ಈ ದಿನ ಸಂಪಾದಕೀಯ | ಮುಸ್ಲಿಮರಿಗೆ ಮನೆ ಬಾಡಿಗೆಗೆ ಕೊಡಲ್ಲ! ಖರೀದಿಗೂ ಬಿಡಲ್ಲ- ಕೋಮುವಾದದ ಅಟ್ಟಹಾಸ

Date:

Advertisements

ಕಣ್ಣಿನ ಆಸ್ಪತ್ರೆ ನಡೆಸುತ್ತಿದ್ದ ಡಾ ಅಶೋಕ್‌ ಬಜಾಜ್ ತಮ್ಮ ಕುಟುಂಬಕ್ಕೆ 40 ವರ್ಷಗಳಿಂದ ಪರಿಚಿತರಾಗಿದ್ದ ಮುಸ್ಲಿಂ ವೈದ್ಯ ದಂಪತಿಗೆ ಮನೆ ಮಾರಿದ್ದರು. ಹೊರಬಿದ್ದ ದಟ್ಟ ದ್ವೇಷದ ನಂತರ ಈ ಮನೆಯಲ್ಲಿ ವಾಸ ಮಾಡುವುದು ದುಸ್ತರ ಎಂದರು ಮುಸ್ಲಿಮ್ ದಂಪತಿ. ತಾವು ಖರೀದಿಸಿದ್ದ ಮನೆಯನ್ನು ವಾಪಸು ಹಿಂದೂ ಕುಟುಂಬಕ್ಕೇ ಮಾರಾಟ ಮಾಡಿದರು.

ಭಾರತ ದೇಶದ ‘ಅಸ್ಪೃಶ್ಯ’ ಸಮುದಾಯಗಳು ತಲೆತಲಾಂತರಗಳಿಂದ ಊರ ಹೊರಗಣ ‘ಹೊಲೆಗೇರಿ’ಗಳೆಂಬ ನರಕಗಳಲ್ಲಿ ನರಳಿವೆ. ನರಳುತ್ತಲೇ ಇವೆ. ಭೌತಿಕ ಹೊಲಗೇರಿಗಳು ಅಲ್ಲಲ್ಲಿ ಅಳಿದಿರಬಹುದು. ಆದರೆ ರಂಗೋಲಿ ಕೆಳಗೆ ತೂರಿರುವ ಮನುವಾದಿ ಮೇಲ್ಜಾತಿಗಳು ‘ಮಾನಸಿಕ ಹೊಲೆಗೇರಿ’ಗಳನ್ನು ಸೃಷ್ಟಿಸಿವೆ. ಅವುಗಳಲ್ಲಿ ಅಸ್ಪೃಶ್ಯರನ್ನು ಶೂದ್ರರನ್ನು ‘ಬಂಧಿಸಿ’ ಇಟ್ಟಿವೆ.

ಮುಸಲ್ಮಾನರು ಹೊಸ ದಲಿತರಾಗಿ ದಶಕಗಳೇ ಉರುಳಿವೆ. ಕಳೆದ 10-12 ವರ್ಷಗಳ ಹಿಂದುತ್ವ ರಾಜಕಾರಣವು ಅವರನ್ನು ಹಿಂದೆಂದಿಗಿಂತ ಹೆಚ್ಚು ‘ಅನ್ಯ’ರನ್ನಾಗಿಸಿ ದೂರ ಮಾಡಿದೆ. ಅವರ ಹೊಟ್ಟೆಪಾಡನ್ನೂ ಹೊಡೆಯುವ ಕ್ರೌರ್ಯದ ಅಗಲ ಆಳಗಳು ಊಹಾತೀತ ಆಗತೊಡಗಿವೆ.

