ಸಮಾಜದಲ್ಲಿ ನೈತಿಕತೆ ಬಲಪಡಿಸುವ ಚಳವಳಿ ನಡೆಯುವ ಅಗತ್ಯವಿದೆ ಎಂದು ಮಂಗಳೂರಿನ ಖ್ಯಾತ ಪ್ರವಚನಕಾರ ಮುಹಮ್ಮದ್ ಕುಂಞ ಅಭಿಪ್ರಾಯಪಟ್ಟರು.
ಜಮಾಅತೆ ಇಸ್ಲಾಮಿ ಹಿಂದ್ ಬಸವಕಲ್ಯಾಣ ತಾಲ್ಲೂಕು ಶಾಖೆಯಿಂದ ಬಸವಕಲ್ಯಾಣ ನಗರದ ರಥ ಮೈದಾನದ ಬಿಕೆಡಿಬಿ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಮೂರು ದಿನದ 9ನೇ ವಾರ್ಷಿಕ ಸಾರ್ವಜನಿಕ ಕುರಾನ್ ಪ್ರವಚನ ಕಾರ್ಯಕ್ರಮದಲ್ಲಿ ಶುಕ್ರವಾರ ಮಾನವನ ಘನತೆ ವಿಷಯ ಕುರಿತು ಮಾತನಾಡಿ, ‘ಎಲ್ಲರನ್ನು ಗೌರವಿಸಬೇಕಿರುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಕುರಾನ್ ಹೇಳುತ್ತದೆ ಎಂದರು.
‘ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಕರ್ಮಭೂಮಿ ಕಲ್ಯಾಣದಲ್ಲಿ ಎಂಟು ವರ್ಷಗಳಿಂದ ಕುರಾನ್ ಪ್ರವಚನ ನಡೆಸಿಕೊಂಡು ಬರಲಾಗುತ್ತಿದ್ದು, ಈ ಕಾರ್ಯಕ್ರಮದಲ್ಲಿ ಎಲ್ಲ ಜಾತಿ-ಧರ್ಮದವರು ಭಾಗವಹಿಸುತ್ತಿದ್ದಾರೆ. ಅರಿವು, ಪರಸ್ಪರರನ್ನು ಅರಿತುಕೊಳ್ಳುವ ಕಾರ್ಯಕ್ರಮ ಇದಾಗಿದೆ. ಮಾನವೀಯತೆ ಬಲಪಡಿಸುವುದು ಕುರಾನ್ ಪ್ರವಚನದ ಉದ್ದೇಶʼ ಎಂದು ಹೇಳಿದರು.
‘ಆಕಾಶ ಮತ್ತು ಭೂಮಿ, ತೀರ-ತೀರ, ನಗರ-ನಗರಗಳ ಮಧ್ಯೆ ಅಂತರ ಕಡಿಮೆಯಾಗುತ್ತಿದೆ. ಒಂದು ಸ್ಥಳದಿಂದ ಇನ್ನೊಂದೆಡೆ ಮನುಷ್ಯ ವೇಗವಾಗಿ ತಲುಪಬಹುದು. ಆದರೆ ಮನುಷ್ಯರು ಮಾತ್ರ ಒಬ್ಬರಿಗೊಬ್ಬರು ದೂರವಾಗುತ್ತಿದ್ದಾರೆ. ಮನಸ್ಸುಗಳು ದೂರವಾಗುತ್ತಿವೆ, ಸಂಬಂಧಗಳು ಸಡಿಲವಾಗುತ್ತಿವೆ. ಇಂಥ ದುರಿತ ಕಾಲದಲ್ಲಿ ಸಂತೋಷ ನೀಡುವ ಮನಸ್ಸುಗಳನ್ನು ಜೋಡಿಸುವ ಅಗತ್ಯವಿದೆ. ಯಾರಿಗೂ ನೋವಾಗುವಂಥ ಒಂದೇ ಒಂದು ವಿಷಯ ಈ ವೇದಿಕೆಯಲ್ಲಿ ಚರ್ಚೆ ಆಗದುʼ ಎಂದರು.
ʼಧರ್ಮ ಗ್ರಂಥ, ವೇದ-ಉಪನಿಷತ್ತುಗಳು ಮಾನವನನ್ನು ಸೃಷ್ಟಿಸಿದ ಸೃಷ್ಟಿಕರ್ತನ ಬಗ್ಗೆ ಹೇಳಿಕೊಟ್ಟಿವೆ. ಬಸವಣ್ಣ, ವಿವೇಕಾನಂದರು ಸಹ ಇದನ್ನೇ ಹೇಳಿದ್ದಾರೆ. ನಿಮ್ಮ ಪೂರ್ವಿಕರು, ನಿಮ್ಮನ್ನು ಸೃಷ್ಟಿಸಿದವನನ್ನು ಆರಾಧಿಸಬೇಕು ಎಂದು ಕುರಾನ್ ಹೇಳಿಕೊಟ್ಟಿದೆ. ಸಂಕೀರ್ಣತೆ ಇಲ್ಲದ ನೇರ ಮಾರ್ಗವನ್ನು ತೋರಿಸಿಕೊಟ್ಟಿದೆ. ಬದುಕಿಗೆ ಬೆಳಕು ತೋರುವ ಸಂದೇಶಗಳು ಇದರಲ್ಲಿವೆʼ ಎಂದು ತಿಳಿಸಿದರು.
ʼಜಮಾತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ ಡಾ.ಬೆಳಗಾವಿ ಮುಹಮ್ಮದ್ ಸಾದ್ ಮಾತನಾಡಿ, ʼದೇಶ ಪ್ರಗತಿ ಸಾಧಿಸಿರುವುದು ಹೆಮ್ಮೆಯ ವಿಷಯ. ಕುಸಿಯುತ್ತಿರುವ ನೈತಿಕ ಪ್ರಜ್ಞೆ, ಮಾನವೀಯ ಮೌಲ್ಯಗಳು ಬೆಳೆಯಬೇಕು. ಎಲ್ಲರೂ ಒಂದಾಗಿ ಶಾಂತಿ-ಸೌಹಾರ್ದ, ಪರಸ್ಪರ ವಿಶ್ವಾಸ ಕಾಪಾಡಿಕೊಂಡು ಹೋಗಬೇಕಿದೆ. ಇದಕ್ಕೆ ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಬೇಕುʼ ಎಂದು ಹೇಳಿದರು.
ಹುಲಸೂರಿನ ಡಾ.ಶಿವಾನಂದ ಸ್ವಾಮೀಜಿ ಮಾತನಾಡಿ, ʼಶಾಂತಿ ಸೌಹಾರ್ದದಿಂದ ಜೀವನ ಸಾಗಿಸುವ ದೇಶ ಭಾರತ. ಸಂತರು, ಶರಣರು, ಮಹಾತ್ಮರು ಶಾಂತಿ, ಸೌಹಾರ್ದ, ಸಮಾನತೆ ಸಂದೇಶ ಸಾರಿದ ನೆಲ ನಮ್ಮದು. ಆಚಾರವೇ ಸ್ವರ್ಗ, ಅನಾಚಾರವೇ ನರಕ ಎಂದು ಬಸವಣ್ಣನವರು ಸಾರಿದ ಪವಿತ್ರ ನೆಲವೂ ಇದಾಗಿದೆʼ ಎಂದು ನುಡಿದರು.
ಬೀದರ್ ಶಾಹೀನ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಅಬ್ದುಲ್ ಖದೀರ್ ಮಾತನಾಡಿ, ʼಒಬ್ಬರಿಗೊಬ್ಬರು ತಿಳಿದುಕೊಳ್ಳಲು ಇಂಥ ಭಾವೈಕ್ಯತೆಯ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ. ದೇಶ ಪ್ರಗತಿ ಸಾಧಿಸುವುದರ ಜೊತೆಗೆ ಶಾಂತಿ, ಸೌಹಾರ್ದ, ಪರಸ್ಪರ ವಿಶ್ವಾಸ ಗಟ್ಟಿಗೊಳ್ಳುವ ಅಗತ್ಯವಿದೆʼ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಮಾತನಾಡಿ, ʼಬಸವಕಲ್ಯಾಣದಲ್ಲಿ ಪ್ರತಿವರ್ಷ ಕುರಾನ್ ಪ್ರವಚನ ನಡೆಸುತ್ತಿರುವುದು ಶ್ಲಾಘನೀಯ. ಸಮಾಜದಲ್ಲಿ ಶಾಂತಿ-ಸೌಹಾರ್ದ ನೆಲೆಸಲು ಇಂತಹ ಕಾರ್ಯಕ್ರಮಗಳು ತುಂಬಾ ಅವಶ್ಯಕ. ಎಲ್ಲ ಧರ್ಮ ಗ್ರಂಥಗಳು ಇದನ್ನೇ ಸಾರಿವೆʼ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ತೀವ್ರಗೊಂಡ ಕಾರಂಜಾ ಸಂತ್ರಸ್ತರ ಧರಣಿ : ಡಿ.18ರಂದು ಸಿಎಂ ನೇತೃತ್ವದಲ್ಲಿ ಸಭೆ
ಸಮಾರಂಭದಲ್ಲಿ ಜೈಭಾರತ ಮಾತಾ ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ಹವಾ ಮಲ್ಲಿನಾಥ ಮಹಾರಾಜ ಸಾನ್ನಿಧ್ಯ ವಹಿಸಿದ್ದರು. ಬಸವಕಲ್ಯಾಣ ಸಹಾಯಕ ಆಯುಕ್ತ ಮುಕುಲ್ ಜೈನ್, ಕರ್ನಾಟಕ ನೀರಾವರಿ ನಿಗಮದ ನಿವೃತ್ತ ಎಂಡಿ ಮಲ್ಲಿಕಾರ್ಜುನ ಗುಂಗೆ, ಪ್ರಮುಖರಾದ ಬಾಬು ಹೊನ್ನಾನಾಯಕ, ನೀಲಕಂಠ ರಾಠೋಡ, ಅರ್ಜುನ ಕನಕ, ಯಶೋಧಾ ರಾಠೋಡ, ನಿರ್ಮಲಾ ಶಿವಣಕರ, ತಹಸೀನಲಿ ಜಮಾದಾರ, ಅನ್ವರ್ ಭೋಸೆ, ಜ್ಞಾನೇಶ್ವರ ಮುಳ, ಆಕಾಶ ಖಂಡಾಳ, ಶಿವಕುಮಾರ ಬಿರಾದಾರ, ಶಿವಕುಮಾರ ಶಟಗಾರ, ಅಹ್ಮದ್ ಮುನ್ನಿ, ಜಮಾತೆ ಇಸ್ಲಾಮಿ ಹಿಂದ್ ತಾಲೂಕು ಅಧ್ಯಕ್ಷ ಹಾಫಿಜ್ ಮುಹಮ್ಮದ್ ಅಸ್ಲಂ, ಸ್ವಾಗತ ಸಮಿತಿ ಅಧ್ಯಕ್ಷ ಮುಜಾಹಿದ್ ಪಾಶಾ ಖುರೇಶಿ, ಗೌರವಾಧ್ಯಕ್ಷ ಡಾ.ಜಿ.ಎಸ್.ಭುರಳ, ಕಾರ್ಯಾಧ್ಯಕ್ಷ ಶಿವಾನಂದ ಮೇತ್ರೆ, ಮೌಲಾನಾ ಅಬ್ದುಲ್ ಸಲಾಂ ಹಾಸ್ಮಿ, ಶಾಂತಲಿAಗ ಮಠಪತಿ, ಮಿರ್ಜಾ ಅನ್ವರ್ ಬೇಗ್, ನಯಿಮೋದ್ದಿನ್ ಚಾಬುಕಸವಾರ್, ಸಿಪಿಐ ಅಲಿಸಾಬ್ ಇದ್ದರು. ಅಲ್ತಾಫ್ ಅಹ್ಮದ್ ಸ್ವಾಗತಿಸಿದರು. ಏಜಾಜ್ ಬೊಬ್ಬೆ ವಂದಿಸಿದರು. ಅಬ್ದುಲ್ ಖಾದರ್ ನಿರೂಪಣೆ ಮಾಡಿದರು.