ಅಪರಾಧ ಪ್ರಕರಣಗಳಲ್ಲಿ, ಅದರಲ್ಲೂ ಪೋಕ್ಸೊ ಪ್ರಕರಣಗಳಲ್ಲಿ ನ್ಯಾಯಾಂಗ ವ್ಯವಸ್ಥೆ ಹೇಗೆ ಕಾರ್ಯ ನಿರ್ವಹಿಸುತ್ತಿದೆ, ನಿಷ್ಪಕ್ಷಪಾತ ವಿಚಾರಣೆ ನಡೆಯುತ್ತಿದೆಯೇ, ಅಪ್ರಾಪ್ತ ಮಕ್ಕಳ ರಕ್ಷಣೆಯ ವಿಚಾರವನ್ನು ಆದ್ಯತೆಯಾಗಿ ಪರಿಗಣಿಸಿದೆಯೇ ಎಂದು ನೋಡಿದರೆ ನಿರಾಸೆಯಾಗುತ್ತದೆ. ಪೋಕ್ಸೊ ಆರೋಪಿಗಳಿಗೆ ಜಾಮೀನು ನೀಡುವುದು, ಬಂಧಿಸದೇ ವಿಚಾರಣೆ ನಡೆಸುವಂತೆ ಆದೇಶಿಸುವುದು ಇಡೀ ನ್ಯಾಯ ವ್ಯವಸ್ಥೆಯ ಬಗ್ಗೆ ರೇಜಿಗೆ ಹುಟ್ಟಿಸಿದೆ.
ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ಅತ್ಯಾಚಾರ, ಪೋಕ್ಸೊ ಪ್ರಕರಣಗಳ ತ್ವರಿತ ವಿಚಾರಣೆ ನಡೆಯದಿರುವುದು, ನ್ಯಾಯದಾನ ವಿಳಂಬವಾಗುತ್ತಿರುವುದು, ಪ್ರಭಾವಿಗಳಿಗೆ ಜಾಮೀನು ಸಿಗುತ್ತಿರುವ ಬಗ್ಗೆ ನಿನ್ನೆ ವಿಧಾನ ಪರಿಷತ್ತಿನಲ್ಲಿ ಚರ್ಚೆ ನಡೆದಿರುವುದು ಸ್ವಾಗತಾರ್ಹ. ಕಾಂಗ್ರೆಸ್‌ನ ಸದಸ್ಯ ಎಸ್ ರವಿ ಅವರು ಈ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಬಿಜೆಪಿ ಮುಖಂಡ ಬಿ ಎಸ್ ಯಡಿಯೂರಪ್ಪ ಅವರ ಮೇಲಿನ ಪೋಕ್ಸೊ ಪ್ರಕರಣ ಉಲ್ಲೇಖಿಸಿ, “ಪೋಕ್ಸೊ ಪ್ರಕರಣಗಳಲ್ಲಿ ರಾಜಕೀಯ ಪ್ರಭಾವಿಗಳಿಗೆ ಜಾಮೀನು ಸಿಗುತ್ತಿದೆ. ಇದು ಇಡೀ ರಾಜ್ಯ ತಲೆ ತಗ್ಗಿಸುವ ವಿಚಾರ” ಎಂದು ರವಿ ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ಗೃಹಸಚಿವ ಎಸ್ ಪರಮೇಶ್ವರ್, “ಅತ್ಯಾಚಾರ, ಪೋಕ್ಸೊ ಪ್ರಕರಣಗಳ ತ್ವರಿತ ವಿಚಾರಣೆಗೆ ನ್ಯಾಯಾಂಗದ ಸಹಕಾರದ ಅಗತ್ಯವಿದೆ. ಯಡಿಯೂರಪ್ಪ ಅವರ ಪ್ರಕರಣದ ವಿಚಾರಣೆ ಐದು ಬಾರಿ ಮುಂದೂಡಲಾಗಿದೆ. ಅಷ್ಟೇ ಅಲ್ಲ ರಾಜ್ಯದಲ್ಲಿ 2023ರಲ್ಲಿ 3718, 2024ರಲ್ಲಿ 3,419 ಪೋಕ್ಸೊ ಪ್ರಕರಣಗಳು ದಾಖಲಾಗಿವೆ. ಪ್ರತಿ ವರ್ಷ 500ಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿವೆ” ಎಂದು ಖುದ್ದು ಸದನಕ್ಕೆ ಮಾಹಿತಿ ನೀಡಿದ್ದಾರೆ.
