ಸಂಭಲ್‌ ಮಸೀದಿ ಸಮೀಕ್ಷೆ ಬೇಕೋ ಬೇಡವೋ?

Date:

Advertisements

ಸಂಭಲ್‌ ಮಸೀದಿ ಈಗ ಅತಿ ಹೆಚ್ಚು ಬಳಕೆಯಲ್ಲಿರೋ ಹೆಸರು ಹಾಗೂ ಚರ್ಚೆಯಲ್ಲಿರೋ ವಿಚಾರ. ಈಗಾಗಲೇ ಕೇಂದ್ರ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಹಾಗೂ ವಯನಾಡ್‌ ಸಂಸದೆ ಪ್ರಿಯಾಂಕ ಗಾಂಧಿ ಸಂಭಲ್‌ಗೆ ಹೋಗುವಾಗ ಗಾಜಿಯಾಬಾದ್‌ ಗಡಿಯಲ್ಲಿ ಪೊಲೀಸರು ತಡೆದಿದ್ದರು. ಡಿಸೆಂಬರ್ 3 ರಂದು ಸಂಭಲ್ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೇಂದ್ರ ಪೆನ್ಸಿಯಾ ಅವರು ಗೌತಮ್ ಬುದ್ಧ ನಗರ ಮತ್ತು ಗಾಜಿಯಾಬಾದ್‌ನ ಪೊಲೀಸ್ ಕಮಿಷನರ್‌ಗಳು ಮತ್ತು ಅಮ್ರೋಹಾ ಮತ್ತು ಬುಲಂದ್‌ಶಹರ್ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದು ರಾಹುಲ್ ಗಾಂಧಿಯನ್ನು ತಮ್ಮ ಜಿಲ್ಲೆಗಳ ಗಡಿಯಲ್ಲಿ ತಡೆದು ನಿಲ್ಲಿಸುವಂತೆ ಒತ್ತಾಯಿಸಿದ್ದರು. ಈ ಬಗ್ಗೆ ರಾಹುಲ್‌ ಗಾಂಧಿ ಮಾತನಾಡಿ, ಸಂಭಲ್‌ಗೆ ನಾನು ಒಬ್ಬನೇ ಬೇಕಿದ್ದರೂ ಹೋಗ್ತೀನಿ, ಪೊಲೀಸರು ಜೊತೆಗೆ ಆದರೂ ಪರವಾಗಿಲ್ಲ. ಆದರೆ ನಾನು ಸಂಭಲ್‌ಗೆ ಹೋಗಲೇಬೇಕು ಎಂಬ ಹೇಳಿಕೆಯನ್ನ ಕೊಟ್ಟಿದ್ದರು.

ಉತ್ತರಪ್ರದೇಶದಲ್ಲಿ ದೀರ್ಘಕಾಲದವರೆಗೆ ಕೋಮುದ್ವೇಷದ ವಾತಾವರಣವನ್ನ ಸೃಷ್ಟಿಸಿಡೋಕೆ ಬಿಜೆಪಿ ಸರ್ಕಾರ ಸಿದ್ದತೆ ನಡೆಸಿದಂತೆ ಕಾಣಿಸುತ್ತಿದೆ. ಉತ್ತರ ಪ್ರದೇಶದ ಸಂಭಲ್‌ನಲ್ಲಿ ಪುರಾತನ ಮಸೀದಿಯೊಂದಕ್ಕೆ ಸಂಬಂಧಿಸಿ ದುರುದ್ದೇಶದಿಂದ ಹಾಕಿದ ಅರ್ಜಿಗೆ ಸ್ಪಂದಿಸಿ ತರಾತುರಿಯಿಂದ ಸರ್ವೇ ನಡೆಸಲು ಆದೇಶ ನೀಡಿ ಇಡೀ ಪ್ರದೇಶವನ್ನು ಹಿಂಸೆಗೆ ತಳ್ಳಿದ ಹೆಗ್ಗಳಿಕೆ ಅಲ್ಲಿನ ಸ್ಥಳೀಯ ನ್ಯಾಯಾಲಯಕ್ಕೆ ಸಲ್ಲಬೇಕು. ಸಂಭಾಲ್‌ನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಸಿವಿಲ್ ನ್ಯಾಯಾಧೀಶ ಆದಿತ್ಯ ಸಿಂಗ್‌ ಇವರು ಸೀನಿಯರ್‌ ಜಡ್ಜ್‌, ಇವರಿಗೆ ವಕೀಲ ಹರಿಶಂಕರ್ ಜೈನ್ ಮತ್ತು ಇತರ 7 ಮಂದಿ ನವೆಂಬರ್ 19 ಕ್ಕೆ ಒಂದು ಅರ್ಜಿಯನ್ನು ಸಲ್ಲಿಸ್ತಾರೆ. ಅರ್ಜಿದಾರರು ಸಂಭಾಲ್‌ನಲ್ಲಿರುವ 16 ನೇ ಶತಮಾನದ ಅಂದ್ರೆ ಸುಮಾರು 500 ವರ್ಷಗಳ ಹಳೆಯ ಜಾಮಾ ಮಸೀದಿಯನ್ನು ಪ್ರಾಚೀನ ಹರಿಹರ ಸ್ಥಳದಲ್ಲಿ ನಿರ್ಮಿಸಲಾಗಿದೆ ಅಂತ ಆರೋಪಿಸಿದ್ದರು. ಸಂಭಲ್‌ನಲ್ಲಿ ಮೊಘಲ್‌ ಸಾಮ್ರಾಟ ಬಾಬರ್‌ 1526ರಲ್ಲಿ ಮಸೀದಿಯನ್ನು ಕಟ್ಟಿಸಿದ ಅಂತ ಹಿಂದೂ ಪರ ವಕೀಲರು ವಾದಿಸಿದ್ದರು. ಹರಿಹರ ದೇವಾಲಯವನ್ನು ಕೆಡವಿ ಅದೇ ಜಾಗದಲ್ಲಿ ಮಸೀದಿ ನಿರ್ಮಿಸಿರುವುದಾಗಿ ಆರೋಪಿಸಿದ್ದರು. ವಾರಣಾಸಿಯ ಜ್ಞಾನವ್ಯಾಪಿ ಮಸೀದಿ ಮತ್ತು ಉತ್ತರ ಪ್ರದೇಶದ ಈದ್ಗಾ ಮಸೀದಿ ಮಥುರಾ ಮತ್ತು ಮಧ್ಯಪ್ರದೇಶದ ಧಾರ್‌ನಲ್ಲಿರುವ ಕಮಲ್-ಮೌಲಾ ಮಸೀದಿಯ ಪ್ರಕರಣದಲ್ಲಿ ಮಾಡಿದ ರೀತಿಯಲ್ಲೇ ಇದಕ್ಕೂ ಕೂಡ ಆರೋಪ ಮಾಡಲಾಯ್ತು. ಇದು ತುಂಬಾನೇ ಸಿರಿಯಸ್‌ ಮ್ಯಾಟರ್‌, 1586ರಲ್ಲಿ ಏನಾಗಿತ್ತು ಅಂತ ತಿಳಿಯೋದು ತುಂಬಾನೇ ಮುಖ್ಯ ಅಂತ ಅರಿತ ನ್ಯಾಯಾಧೀಶರು ವಿಚಾರಣೆ ನಡೆದ ಅದೇ ದಿನ ಸರ್ವೆ ಮಾಡೋಕೆ ಆದೇಶ ಕೊಡ್ತಾರೆ.

