ಉಪರಾಷ್ಟ್ರಪತಿ, ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ವಿರುದ್ಧ ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದ್ದು, ರಾಜ್ಯಸಭೆಯಲ್ಲಿ ಭಾರೀ ಕೋಲಾಹಲ ಸೃಷ್ಟಿಸಿದೆ. ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಧನಕರ್ ನಡುವೆ ಮಾತಿನ ಸವರವೇ ನಡೆದಿದೆ. ಬಳಿಕ, ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಗಿದೆ.
ವಿಶ್ವಾಸ ನಿರ್ಣಯ ಮಂಡಿಸಿದ ವಿಪಕ್ಷಗಳ ವಿರುದ್ಧ ಧನಕರ್ ಅಸಮಾಧಾನಗೊಂಡಿದ್ದು, “ನಾನೊಬ್ಬ ರೈತನ ಮಗ, ಯಾವುದೇ ಪರಿಸ್ಥಿತಿಯಲ್ಲೂ ನಾನು ದುರ್ಬಲನಾಗುವುದಿಲ್ಲ. ನಾನು ಸಾಕಷ್ಟು ಸಹಿಸಿಕೊಂಡಿದ್ದೇನೆ” ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಖರ್ಗೆ, “ನೀವು ರೈತನ ಮಗ, ನಾನೂ ಕೂಡ ಕೂಲಿಕಾರನ ಮಗನೇ. ನಾನು ನಿಮಗಿಂತ ಹೆಚ್ಚು ಸವಾಲುಗಳನ್ನು ಎದುರಿಸಿದ್ದೇನೆ. ನೀವು ನಮ್ಮ ಪಕ್ಷದ ನಾಯಕರನ್ನು ನಿಂದಿಸಿದ್ದೀರಿ. ಕಾಂಗ್ರೆಸ್‌ಗೆ ಅವಮಾನ ಮಾಡಿದ್ದೀರಿ. ನಾವು ನಿಮ್ಮ ಹೊಗಳಿಕೆ ಕೇಳಲು ಅಥವಾ ಹೊಗಳಲು ಬಂದಿಲ್ಲ. ಚರ್ಚಿಸಲು ಬಂದಿದ್ದೇವೆ” ಎಂದು ಹೇಳಿದ್ದಾರೆ.
“ಪ್ರತಿಪಕ್ಷಗಳಿಗೆ ಹೋಲಿಸಿದರೆ ಆಡಳಿತ ಪಕ್ಷದ ಸಂಸದರಿಗೆ ಹೆಚ್ಚಿನ ಸಮಯವನ್ನು ಅಧ್ಯಕ್ಷರು ನೀಡುತ್ತಿದ್ದಾರೆ. ರಾಜ್ಯಸಭಾ ಅಧ್ಯಕ್ಷರು ಬಿಜೆಪಿಯ ಅಶಿಸ್ತಿಗೆ ಪ್ರಚೋದನೆ ನೀಡುತ್ತಿದ್ದಾರೆ. ಅವರು ವಿರೋಧ ಪಕ್ಷಗಳ ಸಂಸದರಿಗೆ ಮಾತನಾಡಲು ಬಿಡುತ್ತಿಲ್ಲ” ಖರ್ಗೆ ಆರೋಪಿಸಿದ್ದಾರೆ.
ಮುಂದುವರೆದು ಮಾತನಾಡಿದ ಖರ್ಗೆ, “ನೀವು ನನ್ನನ್ನು ಅವಮಾನಿಸುತ್ತಿದ್ದೀರಿ. ನಾನು ನಿಮ್ಮನ್ನು ಹೇಗೆ ಗೌರವಿಸಲಿ?” ಎಂದರು.
ಅವಿಶ್ವಾಸ ನಿರ್ಣಯದ ಕುರಿತು ಹೆಚ್ಚುತ್ತಿರುವ ಚರ್ಚೆಗಳ ನಡುವೆ ರಾಜ್ಯಸಭೆಯ ಕಲಾಪವನ್ನು ಡಿಸೆಂಬರ್ 16ಕ್ಕೆ ಮುಂದೂಡಲಾಗಿದೆ.