ಅಂಕಿಅಂಶಗಳ ಹೊರತಾಗಿಯೂ ನಿರುದ್ಯೋಗ ಬಿಕ್ಕಟ್ಟು ಲಕ್ಷಾಂತರ ಜನರ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುತ್ತಿದೆ. ಉದ್ಯೋಗವು ಕೇವಲ ಆದಾಯದ ಮೂಲವಲ್ಲ. ಅದು, ಸಾಮಾಜಿಕ ಗುರುತು ಮತ್ತು ಜೀವನದ ಗುಣಮಟ್ಟದೊಂದಿಗೂ ಸಂಬಂಧ ಹೊಂದಿದೆ
ಭಾರತ ಎದುರಿಸುತ್ತಿರುವ ಅತ್ಯಂತ ಸಂಕೀರ್ಣ ಸಮಸ್ಯೆಗಳಲ್ಲಿ ನಿರುದ್ಯೋಗವೂ ಒಂದು. ಉದ್ಯೋಗ ಬಿಕ್ಕಟ್ಟು ಸಮಾಜ ಮತ್ತು ಆರ್ಥಿಕತೆ ಮೇಲೆ ಭಾರೀ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ. ಜನರ ಬದುಕಿನ ಶೈಲಿ ಮತ್ತು ಅಗತ್ಯತೆಗಳನ್ನು ನೀಗಿಸಲಾಗದ ದುಸ್ಥಿತಿಗೆ ದೂಡುತ್ತದೆ. ಪರಿಣಾಮವಾಗಿ, ಯುವಜನರಲ್ಲಿ ಒತ್ತಡ, ಖಿನ್ನತೆ, ಅಸಹಾಯಕತೆ ಹೆಚ್ಚುತ್ತಿದೆ. ಆತ್ಮಹತ್ಯೆಯ ಹಾದಿ ಹಿಡಿಯುವಂತೆ ಮಾಡುತ್ತಿದೆ.
ನಿರುದ್ಯೋಗ ಸಮಸ್ಯೆ ಕೇವಲ ಉದ್ಯೋಗ ಕೊರತೆಗೆ ಸೀಮಿತವಾಗಿಲ್ಲ. ಬದಲಾಗಿ, ಉದ್ಯೋಗದ ಗುಣಮಟ್ಟ, ಉದ್ಯೋಗ ಸ್ಥಿರತೆ ಹಾಗೂ ಅಸಮಾನ ಆದಾಯದ ವಿತರಣೆಯನ್ನೂ ಒಳಗೊಂಡಿದೆ. ಸ್ನಾತಕ ಮತ್ತು ಪಿಎಚ್.ಡಿ ಪದವಿಯಂತಹ ಉನ್ನತ ಶಿಕ್ಷಣ ಪಡೆದ ವ್ಯಕ್ತಿಗಳು ಗುಮಾಸ್ತರು, ಅಟೆಂಡರ್ ಮತ್ತು ನೈರ್ಮಲ್ಯ ಕಾರ್ಮಿಕರಂತಹ ಹುದ್ದೆಗಳಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಇದೆಲ್ಲವೂ, ನಮ್ಮ ಉದ್ಯೋಗ ವ್ಯವಸ್ಥೆಯಲ್ಲಿನ ಮೂಲಭೂತ ನ್ಯೂನತೆಗಳನ್ನು ಸ್ಪಷ್ಟವಾಗಿ ಬಿಂಬಿಸುತ್ತವೆ.
