ಕಾರಂಜಾ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ರೈತರು ವೈಜ್ಞಾನಿಕ ಪರಿಹಾರಕ್ಕೆ ಆಗ್ರಹಿಸಿ ನಗರದ ಜಿಲ್ಲಾ ಉಸ್ತುವಾರಿ ಕಚೇರಿ ಎದುರು ಕಳೆದ 890 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ಸಂತ್ರಸ್ತರು ಹೋರಾಟವನ್ನು ತೀವ್ರಗೊಳಿಸಿದ್ದು, ಗುರುವಾರ (ಡಿ12) ಪ್ರತಿಭಟನಾ ಸ್ಥಳದಲ್ಲಿ ಮತ್ತೆ ಮೂವರು ರೈತರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಕಾರಂಜಾ ಸಂತ್ರಸ್ತರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾಟೀಲ್ ಹೊಚಕನಳ್ಳಿ, ರಾಜಪ್ಪ ಕಮಲಪುರ ಹಾಗೂ ರಾಜಶೇಖರ ಖೇಣಿ ರಂಜೋಳ ವಿಷ ಸೇವಿಸಿದ್ದು, ಕೂಡಲೇ ಗಮನಿಸಿದ ಸ್ಥಳದಲ್ಲಿದ್ದ ಪೊಲೀಸರು ಮೂವರನ್ನು ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೂವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಯಾವುದೇ ಪ್ರಾಣಾಪಾಯವಿಲ್ಲ ಎಂದು ಮಾಹಿತಿ ತಿಳಿದುಬಂದಿದೆ.
ಕಳೆದ 890 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ರೈತರಿಗೆ ಯಾವುದೇ ಸರ್ಕಾರ ಬೇಡಿಕೆ ಈಡೇರಿಕೆಗೆ ಮುಂದಾಗದೇ ಹುಸಿ ಭರವಸೆ ನೀಡುತ್ತಿದೆ. ಮುಂದಿನ ಎರಡು ವಾರದಲ್ಲಿ ಬೇಡಿಕೆಗಳನ್ನು ಬಗೆಹರಿಸದಿದ್ದರೆ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಂತ್ರಸ್ತರು ಜಿಲ್ಲಾಡಳಿತಕ್ಕೆ ಗಡುವು ನೀಡಿದ್ದರು.
ಡಿ.10ಕ್ಕೆ ಗಡವು ಮುಗಿದ ಹಿನ್ನಲೆ ಬುಧವಾರ (ಡಿ.11) ಕೊರಳಿಗೆ ಹಗ್ಗ ಹಾಕಿಕೊಂಡು ಆತ್ಮಹತ್ಯೆಯ ಅಣುಕು ಪ್ರದರ್ಶನ ನಡೆಸಿ ಸರ್ಕಾರದ ಗಮನ ಸೆಳೆದಿದ್ದರು. ಈ ವೇಳೆ 30ಕ್ಕೂ ಹೆಚ್ಚು ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ವೇಳೆ ಸಂತ್ರಸ್ತ ರೈತ ನಾಗಶೆಟ್ಟಿ ಎಂಬುವರು ವಿಷ ಸೇವಿಸಿ ಅತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣವೇ ಅವರ ಕೈಯಿಂದ ಪೊಲೀಸರು ವಿಷ ಡಬ್ಬಿ ಕಸಿದುಕೊಂಡು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಆಳುಗಳ ಕೊರತೆ : ಕಬ್ಬು ಕಟಾವಿಗೆ ಮಹಾರಾಷ್ಟ್ರ, ತೆಲಂಗಾಣದ ಕಾರ್ಮಿಕರ ಮೊರೆ
ಈ ಪ್ರತಿಭಟನೆಯ ಮರುದಿನವೇ ಮೂವರು ಕಾರಂಜಾ ಸಂತ್ರಸ್ತ ರೈತರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಜನಪ್ರತಿನಿಧಿಗಳ ಭರವಸೆಗಳಿಂದ ಬೇಸತ್ತ ಸಂತ್ರಸ್ತರ ಹೋರಾಟ ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರ ಸ್ವರೂಪ ಪಡೆಯುವ ಎಲ್ಲ ಸಾಧ್ಯತೆ ಇದೆ.