ನ್ಯಾಯಾಧೀಶರು ಮಸೀದಿಯ ಫೋಟೋ ಮತ್ತು ವೀಡಿಯೊಗ್ರಾಫಿಕ್ ಸಮೀಕ್ಷೆಗೆ ಆದೇಶಿಸುತ್ತಾರೆ ಮತ್ತು ಅದರ ವರದಿಯನ್ನು ನವೆಂಬರ್ 29ಕ್ಕೆ ಕೋರ್ಟ್‌ ಮುಂದೆ ಸಲ್ಲಿಸಬೇಕು ಅಂತ ಆದೇಶ ಮಾಡ್ತಾರೆ. ಆದೇಶದ ನಂತರ, ನ್ಯಾಯಾಲಯದಿಂದ ನೇಮಿಸಲ್ಪಟ್ಟ ವಕೀಲರು, ಕಮಿಷನರ್ ರಮೇಶ್ ರಾಘವ್ ಸೇರಿದಂತೆ ಸಮೀಕ್ಷಾ ತಂಡ ಮಸೀದಿಗೆ ಆಗಮಿಸ್ತಾರೆ. ಪೊಲೀಸ್ ವರಿಷ್ಠಾಧಿಕಾರಿ, ಮಸೀದಿ ಸಮಿತಿಯ ಸದಸ್ಯರು ಮತ್ತು ಸಂಭಾಲ್‌ನ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನೆವಂಬರ್‌ 19 ಕ್ಕೆ ಮೊದಲ ಸರ್ವೆ ಶಾಂತಿಯುತವಾಗಿ ನಡೆಯತ್ತೆ. ಇದಾದ ನಂತರ ನವೆಂಬರ್ 24 ಮತ್ತು ಸರ್ವೇಯರ್‌ಗಳು ಸರ್ವೇ ಮಾಡೋಕೆ ಎರಡನೇ ಸಲ ಬಂದಾಗ ದೊಡ್ಡ ಪ್ರಮಾಣದ ಹಿಂಸಾಚಾರಕ್ಕೆ ಇದು ಕಾರಣವಾಗತ್ತೆ. ಸಮೀಕ್ಷಾ ತಂಡದ ಅರ್ಜಿದಾರರಲ್ಲಿ ಒಬ್ಬರಾದ ಸ್ಥಳೀಯ ಪೂಜಾರಿ ಮತ್ತು ನಂತರ ಕೆಲವು ಸದಸ್ಯರು ಜೈ ಶ್ರೀ ರಾಮ್ ಘೋಷಣೆಗಳನ್ನು ಕೂಗಿದ್ದಾರೆ ಅನ್ನೋ ಮಾಹಿತಿ ಕೂಡ ಲಭ್ಯವಾಗಿದೆ. ಸರ್ವೇಯರ್‌ಗಳ ಜೊತೆಯಲ್ಲಿ ಪೋಲೀಸ್ ತಂಡ ಕೂಡ ಇತ್ತು. ಮಸೀದಿ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಜಮಾಯಿಸಿದ್ದರು. ಈ ವಿಚಾರ ಅಲ್ಲಿ ಕಲ್ಲು ತೂರಾಟಕ್ಕೆ ಕಾರಣ ಆಗತ್ತೆ. ಪೊಲೀಸರು ಗುಂಡಿನ ದಾಳಿ ನಡೆಸಿದ್ದು, ಇಬ್ಬರು ಹದಿಹರೆಯದವರು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ಪೊಲೀಸರು ಈ ಆರೋಪವನ್ನು ನಿರಾಕರಿಸಿದರು, ಗುಂಪನ್ನು ನಿಯಂತ್ರಿಸಲು ಲಾಠಿ ಚಾರ್ಜ್ ಮತ್ತು ಅಶ್ರುವಾಯು ಪ್ರಯೋಗಿಸಿದರು ಅಂತ ವಾದಿಸ್ತಾರೆ. ಸ್ಥಳೀಯ ಶಾಸಕ ಜಿಯಾವುರ್ ರೆಹಮಾನ್ ಬಾರ್ಕ್ ಅವರು ಪೊಲೀಸರ ಹೇಳಿಕೆಗಳನ್ನು ತಳ್ಳಿಹಾಕಿದ್ದರು. ಸತ್ತವರಲ್ಲಿ ತಮ್ಮ ದೈನಂದಿನ ಕೆಲಸಗಳಿಗಾಗಿ ಹೊರಗೆ ಹೋಗಿದ್ದ ಸಾಮಾನ್ಯ ಜನರೂ ಕೂಡ ಸೇರಿದ್ದಾರೆ ಅಂತ ವಾದಿಸಿದ್ದರು. ಪೊಲೀಸರು ತಮ್ಮ ಮನೆಗಳಿಗೆ ನುಗ್ಗಿದ್ದಾರೆ ಅಂತ ಅಲ್ಲಿನ ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಕೊನೆಗೆ ಮಧ್ಯ ಪ್ರವೇಶಿಸಿದ್ದ ಸುಪ್ರೀಂ ಕೋರ್ಟ್‌, ಸಿವಿಲ್‌ ಕೋರ್ಟ್ ವಿಚಾರಣೆಯನ್ನು ಸ್ಥಗಿತಗೊಳಿಸುವಂತೆ ಆದೇಶ ನೀಡಿದೆ. ಶಾಹಿ ಜಾಮಾ ಮಸೀದಿಯ ಸಮಿತಿಯು ಸರ್ವೇ ಕಾರ್ಯವನ್ನು ವಿರೋಧಿಸಿ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿತ್ತು. ಮುಖ್ಯ ನ್ಯಾಯಮೂರ್ತಿ ಸಂಜೀವ್‌ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್‌ ಕುಮಾರ್ ಅವರನ್ನು ಒಳಗೊಂಡ ಪೀಠವು ಅರ್ಜಿಯ ವಿಚಾರ ನಡೆಸಿತ್ತು. ಸಂಭಲ್‌ನಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಲು ಅಗತ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. ಹಾಗೇ ಮುಂದಿನ ವಿಚಾರಣೆಯನ್ನು 2025ರ ಜನವರಿ 6ಕ್ಕೆ ನಿಗದಿ ಪಡಿಸಿದೆ. ಈಗಾಗಲೇ ಆಗಿರುವ ಸರ್ವೇ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಸೂಚಿಸಲಾಗಿದೆ. ಸೋ ಇದಿಷ್ಟು ಇಲ್ಲಿ ತನಕ ಆಗಿರೋದು. ಹಾಗಾದ್ರೆ ಈ ಸಂಭಲ್‌ನ ಇತಿಹಾಸ ಏನ್‌ ಹೇಳತ್ತೆ?