ಪ್ರಧಾನಿ ಮೋದಿ ಅವರು 2014ರ ಲೋಕಸಭಾ ಚುನಾವಣೆಯ ಸಮಯದಲ್ಲಿ ವರ್ಷಕ್ಕೆ 2 ಕೋಟಿ ಉದ್ಯೋಗಗಳನ್ನು ಸೃಷ್ಟಿಸುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, 2019ರ ವೇಳೆಗೆ ಪಕೋಡ ಮಾರುವುದೂ ಕೂಡ ಉದ್ಯೋಗವೇ ಎಂದು ಹೇಳಿದ್ದರು. 2024ರ ಫೆಬ್ರವರಿಯಲ್ಲಿ ನಡೆದ ಸಂಸತ್ ಅಧಿವೇಶನದಲ್ಲಿ ಕಳೆದ 10 ವರ್ಷಗಳಲ್ಲಿ ಕೇವಲ 1.5 ಕೋಟಿ ಉದ್ಯೋಗ ಸೃಷ್ಟಿಸಿರುವುದಾಗಿ ಮೋದಿ ಸರ್ಕಾರವೇ ಹೇಳಿಕೊಂಡಿತ್ತು. ಇದು, ಬಿಜೆಪಿ ಸರ್ಕಾರವು ನಿರುದ್ಯೋಗ ಸಮಸ್ಯೆ ವಿಚಾರದಲ್ಲಿ ಗಂಭೀರವಾಗಿಲ್ಲ ಎಂಬುದನ್ನು ಸೂಚಿಸುತ್ತದೆ.
ಸರ್ಕಾರದ ಅಂಕಿಅಂಶಗಳ ಪ್ರಕಾರ, ಭಾರತದ ದುಡಿಯುವ ವಯಸ್ಸಿನ ಜನಸಂಖ್ಯೆಯಲ್ಲಿ ಕೇವಲ 3% ಜನರು ಮಾತ್ರವೇ ನಿರುದ್ಯೋಗಿಗಳಾಗಿದ್ದಾರೆ. ಮೇಲ್ನೋಟಕ್ಕೆ ಇದೊಂದು ಆಶಾವಾದಿ ಅಂಕಿಅಂಶವಾಗಿ ಕಾಣುತ್ತದೆ. ವಾಸ್ತವವಾಗಿ, ನಿರುದ್ಯೋಗಕ್ಕೂ ಸರ್ಕಾರದ ಅಂಕಿಅಂಶಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಇನ್‌ಸ್ಟಿಟ್ಯೂಟ್ ಫಾರ್ ಹ್ಯೂಮನ್ ಡೆವಲಪ್‌ಮೆಂಟ್ ಮತ್ತು ಇಂಟರ್ ನ್ಯಾಷನಲ್ ಲೇಬರ್ ಆರ್ಗನೈಸೇಶನ್ (ಐಎಲ್‌ಒ) ವರದಿಯ ಪ್ರಕಾರ, 2024ರಲ್ಲಿ ಭಾರತದ ಯುವಜನರಲ್ಲಿ ಕೇವಲ 37% ಮಾತ್ರವೇ ದುಡಿಮೆಯಲ್ಲಿ ತೊಡಗಿದ್ದಾರೆ. ಉಳಿದವರು ನಿರುದ್ಯೋಗಿಗಳಾಗಿದ್ದಾರೆ. ಭಾರತದ ನಿರುದ್ಯೋಗ ದರವು 9.7%ಗೆ ಏರಿಕೆಯಾಗಿದೆ.
ನಿರುದ್ಯೋಗವನ್ನು ಅಳೆಯವಲ್ಲಿ ಭಾರತ ಅನುಸರಿಸುವ ಪ್ರಮುಖ 2 ಮಾನದಂಡಗಳಿವೆ. ಆ ಮಾನದಂಡಗಳಲ್ಲೇ ಸಮಸ್ಯೆ ಇದೆ. ಮೊದಲನೆಯದು, ‘ಸಾಮಾನ್ಯ ಸ್ಥಿತಿ’ -ಭಾರತದಲ್ಲಿ ಒಬ್ಬ ವ್ಯಕ್ತಿ ವರ್ಷದಲ್ಲಿ 30 ದಿನಗಳಿಗಿಂತ ಹೆಚ್ಚು ದಿನ ಕೆಲಸ ಮಾಡಿದ್ದರೆ ಅವರನ್ನು ಉದ್ಯೋಗಿ ಎಂದು ಪರಿಗಣಿಸಲಾಗುತ್ತದೆ. ಎರಡನೆಯದು, ‘ಸಾಪ್ತಾಹಿಕ ಸ್ಥಿತಿ’ –ಯಾವುದೇ ವ್ಯಕ್ತಿ ಒಂದು ವಾರದಲ್ಲಿ ಒಂದು ಗಂಟೆಯಾದರೂ ಕೆಲಸ ಮಾಡಿದ್ದರೆ ಅವರನ್ನು ನಿರುದ್ಯೋಗ ಪಟ್ಟಿಯಿಂದ ಹೊರಗಿಡಲಾಗುತ್ತದೆ. ಈ ಮಾನದಂಡಗಳು ನಿಜವಾದ ನಿರುದ್ಯೋಗ ದರವನ್ನು ಅಳೆಯುವುದಕ್ಕಿಂತ ನಿರುದ್ಯೋಗಿಗಳನ್ನೂ ಉದ್ಯೋಗಿಗಳೆಂದು ಹೆಸರಿಸುತ್ತವೆ. ಅಂಕಿಅಂಶಗಳನ್ನು ನೀಡುತ್ತವೆ. ಇದೇ ಅಂಕಿಅಂಶ ಇಟ್ಟುಕೊಂಡು ಕೇಂದ್ರ ಸರ್ಕಾರವು ನಿರುದ್ಯೋಗವು ಕೇವಲ 3% ಇದೆ ಎಂದು ಹೇಳಿಕೊಳ್ಳುತ್ತಿದೆ.
