ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಹೋರಾಟದ ಕಿಚ್ಚು ವಿಧಾನಮಂಡಲ ಚಳಿಗಾಲ ಅಧಿವೇಶನದ ಕಲಪಾಗಳನ್ನು ಸುಡುತ್ತಿದೆ. ಸದನದ ಒಳಗೂ ಮತ್ತು ಹೊರಗೂ ಪಂಚಮಸಾಲಿ ಮೀಸಲಾತಿ ಹೋರಾಟದ್ದೇ ಈಗ ಹೆಚ್ಚು ಚರ್ಚೆಯಾಗುತ್ತಿದೆ.
2ಎ ಮೀಸಲಾತಿಗೆ ಆಗ್ರಹಿಸಿ ಲಿಂಗಾಯತ ಪಂಚಮಸಾಲಿ ಸಮುದಾಯ ಬೆಳಗಾವಿಯಲ್ಲಿ ಮಂಗಳವಾರ ನಡೆಸಿದ ಹೋರಾಟ ಅಕ್ಷರಶಃ ರಣರಂಗವಾಗಿತ್ತು. ಪಂಚಮಸಾಲಿಗಳ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದು ಹೋರಾಟಗಾರರ ಮೇಲೆ ನಡೆದ ಲಾಠಿ ಚಾರ್ಜ್ ಮತ್ತು ಕಲ್ಲು ತೂರಾಟ ಘಟನೆ ರಾಜಕೀಯ ಸ್ವರೂಪ ಪಡೆದುಕೊಂಡಿದೆ.
ಘಟನೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಸೇರಿದಂತೆ 17 ಜನರಿಗೆ ಗಾಯವಾಗಿದೆ. ಹಾಗೆಯೇ ಏಳು ಸರ್ಕಾರಿ ಬಸ್, ಮೂರು ಪೊಲೀಸ್ ವಾಹನ ಜಖಂಗೊಂಡಿದೆ. ಹಿರೇಬಾಗೇವಾಡಿ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಲ್ಲು ಎಸೆದ ಆರೋಪ ಮೇಲೆ ನಿಂಗಪ್ಪ ಬಣದ್, ರಾಮಗೌಡ ಫಕೀರಗೌಡ, ಉಮೇಶ್ ಇಂಗಳೆವಾರ್, ಮಂಜುನಾಥ್ ಬೆಂಡಿಗೇರಿ, ಮಂಜುನಾಥ್ ಗುಮ್ಮಗೋಳ ಹಾಗೂ ಇತರರ ಮೇಲೆ ಎಫ್ಐಆರ್ ದಾಖಲಾಗಿದೆ.

ಹೋರಾಟದ ನೇತೃತ್ವ ವಹಿಸಿರುವ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಒಂದು ಹೆಜ್ಜೆ ಮುಂದೆ ಹೋಗಿ, “ಈವರೆಗಿನ ಯಾವುದೇ ಸರ್ಕಾರ ಲಿಂಗಾಯತರ ಮೇಲೆ ದಾಳಿ ಮಾಡಿರಲಿಲ್ಲ. ಸಿದ್ದರಾಮಯ್ಯ ಅವರೇ ಲಿಂಗಾಯತರ ಮೇಲೆ ಲಾಠಿ ಎತ್ತಿದ ಮೊದಲ ಮುಖ್ಯಮಂತ್ರಿ. ಇವರೊಬ್ಬ ಲಿಂಗಾಯತ ವಿರೋಧಿ ನಾಯಕ. ಒಂದು ಕಡೆ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡುತ್ತಾರೆ. ಇನ್ನೊಂದು ಕಡೆ ಅವರ ಅನುಯಾಯಿಗಳ ಮೇಲೆಯೇ ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಸರ್ವಾಧಿಕಾರಿಯಂತೆ ನಡೆದುಕೊಂಡಿದ್ದಾರೆ” ಎಂದು ನೇರವಾಗಿ ಆರೋಪಿಸಿದ್ದಾರೆ.
ಮುಂದುವರಿದು, “ನಮ್ಮ ಜನ ಇನ್ನಷ್ಟು ಪುಟಿದೇಳುತ್ತಾರೆ. ನಾಲ್ಕು ವರ್ಷದಿಂದ ಬಸವಣ್ಣನಂತೆ ಶಾಂತಿಯುತ ಹೋರಾಟ ಮಾಡಿದ್ದೇವೆ. ಇನ್ನು ಮುಂದೆ ರಾಣಿ ಚನ್ನಮ್ಮನಂತೆ ಕ್ರಾಂತಿಯಿಂದ ಹೋರಾಡುತ್ತೇವೆ. ಧೈರ್ಯವಿದ್ದವರು ನಮ್ಮನ್ನು ತಡೆಯಿರಿ. ಹಳ್ಳಿ ಹಳ್ಳಿಯಲ್ಲೂ ಕ್ರಾಂತಿಯುತ ಹೋರಾಟ ಮಾಡುತ್ತೇವೆ” ಎಂದು ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ. ಸ್ವಾಮೀಜಿ ಕರೆಗೆ ಓಗೊಟ್ಟ ಪಂಚಮಸಾಲಿಗಳು ತಮ್ಮ ತಮ್ಮ ಪ್ರದೇಶಗಳಲ್ಲಿ ಈಗ ಪ್ರತಿಭಟನೆಗಳಿಗೆ ಮುಂದಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರಿಸಲು ಸಾಧ್ಯವೇ? ಕೋರ್ಟು-ಕಾನೂನು ಏನು ಹೇಳುತ್ತದೆ?
ಬಿಜೆಪಿ ನಾಯಕರು ಪಂಚಮಸಾಲಿ ಹೋರಾಟದ ಇಡೀ ಘಟನೆಯನ್ನೇ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ತುದಿಗಾಲ ಮೇಲೆ ನಿಂತಿದ್ದಾರೆ. ಲಾಠಿ ಚಾರ್ಜ್ ಅನ್ನು ರಾಜಕೀಯ ಅಸ್ತ್ರವಾಗಿಟ್ಟುಕೊಂಡು ಸಿಎಂ ಸಿದ್ದರಾಮಯ್ಯ ಲಿಂಗಾಯತ ವಿರೋಧಿ ಎಂಬ ಆರೋಪಗಳನ್ನು ಮುಂದುಮಾಡುತ್ತಿದ್ದಾರೆ.
ಬೆಳಗಾವಿ ಘರ್ಷಣೆಯಿಂದ ಮೀಸಲಾತಿ ಹೋರಾಟದ ನೈಜ ಆಶಯವೇ ಈಗ ದಿಕ್ಕು ತಪ್ಪುತ್ತಿದೆ ಎನ್ನುವ ಆತಂಕ ನಿಜವಾಗಿಯೂ ಮೀಸಲಾತಿಗಾಗಿ ಹೋರಾಡುತ್ತಿರುವ ಪಂಚಮಸಾಲಿಗಳನ್ನು ಕಾಡುತ್ತಿದೆ. ಇನ್ನೊಂದೆಡೆ ಈಗ ಸಿಡಿದೆದ್ದ ಪಂಚಮಸಾಲಿ ಸಮುದಾಯವನ್ನು ಆ ಸಮುದಾಯದ ರಾಜಕಾರಣಿಗಳು ಮತ್ತು ಸ್ವಾಮೀಜಿಗಳು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳಲು ಹವಣಿಸುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.

ಬಸವ ತತ್ವದ ಪ್ರಚಾರಕ ಮತ್ತು ಪ್ರಗತಿಪರ ಚಿಂತಕ ಡಾ. ಜೆ ಎಸ್ ಪಾಟೀಲ್ ಅವರು ಈ ಬೆಳವಣಿಗೆ ಕುರಿತು ಈ ದಿನ.ಕಾಮ್ ಜೊತೆ ಬಗ್ಗೆ ಮಾತನಾಡಿ, “ಪಂಚಮಸಾಲಿ ಹೋರಾಟ ಎಂಬುದೇ ಪ್ರಾಯೋಜಿತ. ಆದರೆ ಅದು ಆ ಸಮುದಾಯದಲ್ಲಿನ ಜನಸಾಮಾನ್ಯರಿಗೆ ಗೊತ್ತಿಲ್ಲ. ಮೀಸಲಾತಿ ಸಿಗುತ್ತದೆ ಎಂಬ ಆಶಯದಿಂದ ಹೋರಾಟಕ್ಕೆ ಕೈಜೋಡಿಸಿದ್ದಾರೆ. ಆದರೆ, ಇಡೀ ಪಂಚಮಸಾಲಿ ಹೋರಾಟ ತನ್ನ ಸಮುದಾಯ ಕೇಂದ್ರಿತವಾಗದೇ ಈಗ ರಾಜಕೀಯ ಕೇಂದ್ರಿತವಾಗಿದೆ. ಬಸನನಗೌಡ ಪಾಟೀಲ ಯತ್ನಾಳ್ ಅವರನ್ನು ರಾಜಕೀಯವಾಗಿ ಮೇಲೆತ್ತಲು ಬಿಜೆಪಿಯೊಳಗಿನ ಯಡಿಯೂರಪ್ಪ ವಿರೋಧಿಗಳು ಪಂಚಮಸಾಲಿ ಹೋರಾಟವನ್ನು ಜೀವಂತವಾಗಿಟ್ಟಿದ್ದಾರೆ” ಎಂದರು.
