ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕು ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳುಗೋಡು ಸರ್ವೆ ನಂಬರ್ 337/1ರ 50 ಸೆಂಟ್ ಜಾಗದಲ್ಲಿ ಅಧಿಕಾರ ದುರ್ಬಳಕೆ ಮಾಡಿ ಗ್ರಾಮದ ಹೃದಯ ಭಾಗದಲ್ಲಿ ಬೃಹತ್ ಕಸ ವಿಲೇವಾರಿ ಘಟಕ ಕಾಮಗಾರಿ ಕೈಗೊಂಡಿದೆ.
ವಿಶೇಷವೆಂದರೆ ಸರ್ಕಾರದ ಯೋಜನೆಯೊಂದಕ್ಕೆ ಪೊಲೀಸ್ ಬಂದೋಬಸ್ತ್ ಬಳಸಿ ಗ್ರಾಮಸ್ಥರ ಒಪ್ಪಿಗೆ, ಗ್ರಾಮಸಭೆ ನಡೆಸದೆ, ಒಂದೇ ಒಂದು ಮಾಹಿತಿ ಕೊಡದೆ ವಾಮಮಾರ್ಗದಿಂದ ಕಸ ವಿಲೇವಾರಿ(ತ್ಯಾಜ್ಯ) ಘಟಕದ ಕೆಲಸವನ್ನು ತರಾತುರಿಯಲ್ಲಿ ಆರಂಭ ಮಾಡಿದ್ದಾರೆ.
ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಯಾವುದೇ ಸರ್ಕಾರಿ ಕ್ರಿಯಾ ಯೋಜನೆ ಅನುಷ್ಠಾನ ಮಾಡುವಾಗ ಸದರಿ ಗ್ರಾಮ ಪಂಚಾಯಿತಿ ಗ್ರಾಮಸಭೆ ನಡೆಸಿ ಅಧಿಕಾರಿಗಳು, ಜನಪ್ರತಿನಿಧಿ, ಗ್ರಾಮಸ್ಥರನ್ನು ಒಳಗೊಂಡು ಸಾಧಕ ಭಾದಕ ಚರ್ಚೆ ಮಾಡಿ ಅಂಗೀಕರಿಸಿ ಕಾರ್ಯೋನ್ಮುಖವಾಗಬೇಕು. ಆದರೆ ಇಲ್ಲಿಯ ವಿಲಕ್ಷಣ ಪರಿಸ್ಥಿತಿ ಏನೆಂದರೆ ಗ್ರಾಮಸ್ಥರಿಗೆ ಯಾವುದೇ ಮಾಹಿತಿ ಇಲ್ಲ, ಅಕ್ಕಪಕ್ಕದ ಕೃಷಿಕರಿಗೆ ನೋಟಿಸ್ ನೀಡಿಲ್ಲ. ಆದಿವಾಸಿಗಳು ವಾಸ ಮಾಡುವ ಜಾಗದಲ್ಲಿ ಕಸ ವಿಲೇವಾರಿ(ತ್ಯಾಜ್ಯ) ಘಟಕ ಮಾಡುತ್ತಿದ್ದಾರೆ. ವಿರಾಜಪೇಟೆ ಶಾಸಕ ಎ ಎಸ್ ಪೊನ್ನಣ್ಣ ಬಂದು ಶಂಕುಸ್ಥಾಪನೆ ಮಾಡಿದಾಗ ಈ ವಿಷಯ ಗಮನಕ್ಕೆ ಬಂದಿದೆ.
