ಕೇಂದ್ರ – ಆರ್‌ಬಿಐ ನಡುವೆ ನಿರಂತರ ಸಂಘರ್ಷ: ಆರ್ಥಿಕ ಭದ್ರತೆಗಾಗಿ ಆರ್‌ಬಿಐ ಗಟ್ಟಿ ನಿಲುವು

Date:

Advertisements

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ಚುಕ್ಕಾಣಿ ಹಿಡಿದಿರುವ ಶಕ್ತಿಕಾಂತ ದಾಸ್ ಅವರ ಅಧಿಕಾರಾವಧಿಯು ಡಿಸೆಂಬರ್ 10ರಂದು ಕೊನೆಗೊಂಡಿದೆ. ಎರಡು ಅವಧಿಗಳಿಗೆ ಆರ್‌ಬಿಐ ಗವರ್ನರ್ ಆಗಿದ್ದ ದಾಸ್, ತಮ್ಮ ಹುದ್ದೆಯಿಂದ ನಿವೃತ್ತರಾಗಿದ್ದಾರೆ. ಅವರ ಅಧಿಕಾರಾವಧಿಯ ಅಂತ್ಯದ ಸಮಯವು ಕೇಂದ್ರ ಸರ್ಕಾರದೊಂದಿಗಿನ ಸಂಘರ್ಷದೊಂದಿಗೆ ಅಂತ್ಯಗೊಂಡಿದೆ.

ಕೇಂದ್ರ ಮತ್ತು ಆರ್‌ಬಿಐ ನಡುವಿನ ಇಂತಹ ಜಗಳ ಹೊಸತೇನೂ ಅಲ್ಲದಿದ್ದರೂ, ಅಗತ್ಯವಾದದ್ದು ಎಂಬುದು ಸ್ಪಷ್ಟ. ಭಾರತವು ಎಲ್‌ಪಿಜಿ (ಉದಾರೀಕರಣ, ಖಾಸಗೀಕರಣ, ಜಾಗತೀಕರಣ) ನೀತಿಯನ್ನು ಒಳಗೊಂಡಾಗಿನಿಂದ ಆರ್‌ಬಿಐ ಮತ್ತು ಕೇಂದ್ರದ ನಡುವೆ ತಿಕ್ಕಾಟಗಳು ಆರಂಭವಾಗಿದೆ. ಅದರಲ್ಲೂ, ಕಳೆದ 20-25 ವರ್ಷಗಳಿಂದ ಸರ್ಕಾರಗಳು ತಮ್ಮ ಹಣಕಾಸು ನೀತಿಗಳಲ್ಲಿ ಆರ್‌ಬಿಐ ಮಾನದಂಡಗಳನ್ನು ಮೀರಿ ನಡೆದುಕೊಂಡಿದ್ದವು. ಅದನ್ನು ಆರ್‌ಬಿಐ ತೀವ್ರವಾಗಿ ಖಂಡಿಸಿತ್ತು. ಹಲವಾರು ವಿಚಾರಗಳಲ್ಲಿ ತನ್ನ ನಿಲುವಿಗೆ ಬದ್ಧವಾಗಿ ಕೆಲಸ ಮಾಡಿದೆ. ಆದರೆ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಆರ್‌ಬಿಐಅನ್ನೇ ತನ್ನ ಅಣತಿಯಲ್ಲಿ ಕೆಲಸ ಮಾಡುವ ಸಂಸ್ಥೆಯಾಗಿ ಮಾಡಿಕೊಳ್ಳಲು ಭಾರೀ ಕಸರತ್ತು ನಡೆಸುತ್ತಿದೆ. ಈ ವಿಫಲ ಪ್ರಯತ್ನಕ್ಕೆ ಈವರೆಗೆ ಯಶಸ್ಸು ಸಿಕ್ಕಿಲ್ಲ. ಆರ್‌ಬಿಐ ಕೇಂದ್ರದ ಅಣತಿಗೆ ಸಿಗುತ್ತಿಲ್ಲ.

ಒಂದು ವೇಳೆ, ಆರ್‌ಬಿಐ ಸರ್ಕಾರದ ಕೈಗೊಂಬೆಯಾದರೆ, ಸರ್ಕಾರದ ತಾಣಕ್ಕೆ ತಕ್ಕಂತೆ ಕುಣಿದರೆ, ಸರ್ಕಾರದ ನೀತಿ, ನಿರ್ಧಾರ, ನಡೆಗಳಿಗೆ ಮಣೆ ಹಾಕಿದರೆ ದೇಶದ ಆರ್ಥಿಕತೆ ದಿವಾಳಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದನ್ನು, ಕಳೆದೊಂದು ದಶಕದಲ್ಲಿ ಆರ್‌ಬಿಐನ ಕಾರ್ಯನಿರ್ವಹಣೆಗಳ ಚುಕ್ಕಾಣಿ ಹಿಡಿದಿದ್ದ ಎಲ್ಲ ಗವರ್ನರ್‌ಗಳೂ ಹೇಳಿದ್ದಾರೆ. ಆದಾಗ್ಯೂ, ಅದಾನಿ-ಅಂಬಾನಿಯಂತಹ ಬಂಡವಾಳಶಾಹಿಗಳ ಉದ್ದಾರಕ್ಕಾಗಿಯೇ ನಾವಿರುವುದು ಎಂಬಂತೆ ನಡೆದುಕೊಳ್ಳುತ್ತಿರುವ ಮೋದಿ ಸರ್ಕಾರ, ಆಗ್ಗಾಗ್ಗೆ ಆರ್‌ಬಿಐಅನ್ನು ಕೆಣಕುತ್ತಿದೆ. ಕೇಂದ್ರ ಬ್ಯಾಂಕ್‌ನಲ್ಲಿರುವ (ಆರ್‌ಬಿಐ) ಮೀಸಲು ಹಣವನ್ನು ಕರಗಿಸಲು, ಆ ಹಣವನ್ನು ಹೊರತಂದು ತಮ್ಮ ಮಿತ್ರರಿಗೆ ಸಾಲದ ರೂಪದಲ್ಲಿ ಕೊಡಲು ಹವಣಿಸುತ್ತಿದೆ. ಆದರೆ, ಅದಕ್ಕೆ ಆರ್‌ಬಿಐನ ಗವರ್ನರ್‌ಗಳು ಮಣೆ ಹಾಕುತ್ತಿಲ್ಲ.

Advertisements

ಆರ್‌ಬಿಐನಲ್ಲಿ ಗವರ್ನರ್‌ ಆಗಿದ್ದ ಹಲವರು ಕೇಂದ್ರ ಬ್ಯಾಂಕ್‌ನ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯವನ್ನು ರಕ್ಷಿಸಲು ನಿರಂತರವಾಗಿ ಕೇಂದ್ರ ಸರ್ಕಾರದೊಂದಿಗೆ ತಿಕ್ಕಾಟ ನಡೆಸಿದ್ದಾರೆ. ಜಿಡಿಪಿ ಬೆಳವಣಿಗೆಯನ್ನು ಹೆಚ್ಚಿಸಲು ರೆಪೊ ದರ ಕಡಿತಗೊಳಿಸಬೇಕು, ಹಣಕಾಸು ನೀತಿಯಲ್ಲಿ ಬದಲಾವಣೆ ತರಬೇಕು ಎಂಬ ಕೇಂದ್ರದ ವಾದವನ್ನು ಗಂಭೀರವಾಗಿ ಆರ್‌ಬಿಐ ನಿರಾಕರಿಸುತ್ತಲೇ ಬಂದಿದೆ. ಶಕ್ತಿಕಾಂತ್‌ ದಾಸ್‌ ಅವರಿಗೂ ಮೊದಲು ಗವರ್ನರ್‌ ಅಗಿದ್ದ ವೈ.ವಿ ರೆಡ್ಡಿ, ಡಿ ಸುಬ್ಬರಾವ್, ರಘುರಾಮ್ ರಾಜನ್ ಮತ್ತು ಊರ್ಜಿತ್ ಪಟೇಲ್ ಅವರು ಕೂಡ ರೆಪೊ ದರಗಳನ್ನು ಕಡಿತಗೊಳಿಸುವುದೂ ಸೇರಿದಂತೆ ಹಲವು ವಿಷಯಗಳಲ್ಲಿ ಕೇಂದ್ರ ಸರ್ಕಾರದೊಂದಿಗೆ ಸಂಘರ್ಷ ನಡೆಸಿದ್ದರು ಎಂಬುದು ಗಮನಾರ್ಹ.