Advertisements

ಸಂಭಲ್‌ ಇತಿಹಾಸ!
ಅಯೋಧ್ಯೆ ಅಥವಾ ವಾರಣಾಸಿಗಿಂತ ಈ ಸಂಭಲ್‌ ವಿಚಾರ ಸ್ವಲ್ಪ ಭಿನ್ನವಾಗಿದೆ. ಯಾಕಂದ್ರೆ ಅಯೋಧ್ಯೆ ಹಾಗೂ ವಾರಣಾಸಿ ಅನ್ನೋದು ಹಲವಾರು ವರ್ಷಗಳಿಂದ ನಡೆದುಕೊಂಡ ಬಂದ ಕೇಸ್‌ ಆಗಿತ್ತು. ಆದರೆ ಸಂಭಾಲ್ ವಿವಾದ ಈ ವರ್ಷವೇ ಶುರುವಾಗಿದ್ದು. ಶತಮಾನಗಳಿಂದ, ವಿವಿಧ ಸಮುದಾಯಗಳ ಜನರು ಇಲ್ಲಿ ಶಾಂತಿಯುತವಾಗಿ ವಾಸಿಸುತ್ತಿದ್ದಾರೆ. 1526 ಮತ್ತು 1530 ರ ನಡುವೆ ಮೊಘಲ್ ಚಕ್ರವರ್ತಿ ಬಾಬರ್ ನಿರ್ಮಿಸಿದ ಮೂರು ಮಸೀದಿಗಳಲ್ಲಿ ಸಂಭಾಲ್‌ನಲ್ಲಿರುವ ಜಾಮಾ ಮಸೀದಿಯೂ ಒಂದು. ಇನ್ನೆರಡು ಪಾಣಿಪತ್‌ನಲ್ಲಿರುವ ಮಸೀದಿ ಮತ್ತು 1992ರಲ್ಲಿ ಕೆಡವಲ್ಪಟ್ಟ ಅಯೋಧ್ಯೆಯ ಬಾಬರಿ ಮಸೀದಿ. ಸಂಭಾಲ್ ಮಸೀದಿಯನ್ನು ಬಾಬರ್‌ನ ಸೇನಾಪತಿ ಮೀರ್ ಹಿಂದೂ ಬೇಗ್ 1528 ರ ಸುಮಾರಿಗೆ ನಿರ್ಮಿಸ್ತಾನೆ. ಈ ಮಸೀದಿಯು ಪ್ರಸಿದ್ಧ ಇತಿಹಾಸಕಾರ ಹೊವಾರ್ಡ್ ಕ್ರೇನ್ ಅನ್ನೋ ಶೀರ್ಷಿಕೆಯ ಪ್ರಬಂಧದಲ್ಲಿ ಬರೆದಿದ್ದಾರೆ. “ಸಂಭಾಲ್‌ನ ಮಧ್ಯಭಾಗದಲ್ಲಿರುವ ಬೆಟ್ಟದ ಮೇಲೆ ಈ ಮಸೀದಿ ಇದೆ. ಇದು ದೊಡ್ಡದಾದ, ಅಭಯಾರಣ್ಯವನ್ನು ಒಳಗೊಂಡಿದೆ, ಜರ್ಜರಿತ ಗೋಡೆಗಳೊಂದಿಗೆ, ಗುಮ್ಮಟದಿಂದ ಮುಚ್ಚಲ್ಪಟ್ಟಿದೆ ಮತ್ತು ಉತ್ತರ ಮತ್ತು ದಕ್ಷಿಣದಲ್ಲಿ ಕಮಾನುಗಳಿಂದ ಸುತ್ತುವರಿಯಲ್ಪಟ್ಟಿದೆ. ಇದರ ಮುಂಭಾಗವು ಬುಡೌನ್‌ನಲ್ಲಿರುವ ಮಸೀದಿಯನ್ನು ಹೋಲತ್ತೆ. ಇವುಗಳನ್ನು ಹೆಚ್ಚಾಗಿ ಕೆಂಪು ಮರಳುಗಲ್ಲಿನಿಂದ ನಿರ್ಮಿಸಲಾಗಿದೆ. 17 ನೇ ಶತಮಾನದಲ್ಲಿ ಜಹಾಂಗೀರ್ ಮತ್ತು ಷಹಜಹಾನ್ ಆಳ್ವಿಕೆಯಲ್ಲಿ ಮಸೀದಿಯನ್ನು ಎರಡು ಬಾರಿ ದುರಸ್ತಿ ಮಾಡಲಾಯಿತು. ಹೆಚ್ಚಿನ ಇತಿಹಾಸಕಾರರು ಈ ಮಸೀದಿ ಆಗೋಕೆ ಬಾಬರ್‌ನ ಹಿಂದೂ ಬೇಗ್‌ ಕಾರಣ ಅಂತ ಹೇಳಿದ್ರೆ, ಕೆಲವರು ಮಸೀದಿಯು ವಾಸ್ತವವಾಗಿ ತುಘಲಕ್-ಯುಗದ ಸ್ಮಾರಕ ಅಂತ ನಂಬ್ತಾರೆ . ಅಷ್ಟೇ ಅಲ್ಲ ಮೊಘಲ್ ಸಂಸ್ಥಾಪಕರು ಿದರ ವಾಸ್ತುಶಿಲ್ಪಕ್ಕೆ ಕೆಲವು ವೈಶಿಷ್ಟ್ಯಗಳನ್ನು ಸೇರಿಸಿದ್ದಾರೆ. ಈ ಮಸೀದಿ ಹಿಂದೂ ಸಂಪ್ರದಾಯದ ಪ್ರಾಚೀನ ವಿಷ್ಣು ದೇವಾಲಯದ ಭಾಗಗಳನ್ನು ಒಳಗೊಂಡಿದೆ ಅಂತ ಕೂಡ ಕೆಲವರು ಹೇಳ್ತಾರೆ. ಅಷ್ಟೇ ಅಲ್ಲ ವಿಷ್ಣುವಿನ ಹತ್ತನೇ ಅವತಾರವಾದ ಕಲ್ಕಿ ಇಲ್ಲಿ ಅಂದ್ರೆ ಸಂಭಲ್‌ನಲ್ಲಿ ಹುಟ್ಟಿತ್ತಾರೆ ಅನ್ನೋದು ಹಿಂದೂಗಳ ನಂಬಿಕೆ ಕೂಡ ಹೌದು. ನಂಬಿಕೆ ಅಂತ ಎಲ್ಲಾ ಕಡೆ ಕಡವೋಕೆ ಆಗತ್ತಾ? ಇದಕ್ಕೆ ನಮ್ಮ ಕಾನೂನು ಒಪ್ಪತ್ತಾ ಕೇಳಿದ್ರೆ, ಇಲ್ಲ ನಮ್ಮ ಕಾನೂನು ಇದನ್ನ ಒಪ್ಪೋದಿಲ್ಲ. ಇದಕ್ಕೆ ಪೂಜಾ ಸ್ಥಳಗಳ ಕಾಯ್ದೆ ಒಪ್ಪೋದಿಲ್ಲ.