ಗ್ರಾಮದ ಪರಿಮಿತಿಯಲ್ಲಿ ಒಂದು ದೊಡ್ಡಮಟ್ಟದ ಕಾಮಗಾರಿ ನಡೆಸುವಾಗ ಸಂಬಂಧಪಟ್ಟ ಇಲಾಖೆಗಳು ಅಂದರೆ ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಶಾಲಾ ಅಧಿಕಾರಿಗಳು, ನೀರಾವರಿ ಇಲಾಖೆ, ಅರಣ್ಯ ಇಲಾಖೆ ಸ್ಥಳಕ್ಕೆ ಭೇಟಿ ಕೊಟ್ಟು ಸ್ಥಳ ಮಹಜರು ಮಾಡದೆ, ವರದಿ ತಯಾರು ಮಾಡದೆ ಏಕಾಏಕಿ ಕೇವಲ 50 ಸೆಂಟ್ ಜಾಗದಲ್ಲಿ 36 ಪಂಚಾಯಿತಿ ವ್ಯಾಪ್ತಿಯ ಸರಿ ಸುಮಾರು 150 ರಿಂದ 200 ಹಳ್ಳಿಗಳ ಕಸ ತಂದು ಸುರಿದು ಇಲ್ಲಿಯೇ ಒಣಕಸ, ಹಸಿಕಸ ವಿಂಗಡನೆ, ಕಾಂಪೋಸ್ಟ್(ಗೊಬ್ಬರ), ಬರ್ನಿಂಗ್ ಯಾರ್ಡ್(ಸುಡುವ ಯಂತ್ರಗಾರ), ಕಸ ಒಕ್ಕಣೆ ಮಾಡುವ ಯೋಜನೆ ಮಾಡ ಹೊರಟಿದೆ. ಈಗಾಗಲೇ ಚುರುಕಾಗಿ ಪೊಲೀಸ್ ರಕ್ಷಣೆಯಲ್ಲಿ ಆತುರಾತುರದಿಂದ ಕೆಲಸ ಪ್ರಗತಿಯಲ್ಲಿದೆ.

ತ್ಯಾಜ್ಯ ಘಟಕ ಮಾಡುತ್ತಿರುವ ಸುತ್ತಳತೆಯಲ್ಲಿ ಪರಂಬಾಡಿ, ಬಾಳುಗೋಡು, ಆರ್ಜಿ ಗ್ರಾಮಗಳು ಇದ್ದು, ಸರಿಸುಮಾರು 5 ರಿಂದ 6 ಸಾವಿರ ಜನಸಂಖ್ಯೆ ಇದೆ. ಜನ ಓಡಾಟದ, ವ್ಯವಹಾರಿಕ ಸ್ಥಾನವೂ ಹೌದು. ಇದನ್ನೆಲ್ಲ ತಾಲೂಕು ಆಡಳಿತ, ಗ್ರಾಮ ಪಂಚಾಯಿತಿ ಪರಿಗಣಿಸಿಲ್ಲ. ಈಗ ತ್ಯಾಜ್ಯ ಘಟಕ ಮಾಡುತ್ತಿದ್ದಾರೆ. ಅಲ್ಲಿ ಈಗಾಗಲೇ ಪಂಚಾಯಿತಿ ವ್ಯಾಪ್ತಿಯ ಒಣಕಸ ಹಾಗೂ ಹಸಿಕಸ ಕಿರು ಘಟಕವಿದೆ. ಅದನ್ನು ಮೀರಿ ನೀರಿನ ಸೆಲೆಯಾಗಿದ್ದು, ಅಕ್ಕಪಕ್ಕದಲ್ಲಿ ಬೋರ್‌ವೆಲ್, ಬಾವಿಗಳು, ಸದರಿ ಜಾಗ ಮಳೆಗಾಲದಲ್ಲಿ ಜಿನುಗಿ ನೀರು ಹರಿದು ತೋಡುಗಳ ಮೂಲಕ ಕಾವೇರಿ ನದಿ ಸೇರುತ್ತೆ. ಇದನ್ನು ಅಧಿಕಾರಿಗಳು ಸ್ಥಳದಲ್ಲಿ ಪರಿಶೀಲನೆ ನಡೆಸಬೇಕಿತ್ತು. ಅಂತರ್ಜಲಕ್ಕೆ ಅಪಾಯವಾಗುವ ಯೋಜನೆ ಎನ್ನುವುದು ತಿಳಿದಿದ್ದರೂ ಕೂಡಾ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸಿಲ್ಲ.

