ಪಡಿತರ ಚೀಟಿ ರದ್ದಾಗಲು ಮೋದಿ ಸರ್ಕಾರವೇ ಮುಖ್ಯ ಕಾರಣ

Date:

Advertisements
ಕಳೆದ ಎರಡು ತಿಂಗಳಲ್ಲಿ ಕೇಂದ್ರ ಸರ್ಕಾರ ಸುಮಾರು 5.8 ಕೋಟಿ ನಕಲಿ ಕಾರ್ಡುಗಳನ್ನು ಆಧಾರ್ ವೆರಿಫಿಕೇಷನ್ ಹಾಗೂ ಕೆವೈಸಿ ಮೂಲಕ ನೇರವಾಗಿ ರದ್ದು ಮಾಡಿದೆ. ದೇಶದಾದ್ಯಂತ ರದ್ದು ಮಾಡಿದ ಕೇಂದ್ರದ ನಡೆಯನ್ನು ರಾಜ್ಯದ ವಿಪಕ್ಷಗಳು (ಬಿಜೆಪಿ-ಜೆಡಿಎಸ್‌) ಒಪ್ಪುವುದಾದರೆ, ರಾಜ್ಯ ಸರ್ಕಾರ ಮಾಡುವ ಪರಿಷ್ಕರಣೆಯನ್ನೂ ಒಪ್ಪಬೇಕಲ್ಲವೇ?

ಕಳೆದ ಒಂದು ತಿಂಗಳಿನಿಂದ ಪಡಿತರ ಚೀಟಿ ರದ್ದು ವಿಚಾರ ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಚರ್ಚಾ ವಿಷಯವಾಗಿದೆ. ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಾಯಕರು ರಾಜ್ಯ ಸರ್ಕಾರದ ವಿರುದ್ದ ಟೀಕಾಸ್ತ್ರಗಳ ದಾಳಿಯಲ್ಲಿ ನಿರತವಾಗಿವೆ. ಆದರೆ ಸರ್ಕಾರದ ಒಳ ಕಾರ್ಯಾಚರಣೆಯಲ್ಲಿ ಕೇಂದ್ರ ಸರ್ಕಾರದ ಆದೇಶವೂ ಇದೆ ಎಂಬುದನ್ನು ಜನರ ಗಮನಕ್ಕೆ ತರಲು ಸ್ವತಃ ರಾಜ್ಯ ಸರ್ಕಾರವೇ ಸೋತಂತಿದೆ. ಸಿಕ್ಕ ಅವಕಾಶವನ್ನು ಬಿಜೆಪಿ ಮತ್ತು ಜೆಡಿಎಸ್ ಸದುಪಯೋಗಪಡಿಸಿಕೊಳ್ಳುತ್ತಿವೆ. ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿವೆ. 

ನಿಜವಾಗಿಯೂ ರಾಜ್ಯ ಸರ್ಕಾರ ಪಡಿತರ ವ್ಯವಸ್ಥೆಯನ್ನು ರದ್ದುಮಾಡುತ್ತಿದೆಯೇ? ಒಂದು ವೇಳೆ ಕೆಲವು ಪಡಿತರ ಚೀಟಿಗಳನ್ನು ರದ್ದು ಮಾಡಿದರೆ ಅದರಿಂದ ಸರ್ಕಾರಕ್ಕೆ ಏನಾದರು ಲಾಭವಾಗುತ್ತದೆಯೇ? ಅಥವಾ ನಷ್ಟವಾಗಲಿದೆಯೇ?

