಾರಂಭದಲ್ಲಿ ಮಾತನಾಡಿದರು.
‘ಜಾನಪದದ ಅಧ್ಯಯನಕ್ಕಾಗಿಯೇ ಕರ್ನಾಟಕದಲ್ಲಿ ಜಾನಪದ ವಿಶ್ವವಿದ್ಯಾಲಯ ಹುಟ್ಟಿಕೊಂಡಿದೆ. ಜನ ಸಮುದಾಯದ ಸಮಸ್ತ ಮುಖಗಳನ್ನು ಕಾಣಲು ಜಾನಪದದಿಂದ ಸಾಧ್ಯ. ಜಾತ್ರೆ ಉತ್ಸವಗಳಲ್ಲಿ, ಹಬ್ಬ ಹರಿದಿನಗಳಲ್ಲಿ, ಆಚರಣೆ ಸಂಪ್ರದಾಯಗಳಲ್ಲಿ ಜಾನಪದ ಜೀವಂತವಾಗಿದೆ. ನಗರ ಹಳ್ಳಿಗಳಿರಲಿ ಜಾನಪದದಿಂದ ಯಾರೂ ಬಿಡಿಸಿಕೊಂಡು ಬದುಕಲು ಸಾಧ್ಯವಿಲ್ಲ. ಆಧುನಿಕ ಸಂಸ್ಕೃತಿಯ ಪ್ರಭಾವ ಹೆಚ್ಚಾದಂತೆಲ್ಲ ಜಾನಪದಕ್ಕೆ ಅಳಿವಿನ ಅಪಾಯ ಎದುರಿಸುತ್ತಿದೆ’ ಎಂದರು.
ಶರಣ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಪ್ರೊ. ಶಂಭುಲಿಂಗ ಕಾಮಣ್ಣ ಸಮಾರಂಭ ಉದ್ಘಾಟಿಸಿ ಮಾತನಾಡಿ,’ಜಾನಪದ ಸಾಹಿತ್ಯ ಇಡೀ ಜನ ಬದುಕನ್ನು ಬಿಂಬಿಸುತ್ತದೆ. ಜಾನಪದ ಜನರ ಒಟ್ಟು ಜೀವನದ ಮೊತ್ತವಾಗಿದೆ. ಜನ ಜೀವನದ ನಾಡಿ ಮಿಡಿತ ಜಾನಪದ ಒಳಗೊಂಡಿದೆ. ನೈತಿಕ ಮೌಲ್ಯಗಳನ್ನು, ಸಾಮಾಜಿಕ ಜವಾಬ್ದಾರಿಗಳನ್ನು, ಮಾನವೀಯತೆಯ ಆಲೋಚನೆಗಳನ್ನು ಜನಪದರು ಹಾಡು, ಕತೆ, ಗಾದೆ, ಒಗಟುಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಅದನ್ನು ಅರಿಯಲು ಜಾನಪದದ ಓದು ಅಗತ್ಯ’ ಎಂದರು.
ಬಸವೇಶ್ವರ ಪದವಿ ಕಾಲೇಜು ಪ್ರಾಚಾರ್ಯ ಭೀಮಾಶಂಕರ ಬಿರಾದಾರ ಮಾತನಾಡಿ, ‘ಮನುಷ್ಯ ಜಗತ್ತಿನ ಎಲ್ಲ ಕಡೆಗಳಲ್ಲೂ ಜಾನಪದ ಸಂಸ್ಕೃತಿಯಿದೆ. ಇತ್ತೀಚಿನ ಹೊಸ ಶೋಧಗಳಿಂದ ನಗರ ಜಾನಪದ, ಗ್ರಾಮೀಣ ಜಾನಪದ, ಸಬಾಲ್ಟರ್ನ್ ಸಮುದಾಯದ ಸಾಂಸ್ಕೃತಿಕ ಅಧ್ಯಯನ ಜಾನಪದದ ಭಾಗವಾಗಿ ಓದಲಾಗುತ್ತಿದೆ. ಜನಪ್ರಿಯ ಸಂಸ್ಕೃತಿಯಲ್ಲಿಯೂ ಜನಪದ ಬಳಕೆಗೊಂಡು ಬೆಳೆಯುತ್ತಿದೆ. ಜಾನಪದ ನೆಲದ ಕಸುವು ಒಳಗೊಂಡಿದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಭಾವನಾ ಋಷಿ ಮಾತನಾಡಿದರು. ಸಂಗೀತ ಶಿಕ್ಷಕ ಈರಪ್ಪ ಹಾಗೂ ವಿದ್ಯಾರ್ಥಿಗಳ ತಂಡದಿಂದ ಗೀತ ಗಾಯನ ನೆರವೇರಿತು.
ಈ ಸುದ್ದಿ ಓದಿದ್ದೀರಾ? ಬೀದರ್ | ಜನಪ್ರತಿನಿಧಿಗಳ ನಿರಾಸಕ್ತಿ : ಕನಸಾಗಿಯೇ ಉಳಿದ ಮನ್ನಾಏಖೇಳ್ಳಿ ‘ಪಟ್ಟಣ ಪಂಚಾಯಿತಿ’ ರಚನೆ
ಸಮಾರಂಭದಲ್ಲಿ ಕಲಬುರ್ಗಿ ಎನ್.ವಿ ಕಾಲೇಜು ಅಧ್ಯಾಪಕ ಡಾ. ಶಿವಾಜಿ ಮೇತ್ರೆ, ಲಿಗಾಡೆ ಪ್ರತಿಷ್ಠಾನದ ಕಾರ್ಯದರ್ಶಿ ದೇವೇಂದ್ರ ಬರಗಾಲೆ, ಗಂಗಾಧರ ಸಾಲಿಮಠ, ರಿತೇಶ್ ರಾಯ್, ಅಲ್ಕಾ ಜೋಷಿ, ಧನ್ಯಾ ಸೇರಿದಂತೆ ಹಲವರಿದ್ದರು. ಧರ್ಮಣ್ಣ ಚಿತ್ತಾ ನಿರೂಪಿಸಿ ಸ್ವಾಗತಿಸಿದರು. ಲಕ್ಷ್ಮೀಕಾಂತ ದುದ್ದಣಗಿ ವಂದಿಸಿದರು.