ಉತ್ತರಪ್ರದೇಶದ ಮೊರಾದಾಬಾದ್‌ನಲ್ಲಿ ಮೊನ್ನೆ ಮೊನ್ನೆ ನಡೆದ ಘಟನೆಯೊಂದು ಸಾಮರಸ್ಯದ ಹಂದರ ಯಾವ ಪರಿ ಹರಿದು ಚಿಂದಿಯಾಗತೊಡಗಿದೆ ಎಂಬುದಕ್ಕೆ ಹಿಡಿದ ಕನ್ನಡಿ. ಧಾರ್ಮಿಕ ಧೃವೀಕರಣ ಎಂಬ ನಂಜು ಬೇರುಮಟ್ಟಕ್ಕೆ ಬಸಿದಿದೆ. ಮನುಷ್ಯತ್ವವನ್ನು ಕೊಲ್ಲತೊಡಗಿದೆ.

ಮೊನ್ನೆ ಮೊನ್ನೆ ಉತ್ತರಪ್ರದೇಶದ ಮೊರಾದಾಬಾದಿನ ‘ಟಿಡಿಐ ಸಿಟಿ’ ಎಂಬ ಮೇಲ್ತರಗತಿ ಜನವಸತಿಯ ಹಿಂದೂ ನಿವಾಸಿಗಳು ಹಠಾತ್ತನೆ ಸಿಡಿದೆದ್ದರು. ಇಲ್ಲಿಯ ಡಾ ಅಶೋಕ್ ಬಜಾಜ್ ತಮ್ಮ ಮನೆಯನ್ನು ಮುಸ್ಲಿಂ ದಂಪತಿಗೆ ಮಾರಾಟ ಮಾಡಿದ್ದು ಅವರ ಆಕ್ರೋಶಕ್ಕೆ ಕಾರಣವಾಗಿತ್ತು. ‘ನಮ್ಮ ಮಂದಿರದ ಮುಂದೆ ಮುಸಲ್ಮಾನ ಕುಟುಂಬ ವಾಸಿಸುವುದನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ. ನಮ್ಮ ಮನೆಯ ಹೆಣ್ಣುಮಕ್ಕಳಿಗೂ ಅಪಾಯ ತಪ್ಪಿದ್ದಲ್ಲ. ಈ ಮಾರಾಟ ರದ್ದಾಗಲೇಬೇಕು’ ಎಂದು ಪ್ರತಿಭಟಿಸಿದರು. ಡಾ ಬಜಾಜ್ ಮತ್ತು ಮುಸಲ್ಮಾನ ದಂಪತಿ ವಿರುದ್ಧ ಘೋಷಣೆ ಕೂಗಿದರು. ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದರು. ಇದೊಂದು ರಾಷ್ಟ್ರೀಯ ಸುದ್ದಿಯೇ ಆಗಿ ಹೋಯಿತು.

ಕಣ್ಣಿನ ಆಸ್ಪತ್ರೆ ನಡೆಸುತ್ತಿದ್ದ ಡಾ ಬಜಾಜ್ ತಮ್ಮ ಕುಟುಂಬಕ್ಕೆ 40 ವರ್ಷಗಳಿಂದ ಪರಿಚಿತರಾಗಿದ್ದ ಮುಸ್ಲಿಂ ವೈದ್ಯ ದಂಪತಿಗೆ ಮನೆ ಮಾರಿದ್ದರು. ಹೊರಬಿದ್ದ ದಟ್ಟ ದ್ವೇಷದ ನಂತರ ಈ ಮನೆಯಲ್ಲಿ ವಾಸ ಮಾಡುವುದು ದುಸ್ತರ ಎಂದರು ಮುಸ್ಲಿಮ್ ದಂಪತಿ. ತಾವು ಖರೀದಿಸಿದ್ದ ಮನೆಯನ್ನು ವಾಪಸು ಹಿಂದೂ ಕುಟುಂಬಕ್ಕೇ ಮಾರಾಟ ಮಾಡಿದರು.