ಬಹಳ ಗಂಭೀರ ವಿಚಾರವಿದು. ಸರ್ಕಾರ ಮತ್ತು ವಿಪಕ್ಷಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಶೈಕ್ಷಣಿಕವಾಗಿ, ಆರ್ಥಿಕವಾಗಿ ಮುಂದುವರಿದ ಕರ್ನಾಟಕದ ಪರಿಸ್ಥಿತಿಯೇ ಹೀಗಿದ್ದರೆ, ಬೇರೆ ರಾಜ್ಯಗಳ ಪರಿಸ್ಥಿತಿ ಎಷ್ಟು ಭೀಕರವಾಗಿರಬಹುದು ಎಂದು ಊಹೆ ಮಾಡಬಹುದು. ನಾವು ಉತ್ತರಪ್ರದೇಶದಲ್ಲಿ ದಿನವೂ ವರದಿಯಾಗುತ್ತಿರುವ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣಗಳ ಬಗ್ಗೆ ಆ ರಾಜ್ಯದ ಅರಾಜಕತೆ, ಬಡತನ, ಮತಾಂಧತೆ, ದುರಾಡಳಿತದ ಬಗ್ಗೆ ಮಾತನಾಡುತ್ತೇವೆ. ಆದರೆ ನಮ್ಮಲ್ಲೂ ಈ ಪ್ರಮಾಣದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇದು ಸರ್ಕಾರದ ಅಂಕಿಅಂಶವಷ್ಟೇ. ಅದರಾಚೆಗೆ ಸುದ್ದಿಯಾಗದ, ಲೆಕ್ಕಕ್ಕೆ ಸಿಗದ ಇನ್ನೆಷ್ಟು ಪ್ರಕರಣಗಳಿವೆಯೋ! ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ.
ಅಪರಾಧ ಪ್ರಕರಣಗಳಲ್ಲಿ ಅದರಲ್ಲೂ ಪೋಕ್ಸೊ ಪ್ರಕರಣಗಳಲ್ಲಿ ನ್ಯಾಯಾಂಗ ವ್ಯವಸ್ಥೆ ಹೇಗೆ ಕಾರ್ಯ ನಿರ್ವಹಿಸುತ್ತಿದೆ, ನಿಷ್ಪಕ್ಷಪಾತ ವಿಚಾರಣೆ ನಡೆಯುತ್ತಿದೆಯೇ, ಅಪ್ರಾಪ್ತ ಮಕ್ಕಳ ರಕ್ಷಣೆಯ ವಿಚಾರವನ್ನು ಆದ್ಯತೆಯಾಗಿ ಪರಿಗಣಿಸಿದೆಯೇ ಎಂದು ನೋಡಿದರೆ ನಿರಾಸೆಯಾಗುತ್ತದೆ. ಪೋಕ್ಸೊ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡುವುದು, ಬಂಧಿಸದೇ ವಿಚಾರಣೆ ನಡೆಸುವಂತೆ ಆದೇಶ ನೀಡುವುದು ಇಡೀ ನ್ಯಾಯ ವ್ಯವಸ್ಥೆಯ ಬಗ್ಗೆ ರೇಜಿಗೆ ಹುಟ್ಟಿಸುವಂತೆ ಮಾಡಿದೆ. ತ್ವರಿತ ವಿಚಾರಣೆ ನಡೆದು ನ್ಯಾಯಯುತ ತೀರ್ಪು ಹೊರಬಂದು ಅಪರಾಧಿಗೆ ಶಿಕ್ಷೆಯಾದರೆ ಕಾನೂನಿನ ಬಗ್ಗೆ ಸ್ವಲ್ಪವಾದರೂ ಭಯ ಇರುತ್ತದೆ. ಆದರೆ, ನ್ಯಾಯ ದೇವತೆಯೂ ಆಗಾಗ ಪ್ರಭಾವಿಗಳ ಪರ ವಾಲುತ್ತಿರುವುದರಿಂದ ಜನ ಸಾಮಾನ್ಯರಿಗೆ ನ್ಯಾಯ ಮರೀಚಿಕೆ ಎಂಬ ಭಾವನೆ ಬರುತ್ತದೆ. ಅಪರಾಧ ನಡೆದರೂ ದೂರು ನೀಡದೇ ಇರುವುದು ಅಥವಾ ದೂರು ನೀಡಿದರೂ ರಾಜಿಯಲ್ಲಿ ಪ್ರಕರಣ ಮುಚ್ಚಿ ಹೋಗುವ ಅಪಾಯವಿದೆ.
