ಚುಂಚಾದ್ರಿ ಕ್ರೀಡೋತ್ಸವ ಸಮಾರೋಪ ಸಮಾರಂಭದಲ್ಲಿ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ
ಬದುಕಿನುದ್ದಕ್ಕೂ ಕಷ್ಟ-ಸುಖ, ನೋವು ನಲಿವುಗಳನ್ನು ಅನುಭವಿಸಿಕೊಂಡು ಬಂದವರು ಸೋಲು ಗೆಲುವು ಎರಡನ್ನೂ ನಿಭಾಯಿಸಬಲ್ಲರು. ಹಾಗಾಗಿ ಕ್ರೀಡೆಯಲ್ಲಿ ಗೆದ್ದವರು ಸಂತೋಷ ಪಡಿ, ಸೋತವರು ಗೆದ್ದವರಿಗೆ ಪ್ರೋತ್ಸಾಹ ನೀಡಿ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಚಿಕ್ಕಬಳ್ಳಾಪುರ ನಗರ ಹೊರವಲಯದ ಎಸ್ ಜೆ ಸಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಚುಂಚಾದ್ರಿ ಕ್ರೀಡೋತ್ಸವದ ಸಮಾರೋಪ ಸಮಾರಂಭ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.

“ಅತ್ಯುತ್ತಮವಾಗಿ ಆಟವಾಡಿದ್ದು ನನ್ನ ಎದುರಾಳಿ ಆಟಗಾರ. ಆದರೆ, ಕೊನೆಯ ಕ್ಷಣದಲ್ಲಿ ಆತ ಮಾಡಿದ ಒಂದೇ ಒಂದು ತಪ್ಪು ನನ್ನನ್ನು ವಿಶ್ವ ಚೆಸ್ ಚಾಂಪಿಯನ್ ಆಗಿ ಮಾಡಿತು” ಎಂದು ವಿಶ್ವ ಚೆಸ್ ಚಾಂಪಿಯನ್ ಗುಕೇಶ್ ಅವರ ಮಾತುಗಳನ್ನು ಸ್ಮರಿಸಿದರು.
ನೀವು ಏನನ್ನಾದರೂ ಸಾಧಿಸಲು ಬಯಸಿದಾಗ, ಇಡೀ ವಿಶ್ವವೇ ನಿಮ್ಮ ಸಾಧನೆಗೆ ಸಹಾಯ ಮಾಡುತ್ತದೆ. ಹಾಗಾಗಿ ದೃಢ ಸಂಕಲ್ಪದಿಂದ, ಶ್ರದ್ಧೆಯಿಂದ ಮುಂದೆಜ್ಜೆ ಇಟ್ಟರೆ ಯಶಸ್ಸು ನಿಮ್ಮದಾಗುತ್ತದೆ ಎಂದು ಸಲಹೆ ನೀಡಿದರು.

ಐಎಎಸ್ ಅಧಿಕಾರಿ ಡಾ.ಕೆ. ರಾಜೇಂದ್ರ ಮಾತನಾಡಿ, ಹಿಂದಿನ ದಿನಗಳಲ್ಲಿ ಗಿಲ್ಲಿ ದಾಂಡು ಮತ್ತು ಮಲ್ಲಕಂಬಗಳನ್ನು ಆಡುತ್ತಿದ್ದರು. ಈಗಿನ ದಿನಗಳಲ್ಲಿ ಕ್ರಿಕೆಟ್, ಕಬಡ್ಡಿ ಮುಂತಾದ ಆಟಗಳಲ್ಲಿ ಯುವಪೀಳಿಗೆ ಹೆಚ್ಚು ಉತ್ಸುಕರಾಗಿದ್ದಾರೆ. ಕ್ರೀಡೆಗಳು ಮತ್ತು ವ್ಯಾಯಾಮಗಳು ಮಾನಸಿಕವಾಗಿ ದೃಡವಾಗಿರಲು ಹಾಗೂ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಲಿವೆ ಎಂದು ಹೇಳಿದರು.
ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಮಂಗಳನಾಥ ಸ್ವಾಮೀಜಿ ಮಾತನಾಡಿ, ಪ್ರತಿ ವರ್ಷ ಒಂದೊಂದು ಜಿಲ್ಲೆಯಲ್ಲಿ ಕೀಡೋತ್ಸವ ಹಮ್ಮಿಕೊಳ್ಳಲಾಗುತ್ತದೆ. ಈ ವರ್ಷ ಚಿಕ್ಕಬಳ್ಳಾಪುರದಲ್ಲಿ ನಡೆದಿದ್ದು, ಮುಂದಿನ ವರ್ಷದ ಕ್ರೀಡಾಕೂಟವನ್ನು ಹಾಸನದಲ್ಲಿ ನಡೆಸಲಾಗುವುದು ಎಂದು ಹೇಳಿದರು.

ಇದೇ ವೇಳೆ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಅವರಿಗೆ ಕ್ರೀಡಾ ಧ್ವಜವನ್ನು ಹಸ್ತಾಂತರಿಸಿದರು.
ಸಮಾರಂಭದಲ್ಲಿ ವಿಜೇತರಾದ ತಂಡಗಳಿಗೆ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರು ಬಹುಮಾನ ಮತ್ತು ಪ್ರಶಂಸಾ ಪತ್ರಗಳನ್ನು ವಿತರಿಸಿದರು.
ಅಥ್ಲೆಟಿಕ್ಸ್ ಸಮಗ್ರ ಚಾಂಪಿಯನ್‌ಶಿಪ್ ಪಡೆದ ಶಿವಮೊಗ್ಗ ವಿಭಾಗ :
ಅಥ್ಲೆಟಿಕ್ಸ್ ಸಮಗ್ರ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಶಿವಮೊಗ್ಗ ವಿಭಾಗ ಪಡೆದುಕೊಂಡಿತು. ಗೇಮ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಹಾಸನ ವಿಭಾಗ ಮತ್ತು ಕ್ರೀಡೋತ್ಸವ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಆದಿಚುಂಚನಗಿರಿ ವಿಭಾಗ ಪಡೆದುಕೊಂಡು ಸಂತಸದ ನಗೆ ಬೀರಿದವು.

ಪುರುಷರ ಅಥ್ಲೆಟಿಕ್ಸ್ ವೈಯಕ್ತಿಕ ವಿಭಾಗದಲ್ಲಿ ಭದ್ರಾವತಿಯ ಭರತ್, ಮಹಿಳೆಯರ ಅಥ್ಲೆಟಿಕ್ಸ್ ವಿಭಾಗದಲ್ಲಿ ಶಿವಮೊಗ್ಗದ ಸ್ಪೂರ್ತಿ, ಅಥ್ಲೆಟಿಕ್ಸ್ ಪ್ರೌಢಶಾಲಾ ವಿಭಾಗದಿಂದ ಶಶಾಂಕ್ ಗೌಡ, ಶಿವಮೊಗ್ಗದ ಲಕ್ಷ್ಮೀ, ಪದವಿ ಪೂರ್ವ ವಿಭಾಗದಲ್ಲಿ ಆದಿ ಚುಂಚನಗಿರಿಯ ದಿನೇಶ್, ಪುಷ್ಪ ವಿಜೇತರಾಗಿದ್ದು ಪ್ರಶಸ್ತಿಗಳನ್ನು ಪಡೆದುಕೊಂಡರು.
ಇದನ್ನೂ ಓದಿ : ಚಿಂತಾಮಣಿ | ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು ರೈತ ಸಾವು
ಕಾರ್ಯಕ್ರಮದಲ್ಲಿ ಎಸ್.ಜೆ.ಸಿ.ಐ.ಟಿ ಪ್ರಾಂಶುಪಾಲರಾದ ಡಾ.ಜಿ.ಟಿ.ರಾಜು, ಕುಲಸಚಿವರಾದ ಸುರೇಶ.ಜೆ, ಡಿಡಿಪಿಯು ಎಂ ಮರಿಸ್ವಾಮಿ, ಡಿಡಿಪಿಐ ಮುನಿಕೆಂಪೇಗೌಡ, ಸಂಸ್ಥೆ ಮುಖ್ಯ ಆಡಳಿತಾಧಿಕಾರಿ ಡಾ.ಶಿವರಾಮರೆಡ್ಡಿ ಮತ್ತು 21 ಜಿಲ್ಲೆಗಳ ವಿವಿಧ ವಿಭಾಗಗಳ ಮುಖ್ಯಸ್ಥರು, ದೈಹಿಕ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.