ಪೂಜಾ ಸ್ಥಳಗಳ ಕಾಯ್ದೆ ಅಂದ್ರೆ ಏನು?
‘1991ರ ಪೂಜಾ ಸ್ಥಳಗಳ ಕಾಯ್ದೆ’ ಪ್ರಕಾರ ದೇಶದ ಯಾವುದೇ ಧಾರ್ಮಿಕ ಸ್ಥಳದಲ್ಲಿ ಸದ್ಯ ಚಾಲ್ತಿಯಲ್ಲಿ ಇರುವ ಯಾವುದೇ ಧರ್ಮದ ಆಚರಣೆಯ ‘ಧಾರ್ಮಿಕ ಸ್ವರೂಪ’ವನ್ನು ಬದಲಿಸುವಂತಿಲ್ಲ. ದೇಶದ ಸ್ವಾತಂತ್ರ್ಯ ಬಂದ ದಿನ, ಅಂದರೆ 1947ರ ಆಗಸ್ಟ್‌ 15ರ ನಂತರ ಯಾವ ಧಾರ್ಮಿಕ ಸ್ಥಳದಲ್ಲಿ ಯಾವ ಧರ್ಮದ ಆಚರಣೆ ಇತ್ತೋ, ಅದೇ ಆಚರಣೆ ಮುಂದೆಯೂ ನಿರಂತರವಾಗಿ ಮುಂದುವರೆಯಬೇಕು. ಈ ರೀತಿ ನಿಯಮ ರೂಪಿಸಿ ಕೇಂದ್ರ ಸರ್ಕಾರವು ಜುಲೈ 11, 1991ರಂದು ಕಾಯ್ದೆ ರೂಪಿಸಿ ಜಾರಿಗೆ ತಂದಿತ್ತು. ಈ ಕಾಯ್ದೆಯ 4ನೇ ವಿಧಿಯ ಅನ್ವಯ, ಆಗಸ್ಟ್‌ 15, 1947ಕ್ಕೆ ಮುನ್ನ ಯಾವುದೇ ಧಾರ್ಮಿಕ ಸ್ಥಳದ ‘ಧಾರ್ಮಿಕ ಸ್ವರೂಪ’ ಬದಲಾಯಿಸಿ ಅಂತ ದೇಶದ ಯಾವುದೇ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರೆ, ಅದು ವಿಚಾರಣೆಯ ಯಾವ ಹಂತದಲ್ಲಿ ಇದ್ದರೂ ರದ್ದುಪಡಿಸಬೇಕು. ಹೊಸ ಅರ್ಜಿಗಳನ್ನಂತೂ ಸ್ವೀಕರಿಸುವಂತೆಯೇ ಇಲ್ಲ. 1991ರಲ್ಲಿ ಅಂದಿನ ಪ್ರಧಾನಿ ಪಿ. ವಿ. ನರಸಿಂಹ ರಾವ್ ಸಂಪುಟದ ಗೃಹ ಸಚಿವ ಶಂಕರ್‌ ರಾವ್ ಭವರ್‌ರಾವ್ ಚೌಹಾಣ್ ಅವರು ಈ ಕಾಯ್ದೆಯಲ್ಲಿ ಸಂಸತ್‌ನಲ್ಲಿ ಮಂಡಿಸಿ, ಅಂಗೀಕಾರ ಪಡೆದ ಬಳಿಕ ಕಾನೂನು ಜಾರಿಯಾಗಿತ್ತು. ಸೋ ಈ ಕಾನೂನಿನ ಪ್ರಕಾರ ಈಗ ನಡೀತಾ ಇರೋ ಅನ್ಯಾಯ ಹಾಗೂ ಕಾನೂನು ಪ್ರಕಾರ ನಡೀತಾ ಇಲ್ಲ ಅನ್ನೋದು ಗೊತ್ತಾಗತ್ತೆ..