ಕೇಂದ್ರ ಸರ್ಕಾರದ ‘ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆ’ಯ ಕಾರ್ಯದರ್ಶಿ ಸಂಜೀವ್ ಚೋಪ್ರಾ ಅವರು ಅಕ್ಟೋಬರ್ 22ರಂದೇ ಎಲ್ಲ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಪಡಿತರ ಚೀಟಿಯ ತಿದ್ದುಪಡಿ/ಪರಿಷ್ಕರಣೆ ಮಾಡುವ ಬಗ್ಗೆ ಪತ್ರ ಬರೆದಿದ್ದಾರೆ. ಇದಕ್ಕೂ ಹಿಂದೆ ಆಗಸ್ಟ್ ತಿಂಗಳ ಕೊನೆ ವಾರದಲ್ಲಿ ನಡೆಸಲಾದ, ರಾಜ್ಯಗಳ ಆಹಾರ ಇಲಾಖೆ ಕಾರ್ಯದರ್ಶಿಗಳ ಸಮಾವೇಶದಲ್ಲಿ ಅತ್ಯಂತ ಸ್ಪಷ್ಟವಾಗಿಯೇ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ನೋಂದಾಯಿಸಲ್ಪಟ್ಟ ಪಡಿತರ ಫಲಾನುಭವಿಗಳನ್ನು ಗುರುತಿಸಿ ರಾಜ್ಯ ಸರ್ಕಾರಗಳ ಮಾನದಂಡದ ಅನ್ವಯ ಅರ್ಹ ಮತ್ತು ಅನರ್ಹ ಫಲಾನುಭವಿಗಳನ್ನು ಗುರುತಿಸಲು ಎಚ್ಚರಿಕೆಯನ್ನೂ ನೀಡಲಾಗಿತ್ತು.

Advertisements

ಆದರೆ, ಕರ್ನಾಟಕದಲ್ಲಿ ಜಾರಿಯಲ್ಲಿರುವ ಗ್ಯಾರಂಟಿ ಯೋಜನೆಗಳಿಗೆ (ಅದರಲ್ಲೂ ಮುಖ್ಯವಾಗಿ ಗೃಹಲಕ್ಷ್ಮಿ ಯೋಜನೆಗೆ) ಖರ್ಚಾಗುತ್ತಿರುವ ಹಣದ ಹೊರೆಯನ್ನು ತಗ್ಗಿಸಿಕೊಳ್ಳಲು; ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡುದಾರರಿಗೆ ಮಾತ್ರ ಗ್ಯಾರಂಟಿ ಯೋಜನೆಗಳನ್ನು ನೀಡಲು ಈ ಪಡಿತರ ಚೀಟಿಯ ಪರಿಷ್ಕರಣೆ ಮಾಡಲಾಗುತ್ತಿದೆ ಎಂಬ ಚರ್ಚೆಯನ್ನು ಮುನ್ನೆಲೆಗೆ ತರಲಾಗಿದೆ. ಮಾಧ್ಯಮಗಳಲ್ಲಿ ಇದೇ ವಿಚಾರ ಹೆಚ್ಚು ಚರ್ಚೆಯಾಗುವಂತೆ ನೋಡಿಕೊಳ್ಳಲಾಗಿದೆ.

ಹಾಗೆಯೇ, ಬಿಪಿಎಲ್ ಮತ್ತು ಅಂತ್ಯೋದಯ ಫಲಾನುಭವಿಗಳಿಗೂ, ಬಡತನ ರೇಖೆಗಿಂತ ಮೇಲಿರುವ ಫಲಾನುಭವಿಗಳಿಗೂ ಮಧ್ಯೆ ಕಂದಕ ಏರ್ಪಡಿಸಿ, ಅದು ಆಡಳಿತ ಪಕ್ಷದ ವಿರುದ್ದ ಕೆಟ್ಟ ಅಭಿಪ್ರಾಯ ಮೂಡುವ ಹಾಗೆ ವ್ಯವಸ್ಥಿತ ಷಡ್ಯಂತ್ರವನ್ನೂ ರೂಪಿಸಲಾಗಿದೆ.

ಒಂದು ವೇಳೆ, ಗ್ಯಾರಂಟಿ ಯೋಜನೆ ವೆಚ್ಚವನ್ನು ತಗ್ಗಿಸುವ ಸಲುವಾಗಿ ಪಡಿತರ ಚೀಟಿ ಪರಿಷ್ಕರಣೆ ಮಾಡುವುದೇ ಸರಿಯಾದ ಮಾರ್ಗವೆಂದರೆ, ಮಾಡಬೇಕಾಗುತ್ತದೆ. ಏಕೆಂದರೆ, ಆಹಾರ ಭದ್ರತಾ ಕಾಯ್ದೆ-2013ರ ಮೂಲ ಉದ್ದೇಶವೇ ಬಡವರನ್ನು ಮೇಲೆತ್ತುವುದು. ಆದ್ದರಿಂದ ಸಿದ್ದರಾಮಯ್ಯನವರ ಮೊದಲ ಆದ್ಯತೆ ಅಕ್ಕಿ ಕೊಡುವುದಾಗಿತ್ತು. 

ಆದರೆ, ಕೆಲವು ಕುಹಕಿಗಳು, ‘ಕೇಂದ್ರದ ಮೋದಿಯಲ್ಲವೇ ಅಕ್ಕಿ ಕೊಡೋದು, ಸಿದ್ದರಾಮಯ್ಯ ಅಲ್ವಲ್ಲ’ ಎಂದು ಅಪಪ್ರಚಾರ ಮಾಡುವುದಿದೆ. ಅಂತವರಿಗೆ 2013ರಲ್ಲಿ ಇದೇ ಸಿದ್ದರಾಮಯ್ಯನವರು ಜಾರಿ ಮಾಡಿದ ಅನ್ನಭಾಗ್ಯ ಹಾಗೂ ಅದಕ್ಕೆ ಪೂರಕವಾಗಿ ಕೇಂದ್ರದ ಮನಮೋಹನ್ ಸಿಂಗ್ ಸರ್ಕಾರ ಜಾರಿ ಮಾಡಿದ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ-2013 ಅಡಿ ಪ್ರತೀ ವ್ಯಕ್ತಿಗೆ ತಲಾ 5 ಕೆಜಿ ಅಕ್ಕಿ (ಪ್ರತಿ ಕುಟುಂಬಕ್ಕೆ ಒಟ್ಟು 35 ಕೆಜಿ ಆಹಾರ ಧಾನ್ಯ, ಅಕ್ಕಿ ಸೇರಿ) ಕೊಡಲು ಜಾರಿ ಮಾಡಿದ್ದನ್ನು ನೆನಪು ಮಾಡಿಕೊಳ್ಳಬೇಕಾಗುತ್ತದೆ. ಈ ಕಾಯ್ದೆ ಜಾರಿ ಮಾಡುವಲ್ಲಿ ರಾಷ್ಟ್ರೀಯ ಸಲಹಾ ಮಂಡಳಿಯು(National Advisory Council-NAC) ಒತ್ತಾಸೆಯಾಗಿ ನಿಂತು ಕೆಲಸ ಮಾಡಿದೆ. ಆ ಮಂಡಿಳಿಯಲ್ಲಿ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಮತ್ತು ಅನೇಕ ಸಂಘಟನೆಯ ಮುಖ್ಯಸ್ಥರು ಇದ್ದರು. ಹಾಗಾಗಿ ಆಹಾರ ಸಂಬಂಧ ಕೇಂದ್ರದಿಂದ ರಾಜ್ಯಕ್ಕೇನಾದರು ಹಣ ಬರುತ್ತಿದೆ ಎಂದಾದರೆ ಅದಕ್ಕೆ ಮೂಲ ಕಾರಣ ಯುಪಿಎ ಸರ್ಕಾರವೇ ಹೊರತು, ಮೋದಿ ಸರ್ಕಾರವಲ್ಲ.

