ಚಳ್ಳಕೆರೆ ನಗರದ ಆಯ್ದ 62 ಕಡೆಗಳಲ್ಲಿ ನಾಗರಿಕರ ಸುರಕ್ಷತೆಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಒತ್ತಾಯಿಸಿ ಮುಖಂಡ ಪಾಟೀಲ್ ಕೃಷ್ಣೆಗೌಡ ಎನ್ನುವರು ಏಕಾಂಗಿಯಾಗಿ ನಗರಸಭೆ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಪ್ರಾರಂಭಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದ ಸುರಕ್ಷತೆ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಆಯ್ದ ಕೆಲವು ಸೂಕ್ಷ್ಮ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಆ ಮೂಲಕ ನಗರದಲ್ಲಿ ನಡೆಯುವ ಸರಗಳ್ಳತನ, ಅಕ್ರಮಗಳು, ದರೋಡೆ, ಕಳ್ಳತನ, ದೌರ್ಜನ್ಯ, ದ್ವಿಚಕ್ರವಾಹನ ಕಳ್ಳತನದಂತಹ ಘಟನೆಗಳನ್ನು ನಿಯಂತ್ರಿಸಬೇಕು ಎನ್ನುವ ಸದುದ್ದೇಶ ಇಟ್ಟುಕೊಂಡು ಈ ಪ್ರತಿಭಟನೆಗೆ ಮುಂದಾಗಿದ್ದಾರೆ.
ಈ ಕುರಿತು ಈ ದಿನ.ಕಾಮ್‌ನೊಂದಿಗೆ ಮಾತನಾಡಿದ ಅವರು, “ಐಐಎಸ್‌ಸಿ, ಡಿಆರ್‌ಡಿಒದಂತಹ ಪ್ರತಿಷ್ಠಿತ ಸಂಸ್ಥೆಗಳು ಚಳ್ಳಕೆರೆಗೆ ಬಂದ ಮೇಲೆ ಚಳ್ಳಕೆರೆ ವಿಜ್ಞಾನ ನಗರಿ ಎಂದು ಹೆಸರುವಾಸಿಯಾಗಿದೆ. ಹೆಸರಿಗಷ್ಟೇ ವಿಜ್ಞಾನ ನಗರಿಯಾಗಿದ್ದು, ವೈಜ್ಞಾನಿಕವಾಗಿ ಇಲ್ಲಿ ನಗರದ ನಾಗರಿಕರ ಸುರಕ್ಷತೆಗೆ ನಗರಸಭೆ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಆರೋಪಿಸಿದರು.
“ನಗರದ ಸೂಕ್ಷ್ಮ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅವಶ್ಯಕತೆ ಇದೆ. ನಗರ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಟ್ರಾಫಿಕ್ ಸಿಗ್ನಲ್‌ಗಳಲ್ಲಿ, ಬೇರೆ ಬೇರೆ ಕಡೆಗಳಲ್ಲಿ ಉತ್ತಮ ಸೌಲಭ್ಯ ನೀಡುವ ಅವಶ್ಯಕತೆ ಹೆಚ್ಚಿದೆ. ನಗರಕ್ಕೆ ಸೌಲಭ್ಯಗಳನ್ನು ಕಲ್ಪಿಸುವ ನಗರಸಭೆ ಇದಕ್ಕೆ ನೇರ ಹೊಣೆಯಾಗಿದ್ದು, ಅವರ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದೇನೆ. ಸಾರ್ವಜನಿಕರು ಬೆಂಬಲ ನೀಡಬೇಕು” ಎಂದು ಕೋರಿದರು.
ಈ ಸುದ್ದಿ ಓದಿದ್ದೀರಾ? ಕನಕಪುರ | ಉದಾತ್ತ ರಾಜಕಾರಣಿಗಳ ಸಾಲಿನಲ್ಲಿ ಎಸ್ ಎಂ ಕೃಷ್ಣ ಕೂಡ ಒಬ್ಬರು: ಕುಮಾರಸ್ವಾಮಿ
ಚಳ್ಳಕೆರೆ ನಗರಸಭೆ ವ್ಯಾಪ್ತಿಯಲ್ಲಿ ಸಿಸಿಟಿವಿ ಸುರಕ್ಷತಾ ಕ್ಯಾಮೆರಾಗಳನ್ನು ಅಳವಡಿಸುವಂತೆ ಏಕಾಂಗಿಯಾಗಿ ಅನಿರ್ದಿಷ್ಟಾವಧಿ ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ಈ ಏಕಾಂಗಿ ಪ್ರತಿಭಟನೆಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.