ತಿಂಗಳುಗಳ ಹಿಂದೆ ಗುಜರಾತಿನ ವಡೋದರದಲ್ಲಿ ನಡೆದ ಇಂತಹುದೇ ಪ್ರಕರಣ ದೇಶಾದ್ಯಂತ ಸುದ್ದಿಯಾಗಿತ್ತು. ಮುಸ್ಲಿಮ್ ಸರ್ಕಾರಿ ಉದ್ಯೋಗಿಯೊಬ್ಬರಿಗೆ ಮುಖ್ಯಮಂತ್ರಿ ಆವಾಸ ಯೋಜನೆಯಡಿ ಮೋಟನಾಥ ರೆಸಿಡೆನ್ಸಿಯಲ್ಲಿ ಎಲ್.ಐ.ಜಿ. ಫ್ಲ್ಯಾಟ್ ಹಂಚಿಕೆಯಾಗಿತ್ತು. ಅದು ಸರ್ಕಾರ ಜನವಸತಿ ಸಮುಚ್ಚಯ. ಆದರೂ ಬಹುಪಾಲು ಹಿಂದುಗಳೇ ಇರುವ ಕಾರಣ ಮುಸಲ್ಮಾನರಿಗೆ ಹಂಚಿಕೆ ಸಲ್ಲದೆಂದು ಅಲ್ಲಿನ ಹಿಂದೂ ನಿವಾಸಿಗಳು ವಿರೋಧಿಸಿದರು. ತನಗೆ ಹಂಚಿಕೆಯಾಗಿದ್ದ ಫ್ಲ್ಯಾಟಿಗೆ ವಾಸಕ್ಕೆ ಬರದಂತೆ ಮುಸ್ಲಿಮ್ ಮಹಿಳೆಯನ್ನು ತಡೆದರು. ಮುಸ್ಲಿಮ್ ಮಹಿಳೆ ಮತ್ತು ಆಕೆಯ ಹದಿಹರೆಯದ ಮಗ ತಮ್ಮ ನೆರೆಹೊರೆಯಲ್ಲಿ ವಾಸಿಸುವುದು ‘ಅಸಹ್ಯ ಮತ್ತು ಅಪಾಯ’ ಎಂದರು.

ಈ ವಸತಿ ಸಮುಚ್ಚಯದಲ್ಲಿ ಒಟ್ಟು 462ಎಲ್.ಐ.ಜಿ.ಫ್ಲ್ಯಾಟ್ ಗಳಿದ್ದವು. ಈ ಪೈಕಿ ಒಂದೇ ಒಂದು ಫ್ಲ್ಯಾಟು ಮುಸಲ್ಮಾನ ಮಹಿಳೆಗೆ ಹಂಚಿಕೆಯಾಗಿತ್ತು. ಮುಸ್ಲಿಮ್ ಮಹಿಳೆಗೆ ಆದ ಈ ಅನ್ಯಾಯವನ್ನು ಸ್ವಯಂಪ್ರೇರಿತವಾಗಿ ವಿಚಾರಣೆಗೆ ಎತ್ತಿಕೊಳ್ಳಲು ಗುಜರಾತ್ ಹೈಕೋರ್ಟು ಸ್ಪಷ್ಟವಾಗಿ ನಿರಾಕರಿಸಿತು. ಸ್ವಯಂಪ್ರೇರಿತ ವಿಚಾರಣೆ ಕೈಗೆತ್ತಿಕೊಳ್ಳಲು ಇದು ಸಾರ್ವಜನಿಕ ಹಿತದ ಸಂಗತಿಯೇನೂ ಅಲ್ಲ ಎಂದು ಕಾರಣ ನೀಡಿತು. ಬಾಧಿತ ಮಹಿಳೆಯೇ ಕೋರ್ಟಿನ ಮುಂದೆ ಅರ್ಜಿ ಸಲ್ಲಿಸಲಿ, ವಿಚಾರಣೆ ನಡೆಸಿ ತೀರ್ಪು ನೀಡುತ್ತೇವೆ ಎಂದಿತು. 461 ಹಿಂದೂಗಳ ಇಚ್ಛೆಗೆ ವಿರುದ್ಧವಾಗಿ ತನ್ನ ಫ್ಲ್ಯಾಟ್ ಉಳಿಸಿಕೊಳ್ಳಲು ಮುಸ್ಲಿಮ್ ಮಹಿಳೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಕಾನೂನು ಹೋರಾಟ ಮಾಡಬೇಕಾದ ಪರಿಸ್ಥಿತಿಯನ್ನು ತಂದೊಡ್ಡಲಾಯಿತು.