ಈಗ ಎಪಿಎಲ್ ಮತ್ತು ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡುವ ವಿಚಾರಕ್ಕೆ ಬಂದರೆ, ಅದನ್ನು ರದ್ದು ಮಾಡುತ್ತಿರುವುದಕ್ಕೆ ಕಾರಣ ರಾಜ್ಯ ಸರ್ಕಾರ ಮಾತ್ರವಲ್ಲ, ಬದಲಿಗೆ ಕೇಂದ್ರವೂ ಜೊತೆಗೂಡಿದೆ. ಕಳೆದ ಎರಡು ತಿಂಗಳಲ್ಲಿ ಕೇಂದ್ರ ಸರ್ಕಾರ ಸುಮಾರು 5.8 ಕೋಟಿ ನಕಲಿ ಕಾರ್ಡುಗಳನ್ನು ಆಧಾರ್ ವೆರಿಫಿಕೇಷನ್ ಹಾಗೂ ಕೆವೈಸಿ ಮೂಲಕ ನೇರವಾಗಿ ರದ್ದು ಮಾಡಿದೆ. ದೇಶದಾದ್ಯಂತ ರದ್ದು ಮಾಡಿದ ಕೇಂದ್ರದ ನಡೆಯನ್ನು ರಾಜ್ಯದ ವಿಪಕ್ಷಗಳು (ಬಿಜೆಪಿ-ಜೆಡಿಎಸ್‌) ಒಪ್ಪುವುದಾದರೆ, ರಾಜ್ಯ ಸರ್ಕಾರ ಮಾಡುವ ಪರಿಷ್ಕರಣೆಯನ್ನೂ ಒಪ್ಪಬೇಕಲ್ಲವೇ?

ಸರ್ಕಾರದ ಲೆಕ್ಕಾಚಾರದ ಪ್ರಕಾರವೇ ಸದ್ಯಕ್ಕೆ ರಾಜ್ಯದಲ್ಲಿರುವ ಪಡಿತರ ಚೀಟಿಗಳ ಸಂಖ್ಯೆ ಒಟ್ಟು 1,50,90,534. ಇದರಲ್ಲಿ ಅಂತ್ಯೋದಯ ಕಾರ್ಡುದಾರರು 10,68,042. ಬಿಪಿಎಲ್ ಕಾರ್ಡುದಾರರು 1,14,60,137 ಮತ್ತು 25,62,355 ಎಪಿಎಲ್ ಕಾರ್ಡುದಾರರು ಚಾಲ್ತಿಯಲ್ಲಿವೆ.

ಇವುಗಳಲ್ಲಿ ಅನರ್ಹ ಪಡಿತರ ಚೀಟಿಗಳನ್ನು ಕೆಳಗಿನ ಕೋಷ್ಟಕದಲ್ಲಿರುವಂತೆ ಮಾರ್ಪಾಡು ಮಾಡಲಾಗಿದೆ.

ಪಡಿತರ

ಈ ಅಂಕಿ ಅಂಶಗಳನ್ನು ನೋಡಿದರೆ ಪಡಿತರ ಚೀಟಿಯಲ್ಲಿ ನಕಲುಗಳು ನಡೆದೇ ಇಲ್ಲ ಎನ್ನಲು ಆಗುವುದಿಲ್ಲ. ಹಾಗೆಯೇ ಈ ನಕಲು ಮಾಡುವವರು ಸರ್ಕಾರದ ಅಧಿಕಾರಿಗಳೇ ಆಗಿರುತ್ತಾರೆ ಎಂದರೆ ತಪ್ಪಾಗಲಾರದು. ಏಕೆಂದರೆ ಮೇಲೆ ನೀಡಿರುವ ಸರ್ಕಾರದ್ದೇ ಅಂಕಿ ಅಂಶಗಳಲ್ಲಿ ಮಾನದಂಡವನ್ನು ಉಲ್ಲಂಘನೆ ಮಾಡಿರುವ 13,87,652 ಕಾರ್ಡುದಾರರಿದ್ದಾರೆ. ಬಿಪಿಎಲ್ ಅಥವಾ ಅಂತ್ಯೋದಯ ಕಾರ್ಡ್ ಪಡೆದ ಮೇಲೆ ಅವರ ಕೌಟಂಬಿಕ ಆದಾಯ ಹೆಚ್ಚಾಗಿರಬಹುದು. ಅದನ್ನು ಅವರು ತಾವಾಗಿಯೇ ತಿಳಿಸಿ ಬದಲಿಸಿಕೊಳ್ಳದಿರಬಹುದು. ಅಥವಾ ಆಹಾರ ಇಲಾಖೆ ಪರಿಷ್ಕರಣೆ ಮಾಡಿಲ್ಲದಿರಬಹುದು. ಇವೆಲ್ಲಕ್ಕೂ ಸರ್ಕಾರವೇ ಕಾರಣವಾಗುತ್ತದೆ.  

2,75,667 ಫಲಾನುಭವಿಗಳು ಪಡಿತರ ಸೌಲಭ್ಯವನ್ನು ನಿರಾಕರಿಸಿ ಕೇವಲ ಕಾರ್ಡು ಮಾತ್ರ ಮಾನದಂಡವಾಗಿರುವ, ಇನ್ನೂ ಅನೇಕ ಸೌಲಭ್ಯಗಳನ್ನು ಪಡೆಯುತ್ತಿರುವ ಸಂಖ್ಯೆಯೂ ದೊಡ್ಡದಿದೆ. ಆದ್ದರಿಂದ ಸರ್ಕಾರಕ್ಕೂ ಮಾನದಂಡದ ಕುರಿತು ಅನೇಕ ಸವಾಲುಗಳೂ ಎದುರಾಗಬಹುದು.

ಈ ವರದಿ ಓದಿದ್ದೀರಾ?: ಮುಡಾ ಹಗರಣ | ಕರ್ನಾಟಕ ಹೈಕೋರ್ಟ್ ದೋಷಪೂರಿತ ತೀರ್ಪು ನೀಡಿತೆ?

ರಾಜ್ಯ ಸರ್ಕಾರಗಳ 5 ಮಾನದಂಡಗಳ ಆಧಾರದ ಮೇಲೆ ರದ್ದತಿ ಮತ್ತು ಪರಿಷ್ಕರಣೆಗಳು ನಿರಂತರವಾಗಿ ಆಗುತ್ತಿರಬೇಕು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಪರಿಷ್ಕರಣೆಗೆ ವಾರ್ಷಿಕವಾಗಿ ಆಗುವ ಖರ್ಚಿಗಿಂತ ಸಾರ್ವತ್ರಿಕವಾಗಿ ಈಗಾಗಲೇ ಕೊಡುತ್ತಿರುವ ಆಹಾರ ಪದಾರ್ಥಗಳ ವಿತರಣೆಗೆ ಕಡಿಮೆ ಖರ್ಚಾದರೆ ಖಂಡಿತ ಇದನ್ನು ಹಾಗೆಯೇ ಮುಂದುವರೆಸಬೇಕಾಗುತ್ತದೆ.

ಇಲ್ಲಿ ಒಂದು ಪ್ರಶ್ನೆ ಮೂಡಬಹುದು, ಈಗ ಬಡವರಿಗೂ ಶ್ರೀಮಂತರಿಗೂ ಒಂದೇ ಆಯಿತಲ್ಲ, ಇಲ್ಲಿ ಪಾರದರ್ಶಕತೆ ಏನು ಬಂತು ಎಂದು. ಆದರೆ ಪುನಃ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಎಪಿಲ್ ಕಾರ್ಡುಗಳು ಬಿಪಿಎಲ್ ಆಗಿ ಬದಲಾಗುವುದಿಲ್ಲವೇ ಎಂಬುದಕ್ಕೆ ಸಿದ್ದ ಉತ್ತರವಿಲ್ಲ. ಏಕೆಂದರೆ ಸರಿಮಾಡುವ ಹಂತದಲ್ಲಿ ಈಗಾಗಲೇ ಆಗಿರುವ ತಪ್ಪುಗಳು ಮರುಕಳಿಸುತ್ತವೆ. ಹೀಗಾಗದಂತೆ ಎಚ್ಚರ ವಹಿಸಿ ನಿರಂತರವಾಗಿ ಪರಿಷ್ಕರಣೆ ಮಾಡಿದರೆ ಖಂಡಿತ ರಾಜ್ಯಕ್ಕೂ, ಆರ್ಥಿಕತೆಗೂ, ಮೂಲ ಉದ್ದೇಶಕ್ಕೂ ಅರ್ಥ ಬರುತ್ತದೆ.

ಮಾನದಂಡಗಳಿಗೂ ಬೇಕಿದೆ ಪರಿಷ್ಕರಣೆ: 24.08.2012 ರಲ್ಲಿ ಬಿಜೆಪಿ ಸರ್ಕಾರವು 14 ಮಾನದಂಡಗಳನ್ನು ಪಡಿತರ ಚೀಟಿಗೆ ಜಾರಿಗೆ ತಂದಿತ್ತು. 25.03.2017 ರಂದು ಕಾಂಗ್ರೆಸ್ ಸರ್ಕಾರವು ಆ 14 ನಿಬಂಧನೆಗಳನ್ನು ಮಾರ್ಪಾಡು ಮಾಡಿ 5ಕ್ಕೆ ಸಡಿಲಗೊಳಿಸಿತು. ಇದಾದ ನಂತರ ಈಗ ಪರಿಷ್ಕರಣೆ ಮಾಡುತ್ತಿರುವ ಹಂತದಲ್ಲಿಯೂ ಅದೇ ಮಾನದಂಡದ ಆಧಾರದ ಮೇಲೆ ಸರಿದೂಗಿಸಲು ಹೊರಡುವುದು ಸರಿಯಾದ ಕ್ರಮವಲ್ಲ.

ಏಕೆಂದರೆ ಕಳೆದ ಏಳು ವರ್ಷಗಳಲ್ಲಿ ಜಾಗತಿಕವಾಗಿ ಬದಲಾಗಿರುವ ಆರ್ಥಿಕ ವ್ಯವಸ್ಥೆ, ಜೀವನ ಶೈಲಿ ಮತ್ತು ಬೆಲೆ ಏರಿಕೆ ಬಡವರನ್ನು ಹೈರಾಣು ಮಾಡಿದೆ. ನಿರಂತರ ಏರಿಕೆ ಕಂಡಿರುವ ದಿನನಿತ್ಯ ಬಳಕೆಯ ವಸ್ತುಗಳು, ಉಡುಪು, ತೈಲ, ಆಹಾರ ಪದಾರ್ಥಗಳು ಬಡವರ ದುಡಿಮೆಗೆ ಎಟಕದಂತಾಗಿವೆ. ಈ ಕಾರಣಗಳಿಂದ ಅಲ್ಪ ಪ್ರಮಾಣದಲ್ಲಿ ಅವರ ದೈನಂದಿನ ಕೂಲಿ ಕೊಂಚ ಹೆಚ್ಚಿದ್ದರೂ, ಅದು ಮಾಸಿಕ 10 ಸಾವಿರ ಮೀರಿ, 11 ಸಾವಿರಕ್ಕೋ 12 ಸಾವಿರಕ್ಕೋ ಹೆಚ್ಚಾಗಿರಬಹುದು. ಇದರಿಂದ ಇಂತಹ ವರ್ಗದ ಕುಟುಂಬಗಳು 2017ರ ಸರ್ಕಾರದ ಮಾನದಂಡದ ಸುಳಿಗೆ ಸಿಲುಕಿ ಬಿಪಿಎಲ್ ಅಥವಾ ಅಂತ್ಯೋದಯ ಫಲಾನುಭವಿಗಳಾಗುವುದರಿಂದ ವಂಚಿತರಾಗಬಹುದು.

