ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿ ಹೊರಹೊಮ್ಮಿರುವಾಗ, ಅದು ಚುನಾವಣೆಗಳನ್ನು ನಡೆಸುವುದು ಹೊರೆ ಎಂದು ಪರಿಗಣಿಸುವುದಿಲ್ಲ. ನಮ್ಮ ಪ್ರಜಾಪ್ರಭುತ್ವಕ್ಕಿಂತ ಮುಖ್ಯವಾದುದು ಬೇರೇನೂ ಇಲ್ಲ.
ʼಒಂದು ದೇಶ – ಒಂದು ಚುನಾವಣೆʼ ವ್ಯವಸ್ಥೆಯನ್ನು ಜಾರಿಗೆ ತರುತ್ತೇವೆಂದು ಮೋದಿ ಸರ್ಕಾರ ಹೇಳುತ್ತಿದೆ. ವಿಪಕ್ಷಗಳೂ ಸೇರಿದಂತೆ ರಾಜಕೀಯ ತಜ್ಞರು ಈ ʼಒಂದು ದೇಶ – ಒಂದು ಚುನಾವಣೆʼ ನೀತಿಯನ್ನು ವಿರೋಧಿಸುತ್ತಲೇ ಇದ್ದಾರೆ. ಮಾಜಿ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಸಲ್ಲಿಸಿದ್ದ ಶಿಫಾರಸುಗಳ ಆಧಾರದ ಮೇಲೆ ಸಿದ್ದಪಡಿಸಲಾಗಿರುವ ಮಸೂದೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಡಿಸೆಂಬರ್ 16ರಂದು ಸೋಮವಾರ ಸಂಸತ್‌ನ ಉಭಯ ಸದನಗಳಲ್ಲಿ ಮಸೂದೆಯನ್ನು ಮಂಡಿಸಲು ಕೇಂದ್ರ ಮುಂದಾಗಿದೆ.
ʼಒಂದು ದೇಶ – ಒಂದು ಚುನಾವಣೆʼ ಎನ್ನುವುದು ಮೇಲ್ನೋಟಕ್ಕೆ ಒಳ್ಳೆಯದೇ ಅನ್ನಿಸುತ್ತದೆ. ಆ ರೀತಿಯಲ್ಲಿ ಬಿಜೆಪಿ ನರೇಟಿವ್‌ಅನ್ನೂ ಕಟ್ಟಿದೆ, ಹರಿಬಿಟ್ಟಿದೆ, ಜನಮಾನಸದೊಳಗೆ ತುಂಬಿದೆ. ಆದರೆ, ಈ ವ್ಯವಸ್ಥೆಯು ಭಾರತದ ಜನರಿಗೆ, ಪ್ರಜಾಪ್ರಭುತ್ವಕ್ಕೆ ಉತ್ತಮ ಸೇವೆ ಒದಗಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಆ ಕಾರಣಕ್ಕಾಗಿಯೇ ರಾಜಕೀಯ ತಜ್ಞರು, ವಿಶ್ಲೇಷಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಆದಾಗ್ಯೂ, ಈ ಬಗ್ಗೆ ಬಿಜೆಪಿ ಪ್ರಚಾರ ಮಾಡುತ್ತಿರುವ ರೀತಿ, ನೀತಿ, ಪ್ರತಿಪಾದನೆಗಳು ಜನರನ್ನು ವಂಚಿಸುವ ಕಪಟತೆಯಿಂದ ಕೂಡಿವೆ. ಅಧಿಕಾರದಲ್ಲಿರುವ ಸರ್ಕಾರಗಳು ತಮ್ಮ ಸ್ವಂತ ರಾಜಕೀಯ ಲೆಕ್ಕಾಚಾರದ ಆಧಾರದ ಮೇಲೆ ಏಕಕಾಲದಲ್ಲಿ ಅಥವಾ ಪ್ರತ್ಯೇಕವಾಗಿ ಚುನಾವಣೆಗಳನ್ನು ನಡೆಸುವ ಕುರಿತು ಆಯ್ಕೆ ಮಾಡುತ್ತಾರೆ. ಅದಲ್ಲದೆ, ಜನರಿಗೆ ಉಪಯೋಗ ಮಾಡಿಕೊಡುವ ಯಾವ ಉದ್ದೇಶವೂ ಅದರಲ್ಲಿ ಇರುವುದಿಲ್ಲ ಎಂಬುದನ್ನು ಇತಿಹಾಸ ಒತ್ತಿ ಹೇಳುತ್ತಿದೆ.
ಒಂದು ದೇಶ ಒಂದು ಪಡಿತರ, ಒಂದು ದೇಶ ಒಂದು ಗುರುತು– ಹೀಗೆ ಎಲ್ಲದರಲ್ಲೂ ಒಂದು, ಒಂದು ಎನ್ನುತ್ತಿರುವ ಮೋದಿ ಸರ್ಕಾರ ಚುನಾವಣೆಗಳನ್ನೂ ʼಒಂದುʼ ಮಾಡಲು ಹವಣಿಸುತ್ತಿದೆ. ಭಾರತದ ರಾಷ್ಟ್ರೀಯ, ರಾಜ್ಯ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಜನಪ್ರತಿನಿಧಿಗಳನ್ನು ಏಕಕಾಲದಲ್ಲಿ ಆಯ್ಕೆ ಮಾಡುವಂತಾಗಬೇಕು. ಒಂದು ದೇಶ – ಒಂದು ಚುನಾವಣೆ ವ್ಯವಸ್ಥೆ ಜಾರಿಯಾಗಬೇಕು ಎಂದು ಕೋವಿಂದ್ ಸಮಿತಿ ಶಿಫಾರಸು ಮಾಡಿದೆ. ಅಂದಹಾಗೆ, ಇದು ಕೋವಿಂದ್ ಅವರ ಶಿಫಾರಸು ಆಗಿದೆಯೇ ಆಥವಾ ಮೋದಿ ಸರ್ಕಾರವೇ ಅವರಿಂದ ಈ ಶಿಫಾರಸುಗಳನ್ನು ಮಾಡಿಸಿದೆಯೇ ಎಂಬ ಅನುಮಾನಗಳೂ ವ್ಯಕ್ತವಾಗಿದೆ. ಈಗಾಗಲೇ ಆ ಶಿಫಾರಸುಗಳನ್ನು ಮೋದಿ ಕ್ಯಾಬಿನೆಟ್ ಅನುಮೋದಿಸಿದೆ. ಮುಖ್ಯವಾಗಿ, ಈ ʼಒಂದು ದೇಶ – ಒಂದು ಚುನಾವಣೆʼ ಕಲ್ಪನೆಯನ್ನು 2016ರಲ್ಲಿ ಮೋದಿ ಅವರೇ ಪ್ರಸ್ತಾಪಿಸಿದ್ದರು.
1951 ರಿಂದ 1962ರವರೆಗೆ, ಪ್ರಧಾನಿ ಜವಾಹರಲಾಲ್ ನೆಹರು ಅವರು ಮತ್ತು ಅವರ ಕಾಂಗ್ರೆಸ್ ರಾಷ್ಟ್ರವ್ಯಾಪಿ ಅತ್ಯಂತ ಜನಪ್ರಿಯವಾಗಿತ್ತು. ಆ ಕಾರಣದಿಂದ, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಭಾರತದ ಮೊದಲ ಮೂರು ಚುನಾವಣೆಗಳನ್ನು ನಡೆಸಿದರು. ಈ ಚುನಾವಣೆಗಳಲ್ಲಿ ಪಕ್ಷವು ಬಹುತೇಕ ಎಲ್ಲ ರಾಜ್ಯಗಳಲ್ಲಿ ಬಹುಮತವನ್ನು ಗಳಿಸಿತು ಮತ್ತು ನೆಹರೂ ಅವರ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡಿದರು, ಇಡೀ ದೇಶವನ್ನು ದೆಹಲಿಯಿಂದ ನಡೆಸುತ್ತಿದ್ದರು.
ಆದರೆ 1967ರ ಚುನಾವಣೆಯಲ್ಲಿ, ಲೋಕಸಭೆಯಲ್ಲಿ ಕಾಂಗ್ರೆಸ್ ಬಹುಮತಕ್ಕಿಂತ 25 ಸ್ಥಾನಗಳನ್ನು ಕಡಿಮೆ ಗೆದ್ದಿತು ಮತ್ತು ಎಂಟು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿತು. ಆಗ, ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ರಾಷ್ಟ್ರೀಯ ಮತ್ತು ರಾಜ್ಯ ಚುನಾವಣೆಗಳನ್ನು ಪ್ರತ್ಯೇಕವಾಗಿ ನಡೆಸಲು ನಿರ್ಧರಿಸಿದರು. ಅವರು ತಮ್ಮ ʼಗರೀಬಿ ಹಟಾವೋʼ ಅಭಿಯಾನದ ಅಡಿಯಲ್ಲಿ ಪ್ರಮುಖ ಕಲ್ಯಾಣ ಕಾರ್ಯಕ್ರಮಗಳನ್ನು ಘೋಷಿಸಿದರು. ಅಧಿಕಾರಾವಧಿ ಮುಗಿಯುವ ಒಂದು ವರ್ಷ ಮುಂಚಿತವಾಗಿಯೇ ಲೋಕಸಭೆಯನ್ನು ವಿಸರ್ಜಿಸಿದರು. 1971ರಲ್ಲಿ ಚುನಾವಣೆಗೆ ಹೋದರು. ಆ ಚುನಾವಣೆಯಲ್ಲಿ 520 ಸ್ಥಾನಗಳ ಪೈಕಿ 350 ಸೀಟುಗಳನ್ನು ಗೆದ್ದು, ಮೂರನೇ ಎರಡರಷ್ಟು ಬಹುಮತ ಗಳಿಸಿತು.
ಪ್ರಧಾನಿಯ ಇಚ್ಛೆಯಂತೆ ಒಟ್ಟಿಗೆ ಅಥವಾ ಪ್ರತ್ಯೇಕವಾಗಿ ಚುನಾವಣೆ ನಡೆಸುವ ಈ ಸಂಪ್ರದಾಯ ದೇಶದ ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ. ಇಂತಹ ನೀತಿ-ನಿರ್ಧಾರಗಳು ಭಾರತದ ಫೆಡರಲ್ ವ್ಯವಸ್ಥೆ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತವೆ. ನಮ್ಮ ರಾಷ್ಟ್ರದ ಗಾತ್ರ ಮತ್ತು ವೈವಿಧ್ಯತೆಯನ್ನು ಗಮನಿಸಿದರೆ, ಪ್ರತಿಯೊಂದು ರಾಜ್ಯವೂ ತನ್ನದೇ ಸ್ವರೂಪ, ಪ್ರಾಮುಖ್ಯತೆ ಹೊಂದಿವೆ. ಅವುಗಳ ಆಧಾರದ ಮೇಲೆಯೇ ಅಲ್ಲಿನ ರಾಜ್ಯ ಮತ್ತು ಸ್ಥಳೀಯ ಚುನಾವಣೆಗಳು ನಡೆಯಬೇಕು. ರಾಷ್ಟ್ರೀಯ ಚುನಾವಣೆ ಜೊತೆಗೆ ರಾಜ್ಯ ಚುನಾವಣೆಗಳು ನಡೆದರೆ, ರಾಷ್ಟ್ರೀಯ ವಿಚಾರಗಳ ಚರ್ಚೆಯೊಳಗೆ ಆಯಾ ರಾಜ್ಯಗಳ ನಿರ್ದಿಷ್ಟ ವಿಷಯಗಳ ಚರ್ಚೆಗಳು ಹಿನ್ನೆಲೆಗೆ ಸರಿಯುತ್ತವೆ. ರಾಷ್ಟ್ರೀಯ ಪಕ್ಷಗಳು, ರಾಷ್ಟ್ರ ನಾಯಕ ಜಿದ್ದಾಜಿದ್ದಿಯಲ್ಲಿ ಸ್ಥಳೀಯ ಹೊಣೆಗಾರಿಕೆಗಳಿಗೆ ಹಾನಿಯಾಗುತ್ತದೆ.
