ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಐವರು ಬಾಣಂತಿಯರು ಸಾವನ್ನಪ್ಪಿದ್ದ ಪ್ರಕರಣ ವೈದ್ಯಕೀಯ ಸೌಲಭ್ಯಗಳ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿತ್ತು. ಔಷಧ ನಿಯಂತ್ರಕರನ್ನು ಸರ್ಕಾರ ಅಮಾನತು ಮಾಡಿದೆ. ಅಲ್ಲದೆ, ದಾವಣಗೆರೆ, ಬೆಳಗಾವಿ ಜಿಲ್ಲೆಯಲ್ಲಿಯೂ ಹೆಚ್ಚು ಬಾಣಂತಿಯರು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಈ ಬೆನ್ನಲ್ಲೇ, ರಾಯಚೂರು ಮತ್ತು ಚಿತ್ರದುರ್ಗದಲ್ಲಿಯೂ ಬಾಣಂತಿಯರು ಮೃತಪಟ್ಟಿರುವುದು ವರದಿಯಾಗಿದೆ.
ಅಕ್ಟೋಬರ್ ತಿಂಗಳಿನಲ್ಲಿ ರಾಯಚೂರು ಜಿಲ್ಲೆಯಲ್ಲಿ ನಾಲ್ವರು ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಓರ್ವ ಬಾಣಂತಿ ಸಾವನ್ನಪ್ಪಿದ್ದಾರೆ. ಸಿಂಧನೂರು ತಾಲೂಕು ಆಸ್ಪತ್ರೆಯಲ್ಲಿ ಚಂದ್ರಕಲಾ (26), ರೇಣುಕಮ್ಮ (32), ಮೌಸಮಿ ಮಂದಾಲ್ (22), ಚನ್ನಮ್ಮ (25) ಎಂಬ ಬಾಣಂತಿಯರು ಮೃತಪಟ್ಟಿದ್ದಾರೆ.
ಈ ನಾಲ್ವರ ಪೈಕಿ, ಅಕ್ಟೋಬರ್ 21ರಂದು ಮಗುವಿಗೆ ಜನ್ಮ ನೀಡಿದ್ದ ಚನ್ನಮ್ಮ 9 ದಿನಗಳ ಬಳಿಕ ಮೃತಪಟ್ಟಿದ್ದರು. ಅಕ್ಟೋಬರ್ 22ರಂದು ಮಗುವಿಗೆ ಜನ್ಮ ನೀಡಿದ್ದ ಮೌಸಮಿ ಮಾರನೇ ದಿನವೇ ಸಾವನ್ನಪ್ಪಿದ್ದರು. ಅದೇ ರೀತಿ, ಅಕ್ಟೋಬರ್ 31ರಂದು ಹೆರಿಗೆಗೆ ಒಳಗಾಗಿದ್ದ ರೇಣುಕಮ್ಮ ಕೂಡ ಮಾರನೇ ದಿನವೇ ಮೃತಪಟ್ಟಿದ್ದರು.
ಇವರೆಲ್ಲರ ಪರಿಸ್ಥಿತಿ ಗಂಭೀರವಾದ ಕೂಡಲೇ ಅವರನ್ನು ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ರಿಮ್ಸ್)ಗೆ ಅವರನ್ನು ಸ್ಥಳಾಂತರಿಸಲಾಗಿತ್ತು. ಅಲ್ಲಿ ಅವರು ಸಾವನ್ನಪ್ಪಿದ್ದರು. ವೈದ್ಯರ ನಿರ್ಲಕ್ಷ್ಯದಿಂದಲೇ ಬಾಣಂತಿಯರು ಸಾವನ್ನಪ್ಪಿದ್ದಾರೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದರು. ನ್ಯಾಯಕ್ಕಾಗಿ ಒತ್ತಾಯಿಸಿದ್ದರು.
ಇನ್ನು, ಚಿತ್ರದುರ್ಗ ಜಿಲ್ಲೆಯ ಚಳ್ಳಕರೆ ಬಳಿಯ ಜಾಗನೂರುಹಟ್ಟಿ ನಿವಾಸಿ ರೋಜಾ (24) ಅವರು ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಮಂಗಳವಾರ ಸಾವನ್ನಪ್ಪಿದ್ದಾರೆ. ರೋಜಾ ಅವರು ಹೆರಿಗೆಯಾದ ಐದು ದಿನಗಳ ನಂತರ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಬೆಳಗಾವಿ ಜಿಲ್ಲೆಯ ಹಲವು ಆಸ್ಪತ್ರೆಗಳಲ್ಲಿ ಕಳೆದ ಆರು ತಿಂಗಳೊಳಗೆ ಒಟ್ಟು 322 ನವಜಾತ ಶಿಶುಗಳು ಮತ್ತು 29 ತಾಯಂದಿರು ಸಾವನ್ನಪ್ಪಿದ್ದಾರೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ದಾವಣಗೆರೆ ಜಿಲ್ಲೆಯಲ್ಲಿಯೂ ಕಳೆದ 7 ತಿಂಗಳಲ್ಲಿ 125 ನವಜಾತ ಶಿಶುಗಳು ಮತ್ತು 28 ಮಂದಿ ಬಾಣಂತಿಯರು ಸಾವನ್ನಪ್ಪಿದ್ದಾರೆ ಎಂದು ಅಂಕಿಅಂಶಗಳು ಹೇಳುತ್ತಿವೆ.