ಮೋದಿ ನೇತೃತ್ವದ ಕೇಂದ್ರ ಸರ್ಕಾರವೇ ನೀಡಿರುವ 2021ರ ಮಾಹಿತಿಯನ್ನು ಗಮನಿಸದರೆ ಬಿಪಿಎಲ್‌ ಕಾರ್ಡ್‌ಗಳ ಸಂಖ್ಯೆಗೂ, ಮತ್ತು ಜಿಲ್ಲಾವಾರು ಬಡತದ ಅಂಕಿ ಅಂಶಗಳಿಗೂ ಅಜಗಜಾಂತರ ವ್ಯತ್ಯಾಸಗಳು ಕಂಡುಬರುತ್ತದೆ. ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಅತೀ ಕಡಿಮೆ ಬಡವರಿರುವ ಜಿಲ್ಲೆ ರಾಮನಗರ. ಇಲ್ಲಿ ಕೇವಲ 0.88% ಮಾತ್ರ ಬಡವರಿದ್ದಾರೆ ಎಂದು ದಾಖಲಿಸಿದೆ. ಆದರೆ ಬಡವರಿಗಾಗಿಯೇ ಇರುವ ಬಿಪಿಎಲ್‌ ಕಾರ್ಡ್‌ ವ್ಯವಸ್ಥೆ ರಾಮನಗರದಲ್ಲಿ 88.07% ಇದೆ. ಅಂದರೆ ಹಾಸನ ಬಿಟ್ಟರೆ ಅತಿಹೆಚ್ಚು ಬಿಪಿಎಲ್‌ ಹೊಂದಿರುವ ಜಿಲ್ಲೆ ರಾಮನಗರವಾಗಿದೆ. ಇದೇ ರೀತಿಯ ವ್ಯತ್ಯಾಸ ಪ್ರತೀ ಜಿಲ್ಲೆಯಲ್ಲೂ ಮುಂದುವರೆಯುತ್ತದೆ. ಆದ್ದರಿಂದ ಈ ದಾಖಲೆಯ ಮೂಲದಲ್ಲಿಯೇ ಗಂಭೀರ ಸಮಸ್ಯೆ ಇದೆ ಎಂದು ತಿಳಿಯಬೇಕಾಗುತ್ತದೆ.

ಒಟ್ಟಾರೆಯಾಗಿ ಅನೇಕ ರೀತಿಯ ನಿಬಂಧನೆಗಳನ್ನು ಮೀರಿ ಲಕ್ಷಾಂತರ ಶ್ರೀಮಂತರು ದಾಖಲೆಯಲ್ಲಿ ಬಡವರಾಗಿರುವ ಮತ್ತು ಬಿಪಿಎಲ್‌ ಕಾರ್ಡುಗಳನ್ನು ಪಡೆದುಕೊಂಡಿರುವುದು ನಿಚ್ಚಳವಾಗಿ ಕಾಣುತ್ತಿದೆ. ಇವರನ್ನು ಪತ್ತೆ ಹಚ್ಚಿ ಅನರ್ಹಗೊಳಿಸಿ, ನಿಜವಾಗಿಯೂ ಸಿಗಬೇಕಾದವರಿಗೆ ಅಂತ್ಯೋದಯ ಮತ್ತು ಬಿಪಿಎಲ್‌ ಕಾರ್ಡುಗಳು ಸಿಗುವಂತಾಗಬೇಕು. ಬಡವರು ಸರ್ಕಾರೀ ದಾಖಲೆಯಲ್ಲಿ ಮಾತ್ರ ಶ್ರೀಮಂತರಾಗಿ ವಾಸ್ತವವಾಗಿ ನಿರ್ಗತಿಕರಾಗದಂತೆ ಸರ್ಕಾರಗಳು ತಮ್ಮ ದಿಟ್ಟತನ ತೋರಲಿ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X