ಒಂದು ವೇಳೆ ಇಲ್ಲಿ ಕಸದ ರಾಶಿ ಸುರಿಯಲು ಆರಂಭಿಸಿದರೆ ಅದರಲ್ಲಿ ರೈತರು ಕೃಷಿಗೆ ಬಳಸುವ ರಾಸಾಯನಿಕ, ಆಸ್ಪತ್ರೆ ತ್ಯಾಜ್ಯಗಳು, ಮರುಬಳಕೆ ಮಾಡಲಾರದ ಘನ ವಸ್ತುಗಳು ಸೇರಿದಂತೆ, ಕೊಳೆಯುವ ತ್ಯಾಜ್ಯ ಅಂತರ್ಜಲಕ್ಕೆ ಸೇರುತ್ತೆ, ಮಳೆಗಾಲದಲ್ಲಿ ಕೃಷಿ ಭೂಮಿ ಕಡೆಗೆ ಹರಿಯುತ್ತದೆ. ಕುಡಿಯುವ ನೀರು ಬೋರ್‌ವೆಲ್, ಬಾವಿಗಳು ಕಲುಷಿತವಾಗುತ್ತವೆ. ಆದಿವಾಸಿಗಳಿಗೆ ಸದ್ಯದ ಮಟ್ಟಿಗೆ ಈಗಿರುವ ಬೋರ್‌ವೆಲ್ ಒಂದೇ ಆಸರೆಯಾಗಿತ್ತು. ಇದೀಗ ಅದರ ಪಕ್ಕದಲ್ಲಿಯೇ ತ್ಯಾಜ್ಯ ಘಟಕ ಮಾಡುತ್ತಿದ್ದಾರೆ. ಭವಿಷ್ಯದಲ್ಲಿ ಕುಡಿಯುವ ನೀರಿನ ಪರಿಸ್ಥಿತಿ ಏನು? ಕೃಷಿ ಚಟುವಟಿಕೆಯಲ್ಲಿ ತೊಡಗುವ ರೈತರ ಆರೋಗ್ಯದ ಪಾಡೇನು? ಎನ್ನುವ ಯೋಚನೆಯೂ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನನವಾಗಿಲ್ಲ.

ತಾಲೂಕು ಪಂಚಾಯಿತಿ ಮುಖ್ಯ ಆಡಳಿತಾಧಿಕಾರಿ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಯಾವುದೇ ಪೂರ್ವಾಪರ ಯೋಚನೆ ಮಾಡದೆ, ಗ್ರಾಮಸ್ಥರ ಗಮನಕ್ಕೆ ತರದೆ, ಸದರಿ ಕಾಮಗಾರಿ ಕಾನೂನು ರೀತ್ಯಾ ಮಾಡದೆ, ಯಾರದ್ದೋ
ಮುಲಾಜಿಗೆ ಒಳಗಾಗಿ ಅನುಷ್ಠಾನ ಮಾಡ ಹೊರಟಂತಿದೆ.
ಬೃಹತ್ ತ್ಯಾಜ್ಯ ಘಟಕ ಮಾಡ ಹೊರಟಿರುವ ಭೂಮಿ ವರ್ತಿ ಜಾಗವೆಂದರೆ ಜಿನುಗು ಪ್ರದೇಶ. ಮಳೆಗಾಲದಲ್ಲಿ ಓಡಾಡಲೂ ಕೂಡಾ ಆಗಲ್ಲ. ವಾಹನಗಳು ಹುದುಗಿ ಹೋಗುವಂತ ಜಾಗ. ಅಂತಹ ಜಾಗದಲ್ಲಿ ಬೃಹತ್ ಕಟ್ಟಡ ಕಟ್ಟಲು ಯಾರು ಅನುಮತಿಸಿದರು ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. ಭೂಮಿ ಬಹಳ ಸಡಿಲವಾಗಿದ್ದು, ಬೃಹತ್ ಕಟ್ಟಡ ನಿರ್ಮಾಣಕ್ಕೆ ಯೋಗ್ಯವಾಗಿಲ್ಲ. ಕಾರಣ ನೀರಿನ ಬುಗ್ಗೆ, ಅಂತರ್ಜಲ ಮಟ್ಟ ಹೆಚ್ಚಿದ್ದು, ಭೂಮಿಯ ಮೇಲೆ ಹರಿಯುವಷ್ಟು ನೀರಿನ ಅಂಶ ಹೊಂದಿದೆ. ಅದು ತೋಡಿನ ಮೂಲಕ ರೈತರ ಜಮೀನಿಗೆ, ಕಾವೇರಿ ನದಿಗೆ ಸೇರುವಷ್ಟಿದೆ. ಇದನ್ನು ಕೂಲಂಕುಷವಾಗಿ ಪರೀಕ್ಷೆ ನಡೆಸಿಲ್ಲ. ಯಾರೂ ಕೂಡಾ ಭೇಟಿ ನೀಡಿ ಸಮೀಕ್ಷೆ ನಡೆಸಿಲ್ಲ.

ಕಸ ವಿಲೇವಾರಿ ಘಟಕ ಕಾಮಗಾರಿ ಸ್ಥಳ ಬರಡು ಭೂಮಿಯಲ್ಲ. ಅದರ ಸುತ್ತಲೂ ಗ್ರಾಮವಿದೆ. ಜತೆಗೆ ಫಲವತ್ತಾದ ಕೃಷಿ ಭೂಮಿಯಿದ್ದು, ಕಾಫಿ, ಮೆಣಸು, ಅಡಕೆ, ಭತ್ತದ ಗದ್ದೆಗಳಿವೆ. ಕಂದಾಯ ಇಲಾಖೆಯಿಂದ ಈ ಬಗ್ಗೆ ಖುದ್ದಾಗಿ ಭೇಟಿ ಕೊಟ್ಟು ಮಹಜರು ಮಾಡಿ ವರದಿ ಮಾಡಬೇಕಿತ್ತು. ಇದ್ಯಾವುದೂ ಕಂಡು ಬಂದಿಲ್ಲ. ಯಾಕೆಂದರೆ ಸುತ್ತಮುತ್ತಲಿನ ರೈತರಿಗೆ ಯಾವುದೇ ನೋಟಿಸ್ ನೀಡದೆ ಮಾಡುತ್ತಿರುವ ಅಕ್ರಮ ಕಾಮಗಾರಿ.
ಅಷ್ಟೇ ಅಲ್ಲದೆ ಕೇವಲ ಒಂದು ಕಿಮೀ ವ್ಯಾಪ್ತಿಯಲ್ಲಿ ಮಾಕುಟ್ಟ ವ್ಯಾಪ್ತಿಯ ಬ್ರಹ್ಮಗಿರಿ ವಲಯ, ನಾಗರಹೊಳೆ ಅಭಯಾರಣ್ಯವಿದೆ. ಇಲ್ಲಿ ಕಾಡು ಪ್ರಾಣಿಗಳ ಓಡಾಟ. ಅದರಲ್ಲೂ ಕಾಡಾನೆ ಹಾವಳಿಯಿದೆ. ಇಂತಹ ಜಾಗದಲ್ಲಿ ಅರಣ್ಯ ಕಾಯ್ದೆ ಅನ್ವಯ ಯಾವುದೇ ಸರ್ಕಾರಿ ಯೋಜಿತ ಕಾಮಗಾರಿ ನಡೆಸುವಂತಿಲ್ಲ. ಪ್ರಾಣಿಗಳಿಗೆ ತೊಂದರೆಯಾಗುವಂತಹ ಯಾವುದೇ ಕ್ರಿಯಾಯೋಜನೆ ಕೈಗೊಳ್ಳುವಂತೆಯೂ ಇಲ್ಲ. ಇದಕ್ಕೆ ಅರಣ್ಯ ಇಲಾಖೆ ಅನುಮತಿ ನೀಡಿದೆಯಾ, ತಾಲೂಕು ಆಡಳಿತಕ್ಕೆ ಈ ಬಗ್ಗೆ ಅರಿವು ಇದೆಯಾ ಎನ್ನುವುದು ಬಹುಮುಖ್ಯ ವಿಚಾರ.

ಕಾಡಂಚಿನಲ್ಲಿ ವಾಸ ಮಾಡಲೂ ಬಿಡುವುದಿಲ್ಲ. ಹೀಗಿರುವಾಗ ಕಾಡು ಪ್ರಾಣಿ ಸಂಚರಿಸುವ ಭಾಗದಲ್ಲಿ ಕಸ ವಿಲೇವಾರಿ ಘಟಕವನ್ನು ಯಾರ ಅನುಮತಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ ಎನ್ನುವುದೇ ನಿಗೂಢ.
ಅದಷ್ಟೇ ಅಲ್ಲದೇ ಈ ಜಾಗದಲ್ಲಿ ಸರಿ ಸುಮಾರು ಪ್ರಸ್ತುತ 21 ಆದಿವಾಸಿ ಕುಟುಂಬಗಳು ವಾಸ ಮಾಡುತ್ತಿವೆ. ಈ ಕುಟುಂಬಗಳಿಗೆ ನಿವೇಶನ ಹಂಚಲಾಗಿದೆ. ಇದರ ಜತೆಗೆ ಸಾಲುಮನೆ ಜೀತದಿಂದ ಹೊರಬಂದ 12 ಕುಟುಂಬಗಳಿಗೆ ಇದೇ ಜಾಗದಲ್ಲಿ ನಿವೇಶನ ನೀಡಿದ್ದು, ಐಟಿಡಿಬಿ ಇಲಾಖೆ ಅಂಗನವಾಡಿ ಸಹಿತ ಮನೆ ನಿರ್ಮಾಣ ಮಾಡುವುದು, ಅಗತ್ಯ ಮೂಲಭೂತ ವ್ಯವಸ್ಥೆ
ಕಲ್ಪಿಸುವುದು. ವಿದ್ಯುತ್ ಕಲ್ಪಿಸುವ ಯೋಜನೆ ಈಗಾಗಲೇ ನಡೆದಿರುವ ಪ್ರಕ್ರಿಯೆ.ಇದನ್ನೆಲ್ಲ ಗಾಳಿಗೆ ತೂರಿ ಆದಿವಾಸಿ ಕುಟುಂಬಗಳು ವಾಸಿಸುವ ಜಾಗದಲ್ಲಿಯೇ ತ್ಯಾಜ್ಯ ಘಟಕ ಮಾಡುತ್ತಿರುವುದು ಎಸ್ಟು ಸರಿ ಅನ್ನುವ ಪ್ರಶ್ನೆ ಮೂಡುತ್ತದೆ.
ಇದಲ್ಲದೆ ಆದಿವಾಸಿಗಳು ವಾಸ ಇರುವ ಜಾಗದಲ್ಲಿ ಇಂತಹ ಸರ್ಕಾರಿ ಯೋಜಿತ ಕಾಮಗಾರಿ ನಡೆಸುವಂತಿಲ್ಲ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಅಭಿವೃದ್ಧಿಯಿಂದ ವಂಚಿತಗೊಂಡ ಉಜ್ಜಪ್ಪ ಒಡೆಯರಹಳ್ಳಿ ಗ್ರಾಮ: ಕಣ್ಣಾಡಿಸುವರೇ ಅಧಿಕಾರಿಗಳು?
ಆದಿವಾಸಿ ಕುಟುಂಬಗಳ ಅಭಿವೃದ್ಧಿಗೆ ಮೀಸಲಾದ ಜಾಗದಲ್ಲಿ, ಅದರ ಪಕ್ಕದಲ್ಲೇ ಜನರಿಗೆ, ಸುತ್ತಮುತ್ತಲಿನ ಪರಿಸರಕ್ಕೆ ಹಾನಿಯಾಗುವಂಥ, ಪರಿಸರ ಮಾಲಿನ್ಯವಾಗುವಂಥ ಯಾವುದೇ ಯೋಜನೆ ನಡೆಯುವಂತಿಲ್ಲ. ಇಂತಹ ಸೂಕ್ಷ್ಮ ಅಂಶಗಳನ್ನೂ ಕೂಡಾ ತಾಲೂಕು ಆಡಳಿತ, ಗ್ರಾಮ ಪಂಚಾಯಿತಿ ಗುರುತಿಸುವಲ್ಲಿ, ಮುಂದಿನ ಅಪಾಯ ಅರಿಯುವಲ್ಲಿ ವಿಫಲವಾಗಿದೆ.
