ವೈಕಂ ಹೋರಾಟದ ನೆನಪಿನಲ್ಲಿ ತಮಿಳುನಾಡು ಸರ್ಕಾರ ಕೊಡಮಾಡುವ 2024ನೇ ಸಾಲಿನ ‘ವೈಕಂ’ ಪ್ರಶಸ್ತಿಯನ್ನು ಹಿರಿಯ ಸಾಹಿತಿ ದೇವನೂರ ಮಹಾದೇವ ಸ್ವೀಕರಿಸಿದ್ದಾರೆ. ಕೇರಳದ ವೈಕಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇವನೂರ ಮಹಾದೇವರಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
ಕೇರಳದ ವೈಕಂನಲ್ಲಿ ‘ವೈಕಂ ಹೋರಾಟ’ ನಡೆದು ನೂರು ವರ್ಷಗಳಾಗಿವೆ. ಹೋರಾಟದಲ್ಲಿ ಪೆರಿಯಾರ್ ರಾಮಸ್ವಾಮಿ ಅವರು ಭಾಗಿಯಾಗಿದ್ದರ ಶತಮಾನೋತ್ಸವ ಸಮಾರಂಭ ಮತ್ತು ಪರಿಯಾರ್ ಸ್ಮಾರಕ ಉದ್ಘಾಟನಾ ಕಾರ್ಯಕ್ರಮವನ್ನು ಗುರುವಾರ ವೈಕಂನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪಾಲ್ಗೊಂಡಿದ್ದರು. ಇದೇ ಕಾರ್ಯಕ್ರಮದಲ್ಲಿ ತಮಿಳುನಾಡು ಸರ್ಕಾರವು ದೇವನೂರರಿಗೆ ಪ್ರಶಸ್ತಿ ಪ್ರದಾನ ಮಾಡಿದೆ.
ಪ್ರಶಸ್ತಿ ಸ್ವೀಕರಿಸಿದ ದೇವನೂರ ಮಹಾದೇವ ಅವರು ತಾವು ಬರೆದಿರುವ ‘ಆರ್‌ಎಸ್‌ಎಸ್ ಆಳ ಅಗಲ’ ಪುಸ್ತಕದ ಕನ್ನಡ, ಇಂಗ್ಲಿಷ್ ಮತ್ತು ಮಲೆಯಾಳಂ ಅವತರಣಿಕೆಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಮತ್ತು ಕನ್ನಡ, ಇಂಗ್ಲಿಷ್, ತಮಿಳು ಅವತರಣಿಕೆಯನ್ನು ತಮಿಳುನಾಡು ಸಿಎಂ ಸ್ಟಾಲಿನ್ ಅವರಿಗೂ ನೀಡಿದರು.
ವೈಕಂ ಪ್ರಶಸ್ತಿಯು 5 ಲಕ್ಷ ರೂ. ನಗದು ಮತ್ತು ಸ್ವರ್ಣಲೇಪಿತ ಪದಕವನ್ನು ಒಳಗೊಂಡಿದೆ. ಸಮಾಜದಲ್ಲಿ ತುಳಿತಕ್ಕೊಳಗಾದ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸಿದ ಗಣ್ಯ ವ್ಯಕ್ತಿಗಳು ಅಥವಾ ಸಂಸ್ಥೆಗಳಿಗೆ ವೈಕಂ ಪ್ರಶಸ್ತಿ ನೀಡಲಾಗುವುದು ಎಂದು ತಮಿಳುನಾಡು ಸರ್ಕಾರ ಹೇಳಿದೆ.