ಡಿಸೆಂಬರ್ 8ರಂದು ನಡೆದ ವಿತ್ತೀಯ ನೀತಿ ಪರಾಮರ್ಶೆಗೆ ಮುಂಚಿತವಾಗಿ ಇಬ್ಬರು ಕೇಂದ್ರ ಸಚಿವರು ಇತ್ತೀಚೆಗೆ ರೆಪೊ ದರದಲ್ಲಿ ಕಡಿತದ ಪ್ರಸ್ತಾಪ ಇಟ್ಟಿದ್ದರು. ಇದು, ಆರ್‌ಬಿಐ ಮತ್ತು ಕೇಂದ್ರದ ನಡುವಿನ ಜಗಳ ಮತ್ತೆ ಆರಂಭವಾಗುವಂತೆ ಮಾಡಿತು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೈಗಾರಿಕೆಗಳನ್ನು ಹೆಚ್ಚಿಸಲು ಮತ್ತು ಬೆಂಬಲಿಸಲು ‘ಕೈಗೆಟುಕುವಂತೆ ಬ್ಯಾಂಕ್ ಬಡ್ಡಿ ದರ ಇಳಿಸಬೇಕು’ ಎಂದಿದ್ದರು. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಆರ್‌ಬಿಐ ಬಡ್ಡಿದರಗಳನ್ನು ಕಡಿತಗೊಳಿಸಬೇಕು ಎಂದು ಒತ್ತಾಯಿಸಿದರು. ಆದಾಗ್ಯೂ, ಸರ್ಕಾರದ ಪ್ರಸ್ತಾಪಕ್ಕೆ ಮಣೆ ಹಾಕದ ಆರ್‌ಬಿಐ, ರೆಪೊ ದರವನ್ನು 6.50%ಗೆ ಇಳಿಸಲು ಸಾಧ್ಯವಿಲ್ಲ ಎಂದು ಹೇಳಿತು.

2003ರಿಂದ 2008ರವರೆಗೆ ಆರ್‌ಬಿಐ ಗವರ್ನರ್ ಆಗಿದ್ದ ವೈ.ವಿ ರೆಡ್ಡಿ, ಆಗಿನ ಹಣಕಾಸು ಸಚಿವ ಪಿ ಚಿದಂಬರಂ ಅವರೊಂದಿಗೆ ತಿಕ್ಕಾಟ ನಡೆಸಿದ್ದರು. ಇಬ್ಬರ ನಡುವಿನ ತಿಕ್ಕಾಟವನ್ನು ಪರಿಹರಿಸಲು ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಮಧ್ಯಪ್ರವೇಶಿಸಿದ್ದರು. ಆ ಬಳಿಕ, ರೆಡ್ಡಿ ಅವರು ಸಚಿವರಿಗೆ ಬೇಷರತ್ ಕ್ಷಮೆಯಾಚಿಸಿದರು. ಅಲ್ಲದೆ, ತಮ್ಮ ಅಧಿಕಾರಾವಧಿಯಲ್ಲಿ ಎರಡು ಬಾರಿ ರಾಜೀನಾಮೆ ನೀಡಲು ಯೋಚಿಸಿದ್ದ ರೆಡ್ಡಿ, ”ಆರ್‌ಬಿಐಗೆ ನಿರ್ದೇಶನಗಳನ್ನು ನೀಡಲು ಸರ್ಕಾರಕ್ಕೆ ಅಧಿಕಾರವಿದೆ. ಆದರೆ, ಆರ್‌ಬಿಐಗೆ ಸಂಬಂಧಿಸಿದ ಕಾನೂನುಗಳಿಗಿಂತ ಭಿನ್ನವಾಗಿ ನಿರ್ದೇಶನಗಳನ್ನು ನೀಡುವುದಾದರೆ, ಮೊದಲು ಗವರ್ನರ್‌ ಜೊತೆ ಸಮಾಲೋಚನೆ ನಡೆಸುವುದು ಅಗತ್ಯ” ಎಂದಿದ್ದರು.

ಹಣಕಾಸು ಮಾರುಕಟ್ಟೆಗಳ ಅಭಿವೃದ್ಧಿ ವಿಷಯವು ರೆಡ್ಡಿ ಮತ್ತು ಚಿದಂಬರಂ ನಡುವಿನ ಭಿನ್ನಾಭಿಪ್ರಾಯದ ಪ್ರಮುಖ ಕ್ಷೇತ್ರವಾಗಿತ್ತು. ಚಿದಂಬರಂ ಅವರು ಸಮಗ್ರ ರೀತಿಯಲ್ಲಿ ಬಾಂಡ್ ಕರೆನ್ಸಿ ಉತ್ಪನ್ನಗಳನ್ನು ಅಭಿವೃದ್ಧಿ ಪಡಿಸಲು ಉತ್ಸುಕರಾಗಿದ್ದರು. ಆದರೆ, ಬಾಂಡ್‌ ಕರೆನ್ಸಿಗಳ ಹೊರತಾಗಿಯೂ ಹಣಕಾಸು ಕ್ಷೇತ್ರದ ಸುಧಾರಣೆಗೆ ಇತರ ಆದ್ಯತೆಗಳಿವೆ ಎಂದು ರೆಡ್ಡಿ ವಿವರಿಸಿದ್ದರು. 2008ರ ಫೆಬ್ರವರಿಯಲ್ಲಿ ರೈತರ 60,000 ಕೋಟಿ ರೂ.ಗಳ ಸಾಲ ಮನ್ನಾ ಮಾಡುವ ಕೇಂದ್ರದ ಪ್ರಸ್ತಾವನೆಯನ್ನೂ ರೆಡ್ಡಿ ವಿರೋಧಿಸಿದ್ದರು.