ಭಾರತಕ್ಕೆ ಹೋಲಿಸಿದರೆ, ನಿರುದ್ಯೋಗವನ್ನು ಲೆಕ್ಕಹಾಕಲು ಕೆಲವು ದೇಶಗಳು ವಿಭಿನ್ನ ಮತ್ತು ಕಟ್ಟುನಿಟ್ಟಾದ ಮಾನದಂಡಗಳನ್ನು ಹೊಂದಿವೆ. ಅಮೆರಿಕದಲ್ಲಿ, ಓರ್ವ ವ್ಯಕ್ತಿ ಕಳೆದ ನಾಲ್ಕು ವಾರಗಳಲ್ಲಿ ಸಕ್ರಿಯವಾಗಿ ಕೆಲಸ ಹುಡುಕುತ್ತಿದ್ದರೆ, ಅವರು ಕೆಲಸ ಮಾಡಲು ಲಭ್ಯವಿದ್ದೂ ಕೆಲಸ ಪಡೆಯಲಾಗದಿದ್ದರೆ ಅವರನ್ನು ನಿರುದ್ಯೋಗಿ ಎಂದು ಪರಿಗಣಿಸಲಾಗುತ್ತದೆ. ಅದೇ ರೀತಿ, ಇಂಟರ್‌ನ್ಯಾಷನಲ್ ಲೇಬರ್ ಆರ್ಗನೈಸೇಶನ್ ಕೂಡ 15-74 ವರ್ಷದವರು ಸಕ್ರಿಯವಾಗಿ ಕೆಲಸ ಹುಡುಕುತ್ತಿದ್ದರೆ, ಅವರು ಎರಡು ವಾರಗಳಲ್ಲಿ ಕೆಲಸ ಪಡೆಯಲು ಸಾಧ್ಯವಾಗದಿದ್ದರೆ ಅವರನ್ನು ನಿರುದ್ಯೋಗಿಗಳು ಎಂದು ಪರಿಗಣಿಸುತ್ತದೆ.
ಗಮನಾರ್ಹ ಸಂಗತಿ ಎಂದರೆ, ಶಿಕ್ಷಿತರಿಗಿಂತ ಅಶಿಕ್ಷಿತರು ಹೆಚ್ಚು ಉದ್ಯೋಗದಲ್ಲಿದ್ದಾರೆ. ಪೀರಿಯಾಡಿಕ್ ಲೇಬರ್ ಫೋರ್ಸ್ ಸರ್ವೇ (PLFS) 2023-24ರ ಪ್ರಕಾರ, 59.6% ಅಶಿಕ್ಷಿತ ವ್ಯಕ್ತಿಗಳು ಉದ್ಯೋಗದಲ್ಲಿದ್ದರೆ, ಪದವೀಧರರಲ್ಲಿ 57.5% ಮಾತ್ರ ಉದ್ಯೋಗದಲ್ಲಿದ್ದಾರೆ. ಭಾರತದ ಉದ್ಯೋಗ ವರದಿ-2024ರ ಪ್ರಕಾರ, ಕಡಿಮೆ-ಶಿಕ್ಷಿತ ಯುವಜನರಲ್ಲಿ ನಿರುದ್ಯೋಗವು ಕೇವಲ 3.2% ಇದ್ದರೆ, ಹೆಚ್ಚು ವಿದ್ಯಾವಂತ ವ್ಯಕ್ತಿಗಳಲ್ಲಿ 28.7% ನಿರುದ್ಯೋಗ ದರವಿದೆ.
ಈ ವಿರೋಧಾಭಾಸವು, ನಮ್ಮ ಶಿಕ್ಷಣ ವ್ಯವಸ್ಥೆಯು ಉದ್ಯೋಗ-ಆಧಾರಿತವಾಗಿದೆಯೇ? ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರು ಮಾರುಕಟ್ಟೆ-ಸಂಬಂಧಿತ ಕೌಶಲ್ಯಗಳನ್ನು ಹೊಂದಿದ್ದಾರೆಯೇ? ಶಿಕ್ಷಣವು ಪದವಿ ಪಡೆಯಲು ಸೀಮಿತವಾಗಿದೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಇದಕ್ಕೆ ಸರ್ಕಾರಗಳಲ್ಲಿ ಉತ್ತರವಿಲ್ಲ. ಬದಲಾಗಿ, ಕೌಶಲ್ಯಾಭಿವೃದ್ಧಿ ಎಂಬ ಹೆಸರಿನಲ್ಲಿ ಯುವಜನರ ಮೇಲೆಯೇ ‘ನಿಮಗೆ ಉದ್ಯೋಗ ಪಡೆಯುವ ಅರ್ಹತೆ ಇಲ್ಲ’ ಎಂಬ ಗೂಬೆ ಕೂರಿಸಲಾಗುತ್ತಿದೆ.
ಅಂಕಿಅಂಶಗಳ ಹೊರತಾಗಿಯೂ ನಿರುದ್ಯೋಗ ಬಿಕ್ಕಟ್ಟು ಲಕ್ಷಾಂತರ ಜನರ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುತ್ತಿದೆ. ಉದ್ಯೋಗವು ಕೇವಲ ಆದಾಯದ ಮೂಲವಲ್ಲ. ಅದು, ಸಾಮಾಜಿಕ ಗುರುತು ಮತ್ತು ಜೀವನದ ಗುಣಮಟ್ಟದೊಂದಿಗೂ ಸಂಬಂಧ ಹೊಂದಿದೆ. ಆದಾಯ ಅಸಮಾನತೆಯು ಜನರ ಜೀವನ ಶೈಲಿಯ ಮೇಲೆ ಪರಿಣಾಮ ಬೀರುತ್ತಿದೆ.
ಭಾರತದ ಸುಮಾರು 78% ಕಾರ್ಮಿಕರು ತಿಂಗಳಿಗೆ 14,000 ರೂ.ಗಿಂತ ಕಡಿಮೆ ವೇತನ ಪಡೆಯುತ್ತಿದ್ದಾರೆ. ಉನ್ನತ ಶಿಕ್ಷಣ ಆಧಾರಿತ ಉದ್ಯೋಗಿಗಳು ಸರಾಸರಿ ಮಾಸಿಕ 20,000 ರೂ. ಗಳಿಸುತ್ತಿದ್ದಾರೆ. ಆದರೆ, ಸ್ವಯಂ ಉದ್ಯೋಗಿಗಳಲ್ಲಿ ಸರಾಸರಿ ಮಾಸಿಕ ಆದಾಯವು ಕೂಲಿಗಾಗಿ ದುಡಿಯುವ ಕಾರ್ಮಿಕರಿಗಿಂತ ಕಡಿಮೆ ಇದೆ. ಅವರ ಆದಾಯವು ಕೇವಲ ಸರಾಸರಿ 7,423 ರೂ. ಇದೆ. ಈ ಅಸಮಾನತೆಯು ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಅದು ರಾಷ್ಟ್ರದ ಆರ್ಥಿಕ ಪ್ರಗತಿಗೂ ಅಡ್ಡಿಯಾಗುತ್ತದೆ.
