ಕಾಬೂಲ್‌ನ ಮಂತ್ರಾಲಯ ಸಮುಚ್ಚಯದ ಮೇಲೆ ನಡೆದ ಮಾನವ ಬಾಂಬ್ ದಾಳಿಯಲ್ಲಿ ಅಫ್ಘಾನಿಸ್ತಾನದ ತಾಲೀಬಾನ್ ಸರ್ಕಾರದ ಮಂತ್ರಿ ಖಲೀಲುರ್ ರೆಹಮಾನ್ ಹಕ್ಕಾನಿ ಹತರಾಗಿದ್ದಾರೆ.
ಶರಣಾರ್ಥಿಗಳು ಮತ್ತು ವಿದೇಶಗಳಿಂದ ವಾಪಸಾಗಲು ಬಯಸುವ ಅಫ್ಘಾನೀ ಜನರಿಗೆ ಸಂಬಂಧಿಸಿದ ಜವಾಬ್ದಾರಿಯನ್ನು ರೆಹಮಾನ್ ನಿರ್ವಹಿಸುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಇರಾನ್ ಮತ್ತು ಪಾಕಿಸ್ತಾನ ದೇಶಗಳು ಅಫ್ಘಾನಿ ಶರಣಾರ್ಥಿಗಳನ್ನು ಅಫ್ಘಾನಿಸ್ತಾನಕ್ಕೆ ಕಳಿಸತೊಡಗಿವೆ. ಹೀಗೆ ವಾಪಸಾಗುವ ಅಫ್ಘಾನಿಗಳಿಗೆ ಅಂತಾರಾಷ್ಟ್ರೀಯ ನೆರವು ಏರ್ಪಡಿಸುವ ಜವಾಬ್ದಾರಿಯನ್ನು ಖಲೀಲುರ್ ರೆಹಮಾನ್ ಹೊತ್ತಿದ್ದರು.
ಖಲೀಲ್ ಹಕ್ಕಾನಿ ಕುರಿತ ವಿವರಗಳನ್ನು ನೀಡಿದವರಿಗೆ ಅಮೆರಿಕ 50 ಲಕ್ಷ ಡಾಲರುಗಳ (ಸುಮಾರು 42 ಕೋಟಿ ರುಪಾಯಿಗಳು) ನಗದು ಬಹುಮಾನ ಘೋಷಿಸಿತ್ತು. ಹಕ್ಕಾನಿ ಸಂಘಟನೆಯನ್ನು ತನ್ನ ನೆಲದಲ್ಲಿ ಭಯೋತ್ಪಾದನೆ ಎಸಗುವ ವಿದೇಶಿ ಭಯೋತ್ಪಾದಕ ಸಂಘಟನೆ ಎಂದು ಅಮೆರಿಕ ಸಾರಿತ್ತು.
ಖಲೀಲುರ್ ರೆಹಮಾನ್ ಮೇಲಿನ ಈ ದಾಳಿಯ ಹೊಣೆಯನ್ನು ಈವರೆಗೆ ಯಾವ ಸಂಘಟನೆಯೂ ಸ್ವೀಕರಿಸಿಲ್ಲ. ಹತರಾಗಿರುವ ಖಲೀಲುರ್ ರೆಹಮಾನ್ ಹಕ್ಕಾನಿ ಅವರು ತಾಲಿಬಾನ್ ಸರ್ಕಾರದ ಗೃಹಮಂತ್ರಿ ಸಿರಾಜುದ್ದೀನ್ ಹಕ್ಕಾನಿ ಅವರ ಚಿಕ್ಕಪ್ಪ ಮತ್ತು ಅಫ್ಘಾನಿಸ್ತಾನದ ತಾಲೀಬಾನಿನ ಹಕ್ಕಾನಿ ಜಾಲದ ಸ್ಥಾಪಕ ಜಲಾಲುದ್ದೀನ್ ಹಕ್ಕಾನಿಯವರ ಸೋದರ. ಹಕ್ಕಾನಿ ಜಾಲದ ಪ್ರಮುಖರಲ್ಲಿ ಒಬ್ಬರೆಂದು ಅವರನ್ನು ಗುರುತಿಸಲಾಗುತ್ತಿತ್ತು.
2021ರ ಆಗಸ್ಟ್ ನಲ್ಲಿ ತಾಲಿಬಾನ್ ಎರಡನೆಯ ಸಲ ಅಧಿಕಾರಕ್ಕೆ ಬಂದ ನಂತರ ಈ ಸಮೂಹದ ಮೇಲೆ ನಡೆದಿರುವ ಮೂರನೆಯ ದೊಡ್ಡ ದಾಳಿಯಿದು. ಜಲಾಲುದ್ದೀನ್ ಹಕ್ಕಾನಿ 1980ರ ದಶಕದ ಸೋವಿಯತ್ ಒಕ್ಕೂಟದ ವಿರುದ್ಧ ನಿಂತಿದ್ದ ಮುಜಾಹಿದೀನ್ ಸಂಘಟನೆಯ ಉನ್ನತ ಕಮಾಂಡರುಗಳಲ್ಲಿ ಒಬ್ಬರು. ಸೋವಿಯತ್ ಒಕ್ಕೂಟದ ವಿರುದ್ಧದ ಯುದ್ಧದಲ್ಲಿ ಖಲೀಲುರ್ ರೆಹ್ಮಾನ್ ಖುದ್ದಾಗಿ ಪಾಲ್ಗೊಂಡಿದ್ದವರು.
