ಬೆಂಗಳೂರಿನ ಕಾಲೇಜೊಂದರ ಪ್ರಾಂಶುಪಾಲರೊಬ್ಬರು ಸೈಬರ್ ವಂಚಕರ ‘ಡಿಜಿಟನ್ ಬಂಧನ’ಕ್ಕೆ (ಡಿಜಿಟಲ್ ಅರೆಸ್ಟ್) ಒಳಗಾಗಿ, 24 ಲಕ್ಷ ರೂ. ಕಳೆದುಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ನಗರದ ವೈಟ್‌ಫೀಲ್ಡ್‌ನಲ್ಲಿರುವ ಕಾಲೇಜಿನ ಪ್ರಾಂಶುಪಾಲರನ್ನು ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಮತ್ತು ಕೇಂದ್ರೀಯ ತನಿಖಾ ದಳದ (ಸಿಬಿಐ) ಹೆಸರಿನಲ್ಲಿ ವಂಚಕರು ಡಿಜಿಟಲ್ ಬಂಧನಕ್ಕೆ ಒಳಪಡಿಸಿದ್ದಾರೆ. ಮಾನವ ಕಳ್ಳಸಾಗಣೆ ಮತ್ತು ಅಕ್ರಮ ಹಣ ವರ್ಗಾವಣೆ ಸೇರಿದಂತೆ ಕ್ರಿಮಿನಲ್ ಮೊಕದ್ದಮೆಗಳನ್ನು ಹಾಕುವುದಾಗಿ ಪ್ರಾಂಶುಪಾಲರನ್ನು ಬೆದರಿಸಿ 24 ಲಕ್ಷ ರೂ.ಗಳನ್ನು ಸುಲಿಗೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಸೈಬರ್ ವಂಚನೆಗೆ ಒಳಗಾದ ಪ್ರಾಂಶುಪಾಲೆ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ. “ತಮಗೆ ಕಳೆದ ತಿಂಗಳು ಭಾರತೀಯ ಟೆಲಿಕಾಂ ಅಧಿಕಾರಗಳಂತೆ ಕರೆ ಮಾಡಿ ಮಾತನಾಡಿದ್ದ ವ್ಯಕ್ತಿಯೊಬ್ಬ ತಾನು ಟ್ರಾಯ್ ಸಂಸ್ಥೆಯ ಅಧಿಕಾರಿಯೆಂದು ಹೇಳಿಕೊಂಡಿದ್ದ. ಮಾನವ ಕಳ್ಳಸಾಗಣೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣ ಸೇರಿದಂತೆ ವಿವಿಧ ಅಪರಾಧ ಕೃತ್ಯಗಳಲ್ಲಿ ನನ್ನ ಮೊಬೈಲ್ ಸಂಖ್ಯೆಯೊಂದಿಗೆ ಲಿಂಕ್ ಇರುವುದಾಗಿ ಬೆದರಿಕೆ ಹಾಕಿದ್ದ” ಎಂದು ದೂರಿನಲ್ಲಿ ವಿವರಿಸಿದ್ದಾರೆ.
“ಸಿಂಗಾಪುರದಲ್ಲಿ ಭಾರತದ ಸುಮಾರು 180 ಮಕ್ಕಳು ಸಿಕ್ಕಿಹಾಕಿಕೊಂಡಿದ್ದಾರೆ. ಅವರನ್ನು ಮಾನವ ಕಳ್ಳಸಾಗಣೆ ಮಾಡಲಾಗಿದೆ. ಆ ಮಕ್ಕಳ ಪೋಷಕರು ಪೊಲೀಸರಿಗೆ ದೂರುಗಳನ್ನು ದಾಖಲಿಸಿದ್ದಾರೆ. ಆ ಪ್ರಕರಣಗಳಲ್ಲಿ ನನ್ನ ಮೊಬೈಲ್ ಸಂಖ್ಯೆ ಲಿಂಕ್ ಆಗಿದ್ದು, ನನ್ನ ವಿರುದ್ಧ ಅನೇಕ ಪ್ರಕರಣಗಳು ದಾಖಲಾಗಿವೆ. ಪ್ರಕರಣಕ್ಕೆ ತಳುಕುಹಾಕಿಕೊಂಡಿರುವ ನನ್ನ ಹೆಸರಿನ 16 ಪಾಸ್‌ಪೋರ್ಟ್‌ಗಳು, 58 ಡೆಬಿಟ್ ಕಾರ್ಡ್‌ಗಳು ಹಾಗೂ 140 ಗ್ರಾಂ ಎಡಿಎಂಎ ಔಷಧ ರವಾನೆಯಾಗಿರುವ ಕೊರಿಯರ್ ದಾಖಲೆಗಳಿರುವುದಾಗಿ ಆತ ಹೆದರಿಸಿದ್ದ” ಎಂದು ಪ್ರಾಂಶುಪಾಲೆ ಆರೋಪಿಸಿದ್ದಾರೆ.
“ಬಳಿಕ, ಮತ್ತೆ ಕರೆ ಮಾಡಿದ ವಂಚಕರು, ನನ್ನ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಗಿದೆ ಎಂದು ಹೇಳಿದರು. ಅದಾದ ಕೆಲವೇ ನಿಮಿಷಗಳಲ್ಲಿ, ಸಿಬಿಐ ಅಧಿಕಾರಿಯೆಂದು ಹೇಳಿಕೊಂಡು ಮತ್ತೊಬ್ಬ ವ್ಯಕ್ತಿವಾಟ್ಸ್‌ಆ್ಯಪ್ ಕರೆ ಮಾಡಿದರು. ನನ್ನ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸುವುದಾಗಿ ಹೇಳಿದರು. ನಾನು ವಿರೋಧಿಸಿದಾಗ, ನಾನು ಪ್ರಕರಣದ ಆರೋಪಿಯಲ್ಲ ಎಂಬುದನ್ನು ಪರಿಶೀಲಿಸಲು ತಾವು ಹೇಳುವ ಎರಡು ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸುವಂತೆ ಹೇಳಿದರು. ಅದರಂತೆ, ಎರಡು ವಿಭಿನ್ನ ಬ್ಯಾಂಕ್ ಖಾತೆಗಳಿಗೆ 24 ಲಕ್ಷ ರೂ.ಗಳನ್ನು ವರ್ಗಾಯಿಸಿದೆ. ಹಣ ವರ್ಗಾಯಿಸಿದ ಬಳಿಕ ಮರಳು ಕರೆ ಮಾಡಿದೆ. ಆದರೆ, ಕರೆ ಸ್ವೀಕರಿಸಲಿಲ್ಲ. ಆಗ, ನಾನು ಮೋಸ ಹೋಗಿದ್ದೇನೆ ಎಂಬುದು ಅರಿವಾಯಿತು” ಎಂದು ಪ್ರಾಂಶುಪಾಲೆ ಹೇಳಿಕೊಂಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಕ್ರೈಮ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. “ತನಿಖೆಯ ಸಂದರ್ಭದಲ್ಲಿ,ಪ್ರಾಂಶುಪಾಲೆ ವರ್ಗಾಯಿಸಿದ್ದ ಹಣವನ್ನು ಇತರ ಒಂಬತ್ತು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ. ಅದರಲ್ಲಿ ಹೆಚ್ಚಿನ ಹಣವನ್ನು ವಿತ್‌ಡ್ರಾ ಮಾಡಲಾಗಿದೆ ಎಂಬುದು ಕಂಡುಬಂದಿದೆ. ನಾವು ಅಪರಾಧಿಗಳನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ” ಎಂದು ತನಿಖಾಧಿಕಾರಿಯೊಬ್ಬರು ಹೇಳಿದ್ದಾರೆ.