ಈ ವರದಿ ಓದಿದ್ದೀರಾ?: ಬಾಣಂತಿಯರ ಸಾವಿನ ಹೊಣೆಯಲ್ಲ, ಮುಂದೆ ಹೀಗಾಗದಂತೆ ‘ವ್ಯವಸ್ಥೆ’ಯಲ್ಲಿ ಬದಲಾವಣೆ ಬೇಕು
ನಿರುದ್ಯೋಗ ಬಿಕ್ಕಟ್ಟು, ಆದಾಯ ಅಸಮಾನತೆ ಹಾಗೂ ಆರ್ಥಿಕ ಪ್ರಗತಿಯಲ್ಲಿನ ಹಿಂದುಳಿಯುವಿಕೆಯನ್ನು ತಡೆಯಲು ಅನೇಕ ತ್ವರಿತ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಮೂಲಭೂತವಾಗಿ, ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಬೇಕಿದೆ. ವೃತ್ತಿಪರ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿಗೆ ಶೈಕ್ಷಣಿಕ ಕ್ಷೇತ್ರವನ್ನು ಸಜ್ಜುಗೊಳಿಸಬೇಕಿದೆ. ಅದಕ್ಕೆ ತಕ್ಕಂತೆ ಪಠ್ಯಕ್ರಮವನ್ನು ವಿನ್ಯಾಸಗೊಳಿಸುವ ಅಗತ್ಯವಿದೆ. ಯುವಜನರು ತಾಂತ್ರಿಕ ಮತ್ತು ಡಿಜಿಟಲ್ ಕೌಶಲ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುವಂತೆ ಮಾಡಬೇಕು.
ಸ್ವಯಂ ಉದ್ಯೋಗಕ್ಕೆ ಸರ್ಕಾರಗಳು ಪ್ರೋತ್ಸಾಹ ನೀಡಬೇಕು. ಅದಕ್ಕಾಗಿ ಸಾಲ, ತರಬೇತಿಗಳನ್ನು ನೀಡಬೇಕು. ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಯೋಜನೆಗಳನ್ನು ಒದಗಿಸಬೇಕು ಮತ್ತು ಕನಿಷ್ಠ ವೇತನವನ್ನು ಖಾತ್ರಿಪಡಿಸಬೇಕು. ಉದ್ಯೋಗಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸಲು, ವಿಶೇಷ ಉದ್ಯೋಗ ಯೋಜನೆಗಳನ್ನು ಜಾರಿಗೊಳಿಸಬೇಕು. ಶಿಶುಪಾಲನಾ ಸೌಲಭ್ಯಗಳು ಮತ್ತು ಹೊಂದಿಕೊಳ್ಳುವ ಕೆಲಸದ ಸಮಯ ಲಭ್ಯವಾಗುವಂತೆ ಮಾಡಬೇಕು. ಉದ್ಯೋಗಾವಕಾಶಗಳನ್ನು ಹೆಚ್ಚಿಸಬೇಕು.
ಇಂತಹ ಕ್ರಮಗಳು ತುರ್ತಾಗಿ ಜಾರಿಯಾಗಲು ಸಾಧ್ಯವಾದರೆ, ಪ್ರಾಮಾಣಿಕ ಮತ್ತು ನಿರಂತರ ಪ್ರಯತ್ನಗಳು ನಡೆದರೆ, ನಿರುದ್ಯೋಗ ದರವನ್ನು ತಗ್ಗಿಸಲು ಮತ್ತು ಹೆಚ್ಚಿನ ಯುವಜನರ ಮಾನವ ಶಕ್ತಿಯನ್ನು ಉಪಯೋಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಜನರ ಜೀವನ ಮಟ್ಟವೂ ಸುಧಾರಿಸುತ್ತದೆ. ಭಾರತದ ಆರ್ಥಿಕ ಪ್ರಗತಿಯತ್ತ ದಾಪುಗಾಲಿಡುತ್ತದೆ. ಭಾರತವು ಬಲಿಷ್ಠ ಮತ್ತು ಸ್ವಾವಲಂಬಿ ರಾಷ್ಟ್ರವಾಗಿ ಹೊರಹೊಮ್ಮಲು ದಾರಿ ಮಾಡಿಕೊಟ್ಟಂತಾಗುತ್ತದೆ.