ಅನ್ನದಾತರ ವಿವಿಧ ಸಮಸ್ಯೆಗಳ ಬಗ್ಗೆ ಸಂಸತ್ ಅಧಿವೇಶನದಲ್ಲಿ ಚರ್ಚೆ ಮಾಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಹಾಸನದಲ್ಲಿ ಸಂಸದರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಮ್ಮ ಜಿಲ್ಲೆಯ ರೈತರು ರಾಷ್ಟ್ರೀಯ ಕಿಸಾನ್ ಮೋರ್ಚಾ ಅಧ್ಯಕ್ಷ ಜಗಜಿತ್ ಸಿಂಗ್ ದಲೈವಾ ಅವರ ನೇತೃತ್ವದಲ್ಲಿ ನವೆಂಬರ್ 26ರಿಂದ ದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ. ಅದರಂತೆ ಕರ್ನಾಟಕದಲ್ಲಿ ಜಿಲ್ಲಾವಾರು ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.
ಹಾಸನ ಜಿಲ್ಲೆಯ ಕೊಬ್ಬರಿ, ಜೋಳಕ್ಕೆ ಬೆಂಬಲ ಬೆಲೆ ಸಿಗುತ್ತಿಲ್ಲ. ರೈತರು ಪಡೆದಿರುವ ವಿದ್ಯುತ್ ಸಂಪರ್ಕಕ್ಕೆ ಲಕ್ಷಾಂತರ ಹಣ ವಸೂಲಿ ಮಾಡಲು ಸರ್ಕಾರ ಚಿಂತಿಸಿರುವುದು ಸರಿಯೇ, ನಮ್ಮಿಂದ ಆಯ್ಕೆಯಾದ ಸಂಸತ್ ಸದಸ್ಯರು ರೈತರ ಪರ ಪ್ರಬಲ ಧ್ವನಿ ಎತ್ತುತ್ತಿಲ್ಲ ಎಂದು ರೈತ ಸಂಘದ ಶಾಂತರಾಜು ತಿಳಿಸಿದರು.
ದೆಹಲಿ ರೈತ ಹೋರಾಟದ ರೂವಾರಿ, ರಾಷ್ಟ್ರೀಯ ರೈತ ಮುಖಂಡ ಜಗಜೀತ್ ಸಿಂಗ್ ದಲೈವಾಲ ಅವರ ಉಪವಾಸ 15ನೇ ದಿನಕ್ಕೆ ಮುಂದುವರಿದಿದ್ದು, ಅವರ ಆರೋಗ್ಯ ಸ್ಥಿತಿ ಹದಗೆಡುತ್ತಿದೆ. ಇಂತಹ ಗಂಭೀರ ಸ್ಥಿತಿಯಲ್ಲಿಯೂ ಸಂಸದರು ಸಂಸತ್ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಮಾಡದಿರುವುದು ವಿಪರ್ಯಾಸ ಎಂದು ರೈತ ಸಂಘದ ಮುಖಂಡ ಶಾಂತರಾಜು ತಿಳಿಸಿದರು.
ನಾವು ಕೇಂದ್ರ ಸರ್ಕಾರವನ್ನು ಭಿಕ್ಷೆ ಕೇಳುತ್ತಿಲ್ಲ. ನಮ್ಮ ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಕೇಳುತ್ತಿದ್ದೇವೆ ಅಷ್ಟೇ. ಪ್ರಧಾನಿ ಮೋದಿಯವರು ಎರಡು ವರ್ಷಗಳ ಹಿಂದೆ ರೈತರಿಗೆ ನೀಡಿದ್ದ ಭರವಸೆ ಈಗ ಹುಸಿಯಾಗಿದೆ. ದೇಶದ ರೈತರಿಗಾಗಿ ತಮ್ಮ ಪ್ರಾಣವನ್ನು ಪಣಕಿಟ್ಟು ಉಪವಾಸ ನಡೆಸುತ್ತಿರುವ ಜಗಜೀತ್ ಸಿಂಗ್ ದಲೈವಾಲ ಅವರ ಜೊತೆ ಕೇಂದ್ರ ಸರ್ಕಾರ ಕೂಡಲೇ ಮಾತುಕತೆ ನಡೆಸಿ ರೈತರ ಬೇಡಿಕೆ ಈಡೇರಿಸಬೇಕು ಎಂದು ರೈತ ಮುಖಂಡರಾದ ಶಾಂತರಾಜು ತಿಳಿಸಿದರು.
ದೇಶದ ರೈತರ ಸಂಪೂರ್ಣ ಸಾಲಮನ್ನಾ ಆಗಬೇಕು. 60 ವರ್ಷ ತುಂಬಿದ ರೈತ ರಿಗೆ ಪಿಂಚಣಿ ಯೋಜನೆ ಜಾರಿಗೆ ತರಬೇಕು. ಬೆಳೆ ವಿಮೆ ಪದ್ಧತಿ ಬದಲಾಗಬೇಕು. ಪ್ರತಿ ರೈತನ ಹೊಲದ ಬೆಳೆ ವಿಮೆ ಪರಿಹಾರ ಪದ್ಧತಿಯನ್ನು ಜಾರಿಗೆ ತರಬೇಕು. ಎಲ್ಲ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಯಾಗಬೇಕು ಎಂದು ಹೆಚ್ . ಬಿ ಧರ್ಮರಾಜ ತಿಳಿಸಿದರು.
ಇದನ್ನೂ ಓದಿದ್ದೀರಾ?ಹಾಸನ | ದೀನ ದಲಿತರು, ಎಲ್ಲ ವರ್ಗದ ಮಹಿಳೆಯರಿಗೆ ಸ್ವಾಭಿಮಾನದ ಬದುಕು ಕಲ್ಪಿಸಿದವರೇ ಅಂಬೇಡ್ಕರ್: ಶಾಸಕ ಸ್ವರೂಪ್
ಈ ವೇಳೆ ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಹೆಚ್.ಬಿ.ಧರ್ಮರಾಜು, ಅತ್ತಿಹಳ್ಳಿ ದೇವರಾಜು, ದರ್ಶನ್, ಪವನ್, ಯೋಗಾನಂದ್, ಕೃಷ್ಣ ಮೂರ್ತಿ, ತೀರ್ಥಕುಮಾರ್, ಬಡಗಲಪುರ ನಾಗರಾಜು, ಸೂರಿ, ಧರಣಿ ಇತರರು ಉಪಸ್ಥಿತರಿದ್ದರು.
