ಹಾವೇರಿ ಜಿಲ್ಲೆಯಲ್ಲಿ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪಿಸಬೇಕು ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ರೈತರು ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಎಂಟನೇ ದಿನಕ್ಕೆ ಕಾಲಿಟ್ಟಿದೆ.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ನೇತೃತ್ವದಲ್ಲಿ ಧರಣಿ ಆರಂಭಿಸಿರುವ ರೈತರು, ತಮ್ಮ ಬೇಡಿಕೆ ಈಡೇರಿಸುವವರೆಗೂ ಸ್ಥಳದಿಂದ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದು, ಜಿಲ್ಲಾಧಿಕಾರಿ ಕಚೇರಿ ಎದುರು ಹಾಕಿರುವ ಟೆಂಟ್’ನಲ್ಲೇ ಕುಳಿತು ಧರಣಿ ಮುಂದುವರಿಸಿದ್ದಾರೆ.
ಸ್ಥಳದಲ್ಲಿಯೇ ಅಡುಗೆ ಸಿದ್ಧಪಡಿಸಿ ಊಟ ಮಾಡುತ್ತಿರುವ ರೈತರು ರಾತ್ರಿಯೂ ಟೆಂಟ್ನಲ್ಲಿ ಮಲಗಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಜಿಲ್ಲೆಯ ತಾಲೂಕುವಾರು ರೈತರು ಧರಣಿಯಲ್ಲಿ ಪಾಲ್ಗೊಂಡಿದ್ದು, ಧರಣಿಯ ಐದನೇ ದಿನವಾಗಿದ್ದ ಬುಧವಾರ, ರಟ್ಟೀಹಳ್ಳಿ ತಾಲ್ಲೂಕು ರೈತರು ಧರಣಿಯಲ್ಲಿ ಪಾಲ್ಗೊಂಡಿದ್ದರು.
ರೈತರ ಕೃಷಿ ಚಟುವಟಿಕೆ ಹಾಗೂ ನೀರಾವರಿಗೆ ಅನುಕೂಲ ಕಲ್ಪಿಸಲು ಬೇಡ್ತಿ-ವರದಾ ನದಿ ಜೋಡಣೆ ಮಾಡಬೇಕು. ನಬಾರ್ಡ್ನಿಂದ ರೈತರಿಗೆ ಸೂಕ್ತ ಸಾಲ ಸೌಲಭ್ಯ ಕಲ್ಪಿಸಬೇಕು. ಬೆಳೆ ಹಾನಿ ಅನುಭವಿಸಿರುವ ಜಿಲ್ಲೆಯ ರೈತರಿಗೆ ತಾತ್ಕಾಲಿಕ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿ, ಬೇಡಿಕೆ ಈಡೇರಿಕೆಗಾಗಿ ಘೋಷಣೆ ಕೂಗುತ್ತಿದ್ದಾರೆ. ರೈತರ ಜಮೀನಿನಲ್ಲಿರುವ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ವಿಳಂಬ ಮಾಡಲಾಗುತ್ತಿದ್ದು, ಈ ಕೂಡಲೇ ರೈತರ ಜಮೀನಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಹಾವೇರಿ ಜಿಲ್ಲೆಗೆ ಡಿಸಿಸಿ ಬ್ಯಾಂಕ್ ಅಗತ್ಯವಿದ್ದು, ಇದಕ್ಕಾಗಿ ಹಲವು ವರ್ಷಗಳಿಂದ ಹೋರಾಟ ಮಾಡಲಾಗುತ್ತಿದೆ. ಈ ಬಾರಿ ಡಿಸಿಸಿ ಬ್ಯಾಂಕ್ ಸ್ಥಾಪನೆ ಬಗ್ಗೆ ಸರ್ಕಾರ ತೀರ್ಮಾನ ತಿಳಿಸಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ. ಜಿಲ್ಲೆಯ ಪ್ರತಿ ತಾಲ್ಲೂಕಿನ ರೈತರು, ಸರದಿ ಪ್ರಕಾರ ಧರಣಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದರು.
ಈ ವರದಿ ಓದಿದ್ದೀರಾ? ಧಾರವಾಡ | ಭೋವಿ ಸಮಾಜಕ್ಕೆ ಆಗುತ್ತಿರುವ ಅನ್ಯಾಯ ಖಂಡಿಸಿ ಬೆಳಗಾವಿ ಚಲೋ ಪಾದಯಾತ್ರೆ
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೆರ, ಮಲ್ಲಿಕಾರ್ಜುನ ಬಳ್ಳಾರಿ, ಅಡಿವೆಪ್ಪ ಆಲದಕಟ್ಟಿ, ಶಿವಯೋಗಿ ಚ ಹೊಸಗೌಡ್ರ, ಜಾನ್ ಪುನಿತ್ಮ, ಮರಿಗೌಡ ಪಾಟೀಲ, ರುದ್ರಗೌಡ ಕಾಡನಗೌಡ್ರ, ಬಸವರಾಜ ಕಡೂರ, ಲೋಕೆಶ ಸುತಾರ, ಸುರೇಶ್ ದುಳೆಹೊಳೆ, ರಮೇಶ್ ಮುಲಿಮನಿ, ಜಟ್ಟೆಪ್ಪ ಕನ್ನಪ್ಪನವರ, ಆನಂದಪ್ಪ ಬಣಕಾರ, ಸಂಜಿವ ಬಾತಿ ಉಪಸ್ಥಿತರಿದ್ದರು.