ಶಾಸನ ರೂಪಿಸುವಿಕೆ ಮತ್ತು ಸಂವಾದ ಪರಿಣಾಮಕಾರಿಯಾಗಿ ನಡೆಯದೆ ವ್ಯರ್ಥ ಕಾಲಹರಣವಾದರೆ; ಅಧಿವೇಶನದ ಕಾರ್ಯನಿರ್ವಹಣೆಯ ಬಗ್ಗೆಯೇ ಜನ ಸಿನಿಕರಾಗುತ್ತಾರೆ. ಜನರನ್ನು ಅಂತಹ ಸ್ಥಿತಿಗೆ ಕೊಂಡೊಯ್ದರೆ, ಜನಪ್ರತಿನಿಧಿಗಳು ಇದ್ದೂ ಸತ್ತಂತೆಯೇ.
ಪ್ರತಿ ಬಾರಿ ಬೆಳಗಾವಿ ಚಳಿಗಾಲದ ಅಧಿವೇಶನ ಆರಂಭವಾದಾಗಲೂ, ಉತ್ತರ ಕರ್ನಾಟಕದ- ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕದ 14 ಜಿಲ್ಲೆಗಳ ಜನತೆ ಭಾರೀ ನಿರೀಕ್ಷೆಗಳನ್ನಿಟ್ಟುಕೊಂಡಿರುತ್ತಾರೆ. ಈ ಬಾರಿಯಾದರೂ ಜನಪ್ರತಿನಿಧಿಗಳು ನಮ್ಮ ಸಂಕಟ ಮತ್ತು ಸಮಸ್ಯೆಗಳ ಕುರಿತು ಚರ್ಚಿಸುತ್ತಾರೆಯೇ, ಸರ್ಕಾರ ಸ್ಪಂದಿಸುತ್ತದೆಯೇ, ಬದುಕು ಹಸನಾಗುತ್ತದೆಯೇ ಎಂದು ಆಸೆಗಣ್ಣಿನಿಂದ ಕಾಯುತ್ತಿರುತ್ತಾರೆ.
ಕಿತ್ತೂರು ಕರ್ನಾಟಕದ ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಿಸಿದ್ದೇ ಆ ಭಾಗದ ಜನರ ಸಮಸ್ಯೆಗಳನ್ನು ಆಲಿಸಲು, ಪರಿಹರಿಸಲು ಮತ್ತು ಅಭಿವೃದ್ಧಿಯತ್ತ ಗಮನ ಹರಿಸಲು. ಅರ್ಧ ಕರ್ನಾಟಕವನ್ನು ಪ್ರತಿನಿಧಿಸುವ ಬೆಳಗಾವಿಯ ಸುವರ್ಣಸೌಧ ನಿರ್ಮಾಣಕ್ಕಾಗಿ 400ರಿಂದ 500 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಪ್ರತಿಬಾರಿಯ ಅಧಿವೇಶನಕ್ಕಾಗಿ, ಕಡಿಮೆ ಎಂದರೂ 25 ಕೋಟಿ ರೂ.ಗಳನ್ನು ವ್ಯಯಿಸಲಾಗುತ್ತಿದೆ. ಕಳೆದ ಹತ್ತು ಅಧಿವೇಶನಗಳಿಗೆ ಸುಮಾರು 300 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಅಂದರೆ, ಸುವರ್ಣಸೌಧದ ಕಾಮಗಾರಿ ಮತ್ತು ಅಧಿವೇಶನದ ಖರ್ಚುವೆಚ್ಚಕ್ಕಾಗಿ ಇಲ್ಲಿಯವರೆಗೆ ಸುಮಾರು 700ರಿಂದ 800 ಕೋಟಿ ರೂ.ಗಳನ್ನು ವ್ಯಯಿಸಲಾಗಿದೆ.
ಇದೆಲ್ಲವೂ ಆ ಭಾಗದ ಜನರಿಗಾಗಿ, ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಮಾಡಿದ್ದು. ಉದ್ದೇಶ ಈಡೇರಿದೆಯೇ?
ಅಧಿವೇಶನದ ಮೊದಲ ದಿನವೇ, ವಿರೋಧ ಪಕ್ಷದ ಸದಸ್ಯರು ಎತ್ತಿದ ಪ್ರಶ್ನೆಯಿಂದಾಗಿ, ಸದನ ಕದನಕಣವಾಗಿ ಪರಿವರ್ತನೆ ಹೊಂದಿದೆ. ಮುಂದೂಡಿಕೆಯಾಗಿದೆ. ಮುಂದಿನ ದಿನಗಳ ಚರ್ಚೆ ಹೇಗಿರಬಹುದೆಂಬುದರ ಮುನ್ಸೂಚನೆಯನ್ನೂ ನೀಡಿದೆ. ಅದಕ್ಕೆ ಪೂರಕವಾಗಿ ಹಿರಿಯ ರಾಜಕಾರಣಿ ಎಸ್.ಎಂ. ಕೃಷ್ಣರ ಸಾವು, ಸರ್ಕಾರದ ಸಬೂಬುಗಳಿಗೆ ನೆರವಾಗಿದೆ.
ಆಳುವ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು- ಮುಡಾ, ವಕ್ಫ್, ವಾಲ್ಮೀಕಿ, ಬೇಲೆಕೇರಿ, ಅಬಕಾರಿ, ಬಳ್ಳಾರಿ ಬಾಣಂತಿಯರ ಸಾವುಗಳಂತಹ ಹಲವು ಹಗರಣಗಳಿವೆ. ಹಾಗೆಯೇ ಸುವರ್ಣಸೌಧದ ಹೊರಗೆ ಆಳುವ ಸರ್ಕಾರದ ಗಮನ ಸೆಳೆಯಲು ಸುಮಾರು ಹನ್ನೊಂದು ಸಂಘಟನೆಗಳು ನ್ಯಾಯಕ್ಕಾಗಿ ಧರಣಿ ಕೂತಿವೆ. ಸುರಿದ ಅಕಾಲಿಕ ಮಳೆಯಿಂದಾಗಿ ತೊಗರಿ ಬೆಳೆ ನಾಶವಾಗಿ, ಕೃಷಿಕರ ಬದುಕು ಬೀದಿಗೆ ಬಂದಿದೆ. ಬಸವರಾಜ ಬೊಮ್ಮಾಯಿ, ಎಂ.ಬಿ. ಪಾಟೀಲ್, ಎಚ್.ಕೆ. ಪಾಟೀಲರಂತಹ ರಾಜಕೀಯ ನಾಯಕರು ಅಧಿಕಾರದಲ್ಲಿದ್ದರೂ, ಈ ಭಾಗದ ನೀರಾವರಿ ಯೋಜನೆಗಳು ನನೆಗುದಿಗೆ ಬಿದ್ದಿವೆ. ಮಹದಾಯಿ ಯೋಜನೆಗೆ ಮುಕ್ತಿ ಸಿಗದಂತಾಗಿದೆ. ಮೂಲಭೂತ ಸೌಕರ್ಯಗಳಾದ ಆರೋಗ್ಯ, ಶಿಕ್ಷಣ, ಕುಡಿಯುವ ನೀರು ಕಾಣದ ಕುಗ್ರಾಮಗಳು, ನಮ್ಮ ಬಗ್ಗೆ ಯಾರಾದರೂ ಮಾತನಾಡುತ್ತಾರ ಎಂದು ಶಬರಿಯಂತೆ ಕಾಯುತ್ತಿವೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮೋದಿ-ಅದಾನಿಗಳನ್ನು ಅಣಕಿಸುವುದಲ್ಲ; ಬಿಚ್ಚಿಟ್ಟು ಬಹಿರಂಗಗೊಳಿಸಬೇಕಿದೆ
ಇಂತಹ ಸಂದರ್ಭದಲ್ಲಿ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕಾದ ವಿರೋಧ ಪಕ್ಷ ಬಿಜೆಪಿಯಲ್ಲಿ, ಅಧಿವೇಶನದ ಮೊದಲ ದಿನವೇ ಭಿನ್ನ ರಾಗ ಹೊರಟಿದೆ. ಒಗ್ಗಟ್ಟಿಲ್ಲದಿರುವುದು ಬಹಿರಂಗವಾಗಿ ಪಕ್ಷ ಮುಜುಗರಕ್ಕೀಡಾಗುವಂತಾಗಿದೆ. ಶಿಕಾರಿಪುರ ಶಾಸಕ ವಿಜಯೇಂದ್ರ ವಕ್ಫ್ ವಿಚಾರ ಪ್ರಸ್ತಾಪಿಸುತ್ತಿದ್ದಂತೆ, ಅತ್ತ ಕಡೆಯಿಂದ ಅವರದೇ ಪಕ್ಷದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಪಂಚಮಸಾಲಿ ಮೀಸಲಾತಿ ಕುರಿತ ವಿಷಯವನ್ನು ಮುನ್ನೆಲೆಗೆ ತಂದಿದ್ದಾರೆ. ವಕ್ಫ್ ವಿಚಾರ ಬಿಟ್ಟು ಪಂಚಮಸಾಲಿ ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ. ಇದು ಸಹಜವಾಗಿಯೇ ಆಳುವ ಪಕ್ಷಕ್ಕೆ ಅನುಕೂಲಕರ ವಾತಾವರಣ ಸೃಷ್ಟಿಸಿದೆ.
ಆಡಳಿತ ಮತ್ತು ವಿಪಕ್ಷ- ಯಾರೇ ಆದರೂ, ಪ್ರಜಾಸತ್ತಾತ್ಮಕವಾದ ಅತ್ಯುನ್ನತ ಮಟ್ಟದ ವಾಗ್ವಾದಕ್ಕೆ, ಹೇಳಿಕೆಗಳನ್ನು ದಾಖಲಿಸುವುದಕ್ಕೆ, ನಿಲುವುಗಳನ್ನು ವ್ಯಕ್ತಪಡಿಸುವುದಕ್ಕೆ, ನೀತಿಗಳ ಪರಿಶೀಲನೆಗೆ, ನಿರ್ದಿಷ್ಟ ವಿಚಾರಗಳ ಟೀಕೆ-ಟಿಪ್ಪಣಿಗೆ ಇರುವ ವೇದಿಕೆ ಸದನ ಎಂಬುದನ್ನು ಮೊದಲು ಅರಿಯಬೇಕಿದೆ.
ಯಾವುದೇ ವಿಷಯದ ಬಗ್ಗೆ, ರಚನಾತ್ಮಕ ಮತ್ತು ಗುಣಾತ್ಮಕ ಚರ್ಚೆ ನಡೆಸಿದರೆ ಪರಿಹಾರದ ದಾರಿ ಸಿಕ್ಕೇ ಸಿಗುತ್ತದೆ. ಶಾಸಕರ ಅನುಭವ, ವಿಷಯ ಜ್ಞಾನ, ಜನಾನುರಾಗಿತ್ವಗಳು ಸದನದ ಕಲಾಪವನ್ನು ಸರಿ ದಿಕ್ಕಿನೆಡೆಗೆ ಕೊಂಡೊಯ್ಯಲು ಬಳಕೆಯಾಗಬೇಕು. ಆಡಳಿತ ಪಕ್ಷ ಹಠಮಾರಿ ಧೋರಣೆ ತಳೆಯದೆ, ತಂತ್ರಗಳ ಮೊರೆ ಹೋಗದೆ, ಪ್ರತಿಪಕ್ಷಗಳ ಮಾತನ್ನು ಸಂಯಮದಿಂದ ಆಲಿಸಬೇಕು. ಟೀಕೆ, ನ್ಯೂನತೆಗಳನ್ನು ಕ್ರೀಡಾಸ್ಫೂರ್ತಿಯಿಂದ ಸ್ವೀಕರಿಸಿ, ಸುಧಾರಣೆಗಳನ್ನು ಕಂಡುಕೊಳ್ಳಬೇಕು.
ಅಲ್ಲದೆ, ವಿಪಕ್ಷಗಳು ಎಂದರೆ ಸರ್ಕಾರದ ಪ್ರತಿ ನಡೆಯನ್ನೂ ವಿರೋಧಿಸಬೇಕು ಎಂದಲ್ಲ. ಸರ್ಕಾರ ಮತ್ತು ವಿರೋಧ ಪಕ್ಷಗಳು ವೈರಿಗಳಲ್ಲ. ಸರ್ಕಾರ ಎಡವಿದಾಗ, ಕರ್ತವ್ಯ ನಿರ್ವಹಣೆಯಲ್ಲಿ ಲೋಪವಾದಾಗ ಎಚ್ಚರಿಸುವ ಕೆಲಸ ಮಾಡಬೇಕೇ ಹೊರತು ಘೋಷಣೆ, ಗದ್ದಲ, ಸಭಾತ್ಯಾಗವಲ್ಲ. ಆ ನಡವಳಿಕೆಯಿಂದ ಯಾವುದೇ ಪ್ರಯೋಜನವಿಲ್ಲ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮುಸ್ಲಿಮರಿಗೆ ಮನೆ ಬಾಡಿಗೆಗೆ ಕೊಡಲ್ಲ! ಖರೀದಿಗೂ ಬಿಡಲ್ಲ- ಕೋಮುವಾದದ ಅಟ್ಟಹಾಸ
ದುರದೃಷ್ಟಕರ ಸಂಗತಿ ಎಂದರೆ, ಕಳೆದ ಒಂದು ದಶಕದ ಅವಧಿಯಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಒಳಿತಾಗುವ ನಿಟ್ಟಿನಲ್ಲಿ ಬೆಳಗಾವಿ ಅಧಿವೇಶನದಲ್ಲಿ ಅಂತಹ ಯಾವುದೇ ಅರ್ಥಪೂರ್ಣ ಚರ್ಚೆಗಳು ನಡೆಯಲಿಲ್ಲ. ಸದನ ಕಲಾಪದ ಗಾಂಭೀರ್ಯವನ್ನು ಕಾಪಾಡಿಕೊಂಡು ಸಂಸದೀಯ ಮೌಲ್ಯಗಳ ಪಾಲನೆ ಮಾಡುವುದು ಎಲ್ಲ ಪಕ್ಷಗಳ ಜವಾಬ್ದಾರಿ ಎಂಬುದನ್ನು ಮರೆಯುವಂತಿಲ್ಲ. ಸರ್ಕಾರವನ್ನು ಉತ್ತರದಾಯಿ ಮಾಡುವ ಹಕ್ಕು ಮತ್ತು ಹೊಣೆಗಾರಿಕೆ ವಿರೋಧ ಪಕ್ಷಗಳಿಗೆ ಇದೆ ಎಂಬುದನ್ನು ಅರಿಯಲಿಲ್ಲ. ಇದು ಪ್ರಜಾಪ್ರಭುತ್ವಕ್ಕೆ ಧಕ್ಕೆ ಉಂಟು ಮಾಡುತ್ತದೆ, ಸಂವಿಧಾನಕ್ಕೆ ಅಪಚಾರವೆಸಗುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ.
ಅಧಿವೇಶನದ ಕಲಾಪವನ್ನು ಸರ್ಕಾರವೇ ನೇರಪ್ರಸಾರದ ವ್ಯವಸ್ಥೆ ಮಾಡಿದೆ. ಜನಪ್ರತಿನಿಧಿಗಳ ಜಟಾಪಟಿಯನ್ನು ಜನ ನೋಡುವಂತಾಗಿದೆ. ಶಾಸನ ರೂಪಿಸುವಿಕೆ ಮತ್ತು ಸಂವಾದ ಪರಿಣಾಮಕಾರಿಯಾಗಿ ನಡೆಯದೆ ವ್ಯರ್ಥ ಕಾಲಹರಣವಾದರೆ; ಅಧಿವೇಶನದ ಕಾರ್ಯನಿರ್ವಹಣೆಯ ಬಗ್ಗೆಯೇ ಜನ ಸಿನಿಕರಾಗುತ್ತಾರೆ. ಜನರನ್ನು ಅಂತಹ ಸ್ಥಿತಿಗೆ ಕೊಂಡೊಯ್ದರೆ, ಜನಪ್ರತಿನಿಧಿಗಳು ಇದ್ದೂ ಸತ್ತಂತೆಯೇ.
