ತ್ವರಿತ ಸಾಲವನ್ನು ನೀಡುವ ಆ್ಯಪ್ ಮೂಲಕ 2,000 ರೂಪಾಯಿ ಸಾಲ ಪಡೆದ 27 ವರ್ಷದ ಯುವಕರೊಬ್ಬರು ಆ್ಯಪ್‌ನ ಸಿಬ್ಬಂದಿಗಳ ನಿರಂತರ ಕಿರುಕುಳದಿಂದಾಗಿ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಈ ಘಟನೆ ನಡೆದಿದೆ. ಮೃತ ಯುವಕನನ್ನು ನರೇಂದ್ರ ಎಂದು ಗುರುತಿಸಲಾಗಿದ್ದು ಅವರು 47 ದಿನಗಳ ಹಿಂದೆಯಷ್ಟೇ ವಿವಾಹವಾಗಿದ್ದರು ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಅತ್ತೆ-ಮಾವ ‘ಬೈಕ್ ಇಎಂಐ’ ಕಟ್ಟಿಲ್ಲವೆಂದು ಅಳಿಯ ಆತ್ಮಹತ್ಯೆ
ಮೀನುಗಾರಿಕೆ ನಡೆಸಿ ಜೀವನ ನಡೆಸುತ್ತಿದ್ದ ನರೇಂದ್ರ ಅವರಿಗೆ ಹವಾಮಾನ ವೈಪರೀತ್ಯದಿಂದಾಗಿ ಕೆಲವು ದಿನಗಳಿಂದ ಮೀನುಗಾರಿಕೆ ನಡೆಸಲು ಸಾಧ್ಯವಾಗಿಲ್ಲ. ಇದಕ್ಕಾಗಿ ತ್ವರಿತವಾಗಿ ಸಾಲ ನೀಡುವ ಆ್ಯಪ್ ಮೂಲಕ 2,000 ರೂ. ಸಾಲ ಪಡೆದಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನರೇಂದ್ರ ಅಸಲು ಮೊತ್ತವನ್ನು ಮರುಪಾವತಿ ಮಾಡಿದ್ದರು. ಆದರೆ ಈ ಆನ್‌ಲೈನ್ ಸಾಲ ನೀಡುವ ಸಂಸ್ಥೆಯು ಭಾರೀ ಪ್ರಮಾಣದ ಬಡ್ಡಿಯನ್ನು ಪಾವತಿಸುವಂತೆ ನರೇಂದ್ರ ಅವರಿಗೆ ಕಿರುಕುಳ ನೀಡಿದೆ. ಅಷ್ಟೊಂದು ಹಣ ನೀಡಲು ಸಾಧ್ಯವಿಲ್ಲ ಎಂದು ನರೇಂದ್ರ ಹೇಳಿದಾಗ, ನಿಮ್ಮ ಮತ್ತು ನಿಮ್ಮ ಪತ್ನಿಯ ನಗ್ನ ಫೋಟೋವನ್ನು ಮಾರ್ಫಿಂಗ್ ಮಾಡಿ ನಿಮ್ಮ ಸ್ನೇಹಿತರಿಗೆ ವಾಟ್ಯ್ಸಾಪ್ ಮೂಲಕ ಹಂಚಿಕೊಳ್ಳಲಾಗುವುದು ಎಂದು ಬೆದರಿಸಿದ್ದಾರೆ.
ಈ ಕಿರುಕುಳದ ಬಗ್ಗೆ ಯಾರಲ್ಲಿಯೂ ಹೇಳಿಕೊಳ್ಳದ ನರೇಂದ್ರ ಮಾನಸಿಕ ಖಿನ್ನತೆಗೆ ಒಳಗಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ. ಮೃತರ ಕುಟುಂಬಸ್ಥರು ಪೊಲೀಸ್ ಕಮಿಷನರ್ ಹಾಗೂ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.