ಪಾಕಿಸ್ತಾನಿ ಜೈಲಿನಲ್ಲಿದ್ದ ಖಲೀಲುರ್ ರೆಹಮಾನ್ ಅವರನ್ನು 350 ಪಾಕಿಸ್ತಾನಿ ಸೈನಿಕ ಒತ್ತೆಯಾಳುಗಳ ಬಿಡುಗಡೆಯ ಬದಲಿಗೆ ವಿನಿಮಯವಾಗಿ ಬಿಡುಗಡೆ ಮಾಡಲಾಗಿತ್ತು. ಒಂದೊಮ್ಮೆ ಅಮೆರಿಕೆಯ ಪಾಲಿನ ‘ಹೀರೋ’ ಎನಿಸಿದ್ದ ರೆಹಮಾನ್ ಕಾಲಾಂತರದಲ್ಲಿ ‘ವಿಲನ್’ ಆಗಿದ್ದರು. ಜಲಾಲುದ್ದೀನ್ ಹಕ್ಕಾನಿ ಮತ್ತು ಆತನಂತಹ ಮುಜಾಹಿದೀನ್ ಗಳಿಗೆ ಅಮೆರಿಕೆಯ ಬೇಹುಗಾರಿಕೆ ಏಜೆನ್ಸಿಯಾದ ಸಿಐಎ ಪಾಕಿಸ್ತಾನಿ ಸೇನೆಯ ಮೂಲಕ ಆರ್ಥಿಕ ಮತ್ತು ಸಮರಸಂಬಂಧಿ ನೆರವು ನೀಡುತ್ತಿತ್ತು. ಪಾಕಿಸ್ತಾನದ ಐಎಸ್ಐ ನೆರವಿನಿಂದ ಅಪ್ಘಾನಿಸ್ತಾನದಲ್ಲಿ ಹಕ್ಕಾನಿ ಜಾಲ ಒಂದು ಅನುಭವಿ ಸಮರ ಸಮರ್ಥ ಜಾಲವಾಗಿ ಬೆಳೆದಿತ್ತು.
ಆದರೆ, ಸೋವಿಯತ್ ಒಕ್ಕೂಟದ ವಿಘಟನೆಯ ನಂತರ 1990ರ ದಶಕದಲ್ಲಿ ಅಪ್ಘಾನಿಸ್ತಾನದಲ್ಲಿ ತಾಲೀಬಾನ್ ತಲೆಯೆತ್ತಿದ ತರುವಾಯ ಅಮೆರಿಕ ಮತ್ತು ಅದರ ಮಿತ್ರದೇಶಗಳು ಹಕ್ಕಾನಿ ಸಂಘಟನೆಯನ್ನು ದೂರ ಸರಿಸಿದರು. ಅಫ್ಘಾನಿಸ್ತಾನದಲ್ಲಿ ಒಂದೆಡೆ ತಾಲಿಬಾನ್ ಮತ್ತೊಂದೆಡೆ ಅಲ್ ಖೈದಾ ಇದ್ದಾಗಲೂ ಹಕ್ಕಾನಿ ಜಾಲ ತನ್ನ ಪ್ರತ್ಯೇಕ ಅಸ್ತಿತ್ವವನ್ನು ಕಾಯ್ದುಕೊಂಡಿತ್ತು. ತಾಲಿಬಾನ್ ಸರ್ಕಾರದಲ್ಲಿ ಮಂತ್ರಿಗಳ ಸ್ಥಾನಮಾನ ಹೊಂದಿದ್ದರೂ ತನ್ನ ಸಂಘಟನೆಯನ್ನು ಉಳಿಸಿಕೊಂಡಿತ್ತು. ಇತ್ತೀಚಿನ ದಿನಗಳಲ್ಲಿ ಹಕ್ಕಾನಿ ಜಾಲ ಮತ್ತು ತಾಲಿಬಾನ್ ನಡುವಣ ಸಂಬಂಧಗಳಲ್ಲಿ ಬಿಗುವು ಮೂಡಿರುವ ವರದಿಗಳಿವೆ.
ಕೃಪೆ-ಬಿಬಿಸಿ

ಮಾನವ ಬಾಂಬ್ ದಾಳಿಯಲ್ಲಿ ಹತರಾದ ಖಲೀಲುರ್ ರೆಹಮಾನ್ ಹಕ್ಕಾನಿ ಯಾರು?
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: