ಅಲ್ಪಸಂಖ್ಯಾತರ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯದ ಕಟ್ಟಡದ ಕಾಮಗಾರಿ ಮುಗಿದು, ಉದ್ಘಾಟನೆ ಆಗಿ ಎರಡು ವರ್ಷಗಳು ಕಳೆದರೂ ಪ್ರಾರಂಭವಾಗದೆ ಪಾಳು ಬಿದ್ದಿದ್ದು, ಹಲವಾರು ಬಡ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಬೇಕಾದ ಹಾಸ್ಟೆಲ್ ಕಟ್ಟಡ ಕುಡುಕರ ಅಡ್ಡವಾಗಿ ಮಾರ್ಪಟ್ಟಿರುವ ಸಂಗತಿ ರಾಯಚೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಸಿದ್ದಾಪುರ ಡಿ ಗ್ರಾಮದಲ್ಲಿ ನಿರ್ಮಿಸಲಾಗಿರುವ ವಸತಿ ನಿಲಯವು, ಉದ್ಘಾಟನೆಯಾಗಿದ್ದರೂ ವಿದ್ಯಾರ್ಥಿಗಳಿಗೆ ವಾಸಿಸುವ ಭಾಗ್ಯ ಕಾಣದ ಪರಿಣಾಮ ನನೆಗುದಿಗೆ ಬಿದ್ದಿದೆ.
2016 -17ರ ಸಾಲಿನ ಬಹುವಲಯ ಅಭಿವೃದ್ಧಿ ಯೋಜನೆಯ ಕಾರ್ಯಕ್ರಮದಡಿಯಲ್ಲಿನ ಅನುದಾನದಲ್ಲಿ 75 ಲಕ್ಷ ಮೊತ್ತವು ಬಿಡುಗಡೆಯಾಗಿತ್ತು. ಕಟ್ಟಡದ ಕಾಮಗಾರಿಯನ್ನು 2021ರ ಸೆಪ್ಟೆಂಬರ್ 13ರಂದು ಪ್ರಾರಂಭಿಸಿ, 10-11-2022 ರಂದು ಕಟ್ಟಡ ಪೂರ್ಣಗೊಳಿಸಲಾಗಿತ್ತು.
ಸಿಂಧನೂರು ತಾಲೂಕಿನಿಂದ ಉದ್ಬಾಳ ಗ್ರಾಮಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಸುಸಜ್ಜಿತವಾಗಿ ಈ ಕಟ್ಟಡವನ್ನು ಕಟ್ಟಲಾಗಿದೆ. ಆದರೆ ಉದ್ಘಾಟನೆಯ ಭಾಗ್ಯ ಕಾಣದ್ದರಿಂದ ಸುತ್ತಮುತ್ತ ಮುಳ್ಳಿನ ಗಿಡಗಳು ಬೆಳೆದು, ಕಿಟಕಿಯ ಗಾಜುಗಳು ಮುರಿದು ಕುಡುಕರ ಅಡ್ಡವಾಗಿ ಬದಲಾಗಿದೆ ಎಂದು ಹೇಳುತ್ತಾರೆ ಸಿದ್ಧಾಪುರ ಡಿ ಗ್ರಾಮದ ಗ್ರಾಮಸ್ಥರು.
ಈ ವಸತಿಯ ಶಂಕು ಸ್ಥಾಪನೆಗೆ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದ ಅಮರೇಶ್ವರ ನಾಯಕ , ಶಿವರಾಜ್ ಪಾಟೀಲ್ ಇನ್ನಿತರ ಘಟಾನುಘಟಿಗಳು ಭಾಗವಹಿಸಿದ್ದರು. ಆದರೆ, 2022ರಲ್ಲಿ ಕಟ್ಟಡದ ಕಾಮಗಾರಿ ಪೂರ್ಣಗೊಂಡ ನಂತರವೂ ಈವರೆಗೂ ಉದ್ಘಾಟನೆಯ ಸಮಯ ಬಂದಿಲ್ಲ ಅನ್ನೋದೇ ವಿಪರ್ಯಾಸದ ಸಂಗತಿಯಾಗಿದೆ.