ಒಂದಿಷ್ಟು ಮಂದಿ ಈಗ ಪ್ರಶ್ನೆ ಮಾಡಬಹುದು. ನೀನು ಹಿಂದೂ ಆಗಿ ಹಿಂದೂಗಳ ದೇವಾಲಯದ ಬಗ್ಗೆ ಹೀಗ್‌ ಹೇಳ್ತಿರಾ, ಇದು ತಪ್ಪಲ್ವಾ ಅಂತ.. ಇಲ್ಲ ಖಂಡಿತ ತಪ್ಪಲ್ಲ.. ನಾವು ಬದುಕಬೇಕು, ಜೀವನ ನಡೆಸಬೇಕು ಅಂತಾನೇ ಒಂದಿಷ್ಟು ಕಾನೂನುಗಳನ್ನ ಮಾಡಿಕೊಂಡಿದ್ದೇವೆ ನಾವೇ ಮಾಡಿಕೊಂಡ ಕಾನೂನುಗಳನ್ನ ನಾವೇ ಮುರಿದ್ರೆ ಮುಂದೆ ಈ ದೇಶ ಮಾದರಿ ದೇಶ ಆಗೋದಿಲ್ಲ, ಬೆಂಕಿ ಹೊತ್ತಿ ಉರಿಯೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಈ ಸಂಭಲ್‌ ವಿಚಾರದಲ್ಲಿ ರಾಜಕಾರಣಿಗಳ ವಿನಾ ಬೇರೆ ಯಾರಿಗೂ ಲಾಭ ಇಲ್ಲ. ಇಲ್ಲ ಹಳೇ ಹಿಂದೂ ದೇವಾಲಯಗಳೆಲ್ಲಾ ಹಿಂದೂಗಳಿಗೆ ಸೇರಿದ್ದು ಅಂತ ವಾದ ಮಾಡಿದಾಗ, ಬೌದ್ಧರು ಕೂಡ ಇದೇ ರೀತಿ ತಮ್ಮೆಲ್ಲಾ ದೇವಾಲಯಗಳ ಮೇಲೆ ಹಿಂದೂಗಳು ತಮ್ಮ ದೇವಸ್ಥಾನ ಕಟ್ಟಿಕೊಂಡಿದ್ದಾರೆ ಅಂತ ಕೋರ್ಟ್‌ಗೆ ಹೋದ್ರೆ ಏನಾಗಬಹುದು. ನಮ್ಮ ದೇಶದ ಅನೇಕ ಪ್ರಮುಖ ದೇವಾಲಯಗಳನ್ನು ಬೌದ್ಧ ಧಾರ್ಮಿಕ ಸ್ಥಳಗಳ ಅವಶೇಷಗಳ ಮೇಲೆ ನಿರ್ಮಿಸಲಾಗಿದೆ, ನಮ್ಮದೇ ಕಲ್ಲುಗಳಿಂದ ನಿರ್ಮಿಸಲಾಗಿದೆ ಅಂತಹ ದೇವಾಲಯಗಳನ್ನೂ ಕೂಡ ತನಿಖೆ ಮಾಡಬೇಕು ಅಂತ ಕೋರ್ಟ್‌ಗೆ ಹೋದ್ರೆ ಏನಾಗತ್ತೆ? ತನಿಖೆ ವೇಳೆ ಬೌದ್ಧ ದೇವಾಲಯಗಳು ಇದ್ದಿದ್ದು ಪ್ರೂವ್‌ ಆದ್ರೆ ಏನಾಗತ್ತೆ? ಆಗ ನಮ್ಮ ಕೋರ್ಟ್‌ ಏನ್‌ ಹೇಳಬಹುದು ಗೊತ್ತಾ? ಆಗ ನಾನು ಹೇಳದೇ ಅಲ್ವಾ ಪೂಜಾ ಸ್ಥಳಗಳ ಕಾಯ್ದೆ 1991 ಅನ್ನ ನಮ್ಮ ನ್ಯಾಯಾಲಯ ಎತ್ತಿ ಹಿಡಿಯತ್ತೆ. 1947 ರ ನಂತರ, ನೀವು ನಮ್ಮ ದೇಶದ ಯಾವುದೇ ಧಾರ್ಮಿಕ ಸ್ಥಳದ ಸ್ವರೂಪವನ್ನು ಬದಲಾಯಿಸಲು ಸಾಧ್ಯವಿಲ್ಲ ಅಂತ ನ್ಯಾಯಾಲಯ ಹೇಳತ್ತೆ.

ಪುಷ್ಯಮಿತ್ರನು ಬೌದ್ಧರನ್ನು ಕ್ರೂರವಾಗಿ ಹಿಂಸಿಸುತ್ತಿದ್ದ ಅಂತ ಬೌದ್ಧ ಗ್ರಂಥಗಳು ಹೇಳುತ್ತವೆ. ಬೌದ್ಧದ ಸ್ತೂಪಗಳನ್ನ ನಾಶ ಮಾಡಿ, ವಿಹಾರಗಳನ್ನ ಸುಟ್ಟು ಹಾಕಿ, ಬಿಕ್ಷುಗಳನ್ನ ಕೊಲ್ಲುತ್ತಿದ್ದ ಅಂತ ಹೇಳತ್ತೆ ಇತಿಹಾಸ. ಅದರಲ್ಲೂ ವಿಶೇಷವಾಗಿ ಮಧ್ಯಪ್ರದೇಶದಲ್ಲಿ ಅನೇಕ ಬೌದ್ಧ ಕೇಂದ್ರಗಳಲ್ಲಿ ಅವಶೇಷಗಳ ರಾಶಿಯೇ ಬಿದ್ದಿದೆ. ಇದನ್ನ ಕೆಡವಿದ್ದು ಯಾರು? ಇದೆಲ್ಲವೂ ಕೂಡ ಮುಸ್ಲಿಂ ಅಥವಾ ಮೊಘಲ್‌ ದೊರೆಗಳು ಆಕ್ರಮಣ ಮಾಡೋದಕ್ಕಿಂತ ಮೊದಲೇ ನಾಶವಾಗಿದ್ದು ಅಂತ ಹೇಳತ್ತೆ ಇತಿಹಾಸ. ಈ ಶೃಂಗನ ಕಾಲದ ನಂತೆ ಕೂಡ ಮಧ್ಯಪ್ರದೇಶದ ಬೌದ್ಧ ವಿಹಾರ, ಕೇಂದ್ರಗಳ ಮೇಲೆ ಅನೇಕ ದಾಳಿಗಳು ನಡೆದಿದೆ. ಅಹಮದ್‌ಪುರದಲ್ಲಿ 5ನೇ ಶತಮಾನದ ಒಂದು ಸ್ತೂಪ ಇದೆ. ಇದು ಸ್ತೂಪವೊಂದರ ಮೇಲೆ ದೇವಸ್ಥಾನದ ಕಟ್ಟಿದ ರೀತಿ ಕಾಣಿಸತ್ತೆ. ಇನ್ನೂ ವಿದಿಶಾದಲ್ಲಿ ಖಜೂರಾಹೋ ತಲೆ ಎತ್ತಿತ್ತೋ ಅದರಕ್ಕೂ ಮೊದಲು ಅಲ್ಲಿ ಇದ್ದದ್ದು ಬೌದ್ದ ನೆಲೆ. ಹಾಗಾದ್ರೆ ಈ ಎಲ್ಲಾ ಬೌದ್ದ ಮತ್ತು ಜೈನ ಮಠಗಳನ್ನ ಕೆಡವಿದ್ದು ಯಾರು? ಮಥುರಾದ ಭೂತೇಶ್ವರ ಹಾಗೂ ಗೋಕರ್ಣೇಶ್ವರ ದೇವಾಲಯಗಳು ಪ್ರಾಚೀನ ಬೌದ್ಧ ಕೇಂದ್ರಗಳಾಗಿತ್ತು. ವಾರಣಾಸಿ ಹತ್ತಿರದ ಸಾರನಾಥ ಕೂಡ ಬ್ರಾಹ್ಮಣರ ದಾಳಿಗೆ ಗುರಿಯಾಗಿದೆ. ಶಾವಸ್ತಿಯ ಕುಶಾನ ಬೌದ್ಧ ನೆಲೆಯನ್ನೂ ಕೂಡ ಬ್ರಾಹ್ಮಣರು ವಶಪಡಿಸಿಕೊಂಡಿದ್ದಾರೆ. 5ನೇ ಶತಮಾನದ ಚೀನಿ ಯಾತ್ರಿಕ ಪಾಹಿಯನ್‌ ಕೂಡ ಈ ಬಗ್ಗೆ ಹೇಳಿದ್ದಾರೆ. ಇನ್ನೂ ಉತ್ತರಪ್ರದೇಶದ ಸುಲ್ತಾನಪುರ ಜಿಲ್ಲೆಯೊಂದರಲ್ಲಿ 49 ಬೌದ್ಧ ವಿಹಾರಗಳಿಗೆ ಬೆಂಕಿ ಇಟ್ಟು ನಾಶ ಮಾಡಿರೋದು ಕೂಡ ಇದೆ. ಇನ್ನೂ 6ನೇ ಶತಮಾನದ ಹೂಣರಾಜ ಮೆಹಿರಕುಲಾ ಅನ್ನೋನು 1600 ಬೌದ್ಧ ಸ್ತೂಪ ಮತ್ತು ವಿಹಾರಗಳನ್ನ ನಾಶ ಮಾಡಿದ್ದಾರೆ. ಸಾವಿರಾರು ಭಿಕ್ಷುಗಳ ಹತ್ಯೆ ಮಾಡಿದ್ದಾನೆ. ಇದನ್ನ ಚೀನಿ ಯಾತ್ರಿಕ ಹ್ಯೂಯೇನ್‌ ತ್ಸಾಂಗ್‌ ಹೇಳಿದ್ದಾರೆ. ಇಷ್ಟೆಲ್ಲಾ ಇತಿಹಾಸ ಇರೋ ಹಿಂದೂ ದೇವಾಲಯಗಳ ತನಿಖೆ ಮಾಡಬೇಕು ಅಂತ ಬೌದ್ಧರು ಅರ್ಜಿ ಸಲ್ಲಿಸಿದ್ರೆ, ತನಿಖೆ ಮಾಡೋಕೆ ಅವಕಾಶ ಕೊಡ್ತಾರಾ?

ಅಂತಹ ಅರ್ಜಿಗಳನ್ನು ಸ್ವೀಕರಿಸೋಕೆ, ಹಿಂದೂ ದೇವಾಲಯಗಳನ್ನು ಸಮೀಕ್ಷೆ ಮಾಡೋಕೆ ನ್ಯಾಯಾಲಯ ಅನುಮತಿ ಕೊಟ್ಟರೆ ಏನಾಗಬಹುದು? ದೇಶದಲ್ಲಿ ಗದ್ದಲ ಉಂಟಾಗತ್ತೆ. ಯಾರಿಗೆ ಬೇಜಾರ್‌ ಆಗತ್ತೋ ಇಲ್ಲವೋ ಗೊತ್ತಿಲ್ಲ, ಆದ್ರೆ ನನಗಂತೂ ಬೇಜಾರ್‌ ಆಗೋದು ನಿಜ. ಇದ್ಯಾವುದು ಆಗಬಾರ್ದು ಅನ್ನೋ ಕಾರಣಕ್ಕೆ ಪೂಜಾ ಸ್ಥಳಗಳ ಕಾಯ್ದೆ 1991ನ್ನ ಜಾರಿ ಮಾಡಿರೋದು.ಆದ್ರೆ ಈಗ ಏನ್‌ ಆಗ್ತಾ ಇದೆ. ಆ ಪೂಜಾ ಸ್ಥಳಗಳ ಕಾಯ್ದೆಗೆ ಬೆಲೆಯೇ ಇಲ್ಲದಂತೆ ಆಗಿದೆ. ಸೋ ಈಗ ಪ್ರಶ್ನೆ ಬರೋದು, 500 ವರ್ಷಗಳ ಹಿಂದಿನ ಕತೆಯನ್ನ ಈಗ ಹೇಳಿದ್ರಿಂದ ಲಾಭ ಯಾರಿಗಿದೆ? ಆಕ್ಚುಲಿ ಹೇಳಬೇಕು ಅಂದ್ರೆ ಲಾಭ ಯಾರಿಗೂ ಇಲ್ಲ? ಪೊಲಿಟಿಷಿಯನ್ಸ್‌ ಬಿಟ್ರೆ ಬೇರೆ ಯಾರಿಗೂ ಲಾಭ ಇಲ್ಲ..

