ಈ ಗ್ರಾಮದಲ್ಲಿ ಜನಜೀವನದ ಮೂಲ ಸೌಕರ್ಯಗಳನ್ನು ನೋಡಿದರೆ ನಿಮಗೆ ಅತ್ಯಂತ ಖೇದಕರ ಎನಿಸಿದರೆ ಆಶ್ಚರ್ಯವಾಗಲಾರದು. ಏಕೆಂದರೆ ಕಸ ಕಡ್ಡಿ, ಪ್ಲಾಸ್ಟಿಕ್ ಬಾಟಲ್, ಕವರ್‌ಗಳಿಂದ ತುಂಬಿಕೊಂಡಿರುವ, ವರ್ಷಗಳೇ ಕಳೆದರೂ ಹೂಳು ತೆಗೆಯದ ಚರಂಡಿಗಳು, ರಸ್ತೆ ಮಧ್ಯದಲ್ಲಿ ಮನೆ ಎದುರೇ ಹಾದು ಹೋಗಿರುವ ಚರಂಡಿಯ ನೀರು, ಅದು ಊರಿನಿಂದ ಹೊರಹೋಗಲು ಸಮರ್ಪಕ ಸೌಕರ್ಯ ಕಲ್ಪಿಸದೆ ಮನೆಯ ಸುತ್ತಮುತ್ತ ಹರಡಿಕೊಂಡು ದುರ್ವಾಸನೆಯುಕ್ತವಾದ ಮನೆಗಳು. ಇದು ಇಲ್ಲಿನ ಸಹಜ ಸ್ಥಿತಿಯಾಗಿದೆ. ಇದರ ನಡುವೆಯೇ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾಲೋನಿಯ ಜನರು ಬದುಕುತ್ತಿದ್ದಾರೆ. ಊರಿನ ಸವರ್ಣೀಯರ ಪರಿಸ್ಥಿತಿಯೂ ಕೂಡ ಬೇರೆಯಾಗಿಲ್ಲ.
ಈ ಸಾಮಾನ್ಯ ದೃಶ್ಯ ಕಂಡು ಬಂದಿದ್ದು ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ದಿದ್ದಿಗಿ ಗ್ರಾಮ ಪಂಚಾಯಿತಿಯ ಉಜ್ಜಪ್ಪ ಒಡೆಯರಹಳ್ಳಿ ಗ್ರಾಮದಲ್ಲಿ.
ಈ ಗ್ರಾಮ ಬಹುತೇಕ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಗಡಿ ಭಾಗಕ್ಕೆ ಹೊಂದಿಕೊಂಡಿದ್ದು, ತಾಲೂಕು ಕೇಂದ್ರ ಜಗಳೂರಿಗೆ ಸರಿಸುಮಾರು 40 ಕಿಲೋಮೀಟರ್, ದಾವಣಗೆರೆ ಜಿಲ್ಲಾ ಕೇಂದ್ರಕ್ಕೂ 40 ಕಿಲೋಮೀಟರ್ ದೂರದಲ್ಲಿದೆ.
ಗಡಿಭಾಗದ ಗ್ರಾಮವಾಗಿರುವುದರಿಂದಲೋ ಏನೋ, ಇದು ಯಾವುದೇ ಮೇಲಾಧಿಕಾರಿಗಳ ಕಣ್ಣಿಗೂ ಕೂಡ ಬೀಳುತ್ತಿಲ್ಲವೇನೋ ಎನ್ನುವ ಅನುಮಾನ ಕಾಡುತ್ತಿದೆ. ಗ್ರಾಮದ ಸ್ವಚ್ಛತೆಯ ಬಗ್ಗೆ ಗಮನಹರಿಸಬೇಕಾಗಿದ್ದ ಸ್ಥಳೀಯ ಪಂಚಾಯತ್ ಸದಸ್ಯರು ಅಥವಾ ಗ್ರಾಮ ಪಂಚಾಯತ್ ಅಧಿಕಾರಿಗಳು, ಪಿಡಿಒಗಳಾಗಲಿ ಯಾರೂ ಕೂಡ ಇದಕ್ಕೆ ಸ್ಪಂದಿಸದೆ ಜನರು ಅನೈರ್ಮಲ್ಯದ ನಡುವೆ ಬದುಕುತ್ತಿರುವುದು ನಾಗರೀಕ ಪ್ರಪಂಚದ ದುರಂತವೇ ಸರಿ.
ಇಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾಲೋನಿಗಳಂತೂ ಹೂಳು ತುಂಬಿದ ಚರಂಡಿಗಳಿಂದ ತುಂಬಿಹೋಗಿವೆ. ಮಳೆ ಸುರಿದರೆ ಚರಂಡಿಯ ನೀರು ಕೊಳಚೆ ರಸ್ತೆಯ ಮೇಲೆಲ್ಲಾ ಹರಿದಾಡುತ್ತದೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು. ಹಾಗೆಯೇ ಸವರ್ಣೀಯರ ಬೀದಿಗಳಲ್ಲಿ ಕಣ್ಣಾಡಿಸಿದರೂ ಕೂಡ ಅಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಅಲ್ಲಿಯೂ ಕೂಡ ಚರಂಡಿಗಳು ಬಹುತೇಕ ಹೂಳು ತುಂಬಿಕೊಂಡಿದ್ದು, ಕೆಳಹಂತದ ಚರಂಡಿಗಳಲ್ಲಿ ನೀರು ಬಹುತೇಕ ರಸ್ತೆಯ ಮೇಲೆ ಹರಿಯುತ್ತದೆ. ಗ್ರಾಮದಲ್ಲಿನ ಆಂಜನೇಯ ದೇವಸ್ಥಾನದ ಪಕ್ಕದಲ್ಲಿ ಮೇಲ್ಗಡೆಯಿಂದ ಬಂದಿರುವ ಚರಂಡಿ ನೀರು ಬಹುತೇಕ ಬಾಕ್ಸ್ ವ್ಯವಸ್ಥೆ ಇಲ್ಲದೆ ರಸ್ತೆಯ ಮೇಲೆ ಹರಿದು ಹೋಗುತ್ತದೆ. ಇದರಿಂದಾಗಿ ಅಲ್ಲಿನ ಓಡಾಡುವ ಮಹಿಳೆಯರು, ವೃದ್ಧರು, ಮಕ್ಕಳಾದಿಯಾಗಿ ಎಲ್ಲರೂ ಮೂಗು ಮುಚ್ಚಿಕೊಂಡು ಹೋಗುವ ಓಡಾಡುವ ಪರಿಸ್ಥಿತಿ ಇದೆ.

ಗ್ರಾಮದ ಕೆಟ್ಟ ಪರಿಸ್ಥಿತಿಯ ಬಗ್ಗೆ ಮಾಹಿತಿ ಬಿಚ್ಚಿಟ್ಟ ಪರಿಶಿಷ್ಟ ಕಾಲೊನಿಯ ನಿವಾಸಿ ಚಂದ್ರಪ್ಪ “ಯಾವುದೇ ಗ್ರಾಮ ಪಂಚಾಯತ್ ಸದಸ್ಯರು, ಪಿಡಿಒ ಅಥವಾ ಗ್ರಾಮ ಪಂಚಾಯತ್ ಅಧಿಕಾರಿಗಳು ಇದುವರೆಗೂ ಇಲ್ಲಿನ ಸ್ವಚ್ಛತೆಯ ಬಗ್ಗೆ ಗಮನಹರಿಸಿಲ್ಲ. ನಾವು ಸಾಕಷ್ಟು ಬಾರಿ ದೂರು ನೀಡಿದ್ದೇವೆ. ಆದರೂ ಕೂಡ ಅವರು ಯಾವಾಗಲೋ ಬರುತ್ತಾರೆ. ಮಾಡಿಸುತ್ತೇವೆ ಅನ್ನುತ್ತಾರೆ, ಹೋಗುತ್ತಾರೆ. ಆದರೆ ಚರಂಡಿಗಳು, ರಸ್ತೆಗಳು ಸ್ವಚ್ಛವಾಗಲೇ ಇಲ್ಲ” ಎಂದು ಕಿಡಿಕಾರಿದರು.