‘ಲಾಟರಿ ಡ್ರಾ’ ಮೂಲಕ ಮುಸ್ಲಿಮ್ ಮಹಿಳೆಗೆ ಹಂಚಿಕೆಯಾಗಿರುವ ಫ್ಲ್ಯಾಟ್ ಇದು. ಕಾನೂನುಬದ್ಧವಾಗಿದೆ. ಹಂಚಿಕೆಯನ್ನು ರದ್ದುಪಡಿಸುವುದು ಅಸಾಧ್ಯ. ಈ ಫ್ಲ್ಯಾಟನ್ನು ಸ್ವೀಕರಿಸದಂತೆ ಕೈಬಿಡಲು ಆಕೆಯ ಮನ ಒಲಿಸುವ ಪ್ರಯತ್ನ ಮಾಡಬಹುದು ಅಷ್ಟೇ ಎಂದಿತು ವಡೋದರ ಮುನಿಸಿಪಾಲಿಟಿ. ಈ ಮುಸ್ಲಿಮ್ ಹೆಣ್ಣುಮಗಳು ಕೇಂದ್ರ ಸರ್ಕಾರದ ಹಿರಿಯ ಉದ್ಯೋಗಿ. ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ (ಮಹಾರಾಜಾ ಸಯ್ಯಾಜಿರಾವ್ ವಿವಿ) ಚಿನ್ನದ ಪದಕ ವಿಜೇತೆ. ‘ಹಾಲಿನಲ್ಲಿ ಸಕ್ಕರೆ ಕಲೆತು ಹೋಗುವಂತೆ ಸಮಾಜದಲ್ಲಿ ಬೆರೆತು ಹೋಗಬೇಕೆಂದು’ ಆಸೆಯಿಟ್ಟುಕೊಂಡಿದ್ದವರು. ಈ ಪ್ರಕರಣದ ಅಂತ್ಯ ಹೇಗಾಯಿತೆಂದು ಪತ್ರಿಕೆಗಳು ವರದಿ ಮಾಡಿಲ್ಲ.

ಭಾರತದ ಅತಿದೊಡ್ಡ ಮುಸ್ಲಿಮ್ ಕೊಂಪೆ ಜುಹಾಪುರ. ಗುಜರಾತಿನ ಅಹ್ಮದಾಬಾದ್‌ನಲ್ಲಿದೆ. ಮುಸಲ್ಮಾನರ ಮೇಲೆ ದಾಳಿಗಳ ಸರಣಿಗಳು ಸುರುಳಿ ಬಿಚ್ಚಿದ ನಂತರ ಮೈತಳೆದ ಕೊಂಪೆಯಿದು. ರಾಜ್ಯ ಸರ್ಕಾರವೇ ಕಾನೂನುಬದ್ಧವಾಗಿ (1991ರ ಪ್ರಕ್ಷುಬ್ಧ ಪ್ರದೇಶಗಳ ಕಾಯಿದೆ) ಅವಕಾಶ ನೀಡಿದ ಮುಸ್ಲಿಂ ಕೊಂಪೆಯಿದು. ಕೋಮುಗಲಭೆ ಗ್ರಸ್ತ ನಗರ ಪ್ರದೇಶಗಳನ್ನು ಪ್ರಕ್ಷುಬ್ಧ ಪ್ರದೇಶಗಳು ಎಂದು ರಾಜ್ಯ ಸರ್ಕಾರವೇ ಸಾರುವ ಅವಕಾಶ ಈ ಕಾಯಿದೆಯಲ್ಲಿದೆ. ಹೀಗೆಂದು ಸಾರಲಾದ ಪ್ರದೇಶಗಳಲ್ಲಿ ಆಸ್ತಿಪಾಸ್ತಿಗಳನ್ನು ಮಾರಾಟ ಮಾಡಲು ಜಿಲ್ಲಾಧಿಕಾರಿಯ ವಿಶೇಷ ಅನುಮತಿ ಬೇಕಾಗುತ್ತದೆ.