ವೈ.ವಿ ರೆಡ್ಡಿ

ಭಾರತದ ಬೆಳೆಯುತ್ತಿರುವ ವಿದೇಶಿ ವಿನಿಮಯಕ್ಕಾಗಿ ಆರ್‌ಬಿಐನಲ್ಲಿದ್ದ ಮೀಸಲು ಬಂಡವಾಳಗಳನ್ನು ಬಳಸಿಕೊಳ್ಳುವ ಪ್ರಸ್ತಾಪವನ್ನು ಯೋಜನಾ ಆಯೋಗವು ಎರಡು ಬಾರಿ (2004-05 ರಿಂದ 07-08ರ ಅವಧಿಯಲ್ಲಿ) ಪ್ರಸ್ತಾಪಿಸಿತ್ತು. ಈ ಪ್ರಸ್ತಾಪವನ್ನು ವಿರೋಧಿಸಿದ ಆರ್‌ಬಿಐ, ಸರ್ಕಾರದೊಂದಿಗೆ ಸಂಘರ್ಷಕ್ಕೆ ಇಳಿದಿತ್ತು. ಮೀಸಲು ಭಾಗದಿಂದ ಸರ್ಕಾರಿ ಬೆಂಬಲಿತ ಸಂಸ್ಥೆ IIFCLಗೆ ಸಾಲ ನೀಡಲು ಸರ್ಕಾರವು ಶ್ಯೂರಿಟಿ ನೀಡಬೇಕೆಂದು RBI ಒತ್ತಾಯಿಸಿತ್ತು.

ರೆಡ್ಡಿ ಅವರ ನಂತರ ಗವರ್ನರ್‌ ಆಗಿದ್ದ ಡಿ ಸುಬ್ಬರಾವ್ ಅವರು ಕೂಡ ಹಣಕಾಸು ಸಚಿವಾಲಯದೊಂದಿಗೆ ಹಲವಾರು ಸಂದರ್ಭಗಳಲ್ಲಿ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರು. ಆದ್ದರಿಂದಲೇ, “ಸರ್ಕಾರಕ್ಕೆ ಆರ್‌ಬಿಐ ಚಿಯರ್‌ಲೀಡರ್ ಆಗಿರಬೇಕು ಎಂದು ಕೇಂದ್ರವು ಬಯಸುತ್ತಿದೆ. ಇದರಿಂದ ನಾನು ನಿರಂತರವಾಗಿ ಅಸಮಾಧಾನಗೊಂಡಿದ್ದೇನೆ” ಎಂದು ಹೇಳಿಕೊಂಡಿದ್ದರು.

ಸುಬ್ಬರಾವ್ ಗವರ್ನರ್‌ ಆಗಿದ್ದ 2008-2013ರ ಅವಧಿಯಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟು ಎದುರಾಗಿತ್ತು. ಈ ಬಿಕ್ಕಟ್ಟು ಭಾರತದ ಆರ್ಥಿಕ ವ್ಯವಸ್ಥೆಯನ್ನು ಅಲುಗಾಡಿಸಿತ್ತು. ಅದಕ್ಕಾಗಿ, ರೆಪೊ ದರ ಕಡಿತ ಮಾಡುವಂತೆ ಆರ್‌ಬಿಐ ಮೇಲೆ ಆಗ ಹಣಕಾಸು ಮಂತ್ರಿಗಳಾಗಿದ್ದ ಚಿದಂಬರಂ ಮತ್ತು ಪ್ರಣಬ್ ಮುಖರ್ಜಿ ಒತ್ತಡ ಹಾಕಿದ್ದರು. ಆದರೆ, ಅದಕ್ಕೆ ಸುಬ್ಬರಾವ್ ಮಣೆ ಹಾಕಿರಲಿಲ್ಲ.

