ನಗರ ಸಭೆಯ ಸದಸ್ಯರಿಗೆ, ಸಾರ್ವಜನಿಕರಿಗೆ ಸ್ಪಂದಿಸದೆ ಕಾರ್ಯ ನಿರ್ವಹಿಸುವ ಪೌರಾಯುಕ್ತರಿಂದ ನಗರದ ಅಭಿವೃದ್ಧಿ ಕುಂಠಿತಗೊಂಡಿದೆ. ನಗರದ ಆಡಳಿತದ ಹಿತದೃಷ್ಟಿಯಿಂದ ಪೌರಾಯುಕ್ತರನ್ನು ಬೇರೆಡೆಗೆ ವರ್ಗಾಯಿಸಬೇಕು ಎಂದು ಆಗ್ರಹಿಸಿ ಪೌರಾಯುಕ್ತರು, ಉಪಾಧ್ಯಕ್ಷರು, ಸಿಬ್ಬಂದಿಗಳಿಲ್ಲದೆ ಅಧ್ಯಕ್ಷರು, ಸದಸ್ಯರು ಸಾಮಾನ್ಯಸಭೆ ನಡೆಸಿ ನಿರ್ಣಯ ಕೈಗೊಂಡ ಘಟನೆ ದಾವಣಗೆರೆ ಜಿಲ್ಲೆ ಹರಿಹರ ನಗರಸಭೆಯಲ್ಲಿ ನಡೆದಿದೆ.
ಹರಿಹರ ನಗರಸಭೆಯ ಯಾವುದೇ ಅಧಿಕಾರಿಗಳು, ಸಿಬ್ಬಂದಿಗಳ ಗೈರು ಹಾಜರಿಯಲ್ಲಿ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಪೌರಾಯುಕ್ತರ ವರ್ಗಾವಣೆಗೆ ಸದಸ್ಯರಿಂದ ಒಮ್ಮತದ ನಿರ್ಣಯದೊಂದಿಗೆ ಸಭೆ ಮುಕ್ತಾಯಗೊಂಡಿದೆ.
ನಗರದ ನಗರಸಭಾ ಸಭಾಂಗಣದಲ್ಲಿ ಗುರುವಾರ ಮಧ್ಯಾಹ್ನ 3.00 ಗಂಟೆಯ ವೇಳೆಗೆ ನಗರ ಸಭೆಯ ಪೌರಾಯುಕ್ತರಾಗಲಿ, ಯಾವುದೇ ಅಧಿಕಾರಿ ಮತ್ತು ಸಿಬ್ಬಂದಿಗಳಾಗಲಿ ಹಾಜರಾತಿ ಇಲ್ಲದೆ ಆರಂಭವಾದ ಸಭೆಯು ಕೇವಲ ಒಂದೇ ಒಂದು ಅಜೆಂಡಾ ದೊಂದಿಗೆ ಮುಕ್ತಾಯಗೊಂಡಿತು. ವಿಷಯ ಸಂಖ್ಯೆ 96ರಲ್ಲಿ ಒಂದೇ ನಿರ್ಣಯವೊದನ್ನು ತೆಗೆದುಕೊಳ್ಳುವ ಮೂಲಕ ಸಭೆಯನ್ನು ಮುಕ್ತಾಯಗೊಳಿಸಲಾಗಿದೆ.
ಪೌರಾಯುಕ್ತ ಕೆ.ಸುಬ್ರಹ್ಮಣ್ಯ ಶ್ರೇಷ್ಠಿಯವರನ್ನು ಬೇರೆಡೆಗೆ ವರ್ಗಾವಣೆ ಗೊಳಿಸಬೇಕು ಎನ್ನುವ ಒಂದೇ ನಿರ್ಣಯದ ಪತ್ರವನ್ನು ವಿಷಯ ಸಂಖ್ಯೆ 96ರಲ್ಲಿ 21ಕ್ಕೂ ಹೆಚ್ಚು ಸದಸ್ಯರ ಸಹಿಯೊಂದಿಗೆ ಸಭೆಯ ಮುಂದಿರಿಸಿ ಅನುಮೋದನೆ ಕೋರಿದರು. ಹಿರಿಯ ಸದಸ್ಯ ಎ.ವಾಮನಮೂರ್ತಿ ಮತ್ತು ಬಿಜೆಪಿ ಸದಸ್ಯೆ ಅಶ್ವಿನಿ ಕೃಷ್ಣರವರು ಅನುಮೋದನೆ ನೀಡುವ ಮೂಲಕ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕಾರ ಮಾಡಲಾಯಿತು.
ಈ ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ಸದಸ್ಯರುಗಳು ಮಾತನಾಡಿ ” ಅಧ್ಯಕ್ಷರೂ ಸೇರಿದಂತೆ ಯಾವುದೇ ಸದಸ್ಯರುಗಳಿಗೆ ಪೌರಾಯುಕ್ತರು ಗೌರವ ನೀಡದೆ ತಮ್ಮದೇ ಶೈಲಿಯಲ್ಲಿ ಏಕ ಪಕ್ಷೀಯವಾಗಿ ಕರ್ತವ್ಯ ನಿರ್ವಹಿಸುತ್ತಾ ಬಂದಿದ್ದಾರೆ. ಸದಸ್ಯರ ಸಲಹೆಗಳಿಲ್ವದೇ ನಗರದ ಅಭಿವೃದ್ಧಿ ಕುಂಠಿತವಾಗಿ ತೊಂದರೆಯಾಗುತ್ತಿದ್ದು ಆದಷ್ಟು ಬೇಗನೆ ಇವರನ್ನು ಬೇರೆಡೆಗೆ ವರ್ಗಾಯಿಸುವಂತೆ ನಿರ್ಣಯ ತೆಗೆದು ಕೊಂಡಿರುವದಾಗಿ” ತಿಳಿಸಿದರು.
“ಮೂರು ತಿಂಗಳ ಹಿಂದೆಯಷ್ಟೇ ಹರಿಹರ ಪೌರಾಯುಕ್ತ ಹುದ್ದೆಗೆ ಬಂದಿರುವ ಸುಬ್ರಹ್ಮಣ್ಯ ಶ್ರೇಷ್ಟಿಯವರು ನಗರಸಭೆ ಸದಸ್ಯರ, ಅಧ್ಯಕ್ಷರ ಸಲಹೆ, ಸೂಚನೆ ಗಳನ್ನು ಸ್ವೀಕರಿಸದೆ ತಮ್ಮದೇ ಆದ ದಾಟಿಯಲ್ಲಿ ಆಡಳಿತ ನಡೆಸುತ್ತಿದ್ದಾರೆ. ಕೆಲವರಿಗಷ್ಟೇ ಮಣೆಯಾಕುತ್ತಿದ್ದಾರೆ. ನಾವು ಸ್ಥಳೀಯ ಜನರಿಗೆ ಉತ್ತರದಾಯಿಗಳಾಗಿದ್ದು, ಜನರ ಪ್ರಶ್ನೆಗಳಿಗೆ ಉತ್ತರಿಸಲು ಆಗುತ್ತಿಲ್ಲ. ಇದು ನಗರದ ಅಭಿವೃದ್ಧಿಗೆ ಕುಂಠಿತ ವಾಗುತ್ತಿದೆ. ಇದರಿಂದ ಎಲ್ಲಾ ಸದಸ್ಯರುಗಳಿಗೆ ಬೆಲೆ ಇಲ್ಲದಂತಾಗಿದೆ” ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಧ್ಯಕ್ಷರು, ಸದಸ್ಯರು ಮತ್ತು ಪೌರಾಯುಕ್ತರ ಶೀತಲ ಸಮರ ಕಳೆದ ಎರಡು ತಿಂಗಳಿಂದ ನೆಡೆಯುತ್ತಿದ್ದು, ಈಗ ವರ್ಗಾವಣೆ ನಿರ್ಣಯ ಕೈಗೊಳ್ಳುವ ಹಂತಕ್ಕೆ ತಲುಪಿದೆ. ಇತ್ತೀಚೆಗೆ ಉದ್ಘಾಟನೆ ಕಾರ್ಯಕ್ರಮವೊಂದಕ್ಕೆ ಶಾಸಕರನ್ನು ಆಹ್ವಾನಿಸದೆ ಶಿಷ್ಟಾಚಾರ ಪಾಲಿಸಿಲ್ಲ ಎಂದು ಶಾಸಕ ಹರೀಶ್ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿತ್ತು.
ಇದನ್ನು ಓದಿದ್ದೀರಾ? ವಿವಿಧ ಟ್ರಸ್ಟ್, ಪ್ರತಿಷ್ಠಾನಗಳಿಗೆ ಅಧ್ಯಕ್ಷ-ಸದಸ್ಯರ ನೇಮಿಸಿ ರಾಜ್ಯ ಸರ್ಕಾರ ಆದೇಶ
ಸಭೆಯ ಬಗ್ಗೆ ಪ್ರತಿಕ್ರಿಯಿಸಿರುವ ಪೌರಾಯುಕ್ತ ಸುಬ್ರಹ್ಮಣ್ಯ ಶ್ರೇಷ್ಠೀ “ಮುಖ್ಯವಾಗಿ ಸಭೆಯ ಬಗ್ಗೆ ಶಾಸಕರು ಮತ್ತು ಸಂಸದರ ಗಮನಕ್ಕೆ ತಂದು ಸಭೆ ನಡೆಸಬೇಕಾಗುತ್ತದೆ. ಆದ್ದರಿಂದ ಇದು ಸಭೆಯಲ್ಲಿ ಕೇವಲ ಸದಸ್ಯರ ಚರ್ಚೆ ಮಾತ್ರ. ನಗರಸಭೆ ಸದಸ್ಯರೆಲ್ಲರೂ ಕೇವಲ ತಮ್ಮ ತಮ್ಮ ವೈಯಕ್ತಿಕ ವಿಚಾರಗಳಿಗೆ ಚರ್ಚಿಸಲು ಸಭಾಂಗಣದಲ್ಲಿ ಸೇರಿದ್ದಾರೆ. ಸಾಮಾನ್ಯ ಸಭೆ ನಡೆಯಬೇಕೆಂದರೆ ಪೌರಾಯುಕ್ತರಿಂದ ಎಲ್ಲಾ ಸದಸ್ಯರುಗಳಿಗೆ ಸಭೆಯ ದಿನಾಂಕಕ್ಕೂ ಏಳು ದಿನ ಮುಂಚಿತವಾಗಿ ನೋಟೀಸ್ ಜಾರಿ ಮಾಡಬೇಕಾಗುತ್ತದೆ. ಈ ನಡಾವಳಿಗಳು ನಡೆದಿಲ್ಲ”ಎಂದು ತಿಳಿಸಿದರು.
