ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯದ ಕೆಲವೆಡೆ ಶುಕ್ರವಾರವೂ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿಯ ಕೆಲವು ಕಡೆ, ಕೊಡಗು, ತುಮಕೂರು, ಚಿಕ್ಕಮಗಳೂರು, ಮೈಸೂರು, ಹಾಸನ, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಯ ಒಂದೆರಡು ಕಡೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳ ಒಂದೆರಡು ಕಡೆ ತುಂತುರು ಮಳೆಯಾಗುವ ಸಂಭವವಿದೆ. ಉತ್ತರ ಒಳನಾಡಿನಲ್ಲಿ ಒಣಹವೆ ಇರುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.
ಇದೇ 17ರಿಂದ ಬೆಂಗಳೂರು, ಚಿಕ್ಕಮಗಳೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ ತುಮಕೂರು ಸೇರಿ ವಿವಿಧ ಜಿಲ್ಲೆಗಳ ಕೆಲವಡೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಇಲಾಖೆ ತಿಳಿಸಿದೆ.
ತಮಿಳುನಾಡಿನ ಹಲವೆಡೆ ಭಾರಿ ಮಳೆ
ತಮಿಳುನಾಡಿನ ಹಲವೆಡೆ ಗುರುವಾರ ಭಾರಿ ಮಳೆಯಾಗಿದ್ದು, ಚೆನ್ನೈ ಮತ್ತಿತರ ಪ್ರಮುಖ ಜಿಲ್ಲೆಗಳಲ್ಲಿ ಶಾಲೆಗಳಿಗೆ ಒಂದು ದಿನ ರಜೆ ಘೋಷಿಸಲಾಗಿದೆ. ಅಣೆಕಟ್ಟೆಗಳಲ್ಲಿ ನೀರಿನ ಪ್ರಮಾಣ ವೇಗವಾಗಿ ಏರಿಕೆಯಾಗುತ್ತಿದ್ದು, ಚೆನ್ನೈನ ಉಪನಗರದಲ್ಲಿರುವ ಎರಡು ಅಣೆಕಟ್ಟುಗಳು ಮತ್ತು ತಿರುವಣ್ಣಾಮಲ್ಲೆ ಜಿಲ್ಲೆಯಲ್ಲಿರುವ ಒಂದು ಅಣೆಕಟ್ಟೆಯ ಶಟರ್ಗಳನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತೆರೆದು ನೀರನ್ನು ಹೊರಬಿಟ್ಟಿದ್ದಾರೆ.
ಸಾತನೂರು ಅಣೆಕಟ್ಟೆಯಿಂದ 13,000 ಕ್ಯುಸೆಕ್ಸ್ ನೀರನ್ನು ಹೊರ ಬಿಡಲಾಗಿದೆ. ಚೆಂಬರಂಬಕ್ಕಂನಿಂದ 3,500 ಕ್ಯುಸೆಕ್ಸ್ ಮತ್ತು ಪೋಂಡಿ ಅಣೆಕಟ್ಟೆಯಿಂದ 1,000 ಕ್ಯುಸೆಕ್ಸ್ ನೀರನ್ನು ಹೊರಬಿಡಲಾಗಿದೆ.
ಬುಧವಾರ ರಾತ್ರಿ ಮತ್ತು ಗುರುವಾರ ಚೆನ್ನೈ, ತಿರುವಳ್ಳೂರು, ಚೆಂಗಲ್ಪೇಟ್, ಕಾಂಚೀಪುರಂ, ವಿಲ್ಲುಪುರಂ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸುರಿದಿದೆ. ಈ ಪ್ರದೇಶಗಳೂ ಸೇರಿದಂತೆ ಕಲ್ಲಕುರಿಚಿ, ತಿರುವರೂರು, ತಾಂಜಾವೂರು ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಸ್ಥಳೀಯ ಹವಾಮಾನ ಸಂಸ್ಥೆ ಮುನ್ಸೂಚನೆ ನೀಡಿದೆ.
ಈ ಸುದ್ದಿ ಓದಿದ್ದೀರಾ? ಮುಡಾ ಹಗರಣ | ಕರ್ನಾಟಕ ಹೈಕೋರ್ಟ್ ದೋಷಪೂರಿತ ತೀರ್ಪು ನೀಡಿತೆ?
ತಿರುವರೂರು ಮತ್ತು ನಾಗಪಟ್ಟಣಂ ಜಿಲ್ಲೆಗಳಲ್ಲಿ ಕಟಾವಿಗೆ ಬಂದಿದ್ದ ಭತ್ತದ ಬೆಳೆಯು ನೀರಿನಲ್ಲಿ ಮುಳುಗಿದೆ. ಮನ್ನಾರ್ಗುಡಿಯಲ್ಲಿ ಮೂರು ವಿದ್ಯುತ್ ಕಂಬಗಳು ಉರುಳಿಬಿದ್ದಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಚೆನ್ನೈನಲ್ಲಿ ಕನಿಷ್ಠ ಮೂರು ಸುರಂಗ ಮಾರ್ಗಗಳು ನೀರಿನಲ್ಲಿ ಮುಳುಗಿದ್ದು, ಈ ಮಾರ್ಗವಾಗಿ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ನೀರು ಹೊರಹಾಕುವ ಪ್ರಯತ್ನ ಮುಂದುವರಿದಿದೆ. ತುರ್ತುಸ್ಥಿತಿ ನಿರ್ಮಾಣವಾದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಎನ್ಡಿಆರ್ಎಫ್ ಆರು ತಂಡಗಳು ಸನ್ನದ್ಧವಾಗಿವೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ತಗ್ಗು ಪ್ರದೇಶಗಳ ಜನರು ಎಚ್ಚರಿಕೆಯಿಂದ ಇರುವಂತೆ ಸರ್ಕಾರ ತಿಳಿಸಿದೆ.
ಕೇರಳದ 3 ಜಿಲ್ಲೆಗಳಿಗೆ ರೆಡ್ ಅಲರ್ಟ್
ಕೇರಳದ ಹಲವೆಡೆ ಗುರುವಾರ ಬೆಳಿಗ್ಗೆ ಭಾರಿ ಮಳೆಯಾಗಿದ್ದು, ಮೂರು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಪಟ್ಟಣಂತಿಟ್ಟು, ಎರ್ನಾಕುಲಂ ಮತ್ತು ಇಡುಕ್ಕಿ ಜಿಲ್ಲೆಗಳಿಗೆ ಐಎಂಡಿ ‘ರೆಡ್ ಅಲರ್ಟ್’ ಘೋಷಣೆ ಮಾಡಲಾಗಿದೆ. ತಿರುವನಂತಪುರ, ಕೊಲ್ಲಂ, ಅಲಪ್ಪುಳ, ಕೊಟ್ಟಾಯಂ ಮತ್ತು ತ್ರಿಶೂರ್ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಪಾಲಕ್ಕಾಡ್, ಮಲಪ್ಪುರಂ, ಕೋಯಿಕೋಡ್, ವಯನಾಡ್ ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’ ಘೋಷಣೆ ಮಾಡಲಾಗಿದೆ.