ವಾಹನಗಳ ಚಾಲನೆ ವೇಳೆ ಮೊಬೈಲ್ ಬಳಕೆ ಕಾನೂನುಬಾಹಿರ. ಅದು ಗೊತ್ತಿದ್ದರೂ, ಸರ್ಕಾರಿ ಸಾರಿಗೆ ಕೆಎಸ್‌ಆರ್‌ಟಿಸಿಯ ಚಾಲಕರೊಬ್ಬರು ಬಸ್ ಚಾಲನೆ ವೇಳೆ ಮೊಬೈಲ್ ಬಳಸಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಘಟನೆ ವಿಡಿಯೋ ವೈರಲ್ ಆಗಿದ್ದು, ಚಾಲಕನನ್ನು ಬಂಧಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಡಿಪೋ ಬಸ್ ಚಾಲಕ ವೇಣುಗೋಪಾಲ್ ಎಂಬವರನ್ನು ಬಂಧಿಸಲಾಗಿದೆ. ವೇಣುಗೋಪಾಲ್ ಅವರನ್ನು ಚಾಲನೆಗೆ ನಿಯೋಜಿಸಲಾಗಿದ್ದ ಕೆಎಸ್‌ಆರ್‌ಟಿಸಿ ಬಸ್ ಮಡಿಕೇರಿಯಿಂದ ಬಿರುನಾಣಿಗೆ ಪ್ರಯಾಣಿಸುತ್ತಿತ್ತು. ಈ ವೇಳೆ, ಚಾಲಕ ಬಳಕೆ ಮಾಡಿದ್ದಾರೆ. ಅದನ್ನು ಪ್ರಯಾಣಿಕರೊಬ್ಬರು ವಿಡಿಯೋ ಮಾಡಿಕೊಂಡು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
#ಮಡಿಕೇರಿ_to_ಬಾಡಗರಕೇರಿ_ಮೃತುಜಯ_ದೇವಾಲಯಕ್ಕೆ_ಬಸ್_ಚಾಲಕರು_ಬ್ಯುಸಿಯೋ_ಬ್ಯುಸಿ pic.twitter.com/aWZRQvgDr6
— Coorgthekashmirofkarnataka (@Coorgthekashmir) December 9, 2024
ಅಲ್ಲದೆ, ಚಾಲನೆ ವೇಳೆ ಮೊಬೈಲ್ ಬಳಸುತ್ತಿರುವುದನ್ನು ನಿರ್ವಾಹಕ ರೂಪೇಶ್ ಕೂಡ ಪ್ರಶ್ನಿಸಿದ್ದಾರೆ. ಇದರಿಂದ ಕುಪಿತಗೊಂಡ ವೇಣುಗೋಪಾಲ್, ರೂಪೇಶ್ ಜೊತೆಗೆ ಗಲಾಟೆ ಮಾಡಿದ್ದಾರೆ. ಮಾತ್ರವಲ್ಲದೆ, ಡಿಪೋ ಬಳಿ ಕೋವಿ ತಂದು ಗಾಳಿಯಲ್ಲಿ ಗುಂಡು ಹಾರಿಸಿ, ರೂಪೇಶ್‌ನನ್ನು ಕೊಲೆ ಮಾಡುವುದಾಗಿ ವೇಣುಗೋಪಾಲ್ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ವೇಣುಗೋಪಾಲ್ ಅವರ ವರ್ತನೆಯ ವಿರುದ್ಧ ಕ್ರಮ ಕೈಗೊಂಡಿರುವ ಸಾರಿಗೆ ಸಂಸ್ಥೆ, ಅವರನ್ನು ಅಮಾನತು ಮಾಡಿದೆ. ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ವೇಣುಗೋಪಾಲ್ನನ್ನು ಬಂಧಿಸಿದ್ದಾರೆ.