1980 ಮತ್ತು 1990ರ ದಶಕಗಳ ಧಾರ್ಮಿಕ ಹಿಂಸಾಚಾರ ಸರಣಿಯ ನಂತರ ಕೋಮುಗಲಭೆಗ್ರಸ್ತ ಪ್ರದೇಶಗಳಲ್ಲಿ ಆಸ್ತಿಪಾಸ್ತಿಗಳು ‘ಮೂರುಕಾಸಿನ’ ಅಗ್ಗದ ದರಗಳಿಗೆ ಬಿಕರಿಯಾಗುವುದನ್ನು ತಪ್ಪಿಸುವುದು ಈ ಕಾಯಿದೆಯ ಮೂಲ ಉದ್ದೇಶ. ಆದರೆ ಹಿಂದೂ ಬಹುಳ ಪ್ರದೇಶಗಳಲ್ಲಿ ಮುಸಲ್ಮಾನರು ಆಸ್ತಿಪಾಸ್ತಿ ಖರೀದಿ ಮಾಡುವುದನ್ನು ತಡೆಯಲು ಈ ಕಾಯಿದೆಯ ದುರ್ಬಳಕೆ ನಡೆದಿದೆ. ಮೇಲ್ಜಾತಿ ಹಿಂದೂ ಪ್ರದೇಶಗಳ ‘ಪರಿಶುದ್ಧತೆ’ಯನ್ನು ಉಳಿಸಿಕೊಳ್ಳಲೆಂದು ಹೆಚ್ಚು ಹೆಚ್ಚು ಪ್ರದೇಶಗಳನ್ನು ಪ್ರಕ್ಷುಬ್ಧ ಎಂದು ಘೋಷಿಸುವಂತೆ ಒತ್ತಾಯಗಳು ಹೆಚ್ಚತೊಡಗಿವೆ.

ವಡೋದರದ ಮತ್ತೊಂದು ಭಾಗದಲ್ಲಿ 15 ಸಾವಿರ ಚದರಡಿಗಳಷ್ಟು ವಿಶಾಲ ಬಂಗಲೆಯ ನಿವಾಸಿ ಫೈಸಲ್ ಫಜಲಾನಿ. ಗೀತಾ ಗೊರಾಡಿಯಾ ಅವರಿಂದ 2019ರಲ್ಲಿ ಆರು ಕೋಟಿ ರುಪಾಯಿ ತೆತ್ತು ಖರೀದಿಸಿದ್ದರು. ಪ್ರಕ್ಷುಬ್ಧ ಪ್ರದೇಶಗಳ ಕಾಯಿದೆಯ ಭೂತಕನ್ನಡಿಯಲ್ಲಿ ಪರಿಶೀಲಿಸಿದ ನಂತರವೂ ಎಲ್ಲ ‘ಕ್ಲಿಯರ್’ ಆಗಿದ್ದ ವ್ಯವಹಾರವಿದು. ಆದರೆ ಈವರೆಗೂ ಈ ಆಸ್ತಿ ಫಜಲಾನಿ ಅವರ ಹೆಸರಿಗೆ ನೋಂದಣಿ ಆಗಿಲ್ಲ. ಫಜಲಾನಿ ಅವರು ಈ ಬಂಗಲೆ ಖರೀದಿಸಲು ಆಕ್ಷೇಪ ವ್ಯಕ್ತಪಡಿಸಿರುವ ನೆರೆಹೊರೆಯವರ ತಕರಾರಿನಲ್ಲಿ ತಿರುಳಿಲ್ಲ ಎಂದು ಗುಜರಾತ್ ಹೈಕೋರ್ಟ್ ಸಾರಿ ಎರಡು ವರ್ಷಗಳೇ ಉರುಳಿವೆ.
ಇಂತಹ ಅಸಂಖ್ಯಾತ ಪ್ರಕರಣಗಳು ದಿನನಿತ್ಯ ಜರುಗತೊಡಗಿವೆ. ಸಮಾಜ ಅವುಗಳನ್ನು ಮಾಮೂಲು ಎಂದು ಬಗೆಯುತೊಡಗಿದೆ. ಈ ‘ಮಾಮೂಲೀಕರಣ’ ಅತ್ಯಂತ ಕಳವಳದ ಸಂಗತಿ.

