ಉಡುಪಿಯ ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ಬಗ್ಗೆ ಅಪಪ್ರಚಾರದಲ್ಲಿ ತೊಡಗಿರುವವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿ ರಾಜ್ಯದ ಪೊಲೀಸ್ ಮಹಾನಿರ್ದೇಶಕರು ಮತ್ತು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ವಿಶ್ವ ಹಿಂದು ಪರಿಷದ್ ಪ್ರಾಂತ ಕಾರ್ಯಾಧ್ಯಕ್ಷರಾದ ಡಾ ಎಂ ಬಿ ಪುರಾಣಿಕ್ ಹೇಳಿದರು.
ಅವರು ಇಂದು ಉಡುಪಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಮತ್ತು ಪೇಜಾವರ ಮಠದ ಬಗ್ಗೆ ಅಪಪ್ರಚಾರ, ಅವಹೇಳನ ಮಾಡಿರುವುದು ಮಠದ ಕೋಟ್ಯಂತರ ಭಕ್ತರಿಗೆ, ಹಿಂದೂ ಸಮಾಜ ಬಾಂಧವರ ಮನಸ್ಸಿಗೆ ಅತೀವ ನೋವುಂಟಾಗಿದೆ. ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ. ಶ್ರೀಗಳ ಬಗ್ಗೆ ಅವಮಾನಕರ ಹೇಳಿಕೆ ನೀಡಿರುವುದನ್ನು ವಿಶ್ವ ಹಿಂದೂ ಪರಿಷದ್ ಬಲವಾಗಿ ಖಂಡಿಸುತ್ತದೆ ಎಂದರು.
ಕಳೆದ ನವೆಂಬರ್ 23 ರಂದು ಬೆಂಗಳೂರಿನ ವಿ.ವಿ.ಪುರಂ ನಲ್ಲಿರುವ ವಾಸವಿ ವಿದ್ಯಾನಿಕೇತನ ಸಭಾಂಗಣದಲ್ಲಿ ನಡೆದ ಸಂತಸಮಾವೇಶದಲ್ಲಿ ಸುಮಾರು 50 ಸಂತರು ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿ, ಹಲವು ನಿರ್ಣಯಗಳನ್ನು ತೆಗೆದುಕೊಂಡು. ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ರಾಜ್ಯದಲ್ಲಿ ವಕ್ಫ್ ಮೂಲಕ ರೈತರ ಭೂಮಿ, ಮಠಮಂದಿರ ದೇವಸ್ಥಾನಗಳ ಜಾಗವನ್ನು ಕಬಳಿಸುವ ಹುನ್ನಾರದ ಕುರಿತಾಗಿ ಮಾತನಾಡಿದ್ದರು. ಸಭೆಯ ನಂತರ ಎಲ್ಲ ಸಂತರು ಆ ದಿನದಂದು ಪೂಜ್ಯ ಪೇಜಾವರ ಶ್ರೀಗಳೊಂದಿಗೆ ರಾಜಭವನಕ್ಕೆ ತೆರಳಿ ನಿರ್ಣಯಗಳ ಮನವಿಯನ್ನು ರಾಜ್ಯಪಾಲರಿಗೆ ಸಮರ್ಪಿಸಿದರು ಮತ್ತು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಅದರ ಪ್ರತಿಯನ್ನು ಅದೇ ದಿನದಂದು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿದೆ.
ಆದರೆ ಪೇಜಾವರ ಶ್ರೀ ಆ ಸಮಾವೇಶದಲ್ಲಿ ಅಡಿದ ಮಾತುಗಳನ್ನು ಉಡುಪಿ ಸೇರಿದಂತೆ ರಾಜ್ಯದ ಹಲವಾರು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ತಿರುಚಿ ಹೇಳಿಕೆಗಳನ್ನು ನೀಡಿ ಸ್ವಾಮೀಜಿಯವರ ಬಗ್ಗೆ ಅವಹೇಳನಕರಯಾಗಿ ಪ್ರತಿಕ್ರಿಯಿಸುವುರ ಮೂಲಕ ಸಮಾಜದ ಸಾಮರಸ್ಯವನ್ನು ಕೆಡಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಅದಲ್ಲದೆ ಭೀಮ್ ಆರ್ಮಿ ಏಕತಾ ಮಿಷನ್ ಕರ್ನಾಟಕ ವಿಜಯಪುರದಲ್ಲಿ ನಡೆದ ಪ್ರತಿಭಟನೆಯಲ್ಲಿ ಮತೀನ್ ಕುಮಾರ್ ಸಂಸ್ಥಾಪಕ ರಾಜ್ಯಾಧ್ಯಕ್ಷರು ಬೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್, ದಲಿತ ಸಂಘಟನೆಯ ಮಹಾ ಒಕ್ಕೂಟ ಸಂಸ್ಥಾಪಕ ಪರಶುರಾಮ್, ಭೀಮ್ ಆರ್ಮಿ ಹುಸೇನಪ್ಪ ಛಲವಾದಿ, ವಿಜಯಪುರ ಜಿಲ್ಲಾಧ್ಯಕ್ಷ ಸಂತೋಷ್ ಟಕ್ಕೆ, ಆಶಾ ಹೊಣೇರಿ, ಖಾಯಮ್ ಚೌದ್ರಿ, DSS ರಾಜ್ಯ ಸಂಚಾಲಕ್ ಕಲ್ಮಶ ಶಹಪೇಟೆ ಇವರುಗಳು ಪೇಜಾವರ ಶ್ರೀಗಳ ಬಗ್ಗೆ ಅತ್ಯಂತ ತುಚ್ಚವಾಗಿ, ಅಶ್ಲೀಲ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿದರು.
ಶ್ರೀಗಳ ಮತ್ತು ಪೇಜಾವರ ಮಠದ ಬಗ್ಗೆ ಅಪಪ್ರಚಾರ, ಅವಹೇಳನ ಮಾಡಿರುವ ವ್ಯಕ್ತಿಗಳ ಮತ್ತು ಅದನ್ನು ಪ್ರಸಾರ ಮಾಡಿರುವ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ವಿರುದ್ಧ ಕಾನೂನಾತ್ಮಕವಾಗಿ ಕಠಿಣಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತೇವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷದ್ ನ ಪ್ರಾಂತ ಕಾರ್ಯದರ್ಶಿ ಜಗನ್ನಾಥ ಶಾಸ್ತ್ರೀ, ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್, ವಿಭಾಗ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು
