ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಜಿಲ್ಲೆಯ ಎಲ್ಲಾ ಶಾಸಕರ ಮನೆಯ ಮುಂದೆ ಮಾದಿಗ ಮತ್ತು ಮಾದಿಗ ಉಪ ಜಾತಿಗಳ ಸಂಘಟನೆಗಳ ಒಕ್ಕೂಟ ವತಿಯಿಂದ ತಮಟೆ ಚಳುವಳಿ ನಡೆಸಿದರು.
ನಗರದ ಅಂಬೇಡ್ಕರ್ ವೃತ್ತದಿಂದ ಆರಂಭವಾದ ತಮಟೆ ಚಳುವಳಿ ಬೈಕ್ ಮೂಲಕ ಸಚಿವ ಎನ್.ಎಸ್. ಬೋಸರಾಜು , ನಗರ ಶಾಸಕ ಶಿವರಾಜ್ ಪಾಟೀಲ್, ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಹಾಗೂ ವಿಧಾನ ಪರಿಷತ್ ಸದಸ್ಯ ಎ. ವಸಂತಕುಮಾರ ಮನೆಯ ಮುಂದೆ ತಮಟೆ ಚಳುವಳಿ ನಡೆಸಿ ಬಳಿಕ ಮನವಿ ಸಲ್ಲಿಸಿದರು.
ಆ.1 ರಂದು ಸುಪ್ರೀಂ ಕೋರ್ಟ್ ಒಳಮೀಸಲಾತಿಯನ್ನು ಜಾರಿ ಮಾಡುವ ಅಧಿಕಾರವನ್ನು ರಾಜ್ಯಗಳಿಗೆ ಕೊಡುವ ಐತಿಹಾಸಿಕ ತೀರ್ಪು ಪ್ರಕಟಿಸಿ ನಾಲ್ಕು ತಿಂಗಳಾದರೂ ರಾಜ್ಯ ಸರ್ಕಾರ ಅಮೆಗತಿಯಲ್ಲಿ ಸಾಗಿದೆ. ಕಾಟಾಚಾರಕ್ಕೆ ನ್ಯಾಯ ಮೂರ್ತಿ ನಾಗಮೋಹನ್ ದಾಸ್ ಆಯೋಗ ರಚಿಸಿದ್ದು, ಬಿಟ್ಟರೆ ಬೇರೆ ಏನು ಮಾಡಿಲ್ಲ ಎಂದು ಆರೋಪಿಸಿದರು.
ಎರಡು ತಿಂಗಳಲ್ಲಿ ಆಯೋಗ ವರದಿ ಕೊಡುತ್ತದೆ ಎಂದು ಸರ್ಕಾರ ಹೇಳಿತ್ತು. ಆದರೆ 45 ದಿನವಾದರೂ ಆಯೋಗ ಕೆಲಸ ಆರಂಭಿಸಿಲ್ಲ, ಆಯೋಗಕ್ಕೆ ಬೇಕಾದ ಕಚೇರಿ, ಸಿಬ್ಬಂದಿ, ಹಣಕಾಸಿನ ನೆರವು ಕೂಡ ಕೊಡದೆ ಕಾಲಹರಣ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
2011ರಲ್ಲಿ ಜನಗಣತಿಯ ಅಂಕಿ-ಅಂಶಗಳ ವರ್ಗೀಕರಣ ಮಾಡಿದರೂ ಕೂಡ ಈಗ ಮತ್ತೆ ನಾಗಮೋಹನ್ ದಾಸ್ ಆಯೋಗಕ್ಕೆ ಹಿಂತಿರುಗಿ ಅಂಕಿ ಅಂಶಗಳ ಕೆಲಸ ಕೊಡಲಾಗಿದೆ. ಸರ್ಕಾರದ ಈ ನಿಧಾನಗತಿಯ ನಿರ್ಲಕ್ಷ್ಯದ ಧೋರಣೆ ನೋಡಿದರೆ ದಲಿತ ಸಮುದಾಯಗಳಿಗೆ ಒಳ ಮೀಸಲಾತಿ ಕೊಡುವ ಮನಸ್ಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದರು.
ಒಳಮೀಸಲಾತಿ ಜಾರಿಯಾಗುವವರೆಗೆ ಸರ್ಕಾರ ಯಾವುದೇ ಉದ್ಯೋಗ ನೇಮಕಾತಿ ಮಾಡುವುದಿಲ್ಲ ಎಂದು ಭರವಸೆ ನೀಡಿತ್ತು. ಆದರೆ ಆ ಭರವಸೆ ಜಾರಿಯಾಗಿಲ್ಲ. ನೇಮಕಾತಿಯ ಘೋಷಣೆಗಳು ವಿವಿಧ ಇಲಾಖೆಯಿಂದ ನಡೆಯುತ್ತಿವೆ. ರಾಜ್ಯದಲ್ಲಿ ಒಳಮೀಸಲಾತಿಯನ್ನು ತಕ್ಷಣವೇ ಜಾರಿಗೆ ಕಾಂಗ್ರೆಸ್ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.
ಇದನ್ನು ಓದಿದ್ದೀರಾ? ರಾಯಚೂರು | ವೈದ್ಯರ ನಿರ್ಲಕ್ಷ್ಯ ಆರೋಪ: ಬಾಣಂತಿಯರ ಸಾವಿನ ಸಂಖ್ಯೆ 5ಕ್ಕೆ ಏರಿಕೆ
ಪ್ರತಿಭಟನೆಯಲ್ಲಿ ಮಾದಿಗ ದಂಡೋರ ರಾಜ್ಯಾಧ್ಯಕ್ಷ ನರಸಪ್ಪ ದಂಡೋರ, ಸಂಘಟನೆಗಳ ಮುಖಂಡರುಗಳಾದ ರವೀಂದ್ರ ಜಲ್ದಾರ್, ಪಿ. ಯಲ್ಲಪ್ಪ, ಸುಭಾಷ್, ಶಂಶಾಲ, ಭೀಮಣ್ಣ ಮಂಚಾಲ್, ನಾಗರಾಜ, ರವಿ ಗಿಲ್ಲೆಸೂಗುರು, ರಂಜಿತ್ ದಂಡೋರಾ, ಶಾಂತಪ್ಪ ಮಿಡಗಲ್‌ದಿನ್ನಿ, ಎಂ.ಪಿ. ರೆಡ್ಡಿ ಗೋನ್ವಾರ್, ಅಶೋಕ ದುಗನೂರು, ದುಳ್ಳಯ್ಯ ಗುಂಜಹಳ್ಳಿ, ಜಕ್ರಪ್ಪ ಹಂಚಿನಾಳ, ಶರಣಪ್ಪ ಚಂದ್ರಬಂಡಾ, ಭೀಮೇಶ್ ತುಂಟಾಪೂರ, ದಾವೀದ್ ಮರ್ಚೆಟಾಳ, ನವೀನ್ ಕುಮಾರ ಉಪ್ರಾಳ, ಸೇರಿದಂತೆ ಅನೇಕರು ಇದ್ದರು.