 ‘ಲ್ಯಾಂಡ್ ಜಿಹಾದ್’ ಅಪಪ್ರಚಾರ ಮುಸಲ್ಮಾನರ ವಿರುದ್ಧದ ಪೂರ್ವಗ್ರಹ ಮತ್ತು ಗುಮಾನಿಗಳನ್ನು ಮತ್ತಷ್ಟು ಹೆಚ್ಚಿಸಿದೆ. ಮುಸಲ್ಮಾನರ ಮನೆಗಳ ಮೇಲೆ ರಾತ್ರೋರಾತ್ರಿ ಬುಲ್ಡೋಝರ್ ಹರಿಸಿ ನೆಲಸಮ ಮಾಡುವ ‘ಬುಲ್ಡೋಝರ್ (ಅ)ನ್ಯಾಯ’ ಅವರ ಅಭದ್ರ ಭಾವನೆಯನ್ನು ಮತ್ತಷ್ಟು ಆಳಗೊಳಿಸಿದೆ. ಆಸ್ತಿಪಾಸ್ತಿ ಮಾರಾಟ ಮಾಡುವಾಗ ಧಾರ್ಮಿಕ ತಾರತಮ್ಯವನ್ನು ನಿಷೇಧಿಸುವ ಯಾವುದೇ ಕಾನೂನು ಭಾರತದಲ್ಲಿ ಇಲ್ಲ.

ಮುಸಲ್ಮಾನರು ತಾವೇ ರೂಪಿಸಿಕೊಂಡ ಕೊಂಪೆಗಳಲ್ಲಿ (Ghettos) ವಾಸಿಸುತ್ತಾರೆ. ಅದು ಬಹುಸಂಖ್ಯಾತರನ್ನು ದೂರ ಇಡುವ ಇರಾದೆಯಲ್ಲ, ಬದಲಿಗೆ ಬಹುಸಂಖ್ಯಾತರಿಂದ ಹಿಂಸಾಚಾರದ ಸಾಧ್ಯತೆಗೆ ಭಯಪಟ್ಟು. ಧಾರ್ಮಿಕ-ರಾಜಕೀಯ-ಸಾಮಾಜಿಕ-ಪರಿಸರ-ಆರ್ಥಿಕ ಕಾರಣಗಳ ಪರಿಣಾಮವಾಗಿ ಅಲ್ಪಸಂಖ್ಯಾತರು ದಟ್ಟವಾಗಿ ವಾಸಿಸುವ ನಗರ ಭಾಗಗಳನ್ನು ಇಂಗ್ಲಿಷಿನಲ್ಲಿ Ghetto ಎಂದು ಕರೆಯಲಾಗಿದೆ. ಘೆಟ್ಟೋಗಳು ಸಾಮಾನ್ಯವಾಗಿ ಪೇಟೆ ಪಟ್ಟಣ- ನಗರ ಮಹಾನಗರಗಳ ಇತರೆ ಭಾಗಗಳಿಗಿಂತ ದರಿದ್ರವಾಗಿಯೂ ಇಕ್ಕಟ್ಟಾಗಿಯೂ ಕೊಳಕಾಗಿಯೂ ಇರುತ್ತವೆ. ಇವುಗಳನ್ನು ಕನ್ನಡದಲ್ಲಿ ಕೊಳಕು ಕೊಂಪೆಗಳೆಂದು ಕರೆಯಬಹುದೆಂದು ಕಾಣುತ್ತದೆ.