ಇನ್ನೂ ಈ ಬಗ್ಗೆ 2022 ರಲ್ಲಿ, ಕಾಶಿ ಗ್ಯಾನವಾಪಿ ಸೇರಿ ಇತರ ಮಸೀದಿಗಳ ಕುರಿತು ವಿವಾದ ಎದ್ದಿದ್ದ ಟೈಮ್‌ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್‌ ಒಂದು ಹೇಳಿಕೆ ನೀಡಿದ್ದರು. ‘ಪ್ರತಿ ಮಸೀದಿಯಲ್ಲೂ ಶಿವಲಿಂಗ ಹುಡುಕುವ ಹಾಗೂ ವಿವಾದ ಸೃಷ್ಟಿಸುವ ಅಗತ್ಯವಿಲ್ಲ. ದಿನಕ್ಕೊಂದು ಮಸೀದಿ ವಿವಾದ ಸೃಷ್ಟಿಸಬೇಕಿಲ್ಲ. ಮುಸ್ಲಿಮರೇನು ಹೊರಗಿನವರಲ್ಲ. ಅವರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದಾರೆ’ ಅಂತ ಹೇಳಿದ್ದರು. ಅಂದ್ರೆ ಈಗ ನಡೀತಾ ಇರೋ ಗಲಭೆ ದಾಂಧಲೆಗಳಿಂದ ಯಾರಿಗೆ ಲಾಭ? ರಾಜಕಾರಣಿಗಳಿಗೆ ಬಿಟ್ರೆ ಮತ್ಯಾರಿಗೂ ಇಲ್ಲ..ಸಂಭಲ್ ಶಾಹಿ ಮಸೀದಿ ವಿವಾದವು ಹಿಂದೂ-ಮುಸ್ಲಿಂ ಸಮುದಾಯಗಳ ನಡುವೆ ದ್ವೇಷ ಅಸೂಯೆ ಬಿತ್ತಲು ಜಾಣತನದಿಂದ ರೂಪಿಸಿದ ಒಂದು ಷಡ್ಯಂತ್ರ. ಅರ್ಜಿಯನ್ನು ಸಲ್ಲಿಸಿದ ರೀತಿ ಮತ್ತು ಸಮೀಕ್ಷೆಗೆ ತುರ್ತಾಗಿ ನೀಡಿದ ಆದೇಶ ನೂರಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಅಯೋಧ್ಯೆಯ ರಾಮಮಂದಿರದ ವಿಚಾರದಲ್ಲಿ ಕಾನೂನಿನ ಗೆಲುವು ಗಳಿಸಿದರೂ ಜನ ಬೆಂಬಲ ಸಿಕ್ಕಿರಲಿಲ್ಲ. ಈಗ ಕಾಶಿ ಹಾಗೂ ಮಥುರಾದ ಬಗ್ಗೆ ಹೆಚ್ಚು ಪ್ರಚಾರ ನಡೆಸುತ್ತಿದ್ದರು. ಆದರೆ ಕಾಶಿ ಹಾಗೂ ಮಥುರಾದಿಂದ ಹೆಚ್ಚು ಪ್ರಯೋಜನ ಆಗ್ತಾ ಇಲ್ಲ ಅನ್ನೋದನ್ನ ತಿಳಿದ ಸಂಘ ಪರಿವಾರದ ನಾಯಕರು ಸಂಭಲ್‌ನಂಥ ಮಸೀದಿಗಳ ಮೇಲೆ ಕಣ್ಣು ಹಾಕಿದ್ದಾರೆ. ದೇಶದಲ್ಲಿರುವ ಹಲವಾರು ಜೀವಂತ ಸಮಸ್ಯೆಗಳಿಗಿಂತ ಮುಖ್ಯವಾಗಿ ಮಸೀದಿಗಳನ್ನು ಬಂಡವಾಳ ಮಾಡಿಕೊಳ್ಳಲು ಹೊರಟಿದ್ದಾರೆ. ಇನ್ನೂ ಸಂಘಪರಿವಾರದ ಈ ಯೋಜನೆಗೆ ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಿ.ವೂ ಚಂದ್ರಚೂಡ್‌ ಕೂಡ ಸೊಪ್ಪು ಹಾಕಿದ್ದಾರೆ ಅನ್ನೋ ಮಾತು ಸೋಷಿಯಲ್‌ ಮೀಡಿಯಾಗಳನ್ನ ಓಡಾಡ್ತಾ ಇದೆ.

ಅಯೋಧ್ಯೆ ತೀರ್ಪು, 370 ರದ್ದತಿ ಎತ್ತಿ ಹಿಡಿಯುವ ತೀರ್ಪು, ಮಸೀದಿಗಳ ಸಮೀಕ್ಷೆಗಳ ತೀರ್ಪು ಸೇರಿದಂತೆ ದೇಶದ ಐತಿಹಾಸಿಕ ತೀರ್ಪುಗಳನ್ನು ನೀಡಿದವರು ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್‌. ಬಹುತೇಕ ತೀರ್ಪುಗಳು ಹಲವಾರು ವರ್ಷಗಳಿಂದ ವಿವಾದಕ್ಕೂ ಕೂಡ ಒಳಗಾಗಿದೆ. ಚಂದ್ರಚೂಡ್‌ ಅವರ ತೀರ್ಪುಗಳನ್ನು ಗಮನಿಸಿದರೆ ಅವರು ಕೆಲವರ ಕೈಗೊಂಬೆಯಾಗಿದ್ದರು ಅನ್ನೋ ಅನುಮಾನ ಬರದೇ ಇರೋಕೆ ಸಾಧ್ಯವೇ ಇಲ್ಲ. ಬಾಬ್ರಿ ಮಸೀದಿ – ಅಯೋಧ್ಯೆ ತೀರ್ಪು ಬಹುತೇಕ ಇಂದಿನ ಕೇಂದ್ರ ಸರ್ಕಾರದ ಪರವಾಗಿಯೇ ಇತ್ತು. ಅಯೋಧ್ಯೆ ತೀರ್ಪನ್ನು ದೇವರೇ ನನ್ನ ಕೈಯಿಂದ ಕೊಡಿಸಿದ ಅನ್ನೋ ಮಾತನ್ನು ಚಂದ್ರಚೂಡ್‌ ಅವರು ಹೇಳಿದ್ದಾರೆ. ಚಂದ್ರಚೂಡ್‌ರ ಹಲವು ವಿಷಯಗಳ ಬಗ್ಗೆ ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯವಾದಿ ಹಾಗೂ ಸುಪ್ರೀಂ ಕೋರ್ಟ್ ಬಾರ್‌ ಅಸೋಸಿಯೇಷನ್‌ನ ಮಾಜಿ ಅಧ್ಯಕ್ಷರಾದ ದುಷ್ಯಂತ್‌ ದವೆ ಅವರು ತುಂಬಾ ನೋವಿನಿಂದ ಹೇಳಿಕೊಂಡಿದ್ದಾರೆ.

ಹಿರಿಯ ಪತ್ರಕರ್ತ ಕರಣ್‌ ತಾಪರ್‌ ಅವರು ‘ದಿ ವೈರ್‌’ ಸುದ್ದಿ ಮಾಧ್ಯಮಕ್ಕೆ ಕೊಟ್ಟ ಸಂದರ್ಶನದಲ್ಲಿ ಹಲವು ಗಂಭೀರ ವಿಚಾರಗಳನ್ನು ದುಷ್ಯಂತ್‌ ದವೆ ಪ್ರಸ್ತಾಪಿಸಿದ್ದಾರೆ. ಮಸೀದಿಗಳ ಸಮೀಕ್ಷೆಗೆ ಅನುಮತಿ ನೀಡುವ ಮೂಲಕ ಚಂದ್ರಚೂಡ್ ಅವರು ಸಂವಿಧಾನ ಹಾಗೂ ದೇಶಕ್ಕೆ ದೊಡ್ಡ ಅಪಚಾರ ಮಾಡಿದ್ದಾರೆ. ಬಿಜೆಪಿ ನೇತೃತ್ವದ ಸರ್ಕಾರ ದೇಶವನ್ನು ಅಸ್ಥಿರಗೊಳಿಸುವುದರ ಜೊತೆಗೆ ಅಲ್ಪಸಂಖ್ಯಾತ ಸಮುದಾಯವನ್ನು ನಿಗ್ರಹಿಸಲು ದಬ್ಬಾಳಿಗೆ ನಡೆಸುತ್ತಿದೆ. ಒಂದು ಸಮುದಾಯ ಅಥವಾ ಒಂದು ಸರ್ಕಾರದ ಪರವಾಗಿ ಪ್ರಮುಖ ತೀರ್ಪುಗಳನ್ನು ನೀಡಿರುವುದನ್ನು ಸೂಕ್ಷ್ಮವಾಗಿ ಗಮನಿಸಿದರೆ ರಾಜಕೀಯ ನಾಯಕರಿಂದ ಚಂದ್ರಚೂಡ್‌ ಪ್ರಭಾವಿತರಾಗಿದ್ದರು. ಚಂದ್ರಚೂಡ್‌ ನೀಡಿದ ತೀರ್ಪುಗಳು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಪರೋಕ್ಷವಾಗಿ ಅನುಕೂಲವಾಗಿವೆ” ಅಂತ ಹೇಳಿದ್ದಾರೆ.

ಅಯೋಧ್ಯೆ ತೀರ್ಪು ಪ್ರಕಟವಾದ ನಂತರದಲ್ಲಿ ವಾರಣಾಸಿ, ಮಥುರಾ, ಶಾಹಿ ಈದ್ಗಾ, ಅಜ್ಮೀರ್‌ನ ಮಸೀದಿ ಸೇರಿದಂತೆ ಹತ್ತಾರು ಸ್ಥಳಗಳಲ್ಲಿರುವ ಪ್ರಮುಖ ಮಸೀದಿಗಳ ಬಳಿ ಹಿಂದೂ ದೇವಾಲಯಗಳ ಪುರಾವೆಯಿವೆ ಅನ್ನೋ ಕಾರಣಕ್ಕೆ ಕೆಳ ಹಂತದ ನ್ಯಾಯಾಲಯಗಳು ಸಮೀಕ್ಷೆಗೆ ಅನುಮತಿ ನೀಡ್ತಾ ಇದೆ. ಇತ್ತೀಚಿಗೆ ಉತ್ತರ ಪ್ರದೇಶದ ಸಂಭಲ್‌ನಲ್ಲಿ ಘಟಿಸಿದ ಗಲಭೆಗಳಿಂದ ಅಮಾಯಕರು ಪ್ರಾಣ ಕಳೆದುಕೊಳ್ಳುವಂತಾಯಿತು. ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ತನ್ನ ರಾಜಕೀಯ ದುರುದ್ದೇಶಗಳನ್ನು ಈಡೇರಿಸಿಕೊಳ್ಳಲು ದೇಶಕ್ಕೆ ಕೋಮು ದ್ವೇಷದ ಬೆಂಕಿ ಹಚ್ಚುವುದರ ಜೊತೆ ಸಾಮಾನ್ಯ ಜನರ ಪ್ರಾಣಗಳ ಜೊತೆ ಆಟವಾಡುತ್ತಿದೆ. ಅಭಿವೃದ್ಧಿ ಹೊಂದುತ್ತಿರುವ ಭಾರತ ದೇಶದಲ್ಲಿ ಇದೊಂದು ಅಸಾಧಾರಣ ಗಂಭೀರ ಪರಿಸ್ಥಿತಿಯಾಗಿದೆ. 1991ರ ಪೂಜಾಸ್ಥಳಗಳ ಕಾಯಿದೆಯ ಪ್ರಕಾರ ದೇಶದ ಎಲ್ಲ ಪೂಜಾಸ್ಥಳಗಳನ್ನು 1947ರ ಆಗಸ್ಟ್ 15ರಂದು ಇದ್ದ ಸ್ಥಿತಿಯಲ್ಲಿಯೇ ಇರಿಸಬೇಕು. ಹಾಗಾದ್ರೆ ಸರ್ವೆಗೆ ಅವಕಾಶ ಕೊಡೊ ನ್ಯಾಯಾಧೀಶರಿಗೆ ಈ ವಿಚಾರ ಗೊತ್ತಿಲ್ವಾ ? ಅತವಾ ಗೊತ್ತಿದ್ದೂ ಈ ಎಲ್ಲಾ ತಪ್ಪುಗಳನ್ನ ಮಾಡ್ತಿದ್ದಾರಾ ಅನ್ನೋ ಪ್ರಶ್ನೆ ಬರತ್ತೆ. ಈ ಬಗ್ಗೆ ನ್ಯಾಯಮೂರ್ತಿಗಳು ಕೂಡ ಉತ್ತರ ಕೊಡಲೇಬೇಕಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಬಣದಲ್ಲಿ ಅಸಮಾಧಾನ : ಎಂಎಲ್ ಸಿ ಕಾರು ತಡೆ ವಾಗ್ವಾದ

ಎಂಎಲ್ ಸಿ ಶರಣಗೌಡ ಪಾಟೀಲ್‌ ಅವರ ಕಾರಿಗೆ ಡಿ ಎಸ್ ಹುಲಗೇರಿ...

ಕಲಬುರಗಿ | ಮೂರು ತಿಂಗಳಿಂದ ಪಾವತಿಯಾಗದ ʼಗೃಹಲಕ್ಷ್ಮೀʼ ಹಣ : ವೆಲ್ಫೇರ್ ಪಾರ್ಟಿ ಆಕ್ರೋಶ

ಕರ್ನಾಟಕ ರಾಜ್ಯ ಸರ್ಕಾರ ಜಾರಿಗೊಳಿಸಿದ ಪಂಚ ಗ್ಯಾರಂಟಿಯ ಗೃಹಲಕ್ಷ್ಮೀ ಯೋಜನೆಯ ಹಣ...

ಬೆಳಗಾವಿ : ಮೂರು ವರ್ಷದ ಹೆಣ್ಣು ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋದ ತಂದೆ ತಾಯಿ

ತಾಯಿಯ ಮಡಿಲಿಗೆ ತವಕಿಸುತ್ತಿರುವ ಮೂರು ವರ್ಷದ ಹೆಣ್ಣುಮಗುವನ್ನು ಆಸ್ಪತ್ರೆಯಲ್ಲಿ ತಂದೆ ತಾಯಿಗಳು...

Download Eedina App Android / iOS

X