ಹೆರಿಗೆಯಾದ ಮೂರು ದಿನಗಳ ಬಳಿಕ ಬಾಣಂತಿಯೋರ್ವರು ರಕ್ತಸ್ರಾವದಿಂದ ಮೃತಪಟ್ಟ ಘಟನೆ ರಾಯಚೂರು ತಾಲೂಕಿನ ರಬ್ಬನ ಕಲ್ ಗ್ರಾಮದಲ್ಲಿ ನಡೆದಿದೆ.
ಈಶ್ವರಿ (32) ಮೃತಪಟ್ಟ ಮಹಿಳೆ ಎನ್ನಲಾಗಿದೆ. ಕಳೆದ ಸೋಮವಾರ ಬೆಳಗಿನ ಜಾವ 3 ಗಂಟೆ ಸುಮಾರು ತಾಲೂಕಿನ ಮಟಮಾರಿ ಗ್ರಾಮದ ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಆಗಿತ್ತು. ತೀವ್ರ ರಕ್ತ ಸ್ರಾವದಿಂದ ಮೂರು ದಿನಗಳ ನಂತರ ಶುಕ್ರವಾರ ರಾತ್ರಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.
ಈ ಬಗ್ಗೆ ಮೃತ ಮಹಿಳೆಯ ಸಂಬಂಧಿ ಚರಣ್ ರಾಜ್ ಮಾತನಾಡಿ, ಹೆರಿಗೆ ನಂತರ ಎರಡು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಮನೆಗೆ ಹೋದೆವು. ಮನೆಗೆ ಹೋದಾಗ ಮತ್ತೆ ಸಮಸ್ಯೆ ಕಾಣಿಸಿಕೊಂಡಿದೆ. ನಂತರ ಮತ್ತೆ ಮಟಮಾರಿ ಆಸ್ಪತ್ರೆಗೆ ಬಂದಾಗ ವೈದ್ಯರು ಇಲ್ಲದೆ ಸಮಸ್ಯೆ ಎದುರಾಯಿತು. ತಕ್ಷಣ ಆಂಬ್ಯುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು” ಎಂದು ತಿಳಿಸಿದರು.
ಜಿಲ್ಲಾಸ್ಪತ್ರೆಗೆ ದಾಖಲಾದಾಗ ಮಹಿಳೆಯು ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಾರೆ. ನಾವು ಏನು ಮಾಡೋಕೆ ಆಗಲ್ಲ ಎಂದು ಬರೆಸಿಕೊಂಡು ಚಿಕಿತ್ಸೆ ನೀಡಿದರು. ಸ್ವಲ್ಪ ಹೊತ್ತಲ್ಲೇ ಪ್ರಾಣ ಬಿಟ್ಟರು. ಮಹಿಳೆಗೆ ಮೂರು ಮಕ್ಕಳಿದ್ದಾರೆ ಎಂದು ಹೇಳಿದರು.
ಮಟಮಾರಿ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯ ಕಾರಣದಿಂದ ಹಾಗೂ ಆಸ್ಪತ್ರೆ ಸಿಬ್ಬಂದಿಗಳು ರೋಗಿಗಳನ್ನು ತಮಗೆ ಸಂಬಂಧವಿಲ್ಲದಂತೆ ಇರುತ್ತಾರೆ. ತೀವ್ರ ಸಮಸ್ಯೆಯಿದೆ ಎಂದರೆ ಉಡಾಫೆಯ ಉತ್ತರ ನೀಡುತ್ತಾರೆ ಎಂದು ಮೃತ ಮಹಿಳೆಯ ಸಂಬಂಧಿ ಚರಣ್ ರಾಜ್ ಆರೋಪಿಸಿದರು.
ಈಶ್ವರಿ ಅವರ ಸಾವಿನೊಂದಿಗೆ ರಾಯಚೂರು ಜಿಲ್ಲೆಯಲ್ಲಿ ಬಾಣಂತಿಯರ ಸಾವು 5ಕ್ಕೆ ಏರಿದೆ. ಸಿಂಧನೂರು ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ 4 ಮೃತಪ್ಪಟ್ಟರೆ 1 ರಾಯಚೂರು ನಗರದಲ್ಲಿ ನಡೆದಿದೆ. ಬಳ್ಳಾರಿ ಜಿಲ್ಲೆಯ ದುರ್ಘಟನೆ ರಾಯಚೂರಿಗೆ ಹರಡಿದೆ. ವೈದ್ಯರ ನಿರ್ಲಕ್ಷ್ಯದಿಂದ ಇನ್ನೆಷ್ಟು ಜೀವ ಬಲಿಯಾಗಬೇಕು ಎಂದು ಸಾರ್ವಜನಿಕರು ಅಸಮಾಧಾನ ಹೊರಹಾಕುತ್ತಿದ್ದಾರೆ.