“ಕಾಂಗ್ರೆಸ್ ಸರ್ಕಾರ 136 ಸ್ಥಾನ ಪಡೆದಿದ್ದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಅದರಲ್ಲೂ ಆರ್‌ಎಸ್‌ಎಸ್ ಬೆಂಬಲಿತ ನಾಯಕರಿಗೆ ಇದು ಇನ್ನೂ ಹೊಟ್ಟೆಯುರಿ ತಂದಿದೆ. ಹೇಗಾದರೂ ಮಾಡಿ ಕಾಂಗ್ರೆಸ್ ಲಿಂಗಾಯತ ವಿರೋಧಿ ಎಂಬ ಹಣೆಪಟ್ಟಿಯನ್ನು ಮುಂಬರುವ ಚುನಾವಣೆ ಹೊತ್ತಿಗೆ ಬಹಳ ಗಟ್ಟಿಯಾಗಿ ಬಿತ್ತಬೇಕು ತಂತ್ರದ ಭಾಗವಾಗಿಯೇ ಬೆಳಗಾವಿ ಗಲಭೆ ನಡೆದಿದೆ. ಸ್ವಾಮೀಜಿ ಮತ್ತು ಯತ್ನಾಳ್ ಅವರ ಹಿಂದೆ ಬಿ ಎಲ್ ಸಂತೋಷ್ ಮತ್ತು ಅಮಿತ್ ಶಾ ಮಾರ್ಗದರ್ಶನವಿದೆ. ಇದು ಯಡಿಯೂರಪ್ಪ ಬಣದವರಿಗೂ ಗೊತ್ತು” ಎಂದು ವಿಶ್ಲೇಷಿಸಿದರು.
“ಯಡಿಯೂರಪ್ಪ ಲಿಂಗಾಯತ ಸಮುದಾಯದ ಮೇರು ನಾಯಕ ಎಂಬುದು ರಾಜ್ಯಕ್ಕೆ ಗೊತ್ತು. ಲಿಂಗಾಯತರಲ್ಲೇ ಹೆಚ್ಚು ಪ್ರಬಲವಾಗಿರುವುದು ಪಂಚಮಸಾಲಿ ಸಮುದಾಯ. ಹೀಗಿರುವಾಗ ಪಂಚಮಸಾಲಿ ಮೀಸಲಾತಿ ಹೋರಾಟದ ಅಧ್ಯಕ್ಷತೆಯನ್ನು ಯತ್ನಾಳ್ ವಹಿಸಿಕೊಂಡಿರುವುದರ ಹಿಂದೆ ಒಂದು ರಾಜಕೀಯ ತಂತ್ರವಿದೆ. ಯಡಿಯೂರಪ್ಪ ಅವರ ಶಕ್ತಿಯನ್ನು ಕುಂದಿಸಲು ಯತ್ನಾಳ್ ಮತ್ತು ಪಂಚಮಸಾಲಿ ಹೋರಾಟವನ್ನು ಬಳಸಿಕೊಳ್ಳಲಾಗುತ್ತಿದೆ” ಎಂದು ಹೇಳಿದರು.
“ಕಳೆದ ಬಿಜೆಪಿ ಸರ್ಕಾರದಲ್ಲಿ ಪಂಚಮಸಾಲಿ ಹೋರಾಟ ಬಹಳ ಸಮತೋಲಿತವಾಗಿ ನಡೆಯಿತು. ಈಗ ಏಕೆ ಕ್ರಾಂತಿಯಿಂದ ಕೂಡಿದೆ. ಯತ್ನಾಳ್ ಹಿಂದೆ ಯಾರ ವಿರುದ್ಧ ಪ್ರತಿಭಟಿಸಿದರು? ಸರ್ಕಾರ ಯಾರದು? ಇದಕ್ಕೆಲ್ಲ ಉತ್ತರ ಅವರಲ್ಲೇ ಇದೆ. ಯಡಿಯೂರಪ್ಪ ಇಡೀ ಲಿಂಗಾಯತ ಸಮುದಾಯದ ನಾಯಕ ಅಲ್ಲ ಎಂದು ಮೀಸಲಾತಿ ಹೋರಾಟದ ಮೂಲಕ ಹೇಳಿಸಲಾಯಿತು. ಒಟ್ಟಾರೆ ಅವರ ಹೋರಾಟ ಯಡಿಯೂರಪ್ಪ ವಿರುದ್ಧವಾಗಿತ್ತು. ಕೊನೆಗೆ ಬೊಮ್ಮಾಯಿ ಅವರು ಚುನಾವಣೆಗಾಗಿ ಮುಸ್ಲಿಂ ಮೀಸಲಾತಿ ಕಿತ್ತು ಇವರಿಗೆ ಹಂಚಿಕೆ ಮಾಡುವ ಆಟ ಆಡಿದರು. ಈಗ ಕಾಂಗ್ರೆಸ್ ವಿರುದ್ಧ ಹೋರಾಟ ಜೋರಾಗಿದೆ. ಹೋರಾಟದ ಹಿಂದೆ ಅಜೆಂಡಾ ಕೂಡ ಸಿದ್ಧವಾಗಿದೆ” ಎಂದರು.

ಪತ್ರಕರ್ತ ಸಿದ್ದಪ್ಪ ಮೂಲಗೆ ಮಾತನಾಡಿ, “ಪಂಚಮಸಾಲಿ ಹೋರಾಟ ರಾಜಕೀಯ ಸ್ವರೂಪ ಪಡೆದಾಗಿದೆ. ಹೋರಾಟದ ಲಾಭ ನಷ್ಟದ ಲೆಕ್ಕಾಚಾರದಲ್ಲಿ ನಾಯಕರು ಯೋಚಿಸುತ್ತಿದ್ದಾರೆ. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಗುವುದಿಲ್ಲ ಎಂಬುದು ಸ್ವಾಮೀಜಿಗೂ ತಿಳಿದಿದೆ. ಯತ್ನಾಳ್ ಅವರಿಗೂ ಗೊತ್ತಿದೆ. ಆದರೂ ಹೋರಾಟ ನಡೆಯುತ್ತಿದೆ. ಕಾರಣ ಯತ್ನಾಳ್ ಅವರನ್ನು ಮುನ್ನೆಲೆಗೆ ತರಲು” ಎಂದು ಹೇಳಿದರು.
“ಕಾಂಗ್ರೆಸ್‌ನಲ್ಲಿರುವ ಪಂಚಮಸಾಲಿ ನಾಯಕರಿಗೆ ಯಾವುದೇ ಮಹತ್ವದ ಸ್ಥಾನಗಳು ಹೋರಾಟದಲ್ಲಿ ಇಲ್ಲ. ಅದರ ಅರ್ಥ ಅವರ ಹೋರಾಟಕ್ಕೆ ಸ್ಪಷ್ಟತೆ ಇದೆ. ಇದು ಬಿಜೆಪಿಯೊಳಗಿನ ಬಣದ ಗುದ್ದಾಟಕ್ಕೆ ಪಂಚಮಸಾಲಿ ಸಮುದಾಯ ಬಲಿಯಾಗುತ್ತಿದೆ. ಯಾವುದೇ ಹೋರಾಟ, ಚಳವಳಿ ಇರಲಿ ಅದಕ್ಕೊಂದು ಭಾಷೆ ಇರುತ್ತದೆ. ಆದರೆ ಬೆಳಗಾವಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಒಂದು ಅಹಂಕಾರವಿತ್ತು. ಮನವಿ ಬದಲು ರಾಜಕೀಯ ಧಮ್ಕಿ ಇತ್ತು. 2028ಕ್ಕೆ ನೋಡಿಕೊಳ್ತೀವಿ ನಿಮ್ಮನ್ನು ಎಂದು ಎಚ್ಚರಿಕೆ ಕೊಡಲಾಯಿತು. ಇದೆಲ್ಲದರ ಅರ್ಥ: ಪಂಚಮಸಾಲಿ ಹೋರಾಟ ಎಂಬ ಒಂದೇ ಕಲ್ಲಿನಲ್ಲಿ ಹಲವು ಹಕ್ಕಿಗಳನ್ನು ಹೊಡೆಯುವ ಲೆಕ್ಕಾಚಾರ ಎದ್ದು ಕಾಣುತ್ತಿದೆ” ಎಂದು ಹೇಳಿದರು.