”ನಾನು ಆರ್‌ಬಿಐ ನೀತಿಯ ನಿಲುವಿನ ವಿಚಾರವಾಗಿ ಚಿದಂಬರಂ ಮತ್ತು ಮುಖರ್ಜಿ ಅವರೊಂದಿಗೆ ಸಂಘರ್ಷ ನಡೆಸಿದ್ದೇನೆ. ಅವರ ಆಲೋಚನೆ, ಯೋಜನೆಗಳು ವಿಭಿನ್ನವಾಗಿದ್ದರೂ, ಅವರಿಬ್ಬರೂ ದರ ಕಡಿತಕ್ಕೆ ಒಮ್ಮತದಿಂದ ಒತ್ತಾಯಿಸಿದ್ದರು” ಎಂದು ಸುಬ್ಬರಾವ್ ತಮ್ಮ ‘ಜಸ್ಟ್ ಎ ಮರ್ಸೆನರಿ? ನೋಟ್ಸ್‌ ಫ್ರಮ್ ಮೈ ಲೈಫ್‌ ಅಂಡ್ ಕೆರಿಯರ್’ ಪುಸ್ತಕದಲ್ಲಿ ಬರೆದಿದ್ದಾರೆ.

ಅದೇ ಸಮಯದಲ್ಲಿ, ಹಣಕಾಸು ಸಚಿವರ ನೇತೃತ್ವದಲ್ಲಿ ‘ಹಣಕಾಸು ಸ್ಥಿರತೆ ಮತ್ತು ಅಭಿವೃದ್ಧಿ ಮಂಡಳಿ’ (ಎಫ್‌ಎಸ್‌ಡಿಸಿ) ರಚನೆ ಮಾಡಲು ಸರ್ಕಾರ ಮುಂದಾಗಿತ್ತು. ಇದು ಹಣಕಾಸು ಸಚಿವಾಲಯ ಮತ್ತು ಆರ್‌ಬಿಐ ನಡುವಿನ ಸಂಘರ್ಷದ ಕೇಂದ್ರಬಿಂದುವಾಗಿತ್ತು. ಸರ್ಕಾರದ ನಿರ್ಧಾರವನ್ನು ಖಂಡಿಸಿದ್ದ ಆರ್‌ಬಿಐ, ‘ಹಣಕಾಸು ಸ್ಥಿರತೆಯ ಪ್ರಾಥಮಿಕ ಜವಾಬ್ದಾರಿ ಆರ್‌ಬಿಐ ಮೇಲಿದೆ’ ಎಂದು ವಾದಿಸಿತ್ತು. ಹೊಸ ಮಂಡಳಿಯ ರಚನೆಯು ಆರ್‌ಬಿಐನ ಪ್ರಭಾವವನ್ನು ದುರ್ಬಲಗೊಳಿಸಬಹುದು ಎಂಬುದು ಕೇಂದ್ರೀಯ ಬ್ಯಾಂಕ್‌ನ ತರ್ಕವಾಗಿತ್ತು.

ಕೇಂದ್ರ ಮತ್ತು ಆರ್‌ಬಿಐ ನಡುವಿನ ಇನ್ನೊಂದು ಪ್ರಮುಖ ಜಗಳವೆಂದರೆ, ಬಡ್ಡಿದರಗಳ ವಿಚಾರ. ಹಣದುಬ್ಬರವು ಗಣನೀಯವಾಗಿ ಹೆಚ್ಚುತ್ತಿದ್ದ ಸಮಯದಲ್ಲಿ ಹಣಕಾಸು ಸಚಿವ ಚಿದಂಬರಂ ಅವರು ಸಾಲಗಳ ಮೇಲೆ ಬಡ್ಡಿದರವನ್ನು ಕಡಿಮೆ ಮಾಡಲು ಪ್ರಸ್ತಾಪಿಸಿದ್ದರು. ಆದರೆ, ಅದನ್ನು ಆರ್‌ಬಿಐ ಅನುಮತಿಸಲಿಲ್ಲ. ಆರ್‌ಬಿಐ ವಿರುದ್ಧ ಅಸಮಾಧಾನಗೊಂಡಿದ್ದ ಚಿದಂಬರಂ, ‘ಹಣದುಬ್ಬರದ ಸವಾಲನ್ನು ಎದುರಿಸಲು ಸರ್ಕಾರ ಏಕಾಂಗಿಯಾಗಿ ನಡೆಯಬೇಕು ಎಂದಾದರೆ, ನಾವು ಏಕಾಂಗಿಯಾಗಿ ನಡೆಯುತ್ತೇವೆ’ ಎಂದಿದ್ದರು. ತಾವು ನಿವೃತ್ತರಾಗುವ ಒಂದು ವಾರದ ಮೊದಲು ಕೇಂದ್ರಕ್ಕೆ ಪ್ರತಿಕ್ರಿಯಿಸಿದ್ದ ಸುಬ್ಬರಾವ್, ”ಹಣಕಾಸು ಸಚಿವ ಚಿದಂಬರಂ ಮುಂದೊಂದು ದಿನ ನಾನು ರಿಸರ್ವ್ ಬ್ಯಾಂಕಿನಿಂದ ತುಂಬಾ ಹತಾಶನಾಗಿದ್ದೇನೆ. ನಾನು ಒಬ್ಬಂಟಿಯಾಗಿ ನಡೆಯುತ್ತೇನೆ. ಏಕಾಂಗಿಯಾಗಿ ವಾಕಿಂಗ್‌ಗೆ ಹೋಗಲು ಬಯಸುತ್ತೇನೆ ಎನ್ನಬಹುದು. ಆದರೆ ದೇವರ ಕೃಪೆ ಆರ್‌ಬಿಐ ಇನ್ನೂ ಅಸ್ತಿತ್ವದಲ್ಲಿದೆ” ಎಂದಿದ್ದರು.

2013 ಮತ್ತು 2016ರ ನಡುವೆ ಆರ್‌ಬಿಐ ಗವರ್ನರ್ ಆಗಿದ್ದ ರಘುರಾಮ್ ರಾಜನ್ ಅವರು ತಮ್ಮ ಹಿಂದಿನ ಗವರ್ನರ್ ಸುಬ್ಬರಾವ್ ಅವರ ಮಾತುಗಳನ್ನು ನೆನಪಿಸಿಕೊಂಡಿದ್ದರು. ‘ಸುಬ್ಬರಾವ್ ಅವರ ಮಾತುಗಳಿಗೆ ಮತ್ತೊಂದು ಸಾಲು ಸೇರಿಸುತ್ತೇನೆ. ಆರ್‌ಬಿಐ ಕೇವಲ ಅಸ್ತಿತ್ವದಲ್ಲಿರುವುದು ಮಾತ್ರವಲ್ಲ, ಅದರ ಸಾಮರ್ಥ್ಯವನ್ನು ರಕ್ಷಿಸಬೇಕು’ ಎಂದು ಹೇಳಿದ್ದರು.

ರಘುರಾಮ್ ರಾಜನ್

2015ರಲ್ಲಿ ಮೋದಿ ಸರ್ಕಾರವು ಆರ್‌ಬಿಐ ಜೊತೆ ಸಮಾಲೋಚಿಸದೆ ಹಣಕಾಸು ಮಸೂದೆಯನ್ನು ರಚಿಸಿತ್ತು. ಅದರಲ್ಲಿ, ಹಣಕಾಸು ಮಾರುಕಟ್ಟೆಗಳನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಸೆಬಿಗೆ ವಹಿಸಲು ಮುಂದಾಗಿತ್ತು. ಅದನ್ನು, ಆರ್‌ಬಿಐ ತೀವ್ರವಾಗಿ ಪ್ರತಿಭಟಿಸಿತು. ರಾಜನ್ ತಮ್ಮ ಆಕ್ಷೇಪಣೆಗಳನ್ನು ವಿತ್ತ ಸಚಿವರು ಮತ್ತು ಸರ್ಕಾರಕ್ಕೆ ಕಳಿಸಿದರು. ಸರ್ಕಾರ ಮತ್ತು ಆರ್‌ಬಿಐ ನಡುವೆ ಜಟಾಪಟಿ ನಡೆದು, ಸರ್ಕಾರವು ತನ್ನ ಮಸೂದೆಯನ್ನು ಹಿಂಪಡೆದುಕೊಂಡಿತು.

ಮುಂದುವರೆದು, ಮೋದಿ ಸರ್ಕಾರ ತೆಗೆದುಕೊಂಡ ‘ನೋಟು ಅಮಾನ್ಯೀಕರಣ’ ಕ್ರಮವನ್ನೂ ರಾಜನ್ ಖಂಡಿಸಿದ್ದರು. ಅವರ ಅಧಿಕಾರಾವಧಿಯಲ್ಲಿ, ನೋಟು ಅಮಾನ್ಯೀಕರಣದ ಸಂಭಾವ್ಯ ವೆಚ್ಚಗಳು ಮತ್ತು ಪ್ರಯೋಜನಗಳನ್ನು ವಿವರಿಸುವ ಟಿಪ್ಪಣಿ ಹಾಗೂ ಸರ್ಕಾರ ತನ್ನ ಗುರಿಗಳನ್ನು ಸಾಧಿಸಲು ಇತರ ಪರ್ಯಾಯಗಳನ್ನು ಕೇಂದ್ರಕ್ಕೆ ಆರ್‌ಬಿಐ ಕಳಿಸಿತ್ತು. ಸರ್ಕಾರವು ನೋಟು ಅಮಾನ್ಯೀಕರಣದ ಸಾಧಕ-ಬಾಧಕಗಳನ್ನು ಅಳೆದು ನೋಡಬೇಕು. ಅದಾದ ಮೇಲೂ, ನೋಟು ಅಮಾನ್ಯೀಕರಣ ಕ್ರಮವನ್ನು ಜಾರಿಗೊಳಿಸುವುದಾದರೆ, ಅಗತ್ಯ ತಯಾರಿಗಳನ್ನು ನಡೆಸಬೇಕು. ತಯಾರಿ ಇಲ್ಲದೆ ಮುಂದುವರೆದರೆ, ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ರಾಜನ್‌ ವಿವರಿಸಿದ್ದರು.

ಆದಾಗ್ಯೂ, ರಾಜನ್ ಅವರ ಅಧಿಕಾರಾವಧಿಯನ್ನು ವಿಸ್ತರಿಸದ ಕೇಂದ್ರ ಸರ್ಕಾರ, ರಾಜನ್ ನಿವೃತ್ತರಾದ ಕೆಲವೇ ವಾರಗಳಲ್ಲಿ 1,000 ಮತ್ತು 500 ರೂ. ಮುಖಬೆಲೆಯ ನೋಟುಗಳ ಅಮಾನ್ಯೀಕರಣವನ್ನು ಘೋಷಿಸಿತು. ಆ ಸಮಯದಲ್ಲಿ ಉರ್ಜಿತ್ ಪಟೇಲ್ ಅವರು ಆರ್‌ಬಿಐ ಗವರ್ನರ್‌ ಆಗಿದ್ದರು. 2016ರ ಸೆಪ್ಟೆಂಬರ್ 5ರಂದು ಪಟೇಲ್‌ರನ್ನು ಗವರ್ನರ್‌ ಹುದ್ದೆಗೆ ಕೂರಿಸಿದ ಕೇಂದ್ರ ಸರ್ಕಾರ, ಮೂರೇ ದಿನಗಳಲ್ಲಿ ಸೆಪ್ಟೆಂಬರ್ 8ರಂದು ನೋಟು ಅಮಾನ್ಯೀಕರಣ ಘೋಷಿಸಿತು.

ಬಿಜೆಪಿ ಸರ್ಕಾರವೇ ಪಟೇಲ್‌ರನ್ನು ಗವರ್ನರ್‌ ಸ್ಥಾನಕ್ಕೆ ಆಯ್ಕೆ ಮಾಡಿದರೂ, ಆರ್‌ಬಿಐ ಮತ್ತು ಸರ್ಕಾರದ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿತು. ಕೇಂದ್ರವು ಯೋಜಿಸಿದ್ದ ಹೆಚ್ಚುವರಿ ಹಣ (ಬಂಡವಾಳ ಮೀಸಲು) ವರ್ಗಾವಣೆ, ಹಣಕಾಸು ಕಂಪನಿಗಳಿಗೆ ಹಣ ಹರಿಸುವುದು ಹಾಗೂ ಕೇಂದ್ರದ ಮಂಡಳಿಗಳಿಗೆ ಹೆಚ್ಚಿನ ಅಧಿಕಾರ ನೀಡುವ ವಿಚಾರವನ್ನು ಪಟೇಲ್‌ ಅಧಿಕಾರಾವಧಿಯಲ್ಲಿಯೂ ಆರ್‌ಬಿಐ ತೀವ್ರವಾಗಿ ವಿರೋಧಿಸಿತ್ತು. ಅಂತಿಮವಾಗಿ, ವೈಯಕ್ತಿಕ ಕಾರಣಗಳನ್ನು ನೀಡಿ ಪಟೇಲ್ ಅವರು 2018ರ ಡಿಸೆಂಬರ್ 10 ಗವರ್ನರ್‌ ಹುದ್ದೆಯನ್ನು ತ್ಯಜಿಸಿದರು.

ಈ ವರದಿ ಓದಿದ್ದೀರಾ?: ಮುಡಾ ಹಗರಣ | ಕರ್ನಾಟಕ ಹೈಕೋರ್ಟ್ ದೋಷಪೂರಿತ ತೀರ್ಪು ನೀಡಿತೆ?

ಪಟೇಲ್ ಅವರ ಪ್ರಕಾರ, ಹೆಚ್ಚಿನ ಹಣಕಾಸಿನ ಕೊರತೆಯನ್ನು ನಿಭಾಯಿಸಲು ಸರ್ಕಾರದ ಚುಕ್ಕಾಣಿ ಹಿಡಿದವರು ದಣಿದಿದ್ದರು. ಆರ್ಥಿಕತೆಯನ್ನು ಮೇಲೆತ್ತಲು ಸರ್ಕಾರ ಇಚ್ಛಿಸುವ ಆದ್ಯತೆಯ ವಲಯಗಳಿಗೆ ಹೆಚ್ಚು ಸಾಲ ನೀಡಲು ಸರ್ಕಾರಿ ಬ್ಯಾಂಕುಗಳನ್ನು ಒತ್ತಾಯಿಸಲಾಗುತ್ತಿತ್ತು. ಇಂತಹ ಸಾಲಗಳನ್ನು ನೀಡುವುದು ಕಾಲಾನಂತರದಲ್ಲಿ ಎನ್‌ಪಿಎ (ಮರುಪಾವತಿಯಾಗದ ಸಾಲ) ಆಗುತ್ತವೆ. ಪರಿಣಾಮ, ವಿತ್ತೀಯ ಕೊರತೆ ಮತ್ತು ಸಾರ್ವಭೌಮ ಹೊಣೆಗಾರಿಕೆಯನ್ನು ಹೆಚ್ಚಿಸುತ್ತದೆ” ಎಂದು ಅವರು ತಮ್ಮ ಪುಸ್ತಕ ‘ಓವರ್‌ಡ್ರಾಫ್ಟ್: ಸೇವಿಂಗ್ ದಿ ಇಂಡಿಯನ್ ಸೇವರ್’ನಲ್ಲಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

2018ರ ಅಕ್ಟೋಬರ್ 26ರಂದು, ಆಗಿನ ಡೆಪ್ಯೂಟಿ ಗವರ್ನರ್ ವಿರಲ್ ಆಚಾರ್ಯ ಅವರು ಆರ್‌ಬಿಐ ಸ್ವತಂತ್ರವಾಗಿ ಕಾರ್ಯನಿರ್ವಹಿಸುವುದರ ಬಗ್ಗೆ ಒತ್ತಿ ಹೇಳಿದ್ದರು. ”ಸರ್ಕಾರಗಳು ಆರ್‌ಬಿಐನ ಸ್ವಾತಂತ್ರ್ಯವನ್ನು ಗೌರವಿಸಬೇಕು. ಇಲ್ಲದಿದ್ದರೆ, ಶೀಘ್ರದಲ್ಲೇ ಹಣಕಾಸು ಮಾರುಕಟ್ಟೆಗಳ ಋಣಾತ್ಮಕ ಪರಿಣಾಮಗಳಿಗೆ ಬ್ಯಾಂಕ್‌ ಒಳಗಾಗುತ್ತದೆ. ಆರ್ಥಿಕ ಅಧಃಪತನ ಉಂಟಾಗುತ್ತದೆ” ಎಂದಿದ್ದರು.

ಕೇಂದ್ರ ಸರ್ಕಾರಗಳು ತೆಗೆದುಕೊಳ್ಳುವ ಹಣಕಾಸು ನೀತಿ-ನಿರ್ಧಾರಗಳು ಆದೇಶ ಆರ್ಥಿಕತೆ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಆರ್‌ಬಿಐ ನಿರಂತರವಾಗಿ ಗಮನಿಸುತ್ತದೆ. ಹಣಕಾಸು ನಿರ್ವಹಣೆ ಹೇಗಿರಬೇಕು ಎಂಬುದನ್ನು ಪರಿಶೀಲಿಸುತ್ತಲೇ ಇರುತ್ತದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ, ಆರ್‌ಬಿಐ ಸಲಹೆಗಳಿಗೆ ಕಿವಿಗೊಡದ ಸರ್ಕಾರಗಳು ಆರ್‌ಬಿಐ ಮೇಲೆಯೇ ಸವಾರಿ ಮಾಡಲು ಯತ್ನಿಸುತ್ತಿವೆ. ಪರಿಣಾಮ, ಕೇಂದ್ರ ಮತ್ತು ಆರ್‌ಬಿಐ ನಡುವೆ ನಿರಂತರ ಸಂಘರ್ಷ ನಡೆಯುತ್ತಲೇ ಇದೆ. ಸದ್ಯ, ಶಕ್ತಿಕಾಂತ ದಾಸ್‌ ಅವರು ಆರ್‌ಬಿಐ ಗವರ್ನರ್‌ ಹುದ್ದೆಯಿಂದ ನಿವೃತ್ತರಾಗಿದ್ದಾರೆ. ಆ ಹುದ್ದೆಗೆ ಮುಂದೆ ಯಾರು ಬರಲಿದ್ದಾರೆ. ಮುಂದೇನಾಗಲಿದೆ ನೋಡಬೇಕಿದೆ!

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

Download Eedina App Android / iOS

X