ಬಿ ಎಸ್ ಯಡಿಯೂರಪ್ಪ ಮೇಲಿನ ಪೋಕ್ಸೊ ಪ್ರಕರಣದಲ್ಲಿ ಆರಂಭದಲ್ಲಿ ಸಿಐಡಿ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ. ಮೂರು ತಿಂಗಳು ಆರೋಪಿಯ ವಿರುದ್ಧ ಯಾವುದೇ ವಿಚಾರಣೆ ನಡೆಸದೇ ಕಾಲ ಹರಣ ಮಾಡಿದ್ದರು. ಜೂನ್ ತಿಂಗಳಿನಲ್ಲಿ ದೂರುದಾರೆ ಮೃತಪಟ್ಟ ತರುವಾಯ ಯಡಿಯೂರಪ್ಪ ಅವರನ್ನು ಬಂಧಿಸಬೇಕು ಎಂದು ಹೈಕೋರ್ಟ್‌ಗೆ ಸಂತ್ರಸ್ತೆಯ ಸಹೋದರ ಹೋದ ನಂತರ ಸಿಐಡಿ ಅಧಿಕಾರಿಗಳು ಎಚ್ಚೆತ್ತುಕೊಂಡು ವಿಚಾರಣೆ ನಡೆಸಿದ್ದರು. ಆದರೆ, ಆರೋಪಿಯನ್ನು ಬಂಧಿಸದೇ ವಿಚಾರಣೆ ನಡೆಸಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ. ಆ ಆದೇಶವನ್ನು ವಿಸ್ತರಣೆ ಮಾಡುತ್ತಲೇ ಬರಲಾಗುತ್ತಿದೆ. ಬಂಧನಕ್ಕಿರುವ ತಡೆಯನ್ನು ರದ್ದುಪಡಿಸಲು ದೂರುದಾರರ ಪರ ವಕೀಲರು, ಸರ್ಕಾರದ ವಿಶೇಷ ಪ್ರಾಸಿಕ್ಯೂಟರ್ ಹಾಕಿರುವ ಅರ್ಜಿಯ ವಿಚಾರಣೆ ಪದೇ ಪದೇ ಮುಂದೂಡಲಾಗುತ್ತಿದೆ. ಹೈಕೋರ್ಟ್‌ನ ನ್ಯಾ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಈ ಪ್ರಕರಣವನ್ನು ಬೇರೆಲ್ಲ ಸಾಮಾನ್ಯ ಪ್ರಕರಣಗಳಂತೆ ಪಟ್ಟಿ ಮಾಡಿ ತಿಂಗಳುಗಳ ಕಾಲ ಮುಂದೂಡುತ್ತಿದೆ. ಇಲ್ಲಿ ಆರೋಪಿಯ ರಕ್ಷಣೆ ಮಾತ್ರ ಆಗುತ್ತಿದೆ. ಸಂತ್ರಸ್ತ ಬಾಲಕಿಗೆ ನ್ಯಾಯ ಸಿಗುತ್ತಿಲ್ಲ. ಪೋಕ್ಸೊ ಕಾಯ್ದೆಯನ್ನು ನ್ಯಾಯಪೀಠಗಳೇ ಉಲ್ಲಂಘಿಸುತ್ತಿವೆಯಾ ಎಂಬ ಅನುಮಾನ ಬರುತ್ತಿದೆ. ಯಡಿಯೂರಪ್ಪ ಪ್ರಕರಣದಲ್ಲಿ ಅವರ ಧ್ವನಿ ಪರೀಕ್ಷೆ, ದೂರುದಾರೆಯ ಜೊತೆ ಮಾತನಾಡಿದ ವಿಡಿಯೋದಲ್ಲಿ ತಾನು ಬಾಲಕಿಯ ಮೈ ಮುಟ್ಟಿರೋದನ್ನು ಒಪ್ಪಿಕೊಂಡಿರುವ ಹೇಳಿಕೆಗಳಿವೆ. ಸಂತ್ರಸ್ತ ಬಾಲಕಿಯ ಹೇಳಿಕೆ ನ್ಯಾಯಾಧೀಶರ ಮುಂದೆ ದಾಖಲಿಸಲಾಗಿದೆ. ಆದರೂ ಇನ್ನೂ ಯಾವ ಸಾಕ್ಷಿ ಹುಡುಕಲು ವಿಳಂಬ ಮಾಡಲಾಗುತ್ತಿದೆ ಎಂಬುದನ್ನು ಪೀಠವೇ ಹೇಳಬೇಕು.
ಯಡಿಯೂರಪ್ಪ ಅವರ ಪ್ರಕರಣವನ್ನು ವಿಶೇಷ ಪ್ರಕರಣ ಎಂದು ನೋಡಬೇಕಿಲ್ಲ. ಪೋಕ್ಸೊ ಕಾಯ್ದೆಯ ನಿಯಮಗಳನ್ನು ಪೊಲೀಸರು, ನ್ಯಾಯಾಲಯಗಳು ಚಾಚೂ ತಪ್ಪದೇ ಪಾಲಿಸಿದರೆ ಸಾಕು. ಸಂತ್ರಸ್ತ ಮಕ್ಕಳಿಗೆ ನ್ಯಾಯ ಸಿಗುವುದರಲ್ಲಿ ಅನುಮಾನವೇ ಇಲ್ಲ. ಆದರೆ, ಆಗುತ್ತಿರುವುದೇ ಬೇರೆ. ಪೊಲೀಸರೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ದೂರುಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಬಹುತೇಕ ಪ್ರಕರಣಗಳಲ್ಲಿ ಸಾಕ್ಷಿ ಸಂಗ್ರಹ ಸರಿಯಾಗಿ ನಡೆದಿರುವುದಿಲ್ಲ. ಆರೋಪಿಗಳು ಪ್ರಭಾವಿಗಳಾಗಿದ್ದರೆ ರಾಜಿ ಮಾಡಿಸಲು ಅಥವಾ ಪ್ರಕರಣ ಮುಚ್ಚಿ ಹಾಕಲು ಪೊಲೀಸರು ಪ್ರಭಾವಿಗಳ ಜೊತೆ ಕೈ ಜೋಡಿಸುತ್ತಾರೆ. ಸಂತ್ರಸ್ತ ಕುಟುಂಬದವರು ಬಡವರಾದರೆ ಒಂದಿಷ್ಟು ಹಣ ಕೊಟ್ಟು ಮುಚ್ಚಿ ಹಾಕಲಾಗುತ್ತಿದೆ. ನ್ಯಾಯಾಲಯಗಳಲ್ಲಿ ನ್ಯಾಯದಾನ ವಿಳಂಬವಾಗುತ್ತಿರುವುದು ರಾಜಿ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗುತ್ತಿದೆ.
ಇದನ್ನೂ ಓದಿ ರೇಣುಕಸ್ವಾಮಿ ಹತ್ಯೆ ಪ್ರಕರಣ: ನಟ ದರ್ಶನ್ ಸೇರಿ 7 ಮಂದಿಗೆ ಜಾಮೀನು
ಎಲ್ಲೋ ಒಂದೆರಡು ಪ್ರಕರಣಗಳು ತ್ವರಿತವಾಗಿ ಇತ್ಯರ್ಥವಾಗಿ ಶಿಕ್ಷೆ ಪ್ರಕಟವಾದರೂ ಮೇಲಿನ ಕೋರ್ಟ್‌ಗಳಲ್ಲಿ ಮತ್ತೆ ಒಂದಷ್ಟು ವರ್ಷ ಕಾಲಹರಣವಾಗುತ್ತದೆ. ಇದು ಈ ದೇಶದ ಕಾನೂನಿನ ಅಣಕ. ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ವಿಚಾರಣೆಯನ್ನು ತ್ವರಿತವಾಗಿ ಮುಗಿಸುವಂತೆ ಮಾಡಲು ಏನೇನು ಮಾರ್ಗೋಪಾಯಗಳಿವೆ ಎಂಬ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ. ಸರ್ಕಾರ, ಪೊಲೀಸ್ ಇಲಾಖೆಯ ಕಡೆಯಿಂದ ಲೋಪವಾಗದಂತೆ ನೋಡಿಕೊಳ್ಳುವುದು ಕೂಡ ಆದ್ಯತೆಯಾಗಬೇಕಿದೆ.