ಪಂಚಮಸಾಲಿ ಮೀಸಲಾತಿ ಹೋರಾಟದ ಪ್ರತಿನಿಧಿ ದೀಪಕ ಜುಂಜರವಾಡ ಮಾತನಾಡಿ, “ಕಾಂಗ್ರೆಸ್ ಸರ್ಕಾರ ಲಿಂಗಾಯತರನ್ನು ಮುಟ್ಟಿ ತಪ್ಪು ಮಾಡಿದೆ. ಈಗ ನಮ್ಮ ಸಮುದಾಯ ಕೆರಳಿದೆ. ಪಾಠ ಕಲಿಸದೇ ಬಿಡುವ ಮಾತೇ ಇಲ್ಲ. 2ಎ ಮೀಸಲಾತಿ ಬೇಕು ಎಂಬುದು ನಮ್ಮ ಹೋರಾಟ. ಬಿಜೆಪಿ ಸರ್ಕಾರ ಮೀಸಲಾತಿ ವಿಚಾರದಲ್ಲಿ ಆಟ ಆಡಿದ್ದಕ್ಕೆ ನಾವು ಅವರನ್ನು ಮನೆಗೆ ಹೋಗುವಂತೆ ಮಾಡಿದ್ದು. ಈಗ ಕಾಂಗ್ರೆಸ್‌ನಿಂದ ನಮ್ಮ ಸಮುದಾಯಕ್ಕೆ ಏನು ಲಾಭವಾಗಿದೆ? ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂವಿಧಾನ ವಿರೋಧಿ ಹೋರಾಟ ಎನ್ನುತ್ತಾರೆ. ನಮ್ಮದು ಸಂವಿಧಾನ ವಿರೋಧಿ ಹೋರಾಟವಾಗಿದ್ದರೆ ನಮ್ಮ ಹೋರಾಟದಲ್ಲಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಯಾವುದೇ ಪಂಚಮಸಾಲಿ ನಾಯಕರು ಕಾಂಗ್ರೆಸ್‌ಗೆ ಬೇಡ ಎಂದು ಸಿದ್ದರಾಮಯ್ಯ ನೇರವಾಗಿ ಹೇಳಿಬಿಡಲಿ. ಆಗ ನಮ್ಮ ದಾರಿ ನಾವು ನೋಡಿಕೊಳ್ಳುತ್ತೇವೆ” ಎಂದು ಹೇಳಿದರು.
“ಹಿಂದುಳಿದ ವರ್ಗಗಳ ಆಯೋಗದ ಹತ್ತಿರ ಹೋಗಲು ಸಿದ್ದರಾಮಯ್ಯ ಹೇಳಿದ್ದಾರೆ. ನಾವೇನು ಬರೀ ಪ್ರತಿಭಟನೆ ಅಷ್ಟೇ ಮಾಡುತ್ತಿದ್ದೇವಾ? ಹಿಂದುಳಿದ ವರ್ಗಗಳ ಆಯೋಗವನ್ನು ಭೇಟಿಯಾಗಿದ್ದೇವೆ. ಜಯಪ್ರಕಾಶ್ ಹೆಗ್ಡೆ ಅವರು ನಮ್ಮ ಪರವಾಗಿ ವರದಿಯಲ್ಲಿ ಮೀಸಲಾತಿ ಬಗ್ಗೆ ವಿವರಿಸಿದ್ದಾರೆ. ಅವರಿಗೆ ಎಂಪಿ ಟಿಕೆಟ್ ಕೊಡಿಸುವ ಆಮೀಷವೊಡ್ಡಿ ಅವರನ್ನು ರಾಜೀನಾಮೆ ಕೊಡಿಸಲಾಗಿದೆ. ಈಗ ಮತ್ತೆ ಹಿಂದುಳಿದ ವರ್ಗಗಗಳ ಆಯೋಗದ ಹತ್ತಿರ ಹೋಗಿ ಎಂದರೆ ನಾವೇನು ಅಲ್ಲೇ ಹೋಗಿ ಕುಳಿತುಕೊಳ್ಳಬೇಕಾ” ಎಂದು ಪ್ರಶ್ನಿಸಿದರು.
ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿರುವ ಜನಪ್ರತಿನಿಧಿಗಳು ಪಕ್ಷಬೇಧವಿಲ್ಲದೇ ತಮ್ಮ ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳುವುದಕ್ಕೆ 2ಎ ಮೀಸಲಾತಿ ಹೋರಾಟ ಒಂದು ಅಸ್ತ್ರವಾಗಿದೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಯಡಿಯೂರಪ್ಪ ನಾಯಕತ್ವ ತಗ್ಗಿಸಿ ತಾವು ಮುಂದೆ ಬರಬೇಕು ಎಂಬುದು ಯತ್ನಾಳ್ ಬಯಕೆ. ಅದಕ್ಕೆ ಬೇಕಾದ ಒಳ ಸಹಾಯ ಕೂಡ ಯತ್ನಾಳ್‌ಗೆ ಸಿಕಿದ್ದರಿಂದಲೇ ಅಷ್ಟು ಬಹಿರಂಗವಾಗಿ ಯಡಿಯೂರಪ್ಪ ಕುಟುಂಬ ವಿರುದ್ಧ ಮಾತನಾಡುತ್ತಿದ್ದಾರೆ.
ಮೀಸಲಾತಿ ಹೋರಾಟದಲ್ಲಿ ಹೆಚ್ಚಾಗಿ ಗುರುತಿಸಿಕೊಂಡ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಈಗ ಹೋರಾಟದಿಂದ ಅಂತರ ಕಾಯ್ದುಕೊಂಡಿದ್ದಾರೆ. ಬೆಳಗಾವಿ ಹೋರಾಟ ಬಿಜೆಪಿ ಬೆಂಬಲಿತ ಎಂದು ಕಾಶಪ್ಪನವರ್ ಆರೋಪಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ವಿಜಯಾನಂದ ಕಾಶಪ್ಪನವರ್ ಗೆಲುವಿಗೆ ನೀರೆರೆದಿದ್ದು 2ಎ ಮೀಸಲಾತಿ ಹೋರಾಟ ಎಂಬುದು ತಿಳಿದ ಸಂಗತಿ. ಇನ್ನು ಬೆಳಗಾವಿ ಭಾಗದ ರಾಜಕಾರಣದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ರಾಜಕೀಯದಲ್ಲಿ ಉಳಿಸಿದ್ದೇ ಪಂಚಮಸಾಲಿ ಸಮುದಾಯದ ಬೆಂಬಲ ಎಂಬುದು ಅವರಿಗೂ ಗೊತ್ತಿದೆ. ಬಿಜೆಪಿ ಶಾಸಕ ಅರವಿಂದ ಬೆಲ್ಲದ ಪ್ರತಿಪಕ್ಷದಲ್ಲಿ ಇರುವುದರಿಂದ ಅವರಿಗೆ ಈಗ ಹೋರಾಟ ಅನಿವಾರ್ಯ. ವಿನಯ್ ಕುಲಕರ್ಣಿ ಮೊದಲಿನಷ್ಟು ಆಪ್ತವಾಗಿ ಮೋಸಲಾತಿ ಹೋರಾಟದೊಂದಿಗೆ ಗುರುತಿಸಿಕೊಳ್ಳುತ್ತಿಲ್ಲ. ಎಲ್ಲರ ಆಟದಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಗಾಳವಾಗಿದ್ದಾರಾ? ಪಂಚಮಸಾಲಿ ಸಮುದಾಯದ ಜನರ ಸಮಸ್ಯೆಗಳಿಗೆ ಮಾತ್ರ ಪರಿಹಾರ ಸಿಗುತ್ತಿಲ್ಲ ಎಂಬುದು ಸತ್ಯ.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.