ಈ ಬಗ್ಗೆ ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಮುಖಂಡ ಚಾಂದ್ ಪಾಷಾ ಈ ದಿನ ಡಾಟ್ ಕಾಮ್ ಜೊತೆಗೆ ಮಾತನಾಡಿ, “ದೂರದ ಊರುಗಳಿಂದ ಹಲವಾರು ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುವ ಸ್ಥಿತಿಯಲ್ಲಿ ನಗರಕ್ಕೆ ಪ್ರವೇಶ ಮಾಡಿ ವಸತಿ ನಿಲಯದಲ್ಲಿ ವಾಸ್ತವ್ಯ ಹೊಂದಿ ವಿದ್ಯಾಭ್ಯಾಸ ಪಡೆದು ಉನ್ನತ ದರ್ಜೆಯಲ್ಲಿ ಹೋಗಬೇಕು ಎಂದು ಛಲ ಹೊಂದಿರುತ್ತಾರೆ. ಆದರೆ ಸುಸಜ್ಜಿತ ಕಟ್ಟಡವಿದ್ದರೂ, ಬಳಕೆಗೆ ಇಲ್ಲವೆಂದರೆ ನಾಮಕಾವಾಸ್ತೆಯ ಹಾಸ್ಟೆಲ್ ಎನ್ನುವಂತಾಗಿದೆ” ಎಂದು ಕಿಡಿಕಾರಿದ್ದಾರೆ.
“ಒಂದು ವೇಳೆ ಸದ್ಬಳಕೆ ಮಾಡುವುದಿಲ್ಲವೆಂದರೆ ಯಾಕಾದರೂ ಸಾವಿರಾರು ದುಡ್ಡು ಖರ್ಚು ಮಾಡಿ ಸುಂದರವಾದ ಈ ಕಟ್ಟಡ ಯಾಕೆ ಕಟ್ಟಬೇಕಿತ್ತು” ಎಂದು ಪ್ರಶ್ನಿಸಿರುವ ಅವರು, ಹಾಸ್ಟೆಲ್ ವ್ಯವಸ್ಥೆಯಿಲ್ಲದೆ ನೂರಾರು ಮಕ್ಕಳು ಊರೂರು ಅಲೆದಾಡುತ್ತಿದ್ದಾರೆ” ಎಂದು ತಿಳಿಸಿದ್ದಾರೆ.

ಈದಿನ ಡಾಟ್ ಕಾಮ್ ಜೊತೆ ಮಾತನಾಡಿದ ದಲಿತ ವಿದ್ಯಾರ್ಥಿ ಪರಿಷತ್ ವಿದ್ಯಾರ್ಥಿ ಸಂಘಟನೆಯ ಮುಖಂಡ ಮೌನೇಶ್ ಜಾಲವಾಡಗಿ, “ಸರಕಾರ ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಿದ್ದ ಈ ವಸತಿ ನಿಲಯ ಇದೀಗ ಹಾಳುಬಿದ್ದಿದ್ದು, ಪುಂಡ-ಪೋಕರಿಗಳ ಆಶ್ರಯ ತಾಣವಾಗಿದೆ. ರಾತ್ರಿ ವೇಳೆ ಪುಂಡರು ಇಲ್ಲಿ ಇಸ್ಪೀಟು, ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಇದರ ಸುತ್ತ ಮುತ್ತ ಬೇರೆ ಬೇರೆ ಹಾಸ್ಟೆಲ್ ಗಳು ಇರುವುದರಿಂದ ಮುಂದಿನ ದಿನಗಳಲ್ಲಿ ಕಿರಿ ಕಿರಿ ಆಗುವ ಸಾಧ್ಯತೆಗಳು ಇರುತ್ತವೆ. ಸಂಬಂಧ ಪಟ್ಟ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಕ್ಷಣವೇ ಇದನ್ನು ಸರಿಪಡಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು” ಆಗ್ರಹಿಸಿದ್ದಾರೆ.
ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ, ವಿದ್ಯಾರ್ಥಿಗಳಿಗೆ ಬಳಸುವಂತಾಗಲು ಕ್ರಮ ಕೈಗೊಳ್ಳಲಿದ್ದಾರಾ ಎಂಬುದನ್ನು ನಾವು ಕಾದುನೋಡಬೇಕಿದೆ.

ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್