ಅದಾನಿ ಮೇಲಿನ ಲಂಚ ಪ್ರಕರಣ ಕುರಿತು ಜಂಟಿಸದನ ಸಮಿತಿ ಮೂಲಕ ತನಿಖೆ ಹಾಗೂ ಮಣಿಪುರದಲ್ಲಿ ಹಿಂಸಾಚಾರ ಪ್ರಚೋದನೆ ತಡೆಗಟ್ಟುವಂತೆ ಒತ್ತಾಯಿಸಿ ದಾವಣಗೆರೆ ಸಿಪಿಐ ವತಿಯಿಂದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಬಳಿಕ ನಗರದ ಅಶೋಕ ರಸ್ತೆಯ ಪಂಪಾಪತಿ ಭವನದಿಂದ ಪ್ರತಿಭಟನೆ ಮೆರವಣಿಗೆ ಮೂಲಕ ಘೋಷಣೆಗಳನ್ನು ಕೂಗುತ್ತ ಸಾಗಿದ ಸಿಪಿಐ ಕಾರ್ಯಕರ್ತರು ಗಾಂಧಿ ಸರ್ಕಲ್, ಹಳೆ ಬಸ್ ನಿಲ್ದಾಣದ ಮೂಲಕ ಉಪ ವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಅಲ್ಲಿ ಬಹಿರಂಗ ಸಭೆ ನಡೆಸಿದ್ದು, ಉಪ ವಿಭಾಗಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ದಾವಣಗೆರೆಯಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಮುಖಂಡರು, “ಅದಾನಿ ಮೇಲಿನ ಲಂಚ ಪ್ರಕರಣದ ಕುರಿತು ಜೆಪಿಸಿ ಮೂಲಕ ತನಿಖೆ ನಡೆಸಬೇಕು. ಮಣಿಪುರದಲ್ಲಿ ಬಹಳಷ್ಟು ದಿನಗಳಿಂದ ಹಿಂಸಾಚಾರ ಅರಾಜಕತೆ ತಲೆದೋರಿದೆ. ಹಾಗಾಗಿ ಶಾಂತಿ ಮರುಸ್ಥಾಪನೆ ಮಾಡಬೇಕು. ಕೋಮು ಭಾವನೆ ಕೆರಳಿಸಿ ಹಿಂಸಾಚಾರಕ್ಕೆ ಪ್ರಚೋದಿಸುತ್ತಿರುವುದನ್ನು ತಡೆಗಟ್ಟಬೇಕು” ಎಂದು ಒತ್ತಾಯಿಸಿದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ಮಾತನಾಡಿ “ದಿನೇ ದಿನೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಹೆಚ್ಚಾಗಿದೆ. ನಿರುದ್ಯೋಗ ಸಮಸ್ಯೆ ಪರಿಹರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಜನವಿರೋಧಿ ಆಡಳಿತ ನೆಡೆಸುತ್ತಿದೆ. ಮಣಿಪುರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ತುರ್ತುಕ್ರಮ ಕೈಗೊಳ್ಳಬೇಕು. ಅದಾನಿ ಪ್ರಕರಣವನ್ನು ಜಂಟಿಸದನ ಸಮಿತಿ ಮೂಲಕ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಹಾಸನ l ರೈತರಿಗೆ ಬೆಂಬಲ ಬೆಲೆ: ಸಂಸದರು ಧ್ವನಿ ಎತ್ತದಿದ್ದರೆ ಉಪವಾಸ ಸತ್ಯಾಗ್ರಹ; ರೈತ ಸಂಘ ಎಚ್ಚರಿಕೆ
ಪ್ರತಿಭಟನೆಯಲ್ಲಿ ಸಿಪಿಐ ಜಿಲ್ಲಾ ಸಹಕಾರ್ಯದರ್ಶಿ ಹೆಚ್ ಜಿ ಉಮೇಶ್, ಜಿಲ್ಲಾ ಮಂಡಳಿ ಸದಸ್ಯ ಪಿ ಷಣ್ಮುಖಸ್ವಾಮಿ, ಐರಣಿ ಚಂದ್ರು, ಎರಗುಂಟಿ ಸುರೇಶ್, ಎಚ್ ಎಸ್ ಚಂದ್ರು, ನಿಟುವಳ್ಳಿ ಬಸವರಾಜ್, ಸಿ ರಮೇಶ್, ಬಿ ಕಲ್ಪನಳ್ಳಿ ವಸಂತ ಕುಮಾರ್, ಕೆರನಹಳ್ಳಿ ರಾಜು, ರಂಗನಾಥ್, ಚಿನ್ನಪ್ಪ, ವಿ ಲಕ್ಷ್ಮಣ, ಸಿದ್ದಲಿಂಗೇಶ್, ರುದ್ರೇಶ್ ಲೋಕಿಕೆರೆ, ತಿಪ್ಪೇಸ್ವಾಮಿ, ಉಮೇಶ್ ಸೇರಿದಂತೆ ಇತರರು ಇದ್ದರು.