“ಇಲ್ಲಿನ ಮನೆಯ ನಲ್ಲಿಗಳಲ್ಲಿ ಚರಂಡಿ ನೀರು ಕೂಡ ಸೇರಿಕೊಂಡು ಬರುತ್ತಿದೆ. ಚರಂಡಿ ಅವ್ಯವಸ್ಥೆಯಿಂದ ಜನರಿಗೆ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಬಹುತೇಕ ಜನರು ತಿಂಗಳಿಗೆ ಎರಡು ಬಾರಿ ಆಸ್ಪತ್ರೆಗಳಿಗೆ ಹೋಗೋದು ಸರ್ವೇ ಸಾಮಾನ್ಯವಾಗಿದೆ. ಹಿರಿಯ ಅಧಿಕಾರಿಗಳು ಕೂಡ ಗಮನಹರಿಸಿಲ್ಲ. ಸಾಕಷ್ಟು ದೂರು ನೀಡಿದರೂ ಅಸಡ್ಡೆ ತೋರುತ್ತಿದ್ದಾರೆ” ಎಂದು ಆರೋಪಿಸಿದರು.
ಪರಿಶಿಷ್ಟ ಕಾಲೋನಿಯ ನಿವಾಸಿ ಮಹಿಳೆ ರಾಧಮ್ಮ ಮಾತನಾಡಿ, “ನಮ್ಮ ಕಾಲೋನಿಗಳಲ್ಲಿ ಚರಂಡಿಯನ್ನು ಸ್ವಚ್ಛ ಮಾಡುವುದೇ ಇಲ್ಲ. ಚರಂಡಿಗಳು ತುಂಬಿಕೊಂಡು ನೀರು ರಸ್ತೆಯ ಮೇಲೆ ಹರಿದಾಡುತ್ತದೆ. ಸಮರ್ಪಕ ಚರಂಡಿ ವ್ಯವಸ್ಥೆ, ಮೂಲ ಸೌಕರ್ಯಗಳಿಲ್ಲ. ನಲ್ಲಿಯ ನೀರಿನಲ್ಲಿ ಬಿಳಿಯ ಹುಳುಗಳು, ಬಾಲದ ಹುಳುಗಳು ಬರುತ್ತಿವೆ. ಈ ಬಗ್ಗೆ ಹೇಳಿದರೆ ಅದನ್ನೇ ಉಪಯೋಗಿಸಿ ಸೋಸಿಕೊಂಡು ಕುಡಿಯಿರಿ ಎನ್ನುತ್ತಾರೆ. ಚರಂಡಿಯ ಪಕ್ಕದಲ್ಲಿಯೇ ಮನೆಗೆ ನೀರು ಬರುವ ಪೈಪ್ ವ್ಯವಸ್ಥೆ ಹಾದು ಹೋಗಿದ್ದು, ಚರಂಡಿಯ ಪಕ್ಕದಲ್ಲಿ ವಾಲ್ವ್ ಕೂಡ ಇದ್ದು ಚರಂಡಿ ನೀರು ತುಂಬಿಕೊಂಡು ಮನೆಗಳಲ್ಲಿ ಚರಂಡಿಯ ನೀರು ಕರಿಬಣ್ಣದಲ್ಲಿ ಬರುತ್ತದೆ. ಮೂರ್ನಾಲ್ಕು ವರ್ಷದಿಂದಲೂ ಇದೇ ನೀರನ್ನೇ ಉಪಯೋಗಿಸುತ್ತಿದ್ದೇವೆ” ಎಂದು ಅಳಲನ್ನು ತೋಡಿಕೊಂಡರು.

ಒಟ್ಟಿನಲ್ಲಿ ಈ ಊರಿನಲ್ಲಿ ನೈರ್ಮಲ್ಯ ಎಂಬುದು ಮರೀಚಿಕೆಯಾಗಿದ್ದು, ಮನೆಗಳಿಗೆ ಪೂರೈಸುವ ನೀರು ಕೂಡ ಕೆಲ ಭಾಗದಲ್ಲಿ ಕಲುಷಿತಗೊಂಡು ಸರಬರಾಜಾಗುತ್ತಿದೆ. ಈ ಬಗ್ಗೆ ದೂರಿದರೂ ಕೂಡ ಸ್ಥಳೀಯ ಗ್ರಾಮ ಪಂಚಾಯತ್ ಆಡಳಿತ ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಎನ್ನುವುದು ಸ್ಥಳೀಯರ ಅಳಲಾಗಿದೆ. ಚರಂಡಿ ವ್ಯವಸ್ಥೆ ಹೂಳು ತುಂಬಿಕೊಂಡಿದ್ದು ಬಹುತೇಕ ಅಸ್ತವ್ಯಸ್ತಗೊಂಡಿದೆ. ಚರಂಡಿ ನೀರು ಕೂಡ ಹೊರ ಹೋಗಲು ಸರಿಯಾದ ವ್ಯವಸ್ಥೆ ಕಲ್ಪಿಸಿಲ್ಲ.
ಪರಿಶಿಷ್ಟ ಕಾಲೋನಿಯ ಹೊರಭಾಗದಲ್ಲಿ ಚರಂಡಿಯ ನೀರು ಶೇಖರಣೆಗೊಳ್ಳುತ್ತಿದ್ದು, ಸುತ್ತಮುತ್ತ ಕೊಳಚೆಯಾಗಿ ಮಾರ್ಪಟ್ಟಿದೆ. ಅಲ್ಲಿ ಸೊಳ್ಳೆಗಳು ಹೆಚ್ಚಾಗಿವೆ. ಅಕ್ಕ ಪಕ್ಕದ ಮನೆಗಳಿಗೆ ದುರ್ವಾಸನೆ ಆವರಿಸುತ್ತದೆ. ಅಧಿಕಾರಿಗಳು ಕೂಡ ತಮಗೆ ಸಂಬಂಧವೇ ಇಲ್ಲದಂತೆ ಕಣ್ಮುಚ್ಚಿ ಕುಳಿತಿದ್ದಾರೆ ಎಂಬುದು ಸಾರ್ವಜನಿಕರ ಆರೋಪ.
ಈ ಬಗ್ಗೆ ಹೆಸರು ಹೇಳಲಿಚ್ಚಿಸದ ಸಾರ್ವಜನಿಕರೊಬ್ಬರು “ಚರಂಡಿ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಕೆಲವೆಡೆ ಚರಂಡಿಯ ನೀರು ರಸ್ತೆ ಮೇಲೆ ಹರಿಯುತ್ತದೆ. ಈ ಬಗ್ಗೆ ದೂರಿದರೆ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಅಧಿಕಾರಿಗಳು ಯಾರು ದೂರು ನೀಡಿದ್ದು ಎಂದು ಜಗಳಕ್ಕೆ ಬರುತ್ತಾರೆ. ಚರಂಡಿಯ ಸಂಕಷ್ಟದಿಂದ ರೋಗರುಜಿನಗಳು ಹೆಚ್ಚಾಗಿದ್ದು, ಬಾಳ್ವೆ ನಡೆಸುವುದು ಕಷ್ಟವಾಗಿದೆ. ದೂರು ನೀಡಿದರೆ ನಮ್ಮ ವಿರುದ್ಧವೇ ಜಗಳಕ್ಕೆ ಬರುತ್ತಾರೆ, ಗಲಾಟೆ ಮಾಡುತ್ತಾರೆ. ನಮ್ಮ ತಂದೆ ಸೊಳ್ಳೆ ಕಾಟದಿಂದಾಗಿ ಒಂದು ತಿಂಗಳಿಂದ ಆಸ್ಪತ್ರೆಗೆ ಓಡಾಡುತ್ತಿದ್ದಾರೆ” ಎಂದು ಸಂಕಷ್ಟ ತೋಡಿಕೊಂಡರು.

ಈ ಬಗ್ಗೆ ಈ ದಿನ ಡಾಟ್ ಕಾಮ್‌ಗೆ ಪ್ರತಿಕ್ರಿಯಿಸಿದ ದಿದ್ದಿಗೆ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ, “ಆಗಾಗ್ಗೆ ಚರಂಡಿಗಳ ಹೂಳು ತೆಗೆಸುತ್ತಿದ್ದೇವೆ. ಹಳೆಯ ಅವೈಜ್ಞಾನಿಕ ಚರಂಡಿ ನಿರ್ಮಾಣದಿಂದ ಕೆಲವು ಕಡೆಗಳಲ್ಲಿ ಚರಂಡಿ ಬ್ಲಾಕ್ ಆಗಿ ಹೂಳು ತುಂಬಿಕೊಂಡಿದೆ. ಹೂಳು ತೆಗೆಯುವ ಕುರಿತು ಗಮನಹರಿಸುತ್ತೇವೆ” ಎಂದು ಭರವಸೆ ನೀಡಿದರು.
“ಬೋವಿ ಕಾಲೋನಿ ಕೊನೆಯಲ್ಲಿ ಚರಂಡಿ ನೀರು ಹೊರಹೋಗಲು ವ್ಯವಸ್ಥೆ ಇಲ್ಲದೆ ಕೊನೆಯ ಮನೆಗಳ ಬಳಿ ನಿಲ್ಲುತ್ತದೆ. ಅದನ್ನು ಸರಿಪಡಿಸಲು ಕ್ರಮ ಕೈಗೊಳ್ಳುತ್ತೇವೆ. ನಲ್ಲಿ ನೀರಿನಲ್ಲಿ ಕೊಳಚೆ ನೀರು ಬರುವ ಮಾಹಿತಿ ನಮ್ಮ ಗಮನಕ್ಕೆ ಬಂದಿಲ್ಲ. ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಮೊಬೈಲ್ ಲೋನ್ ‘ಆ್ಯಪ್’ ಸಾಲದ ಸುಳಿ: ಪತ್ನಿಯ ‘ಅಶ್ಲೀಲ’ ಫೋಟೋ ವೈರಲ್; ಪತಿ ಆತ್ಮಹತ್ಯೆ
ಒಟ್ಟಿನಲ್ಲಿ ನೀರು, ಚರಂಡಿ ಸೇರಿದಂತೆ ಶುಚಿತ್ವ ಮೂಲ ಸೌಕರ್ಯಗಳ ಕೊರತೆ ಕಣ್ಣಿಗೆ ರಾಚುತ್ತಿದ್ದು, ಜನರ ಆರೋಗ್ಯ ಕಾಪಾಡಲು, ಸೌಲಭ್ಯ ಒದಗಿಸಲು ಅಧಿಕಾರಿಗಳು, ಜನಪ್ರತಿನಿಧಿಗಳು ಸಹೃದಯದಿಂದ ಕಾರ್ಯ ನಿರ್ವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಿ ಜನರ ಆರೋಗ್ಯ ಕಾಪಾಡಲಿ ಎನ್ನುವುದು ಎಲ್ಲರ ಕಳಕಳಿಯಾಗಿದೆ. ಇನ್ನಾದರೂ ಸಂಬಂಧಪಟ್ಟವರು ಸ್ಪಂದಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು