ಮೇಲ್ವರ್ಗದ ಜಾತಿ ಸಮುದಾಯಗಳು 2ಎ ಮೀಸಲಾತಿಗಾಗಿ ಹೋರಾಟಕ್ಕಿಳಿದಿರುವುದು ಅಸಂವಿಧಾನಿಕ ಹಾಗೂ ಅಪ್ರಸ್ತುತವಾದುದು ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಅಹಿಂದ ಸಂಘಟನೆಗಳು, ಡಿ.18ರಂದು ಶಿವಮೊಗ್ಗ ನಗರದಲ್ಲಿ ಬೃಹತ್ ಪ್ರತಿಭಟನೆಗೆ ಸಜ್ಜಾಗಿವೆ.
ನಗರದಲ್ಲಿ ಗುರುವಾರ ಹಿಂದುಳಿದ ಜನ ಜಾಗೃತಿ ವೇದಿಕೆ ಆಯೋಜಿಸಿದ್ದ ಸಭೆಯಲ್ಲಿ ಪ್ರತಿಭಟನೆಯ ತೀರ್ಮಾನವನ್ನು ಕೈಗೊಂಡಿರುವ ಅಹಿಂದ ಸಂಘಟನೆಗಳ ಪ್ರಮುಖರು, 2ಎ ಮೀಸಲಾತಿ ಹೋರಾಟವನ್ನು “ಸಂವಿಧಾನ ವಿರೋಧಿ ಹೋರಾಟ” ಎಂದು ಕಿಡಿಕಾರಿದ್ದಾರೆ.
ಶತಶತಮಾನಗಳಿಂದ ಶೋಷಣೆಗೊಳಗಾಗಿ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಜಾತಿಗಳಿಗೆ ಸಂವಿಧಾನದಲ್ಲಿ ಉಲ್ಲೇಖಿಸಲಾದ ಮಾನದಂಡಗಳಡಿ ನಿಗಧಿಪಡಿಸುವ ಮೀಸಲಾತಿಯನ್ನು ಧಕ್ಕಿಸಿಕೊಳ್ಳಲು ಮೇಲ್ವರ್ಗಗಳು ಹವಣಿಸುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಖಂಡಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಹಿಂದುಳಿದ ಜನ ಜಾಗೃತಿ ವೇದಿಕೆ ಗೌರವ ಅಧ್ಯಕ್ಷ ಪ್ರೊ.ಹೆಚ್.ರಾಚಪ್ಪ, ಮೀಸಲಾತಿ ಸಂವಿಧಾನದ ಕೊಡುಗೆ. ಪ್ರಧಾನಮಂತ್ರಿ ಅಥವಾ ಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡಿದಾಕ್ಷಣ ಅದು ಮಂಜೂರಾಗುವುದಿಲ್ಲ. ಸಂವಿಧಾನದ ಮಾನದಂಡದಡಿ ಕಾನೂನಾತ್ಮಕವಾಗಿ ರಚಿಸಲ್ಪಡುವ ಹಿಂದುಳಿದ ವರ್ಗಗಳ ಆಯೋಗದ ದೀರ್ಘ ಅಧ್ಯಯನದ ನಂತರ ಸಲ್ಲಿಸಲ್ಪಡುವ ವರದಿ ಆಧಾರದ ಮೇಲೆ ಪರಿಗಣಿಸಬಹುದಾದ ಸುದೀರ್ಘ ಪ್ರಕ್ರಿಯೆ ಅದು ಎಂದು ವಿವರಿಸಿದರು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಪೋಕ್ಸೊ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ನ್ಯಾಯಾಂಗದ ನಿರಾಸಕ್ತಿ; ಸದನದ ಚರ್ಚೆ ಸ್ವಾಗತಾರ್ಹ
ಸಭೆಯಲ್ಲಿ ಹಿಂದುಳಿದ ಜನ ಜಾಗೃತಿ ವೇದಿಕೆ ಅಧ್ಯಕ್ಷ ತೀ.ನ. ಶ್ರೀನಿವಾಸ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ‘ಅಹಿಂದ’ ರಾಜ್ಯ ಜಂಟಿ ಸಂಚಾಲಕ ಮೊಹಮ್ಮದ್ ಸನಾವುಲ್ಲಾ, ಕಾಂತರಾಜ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಎನ್.ಪಿ. ಧರ್ಮರಾಜ್, ಸುರೇಶ್ ಬಾಬು, ಗೋಪಾಲಗೌಡ ಟ್ರಸ್ಟ್ ನ ಕಲ್ಲೂರು ಮೇಘರಾಜ್, ಪ್ರೊ.ಕಲ್ಲನ, ಜನತಾ ದಳ ಮುಖಂಡರಾದ ಎಸ್.ವಿ.ರಾಜಮ್ಮ, ಮುಸ್ಲಿಂ ಮುಖಂಡ ಅಫ್ರೀದಿ, ಕ್ರೈಸ್ತ ಸಮಾಜದ ಭಾಸ್ಕರ್ ಬಾಬು, ಸಿಂಪಿ ಸಮಾಜದ ರಘುನಾಥ್, ವಾಲ್ಮೀಕಿ ಸಮಾಜದ ರಾಜಣ್ಣ, ಸಂಚಾಲಕ ಆರ್.ಟಿ.ನಟರಾಜ್, ಸಂಘಟನಾ ಕಾರ್ಯದರ್ಶಿ ಚನ್ನವೀರಪ್ಪ ಗಾಮನಗಟ್ಟಿ ಇತರರಿದ್ದರು.