ತಾವು ಸುರಕ್ಷಿತ ಅಲ್ಲವೆಂಬ ಭೀತಿಯಿಂದ ಮುಸಲ್ಮಾನರು ದೇಶಾದ್ಯಂತ ಕಿಷ್ಕಿಂಧ ಕೊಂಪೆಗಳಲ್ಲಿ ನೆಲೆಸಿದ್ದಾರೆ. ಕೋಮುಸೂಕ್ಷ್ಮ ಪೇಟೆಪಟ್ಟಣಗಳು ನಗರ- ಮಹಾನಗರಗಳಲ್ಲಿ ಇದು ಹೆಚ್ಚು ವ್ಯಕ್ತವಾಗಿ ಕಂಡುಬರುತ್ತದೆ ಎಂದು ನ್ಯಾಯಮೂರ್ತಿ ಸಚ್ಚರ್ ಸಮಿತಿ 2006ರಲ್ಲಿ ಹೇಳಿತ್ತು. ಕಳೆದ 10-11 ವರ್ಷಗಳಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. ಭಾರತದ ಮುಸಲ್ಮಾನರ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳನ್ನು ಈ ಸಮಿತಿ ಅಧ್ಯಯನ ಮಾಡಿತ್ತು.
ಕೊಳಕು ಕೊಂಪೆಗಳನ್ನು ಕಟ್ಟಿಕೊಂಡು ಅವುಗಳಲ್ಲಿ ನೆಲೆಸುವುದು ಮುಸಲ್ಮಾನರ ಆಯ್ಕೆಯೇನೂ ಅಲ್ಲ. ಸಾಮಾಜಿಕ ಮುಖ್ಯಧಾರೆಯೇ ಅವರನ್ನು ದೂರತಳ್ಳಿದೆ. ಪ್ರಭುತ್ವದ ನೇರ ನಿರ್ಲಕ್ಷ್ಯ ಅಥವಾ ಉಪದ್ರವ ಅಥವಾ ಸಂಘಟಿತ ಹಿಂಸಾಚಾರಗಳಿಗೆ ಅವರು ತುತ್ತಾಗುತ್ತ ಬಂದಿದ್ದಾರೆ. ದೇಶವಿಭಜನೆ- ಬಾಬರಿ ಮಸೀದಿ ನೆಲಸಮ- ಗೋಧ್ರೋತ್ತರ ಕೋಮುಗಲಭೆಗಳ ಹಿಂಸಾಚಾರ ಸರಣಿಗಳು ಮತ್ತು ನರಮೇಧಗಳು ಪೇಟೆಪಟ್ಟಣ- ನಗರಮಹಾನಗರಗಳಲ್ಲಿ ಅವರನ್ನು ಮೂಲೆಗೆ ತಳ್ಳಿವೆ ಎಂಬುದು ವಿದ್ವಾಂಸ ಫೈಜನ್ ಅಹ್ಮದ್ ವಿಶ್ಲೇಷಣೆ.

ಮುಂಬಯಿಯ ಮುಂಬ್ರಾ, ಭೆಂಡೀ ಬಝಾರ್, ಗುಜರಾತಿನ ಜುಹಾಪುರ, ದೆಹಲಿಯ ಜಾಮಾ ಮಸೀದಿ ಮತ್ತು ಓಖ್ಲಾ ಪ್ರದೇಶಗಳು ಧರ್ಮವನ್ನು ಆಧರಿಸಿದ ಪ್ರತ್ಯೇಕ ವಸತಿಕೊಂಪೆಗಳು ರೂಪು ತಳೆದಿರುವ ಮಾತಿಗೆ ಒಡೆದು ಕಾಣುವ ಉದಾಹರಣೆಗಳು.