ಸರ್ಕಾರಗಳನ್ನು ಯಾವುದೇ ಸಮಯದಲ್ಲಿ ಹೊಣೆಗಾರರನ್ನಾಗಿ ಮಾಡಬಹುದು ಮತ್ತು ಕೆಳಗಿಳಿಸಬಹುದು ಎಂಬ ಮೂಲಭೂತ ತತ್ವವನ್ನು ʼಒಂದು ರಾಷ್ಟ್ರ – ಒಂದು ಚುನಾವಣೆʼ ಪರಿಕಲ್ಪನೆ ಅಪಹಾಸ್ಯ ಮಾಡುತ್ತದೆ. ಒಂದು ವೇಳೆ ಸರ್ಕಾರ ಪತನವಾದರೆ ಮತ್ತು ಮಧ್ಯಂತರದಲ್ಲಿ ಹೊಸ ಸರ್ಕಾರ ಆಯ್ಕೆಯಾದರೆ, ʼಒಂದು ರಾಷ್ಟ್ರ ಒಂದು ಚುನಾವಣೆ’ ಅಡಿಯಲ್ಲಿ ಹೊಸ ಸರ್ಕಾರದ ಅವಧಿಯನ್ನು ಮೊಟಕುಗೊಳಿಸಬೇಕಾಗುತ್ತದೆ. ಇದನ್ನೇ ಕೋವಿಂದ್ ಸಮಿತಿಯೂ ಶಿಫಾರಸು ಮಾಡಿದೆ. ಇದು ಚುನಾವಣೆಯಲ್ಲಿ ಗೆದ್ದವರಿಗೆ ಅನ್ಯಾಯ ಮಾಡುತ್ತದೆ. ಮಾತ್ರವಲ್ಲ, ಪ್ರಜಾಪ್ರಭುತ್ವಕ್ಕೂ ವಿರುದ್ಧವಾಗಿದೆ.
ಕೋವಿಂದ್ ಸಮಿತಿಯು ಮೋದಿ ಸರ್ಕಾರದ ಆಣತಿಯಂತೆ ವರದಿಯನ್ನು ಸಿದ್ದಪಡಿಸಿದೆ ಎಂದು ವಿರೋಧ ಪಕ್ಷಗಳು ಹಾಗೂ ರಾಜಕೀಯ ವಿಮರ್ಶಕರು ಆರೋಪಿಸಿದ್ದಾರೆ. ʼʼಹಲವಾರು ಚುನಾವಣೆಗಳನ್ನು ಪ್ರತ್ಯೇಕವಾಗಿ ನಡೆಸುವುದರಿಂದ ಸರ್ಕಾರ, ವ್ಯವಹಾರಗಳು, ಸಿಬ್ಬಂದಿ, ನ್ಯಾಯಾಲಯಗಳು, ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಹಾಗೂ ನಾಗರಿಕ ಸಮಾಜದ ಮೇಲೆ ದೊಡ್ಡ ಹೊರೆ ಉಂಟುಮಾಡುತ್ತದೆ” ಎಂದು ವರದಿಯು ವಾದಿಸಿದೆ. ಆದರೆ, ಇದು ಸಮರ್ಥನೀಯವಲ್ಲ.
ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವಾಗಿ ಹೊರಹೊಮ್ಮಿರುವಾಗ, ಅದು ಚುನಾವಣೆಗಳನ್ನು ನಡೆಸುವುದು ಹೊರೆ ಎಂದು ಪರಿಗಣಿಸುವುದಿಲ್ಲ. ನಮ್ಮ ಪ್ರಜಾಪ್ರಭುತ್ವಕ್ಕಿಂತ ಮುಖ್ಯವಾದುದು ಏನಿದೆ? ಜನರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವುದಕ್ಕಿಂತ ಮೂಲಭೂತವಾದ್ದದ್ದು ಬೇರೇನಿದೆ? ಜನರು ಕೇಂದ್ರ ಸರ್ಕಾರಕ್ಕೆ ರಾಷ್ಟ್ರೀಯ ವಿಷಯಗಳ ಆಧಾರದ ಮೇಲೂ, ರಾಜ್ಯ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳಿಗೆ ತಮ್ಮ ಸ್ಥಳೀಯ ವಿಚಾರಗಳ ಆಧಾರ ಮೇಲೆ ಸರ್ಕಾರಗಳನ್ನು ರಚನೆ ಮಾಡುತ್ತಾರೆ. ಇದನ್ನು ಕಸಿದುಕೊಳ್ಳುವುದು ಜನರಿಗೆ ಮಾಡುವ ಮೋಸ.
ಈ ವರದಿ ಓದಿದ್ದೀರಾ?: ಕೇಂದ್ರ – ಆರ್‌ಬಿಐ ನಡುವೆ ನಿರಂತರ ಸಂಘರ್ಷ: ಆರ್ಥಿಕ ಭದ್ರತೆಗಾಗಿ ಆರ್‌ಬಿಐ ಗಟ್ಟಿ ನಿಲುವು
ಅದಲ್ಲದೆ, ಚುನಾವಣಾ ಹೊರೆಯನ್ನು ಕಡಿಮೆ ಮಾಡಲು ಕೋವಿಂದ್ ಸಮಿತಿಯ ಶಿಫಾರಸು ನಿಜವಾಗಿಯೂ ಸ್ವಾಗತಿಸಬಹುದಾದ ಅಥವಾ ಒಪ್ಪಿಕೊಳ್ಳಬಹುದಾದ ವಿಚಾರವಲ್ಲ. ಸಮಿತಿಯು ಪ್ರಸ್ತುತ ಚುನಾವಣೆಗಳ ಸಂಖ್ಯೆಯನ್ನು ಮೂರರಿಂದ (ಲೋಕಸಭೆ, ರಾಜ್ಯ ಮತ್ತು ಪಂಚಾಯತ್) ಎರಡಕ್ಕೆ (ಲೋಕಸಭೆ ಜೊತೆಗೆ ರಾಜ್ಯ ಚುನಾವಣೆ ಮತ್ತು 100 ದಿನಗಳ ನಂತರ ಪಂಚಾಯತ್ ಚುನಾವಣೆ) ಕಡಿಮೆ ಮಾಡಲು ಶಿಫಾರಸು ಮಾಡಿದೆ. ಒಂದು ವೇಳೆ, ಲೋಕಸಭೆ ಮತ್ತು ರಾಜ್ಯ ಚುನಾವಣೆಗಳನ್ನು ಸಂಯೋಜಿಸಿದರೂ ಅಭ್ಯರ್ಥಿಗಳು, ಕಾರ್ಯಕರ್ತರು, ಪಕ್ಷಗಳು ಮತ್ತು ನಾಗರಿಕ ಸಂಸ್ಥೆಗಳು ಪ್ರತಿ ಚುನಾವಣೆಗೆ ಪ್ರತ್ಯೇಕವಾಗಿ ಪ್ರಚಾರ ಮಾಡುತ್ತವೆ.
ಅಲ್ಲದೆ, ಈ ವ್ಯವಸ್ಥೆಯು ಸರ್ಕಾರಗಳು ಮತ್ತು ವ್ಯವಹಾರಗಳ ಮೇಲಿನ ಹೊರೆಯಲ್ಲಿ ಹೆಚ್ಚು ಬದಲಾಗುವುದಿಲ್ಲ. ಏಕೆಂದರೆ ಚುನಾವಣಾ ಸಮಯದಲ್ಲಿ ಮಾದರಿ ನೀತಿಸಂಹಿತೆ ಎಲ್ಲ ಸರ್ಕಾರಿ ಕೆಲಸಗಳನ್ನು ನಿಲ್ಲಿಸುತ್ತದೆ ಎಂಬುದು ತಪ್ಪು ಕಲ್ಪನೆ. ಚುನಾವಣೆಯ ಸಮಯದಲ್ಲಿ ಹೊಸ ಯೋಜನೆಗಳನ್ನು ಪ್ರಾರಂಭಿಸುವುದು ಮತ್ತು ಉದ್ಯೋಗಿಗಳ ವರ್ಗಾವಣೆಯನ್ನು ಮಾತ್ರ ನಿರ್ಬಂಧಿಸುತ್ತದೆ.
ಪ್ರತ್ಯೇಕವಾಗಿ ಚುನಾವಣೆ ನಡೆಸುವುದು ರಾಷ್ಟ್ರೀಯ ಪಕ್ಷಗಳ ರಾಷ್ಟ್ರ ನಾಯಕರಿಗೆ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವ ನಾಯಕರಿಗೆ ಮಾತ್ರವೇ ಹೊರೆಯಾಗುತ್ತದೆ. ಆದಾಗ್ಯೂ, ರಾಜ್ಯ ಚುನಾವಣೆಗಳಲ್ಲಿ ಕೇಂದ್ರ ನಾಯಕರು ಪದೇ-ಪದೇ ಕಾಣಿಸಿಕೊಳ್ಳುವುದು ಸ್ಥಳೀಯ ಹೊಣೆಗಾರಿಕೆಗೆ ಮಾತ್ರ ಹಾನಿ ಮಾಡುತ್ತದೆ. ಭಾರತವು ರಾಜ್ಯ ಸರ್ಕಾರಗಳಿಗೆ ಹೆಚ್ಚು ಸ್ವತಂತ್ರವಾಗಿರಲು ಅವಕಾಶ ನೀಡಿದೆ. ಆ ಸ್ವಾತಂತ್ರ್ಯ ಮುಂದುವರೆಯಬೇಕು. ಅದನ್ನು ಕೇಂದ್ರ ನಾಯಕರು ಅರ್ಥ ಮಾಡಿಕೊಳ್ಳಬೇಕಷ್ಟೇ. ರಾಜ್ಯ ಸರ್ಕಾರಗಳನ್ನು ಸ್ಥಳೀಯ ನಾಯಕರು ಎದುರಿಸಬೇಕು. ಸ್ಥಳೀಯ ವಿಚಾರಗಳ ಬಗ್ಗೆ ಚರ್ಚೆ ನಡೆಸಬೇಕು. ಸ್ಥಳೀಯ ಸಮಸ್ಯೆಗಳ ಆಧಾರದ ಮೇಲೆ ಅವರು ಚುನಾಯಿತರಾಗಬೇಕು. ಸ್ಥಳೀಯ ವಿಷಯಗಳ ಮೇಲೆ ಆಡಳಿತ ನಡೆಸಬೇಕು. ಒಂದು ರಾಜ್ಯದ ಚುನಾವಣೆಯು ಇತರ ರಾಜ್ಯಗಳಿಗೆ ಅಥವಾ ಕೇಂದ್ರಕ್ಕೆ ಎಂದಿಗೂ ಹೊರೆಯಾಗುವುದಿಲ್ಲ.
ಈ ವರದಿ ಓದಿದ್ದೀರಾ?: ಸೈಬರ್ ಕ್ರೈಮ್ ತಡೆಯುವುದು ಹೇಗೆ?
ಏಕಕಾಲದಲ್ಲಿ ನಡೆಯುವ ಚುನಾವಣೆಗಳು ದೇಶದ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಚುನಾವಣಾ ವೆಚ್ಚವನ್ನು ಕಡಿಮೆ ಮಾಡುತ್ತದೆ ಎಂದು ಕೋವಿಂದ್ ಸಮಿತಿಯು ವಾದಿಸುತ್ತದೆ. ಆದರೆ, ಕೇಂದ್ರದಲ್ಲಿ ಅಥವಾ ರಾಜ್ಯದಲ್ಲಿ ಸಂಸದೀಯ ಸರ್ಕಾರ ಯಾವಾಗ ಬೀಳುತ್ತದೆ ಎಂಬುದರ ಬಗ್ಗೆ ಯಾವ ಖಾತ್ರಿ ಇರುತ್ತದೆ? ಸರ್ಕಾರಗಳನ್ನು ಉರುಳಿಸುವಲ್ಲಿ ಕುಖ್ಯಾತ ರಾಜಕೀಯ ಮತ್ತು ಕುದುರೆ ವ್ಯಾಪಾರಕ್ಕೆ ಕೋವಿಂದ್ ಸಮಿತಿಯು ಯಾವುದೇ ಪರಿಹಾರವನ್ನು ಸೂಚಿಸಿಲ್ಲ.
ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದಂತೆ, ರಾಷ್ಟ್ರೀಯ ಮತ್ತು ರಾಜ್ಯ ಚುನಾವಣೆಗಳನ್ನು ನಡೆಸಲು ಸರ್ಕಾರಗಳು ಪ್ರಸ್ತುತ ಸುಮಾರು 4,500 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತವೆ ಎಂದು ಸಮಿತಿ ಹೇಳಿದೆ. ಅದನ್ನು ಲೆಕ್ಕಾಚಾರ ಹಾಕಿ ನೋಡಿದರೆ, ಅರ್ಹ ಮತದಾರರಿಗೆ ತಲಾ 50 ರೂ.ಗಿಂತ ಕಡಿಮೆ ವೆಚ್ಚವಷ್ಟೇ. ಇದನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯೋಗ್ಯ ಹೂಡಿಕೆಯಾಗಿಯೇ ನೋಡಬೇಕು. ಅಲ್ಲದೆ, ಪಕ್ಷಗಳು ಪ್ರಚಾರಕ್ಕಾಗಿ ಖರ್ಚು ಮಾಡಿದ ಹಣವು ಅಂದಾಜು 4-7 ಲಕ್ಷ ಕೋಟಿ ರೂ.ಗಳಷ್ಟಿದೆ. ಈ ಹಣದಲ್ಲಿ ಬಹುಪಾಲು ಕಪ್ಪುಹಣವೇ ಆಗಿರುತ್ತದೆ. ಏಕಕಾಲದಲ್ಲಿ ಚುನಾವಣೆ ನಡೆದರೆ, ಮತದಾರರನ್ನು ಓಲೈಸಲು ಪಕ್ಷಗಳು ಅಷ್ಟು ಹಣವನ್ನು ಖರ್ಚು ಮಾಡುವುದಿಲ್ಲ ಎಂದು ಭಾವಿಸಲು ಸಾಧ್ಯವೇ ಇಲ್ಲ.
ಮುಖ್ಯವಾಗಿ, ಏಕಕಾಲದ ಚುನಾವಣೆಗಳು ಅಧ್ಯಕ್ಷೀಯ ಸರ್ಕಾರದ ಸ್ವರೂಪವನ್ನು ಹೋಲುತ್ತವೆ. ಅದು ಪ್ರಜಾಪ್ರಭುತ್ವದ ಮಾದರಿಗೆ ಸರಿಹೊಂದುವುದಿಲ್ಲ. ಕೋವಿಂದ್ ಸಮಿತಿಯು ಕೇವಲ ಆರು ದೇಶಗಳ (ದಕ್ಷಿಣ ಆಫ್ರಿಕಾ, ಇಂಡೋನೇಷಿಯಾ, ಫಿಲಿಪೈನ್ಸ್, ಇತ್ಯಾದಿ) ಚುನಾವಣಾ ವ್ಯವಸ್ಥೆಯನ್ನು ಅಧ್ಯಯನ ಮಾಡಿದೆ. ಆದರೆ, ಇಂಗ್ಲೆಂಡ್ ಅಥವಾ ಅಮೆರಿಕದ ಚುನಾವಣಾ ವ್ಯವಸ್ಥೆಯನ್ನು ಗಮನಿಸಿಲ್ಲ. ಅಮೆರಿಕದಲ್ಲಿ ರಾಷ್ಟ್ರೀಯ, ರಾಜ್ಯ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಜನಪ್ರತಿನಿಧಿಗಳು ಪ್ರತ್ಯೇಕವಾಗಿ ಚುನಾಯಿತರಾಗುವುದಿಲ್ಲ. ಆದರೆ, ಅವುಗಳ ಅಧಿಕಾರಾವಧಿಯು ವಿಭಿನ್ನವಾಗಿರುತ್ತದೆ. ಅಲ್ಲಿನ, ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ (ಲೋಕಸಭೆ) ಪ್ರತಿ ಎರಡು ವರ್ಷಗಳಿಗೊಮ್ಮೆ ಆಯ್ಕೆಯಾಗುತ್ತಾರೆ. ಆದರೆ, ಅಧ್ಯಕ್ಷರು ನಾಲ್ಕು ವರ್ಷಗಳಿಗೊಮ್ಮೆ ಮತ್ತು ಸೆನೆಟರ್‌ಗಳು ಆರು ವರ್ಷಗಳಿಗೊಮ್ಮೆ ಆಯ್ಕೆಯಾಗುತ್ತಾರೆ.
ಸತ್ಯವೆಂದರೆ, ʼಒಂದು ರಾಷ್ಟ್ರ ಒಂದು ಚುನಾವಣೆ’ ಭಾರತೀಯ ಜನರ ಸೇವೆಗಾಗಿ ವಿನ್ಯಾಸಗೊಳಿಸಲಾಗಿಲ್ಲ. ಇದು ಜನಪರವೂ ಅಲ್ಲ. ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುವುದೂ ಇಲ್ಲ. ಬದಲಾಗಿ, ಮತದಾರರ ಭಾಗವಹಿಸುವಿಕೆಯನ್ನು ಕಡಿತಗೊಳಿಸುತ್ತದೆ. ಏನೇ ಇರಲಿ, ಭಾರತದಲ್ಲಿ ಯಾರೂ ಚುನಾವಣಾ ಆಯಾಸದಿಂದ ಬಳಲುತ್ತಿಲ್ಲ. ನಮ್ಮ ಭಾರತೀಯ ಪ್ರಜಾಪ್ರಭುತ್ವಕ್ಕೆ ಹೆಚ್ಚು ವಿಕೇಂದ್ರೀಕರಣದ ಅಗತ್ಯವಿದೆಯೇ ಹೊರತು ಹೆಚ್ಚು ಕೇಂದ್ರೀಕರಣವಲ್ಲ.