ಒಂದೆಡೆ ಮುಸ್ಲಿಮ್ ಬಾಹುಳ್ಯ ಕೊಂಪೆಗಳು ನೀರು-ನೈರ್ಮಲ್ಯ-ವಿದ್ಯುಚ್ಛಕ್ತಿ ಮುಂತಾದ ಮೂಲಸೌಲಭ್ಯಗಳು ಸಾಕಷ್ಟಿಲ್ಲದೆ, ಅಭಿವೃದ್ಧಿಯನ್ನೇ ಕಾಣದೆ ನರಳುತ್ತಿದ್ದರೆ, ಇನ್ನೊಂದೆಡೆ ಈ ಕೊಂಪೆಗಳಿಂದ ಅವರು ಇತರೆ ಭಾಗಗಳಲ್ಲಿ ಆಸ್ತಿಪಾಸ್ತಿ ಖರೀದಿಸಿ ವಲಸೆ ಹೋಗಲು ಬಿಡುತ್ತಿಲ್ಲ.

ಹೀಗೆ ಮುಸ್ಲಿಮರನ್ನು ಅವರಾಗಿ ಮುಖ್ಯಧಾರೆಯಲ್ಲಿ ಬೆರೆಯಲು ಬಂದಾಗಲೂ ದೂರ ತಳ್ಳಿ, ಅವರು ವಾಸಿಸುವ ಕೊಂಪೆಗಳಿಗೆ ‘ಮಿನಿ ಪಾಕಿಸ್ತಾನ’ಗಳೆಂದು ಹೆಸರಿಡುವುದು ವಿಕೃತ ದ್ವೇಷವೇ ಸರಿ. ‘ಹಿಂದೂ’ ಸಮುದಾಯಗಳ ಒಳಗಿನ ಭೇದಭಾವದ ಪದರಗಳನ್ನು ಶೋಧಿಸ ಹೊರಟರೆ ಮೇಲ್ಜಾತಿ ಕೆಳಜಾತಿ- ಮಾಂಸಾಹಾರಿಗಳು-ಸಸ್ಯಾಹಾರಿಗಳು, ಬ್ರಾಹ್ಮಣ-ಅಬ್ರಾಹ್ಮಣ, ದಲಿತರು-ಮೇಲ್ಜಾತಿಗಳು, ದಲಿತರು-ಶೂದ್ರರು ತಾರತಮ್ಯಗಳು ಜನವಸತಿಗಳನ್ನು ಹೇಗೆ ರೂಪಿಸಿವೆ, ದಲಿತ-ತಳಸಮುದಾಯಗಳನ್ನು ಹೇಗೆಲ್ಲ ದೂರ ಇರಿಸಿವೆ ಎಂಬುದು ಮಹಾ ತರತಮದ ಮತ್ತೊಂದು ಕರಾಳ ಮುಖ.
ಜಾತಿಭೇದ, ಅಸ್ಪೃಶ್ಯತೆ ಆಚರಣೆ, ಕೋಮುದ್ವೇಷ, ನೆಲಮುಗಿಲುಗಳ ನಡುವಣ ಅಂತರದ ಆರ್ಥಿಕ ಅಸಮಾನತೆ ದೇಶದ್ರೋಹ ಎನಿಸಿಕೊಳ್ಳಬೇಕಲ್ಲವೇ? ಈ ಪ್ರಶ್ನೆಯನ್ನು ಬಹುಜನರು ತಮಗೆ ತಾವೇ ಕೇಳಿಕೊಳ್ಳಬೇಕಿದೆ. ಮನವರಿಕೆ ಆದ ನಂತರ ಇವೇ ಪ್ರಶ್ನೆಗಳನ್ನು ಆಳುವವರ ಮುಖಗಳಿಗೆ ರಾಚಬೇಕಿದೆ.

Advertisements
ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X